ಕನ್ನಡ ಬರಿ ಭಾಷೆಯಲ್ಲ ನಮ್ಮ ಸಂಸ್ಕೃತಿ
ನಡೆ-ನುಡಿ ಕಲಿಸುತ್ತೆ ಸಾಹಿತ್ಯ•ಕನ್ನಡ ಸಾಹಿತ್ಯ ಸಮುದ್ರವಿದ್ದಂತೆ•ನಾಡು-ನುಡಿ ರಕ್ಷಿಸಿ
Team Udayavani, Aug 1, 2019, 1:25 PM IST
ಕೊಪ್ಪಳ: ಶಿವಪುರದಲ್ಲಿ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಡಾ| ಜಯಲಕ್ಷ್ಮೀ ಮಂಗಳಮೂರ್ತಿ ಉದ್ಘಾಟಿಸಿದರು.
ಕೊಪ್ಪಳ: ಕನ್ನಡವನ್ನು ನಾವು ಒಂದು ಭಾಷೆಯನ್ನಾಗಿ ನೋಡದೇ ವಿವಿಧ ಆಯಾಮದಲ್ಲಿ ನೋಡಬೇಕಿದೆ. ಎಲ್ಲ ಸೀಮಿತಗಳನ್ನು ಮೀರಿಯೂ ನಾವು ವಿಶ್ವ ಪ್ರಜ್ಞೆಯನ್ನಾಗಿ ಕನ್ನಡವನ್ನು ಬೆಳೆಸಬೇಕಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ಡಾ| ಜಯಲಕ್ಷ್ಮೀ ಮಂಗಳಮೂರ್ತಿ ಹೇಳಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ 8ನೇ ಕೊಪ್ಪಳ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೇರು ದಿಗ್ಗಜರು ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡ ಸಾಹಿತ್ಯವು ಸಮುದ್ರವಿದ್ದಂತೆ. ಇಲ್ಲಿ ಸಾಹಿತಿಯೇ ಸಾಮ್ರಾಟ. ಸಾಹಿತ್ಯ ನಮಗೆ ಅರಿವಿಲ್ಲದಂತೆ ಸಂತೋಷ ನೀಡುತ್ತದೆ. ಒಬ್ಬ ಸಾಹಿತಿಗೆ ಸಾವಿರಾರು ಜನರನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಜೊತೆಗೆ ಸಾವಿರಾರು ಜನರನ್ನು ಶಾಂತಗೊಳಿಸುವ ಶಕ್ತಿಯೂ ಇದೆ.
ಅಂತಹ ಸಮೃದ್ಧತೆ ಹೊಂದಿದ ನೆಲದಲ್ಲಿ ಜನಿಸಿದ ನಾವೇ ಪುಣ್ಯವಂತರು. ಅದರಲ್ಲೂ ತಿರುಳ್‌ಗನ್ನಡ ನೆಲದಲ್ಲಿ ಸಾಹಿತ್ಯದ ಕೃಷಿ ಅಪಾರವಾಗಿದೆ. ಸಾಹಿತ್ಯ ಎಂದಾಕ್ಷಣ ಕೇವಲ ಭಾಷೆ ಎಂದು ತಿಳಿಯುವುದು ಮುಖ್ಯವಲ್ಲ. ಇಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಸಂತ, ಶರಣರ ಹಾಗೂ ಸೂಫಿಗಳ ಸಂದೇಶಗಳಿವೆ. ಇದರಲ್ಲಿ ಹಳ್ಳಿಯ ಜನರ ಜಾನಪದ ಸೊಗಡು ಅಡಗಿದೆ. ಸಂಸ್ಕೃತಿ ಹಾಸು ಹೊಕ್ಕಾಗಿದೆ. ಇಂತಹ ಸಾಹಿತ್ಯದ ಕನ್ನಡವನ್ನು ನಾವು ವಿಶ್ವ ಮಟ್ಟದಲ್ಲಿ ಕೊಂಡೊಯ್ಯಬೇಕಿದೆ ಎಂದರು.
