ಶಾಸಕರು-ವಿವಿ ವಿಶೇಷಾಧಿಕಾರಿ ನಡುವೆ ಶೀತಲ ಸಮರ
ಮಂಡ್ಯ ವಿವಿ ಅತಿಥಿ ಉಪನ್ಯಾಸಕರ ನೇಮಕ ವಿಚಾರ • ವಿವಾದದ ನಡುವೆ ನೇಮಕ ಪ್ರಕ್ರಿಯೆಗೆ ಚಾಲನೆ
Team Udayavani, Sep 19, 2019, 4:45 PM IST
ಮಂಡ್ಯ ವಿಶ್ವವಿದ್ಯಾನಿಲಯ
ಮಂಡ್ಯ ಮಂಜುನಾಥ್
ಮಂಡ್ಯ: ಅತಿಥಿ ಉಪನ್ಯಾಸಕರ ನೇಮಕಾತಿ ವಿಚಾರವಾಗಿ ಶಾಸಕರು ಹಾಗೂ ಮಂಡ್ಯ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ನಡುವೆ ಶೀತಲ ಸಮರ ಏರ್ಪಟ್ಟಿರುವುದು ಬೆಳಕಿಗೆ ಬಂದಿದೆ.
ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಅಧಿಕಾರವಿದೆಯೇ ಎಂಬ ಪ್ರಶ್ನೆಯೊಂದಿಗೆ ಶಾಸಕರು ಕಾಲೇಜು ಶಿಕ್ಷಣ ಆಯುಕ್ತರಿಗೆ ದೂರು ನೀಡಿದ್ದರೆ, ನನಗೆ ನೇಮಕ ಮಾಡಿಕೊಳ್ಳುವ ಅಧಿಕಾರವಿದೆ ಎಂಬ ವಿಶ್ವಾಸದೊಂದಿಗೆ ವಿಶೇಷಾಧಿ ಕಾರಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದಾರೆ.ಮಂಡ್ಯ ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಸುಮಾರು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 65 ಖಾಯಂ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕ ರಾಗಿ 30ರಿಂದ 35 ಮಂದಿಯ ನೇಮಕಾತಿ ಪ್ರಕ್ರಿಯೆ ಆರಂಭಿಸ ಲಾಗಿದ್ದು, ಗುರುವಾರ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
ಯುಜಿಸಿ ನಿಯಮಾವಳಿ ಪ್ರಕಾರ ಈ ಅತಿಥಿ ಉಪನ್ಯಾಸಕರಿಗೆ ಪ್ರತಿ ಗಂಟೆಗೆ 1000 ರೂ. ಗೌರವಧನ ನೀಡಲಾಗುವುದು. ಗರಿಷ್ಠ 36 ಸಾವಿರ ರೂ.ಗಳವರೆಗೆ ಮಾಸಿಕ ಭತ್ಯೆ ನೀಡಲು ಅವಕಾಶವಿದೆ. ಕಳೆದ 20 ದಿನಗಳ ಹಿಂದೆ ರಾಜ್ಯಮಟ್ಟ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದ್ದು, ನಿರೀಕ್ಷೆಗೂ ಮೀರಿದ ಅರ್ಜಿಗಳು ಬಂದಿದ್ದವು. ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.
ಆದರೆ, ನೇಮಕಾತಿ ವಿಚಾರವಾಗಿ ಶಾಸಕರು ಹಾಗೂ ವಿಶೇಷಾಧಿಕಾರಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಪ್ರತಿಷ್ಠೆಯನ್ನು ಮುಂದಿಟ್ಟುಕೊಂಡು ಕಾದಾಟಕ್ಕೆ ಇಳಿದಿದ್ದಾರೆ.
