ಶಿಂಷಾ ನದಿಗೆ ತ್ಯಾಜ್ಯ ನೀರು ಸೇರ್ಪಡೆ ಸಮಸ್ಯೆಗೆ ಕ್ರಮ
Team Udayavani, Dec 5, 2019, 7:35 PM IST
ಮದ್ದೂರು: ಯುಜಿಡಿ ಸಂಪರ್ಕದ ತ್ಯಾಜ್ಯ ನೀರು ನಾಲೆ ಹಾಗೂ ಶಿಂಷಾ ನದಿಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಸಂಸದೆ ಸುಮಲತಾ ಅವರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್‌ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಸಭೆ ಮುಖ್ಯಾಧಿಕಾರಿ ಮುರುಗೇಶ್‌ರಿಂದ ಮಾಹಿತಿ ಪಡೆದರು.
ಒಳ ಚರಂಡಿ ಅವ್ಯವಸ್ಥೆ: ಪುರಸಭೆ ವ್ಯಾಪ್ತಿಯ ಮದ್ದೂರು-ನಗರಕೆರೆ ಮಾರ್ಗದ ಬಿಡಗಂಡಿ ಬಳಿ ರೈತರಿಂದ ಮಾಹಿತಿ ಪಡೆದು, ಯುಜಿಡಿ ಸಂಪರ್ಕದ ತ್ಯಾಜ್ಯ ನೀರು ನಾಲೆಗೆ ಸೇರಿ ನೀರು ಕಲುಷಿತಗೊಳ್ಳುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಒಳ ಚರಂಡಿ ಸಮರ್ಪಕವಾಗಿಲ್ಲದ ಕಾರಣ ಇಂತಹ ಅನಾಹುತಗಳಿಗೆ ಕಾರಣವಾಗಿದೆ. ನಾಲೆಗೆ ತ್ಯಾಜ್ಯ ನೀರು ಸೇರುತ್ತಿರುವುದರಿಂದ ಸ್ಥಳೀಯ ರೈತರೂ ಸೇರಿದಂತೆ ಜಾನುವಾರುಗಳಿಗೂ ಚರ್ಮವ್ಯಾದಿ ಕಾಣಿಸಿಕೊಳ್ಳುತ್ತಿದೆ. ಪುರಸಭೆ ಹಾಗೂ ನೀರಾವರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.
ಕಲುಷಿತ ನೀರು ಸೇವನೆ: ಎಚ್.ಕೆ.ವಿ.ನಗರ, ಸಿದ್ಧಾರ್ಥನಗರ, ವಿವಿ ನಗರ ಸೇರಿದಂತೆ ಇನ್ನಿತರೆ ಬಡಾವಣೆಯ ತ್ಯಾಜ್ಯ ನೀರು ಕಳೆದ 15 ವರ್ಷಗಳಿಂದಲೂ ನಾಲೆಗೆ ಸೇರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ತ್ಯಾಜ್ಯ ನೀರು ಶಿಂಷಾ ನದಿಗೆ ಸೇರುತ್ತಿರುವುದರಿಂದ ಇತಿಹಾಸ ಪ್ರಸಿದ್ಧ ವೈದ್ಯನಾಥೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಪುಣ್ಯ ಸ್ನಾನ ಮಾಡಲು ಹಿಂಜರಿಯುತ್ತಿದ್ದಾರೆ. ಪ್ರವಾಸಿ ತಾಣವಾದ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಆಗಮಿಸುವ ವಿದೇಶಿ ಕೊಕ್ಕರೆಗಳು ಕಲುಷಿತ ನೀರು ಸೇವಿಸಿ ಮೃತಪಟ್ಟಿರುವ ಘಟನೆಗಳು ಸಾಕಷ್ಟಿವೆ ಎಂದೂ ಆರೋಪಿಸಿದರು.
ಶೀಘ್ರ ಸಮಸ್ಯೆ ಬಗೆಹರಿಸಿ: ಕೆಮ್ಮಣ್ಣು ನಾಲೆಯಲ್ಲಿ ತ್ಯಾಜ್ಯ ತುಂಬಿದೆ. ಸಮರ್ಪಕವಾಗಿ ಕೊನೆಭಾಗದ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಪಟ್ಟಣದ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ಸಂಸದೆ ಸುಮಲತಾ ಅವರ ಗಮನಕ್ಕೂ ತಂದು ಶೀಘ್ರವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮುರುಗೇಶ್, ಒಳಚರಂಡಿ ಸಮಗ್ರ ಅಭಿವೃದ್ಧಿಗೆ 55 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಡಿ.23ರ ಸೋಮವಾರ ನಡೆಯಲಿದೆ. ಬಳಿಕ ಕಾಮಗಾರಿ ಕೈಗೊಂಡು ಪಟ್ಟಣ ವ್ಯಾಪ್ತಿಯ ಯುಜಿಡಿ ಸಂಪರ್ಕದ ಅವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳುವುದಾಗಿ ಹೇಳಿದರು. ಪುರಸಭೆ ಸದಸ್ಯ ಸುರೇಶ್, ಆರೋಗ್ಯ ನಿರೀಕ್ಷಕ ಜಾಸ್ಮೀನ್‌ಖಾನ್, ಕೇಂದ್ರ ಪುರಸ್ಕೃತ ಯೋಜನೆಗಳ ಸದಸ್ಯ ಬೇಲೂರು ಸೋಮಶೇಖರ್, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ಪಿಡಿಒ ಮಧುಸೂದನ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.