ಆಧುನಿಕ ಜಗತ್ತಿನಲ್ಲಿ ಎಲ್ಲ ಸೀಮಿತಗಳನ್ನು ಮೀರಿ ಮುಂದೆ ಬರಬೇಕಿದೆ. ನಮ್ಮಲ್ಲಿ ಸಾಮರಸ್ಯ ಭಾವನೆ ಮೂಡಬೇಕಿದೆ. ಇಲ್ಲಿ ಮಾನವ ಪ್ರೇಮ, ಮಾನವೀಯತೆ, ಒಪ್ಪಿ ಅಪ್ಪಿಕೊಂಡು ಬಾಳಬೇಕು. ಇಂತಹ ಪ್ರಜ್ಞೆಯು ಜಾಗತಿಕ ಪ್ರಜ್ಞೆಯಾಗಬೇಕಿದೆ ಎಂದರಲ್ಲದೆ, ಇಂತಹ ಪುಣ್ಯದ ನೆಲದಲ್ಲಿ ರನ್ನ, ಪಂಪರಂತಹ ಮಹಾ ಕವಿಗಳು ಇದೊಂದು ಅಮೃತ, ಸಮೃದ್ಧಿ ನೆಲವೀಡು ಎಂದೆಲ್ಲ ವರ್ಣಿಸಿ ಕೊಂಡಾಡಿದ್ದಾರೆ. ಕನ್ನಡ ಸಾಹಿತ್ಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಇಂದೂ ಅಚ್ಚಳಿಯದೆ ಉಳಿದಿದೆ. ಸಾಹಿತ್ಯ ಜೀವನ ಕಲಿಸಿ ಕೊಟ್ಟಿದೆ. ದೊಡ್ಡ ಗುರುಲೋಕವನ್ನೇ ಸೃಷ್ಟಿ ಮಾಡಿದೆ. ಇನ್ನೂ ಗ್ರಾಮೀಣ ಪ್ರದೇಶದ ಜನರಲ್ಲಿ ಅದ್ಭುತ ಕಲೆಯಿರುತ್ತದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಹೆಜ್ಜೆ ಹೆಜ್ಜೆಗೂ ಅಂತಹ ವ್ಯಕ್ತಿಗಳು ನಮಗೆ ಕಾಣಿಸುತ್ತಾರೆ. ಬಯಲಾಟ, ಕೋಲಾಟ, ಜಾನಪದ ಸೇರಿ ಇತರೆ ಕಲೆ ಇಂದು ಸಾಹಿತ್ಯದ ಸಿಂಹಾಸನವಾಗಿವೆ. ಸಾಹಿತ್ಯ ನಮಗೆ ಸತ್ಯ ದರ್ಶನ ಮಾಡುತ್ತಿದೆ. ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಹಾಗೆ ಜ್ಞಾನಕ್ಕೆ ಸಾಹಿತ್ಯವು ಅಷ್ಟೆ ಮುಖ್ಯ. ಸಾಹಿತ್ಯ ತಿಳಿಯದ ನಾವು ಮನುಷ್ಯರೇ ಅಲ್ಲ ಎಂದರು.
ನಡೆ ನುಡಿಯನ್ನು ಕಲಿಸಿ ಕೊಡುವುದೇ ಸಾಹಿತ್ಯವಾಗಿದೆ. ಇಂದು ಜಗತ್ತಿನಾದ್ಯಂತ ಮಾನವ ಗುಣವನ್ನು ಕಲಿಸಿ ಕೊಡುತ್ತಿದೆ. ಅಂತಹ ಸಾಹಿತ್ಯವನ್ನು ನಾವೆಲ್ಲರು ರಕ್ಷಣೆ ಮಾಡಬೇಕು. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ಸಂಘಟಿತವಾದ ಮನಸ್ಸುಗಳಾಗಿ ಸಾಹಿತ್ಯ ಕಟ್ಟಬೇಕಿದೆ.
ರಾಜ್ಯ ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಡಾ| ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಕಸಾಪ ಕನ್ನಡದ ಕಹಳೆ ಮೊಳಗಿಸುತ್ತಿದೆ. ಡಾ| ಮನು ಬಳಿಗಾರ ಹಲವು ಸಾಹಿತ್ಯ ಸಮ್ಮೇಳನ ಮಾಡಿ ಗಮನ ಸೆಳೆದಿದ್ದಾರೆ. ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದಾರೆ. ನಾಡುನುಡಿ ಸೇವೆ ಮಾಡಲು, ಗ್ರಾಮೀಣ ಜನರ ಬಳಿ ಕನ್ನಡ ಸಾಹಿತ್ಯ ಕೊಂಡೊಯ್ಯಲು ಹಳ್ಳಿ ಹಳ್ಳಿಯಲ್ಲೂ ಸಮ್ಮೇಳನ ಮಾಡುತ್ತಿದ್ದೇವೆ. ಗ್ರಾಮೀಣ ಜನರ ಪ್ರತಿಭೆ ಗುರುತಿಸಲು ಈ ಕಾರ್ಯ ಮಾಡಿದ್ದೇವೆ ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಎಸ್.ಎಂ. ಕಂಬಾಳಿಮಠ ಮಾತನಾಡಿದರು. ಸಮ್ಮೇಳನದಲ್ಲಿ ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ, ಸಮ್ಮೇಳನದ ಸರ್ವಾಧ್ಯಕ್ಷ ಈಶ್ವರ ಹತ್ತಿ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕು ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ, ಜಿಪಂ ಸದಸ್ಯೆ ಗಾಯತ್ರಿ ವೆಂಕಟೇಶ, ಜಡಿಯಪ್ಪ ಬಂಗಾಳಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.