ಮದ್ಯ ಮಾರಿದರೆ 10 ಸಾವಿರ ದಂಡ!
ನೀರಲಕೇರಾ ಗ್ರಾಮಸ್ಥರ ನಿರ್ಣಯ ••ಬೇರೆಡೆ ಹೋಗಿ ಕುಡಿದು ಬಂದವರಿಗೆ 5 ಸಾವಿರ ದಂಡ
Team Udayavani, Jul 8, 2019, 2:51 PM IST
ಲಿಂಗಸುಗೂರು: ನೀರಲಕೇರಾ ಗ್ರಾಮದಲ್ಲಿ ಗ್ರಾಮಸ್ಥರು ಸಭೆ ಮದ್ಯ ಮಾರಾಟ ನಿಷೇಧ ಬಗ್ಗೆ ಚರ್ಚಿಸಿದರು.
ಲಿಂಗಸುಗೂರು: ಈ ಗ್ರಾಮದಲ್ಲಿ ಇನ್ನು ಮದ್ಯ ಮಾರಿದರೆ 10 ಸಾವಿರ ರೂ. ದಂಡ, ಬೇರೆಡೆ ಹೋಗಿ ಕುಡಿದು ಬಂದು ಗಲಾಟೆ ಮಾಡಿದರೆ 5 ಸಾವಿರ ದಂಡ.. ಇದು ತಾಲೂಕಿನ ನೀರಲಕೇರಾದಲ್ಲಿ ಮದ್ಯ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಗ್ರಾಮಸ್ಥರು ಕೈಗೊಂಡ ನಿರ್ಣಯ.
ನೀರಲಕೇರಾ ಗ್ರಾಮಸ್ಥರು ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ನಿರ್ಣಯ ಕೈಗೊಂಡಿದ್ದು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ. ಗ್ರಾಮದಲ್ಲಿ ಸರ್ಕಾರದಿಂದ ಲೈಸನ್ಸ್ ಪಡೆದ ಮದ್ಯದಂಗಡಿಗಳಿಲ್ಲ. ಆದರೂ ಗ್ರಾಮದಲ್ಲಿ ಮದ್ಯಕ್ಕೇನೂ ಕೊರತೆ ಇರಲಿಲ್ಲ. ಗ್ರಾಮದಲ್ಲಿನ ವಿವಿಧ ಅಂಗಡಿ, ಕೆಲ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿತ್ತು. ಗ್ರಾಮದ ರೈತರು, ಬಡವರು ಮದ್ಯದ ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದರು. ಜೊತೆಗೆ ಗ್ರಾಮದ ನೆಮ್ಮದಿಗೆ ಭಂಗವಾಗುತ್ತಿತ್ತು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಗ್ರಾಮಸ್ಥರು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಗ್ರಾಮಸ್ಥರೇ ಸಭೆ ಸೇರಿ ಗ್ರಾಮದಲ್ಲಿ ಯಾವುದೇ ಗಲಾಟೆ, ಗದ್ದಲವಿಲ್ಲದಂತೆ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ಸದುದ್ದೇಶದಿಂದ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಕ್ಕೆ ಮುಂದಾಗಿ ಗ್ರಾಮವನ್ನು ಮದ್ಯಮುಕ್ತ ಮಾಡಲು ಮುಂದಾಗಿದ್ದಾರೆ.
ಗ್ರಾಮವನ್ನು ಮದ್ಯ ಮುಕ್ತ ಮಾಡಲು ಸಂಕಲ್ಪ ತೊಟ್ಟ ಗ್ರಾಮಸ್ಥರು, ಗ್ರಾಮದಲ್ಲಿ ಮದ್ಯ ಮಾರಿದರೆ 10 ಸಾವಿರ ರೂ. ದಂಡ ಹಾಗೂ ಬೇರೆಡೆ ಕುಡಿದು ಬಂದು ಗ್ರಾಮದಲ್ಲಿ ಗಲಾಟೆ ಮಾಡುವವರಿಗೆ 5 ಸಾವಿರ ದಂಡ ವಿಧಿಸುವ ಬಗ್ಗೆ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಈ ಕುರಿತು ಮದ್ಯ ಮಾರುವವರಿಗೆ, ಮತ್ತು ಮದ್ಯಪ್ರಿಯರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಗ್ರಾಮದ ಮುಖಂಡರಾದ ಸೋಮರಾಯಪ್ಪ ಪೂಜಾರಿ, ನಾಗರೆಡ್ಡೆಪ್ಪ ರಾಯಚೂರು, ಚಂದ್ರಶೇಖರ ದೇಶಮುಖ, ಸಿದ್ರಾಮಪ್ಪ ಪಟ್ಟಣಶೆಟ್ಟಿ, ಶಂಕ್ರಪ್ಪ ಕೋಡಿಹಾಳ, ಬಸಲಿಂಗಪ್ಪ ಓಲಿ, ಅಮರಪ್ಪ, ರಾಚಣ್ಣ ಹಾದಿಮನಿ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.