ತರಕಾರಿ ಸಂತೆಗೆ ಸೌಲಭ್ಯ ಮರೀಚಿಕೆ
ಶಾಸಕರು ನೀಡಿದ್ದ ಭರವಸೆಗಳು ಹುಸಿ•ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್
Team Udayavani, Jun 17, 2019, 11:55 AM IST
ಕುರುಗೋಡು: ತರಕಾರಿ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್.
ಸುಧಾಕರ್ ಮಣ್ಣೂರು
ಕುರುಗೋಡು: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ತರಕಾರಿ ವ್ಯಾಪಾರ ಸಂತೆಯಲ್ಲಿ ಜನಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ರಸ್ತೆ ಬದಿಯಲ್ಲಿ ಶೆಡ್ ಹಾಕಿಕೊಂಡು ವ್ಯಾಪಾರ ಮಾಡುವ ತರಕಾರಿ ವ್ಯಾಪಾರಸ್ಥರಿಗೆ ನಿತ್ಯ ಒಡಾಡುವ ವಾಹನಗಳ ಸಂಚಾರದಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ರಸ್ತೆ ಬದಿಯಲ್ಲಿ ನಿತ್ಯ ತರಕಾರಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಸಂಖ್ಯೆ ಸುಮಾರು 60 ರಿಂದ 70 ಇದೆ. ಇವರು ಸುಮಾರು ವರ್ಷಗಳಿಂದ ರಸ್ತೆ ಬದಿಯಲ್ಲಿ ಶೆಡ್ ಹಾಕಿಕೊಂಡು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ನಿತ್ಯ ತಮ್ಮ ವ್ಯಾಪಾರದ ಕಡೆಗೆ ಗಮನಹರಿಸಿಕೊಂಡು ಕಾರ್ಯನಿರ್ವಹಿಸುವ ವೇಳೆ ಅವರಿಗೆ ಯಾವುದೇ ರಕ್ಷಣೆ ಇಲ್ಲದೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತೊಂದರೆ ಹಾಗೂ ಬಿಡಾಡಿ ದನಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ.
ಇದಲ್ಲದೆ ಮಳೆ ಗಾಳಿ ಬಂದರೆ ಇವರ ಸ್ಥಿತಿ ಅಧೋಗತಿಗೆ ತಲುಪಿದೆ. ಗಾಳಿಗೆ ಶೆಡ್‌ನ ತಾಡಪಾಲುಗಳು ಅಲ್ಲಲ್ಲಿ ಬಿದ್ದಿರುತ್ತವೆ. ಇಷ್ಟಲ್ಲದೇ ತರಕಾರಿ ವ್ಯಾಪಾರಸ್ಥರು ಮಳೆ ನೀರು ಬೀಳುವುದರಿಂದ ತಡಪಾಲು ಹೊದ್ದುಕೊಂಡು ಕುಳಿತುಕೊಳ್ಳಬೇಕಾಗಿದೆ.
ಪ್ರತಿ ಗುರುವಾರ ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು, ತರಕಾರಿ ವ್ಯಾಪಾರಸ್ಥರ ಜತೆಗೆ ಇತರೆ ತಾಲೂಕು ಮತ್ತು ಜಿಲ್ಲೆಗಳಿಂದ ಬೇರೆ ಬೇರೆ ವ್ಯಾಪಾರ ಮಾಡುವ ಜನರು ಪಟ್ಟಣಕ್ಕೆ ಬರುತ್ತಿದ್ದು. ಸಂತೆಗೆ ಸುತ್ತಮುತ್ತ ಗ್ರಾಮಗಳ ಸಾರ್ವಜನಿಕರು ಬರುತ್ತಾರೆ. ಅದರೆ ಗೇಣಿಕೆಹಾಳ ರಸ್ತೆ ಎದುರು ಬಸವಣ್ಣ ರಸ್ತೆ, ಬಳ್ಳಾರಿ ರಸ್ತೆ ಸೇರಿ ಈ ಮೂರು ರಸ್ತೆಗಳ ಪಕ್ಕದಲ್ಲಿ ನಿತ್ಯ ತರಕಾರಿ ವ್ಯಾಪಾರ ನಡೆಯುತ್ತಿದೆ. ವ್ಯಾಪಾರ ಸ್ಥಳದಲ್ಲಿ ಗೇಣಿಕೆಹಾಳ್ ಮತ್ತು ಸಿರಿಗೇರಿ ಗ್ರಾಮಕ್ಕೆ ಹೋಗುವ ಆಟೋಗಳು ಇಲ್ಲೇ ನಿಲ್ಲಿಸಿರುತ್ತಾರೆ. ಇದರಿಂದ ಜನರಿಗೆ ಬರಲು ಕಷ್ಟವಾಗಿದೆ. ಜತೆಗೆ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಜಿ ಶಾಸಕರಾದ ಸೂರ್ಯನಾರಾಯಣ ರೆಡ್ಡಿ, ಟಿ.ಎಚ್.ಸುರೇಶ ಬಾಬು ಅವರ ಅಧಿಕಾರದಿಂದ ಹಿಡಿದು ಪ್ರಸಕ್ತ ಸಾಲಿನಲ್ಲಿರುವ ಶಾಸಕ ಜೆ.ಎನ್ ಗಣೇಶ ಅವರಿಗೆ ನಮಗೆ ತಾತ್ಕಾಲಿಕವಾಗಿ ವ್ಯಾಪಾರ ಮಾಡಲು ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ತಿಳಿಸಿ ಗಮನಕ್ಕೆ ಕೂಡ ತಂದಿದ್ದಾರೆ.
ಇತ್ತೀಚೆಗೆ ಕಳೆದ ದಿನಗಳ ಹಿಂದೆ ಕಂಪ್ಲಿ ರಸ್ತೆ, ಗೇಣಿಕೆಹಾಳ ರಸ್ತೆ, ಮುಷ್ಟಗಟ್ಟೆ ರಸ್ತೆಗಳ ಅಗಲೀಕರಣ ವಿಷಯ ಕುರಿತು ಪಟ್ಟಣದ ನೀರಾವರಿ ಕಚೇರಿಯಲ್ಲಿ ಮುಖಂಡರ ಸಮ್ಮುಖದಲ್ಲಿ ಮತ್ತು ಶಾಸಕ ಜೆ.ಎನ್.ಗಣೇಶ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಕರೆಯಲಾಗಿತ್ತು. ಸಭೆಯ ಕೊನೆಯಲ್ಲಿ ತರಕಾರಿ ವ್ಯಾಪಾರಸ್ಥರಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ಭರವಸೆ ನೀಡಿದ್ದರು.
ಕುರುಗೋಡಿನಲ್ಲಿ ಮಾರುಕಟ್ಟೆಗೆ ಪರ್ಯಾಯ ವ್ಯವಸ್ಥೆ ಮಾಡಿ ಜನರಿಗೆ ಮತ್ತು ತರಕಾರಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಬೇಕು ಎಂದು ಅಂದಿನಿಂದ ಗುರಿ ಹೊಂದಿದ್ದೆ. ಈಗಾಗಲೇ ಕುರುಗೋಡು ಹೊಸ ತಾಲೂಕಾಗಿದೆ. ಮುಖ್ಯವಾಗಿ ತಾಲೂಕಿನಲ್ಲಿ ಮಾರುಕಟ್ಟೆಯ ವ್ಯವಸ್ಥೆ ಬೇಕು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದರ ಬಗ್ಗೆ ಸಂಸದರ ಜತೆ ಮಾತನಾಡಿ ಶೀಘ್ರ ವ್ಯವಸ್ಥೆ ಮಾಡಲು ಯತ್ನಿಸಲಾಗುವುದು.
•ಟಿ.ಎಚ್.ಸುರೇಶ್ ಬಾಬು,
ಮಾಜಿ ಶಾಸಕರು.
ಸುಮಾರು ವರ್ಷಗಳಿಂದ ರಸ್ತೆ ಬದಿಯಲ್ಲಿ ಶೆಡ್ ಹಾಕಿಕೊಂಡು ತರಕಾರಿ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಗಾಳಿ-ಮಳೆ ಬಂದರೆ ಯಾವುದೇ ರಕ್ಷಣೆ ಇಲ್ಲ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಕ್ಕೆ ಮುಂದಾಬೇಕು.
•ಮರಿಯಮ್ಮ,
ತರಕಾರಿ ವ್ಯಾಪಾರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.