ಶಾಸಕರ ವಾದವೇನು: ಶಾಸಕ ಎಂ.ಶ್ರೀನಿವಾಸ್ ಅವರು ಈ ವಿಚಾರವಾಗಿ ಅತಿಥಿ ಉಪನ್ಯಾಸಕರಿಗೆ ಯುಜಿಸಿ ವೇತನ ನೀಡುವುದಿಲ್ಲ. ಸರ್ಕಾರವೂ ಇವರಿಗೆ ವೇತನ ಕೊಡುವುದಿಲ್ಲ ಅಂದ ಮೇಲೆ ಅವರಿಗೆ ವೇತನ ಕೊಡುವವರು ಯಾರು? ಅಲ್ಲದೆ, ನೇಮಕ ಮಾಡಿಕೊಳ್ಳುವ ಅಧಿಕಾರ ವಿಶೇಷ ಅಧಿಕಾರಿಗೆ ಇದೆಯೇ? ಸರ್ಕಾರದಿಂದ ವೇತನ ಪಾವತಿಸುತ್ತದೆಯೇ? ಇವರೆಡೂ ಕ್ರಮಬದ್ಧವಾಗಿದ್ದರೆ ಆದೇಶ ಪ್ರತಿ ಕೊಡಲಿ. ಹಿಂದೆ ಮುಂದೆ ನೋಡದೆ ನೇಮಕ ಮಾಡಿಕೊಂಡು ಅತಂತ್ರ ಮಾಡುವುದು ಬೇಡ ಎನ್ನುವುದು ಶಾಸಕರ ವಾದವಾಗಿದೆ.
ವಿಶೇಷಾಧಿಕಾರಿ ವಾದವೇನು: ಕಳೆದ ಜೂನ್ ತಿಂಗಳಲ್ಲಿ ಕಾಲೇಜು ಶಿಕ್ಷಣ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಸಮಿತಿಯಲ್ಲಿ ಆದ ತೀರ್ಮಾನದಂತೆ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಆಯುಕ್ತರು ಹಾಗೂ ಸ್ನಾತಕೋತ್ತರ ಕೇಂದ್ರಗಳಿಗೆ ಅತಿಥಿ ಉಪ ನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ವಿಶೇಷಾಧಿ ಕಾರಿಗೆ ನೀಡಲಾಗಿದೆ. ಅದರಂತೆ ನೇಮಕ ಪ್ರಕ್ರಿಯೆ ಆರಂಭಿಸಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಎಲ್ಲಿಯೂ ಪ್ರತಿಯೊಂದು ಹಂತದಲ್ಲೂ ಲೋಪಗಳು ಎದುರಾಗ ದಂತೆ ಎಚ್ಚರ ವಹಿಸಲಾಗಿದೆ ಎನ್ನುವುದು ಮಂಡ್ಯ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಪ್ರೊ.ಎಂ.ಎಸ್.ಮಹದೇವ ನಾಯ್ಕ ಹೇಳುತ್ತಾರೆ.
ನೇಮಕದ ಹಿಂದೆ ಕಾಂಚಾಣ ಸದ್ದು: ನೇಮಕಾತಿ ವಿಚಾರದಲ್ಲಿ ಒಬ್ಬರ ಮೇಲೊಬ್ಬರು ಮೇಲುಗೈ ಸಾಧಿಸುವ ಹಠಕ್ಕೆ ಬಿದ್ದವರಂತೆ ಕಂಡುಬರುತ್ತಿರುವ ಶಾಸಕರು ಹಾಗೂ ವಿಶೇಷಾಧಿಕಾರಿಗಳು ಅದರ ಹಿಂದಿನ ಗುಟ್ಟನ್ನು ಮಾತ್ರ ಬಿಟ್ಟುಕೊಡುತ್ತಿಲ್ಲ. ಈ ವಿಷಯವನ್ನೇ ಮುಂದಿಟ್ಟುಕೊಂಡು ರಾದ್ಧಾಂತ ಸೃಷ್ಟಿಸುತ್ತಿರುವುದಕ್ಕೆ ಕಾರಣ ವೇನೆಂಬುದು ನಿಗೂಢವಾಗಿದೆ. ಇವೆರಡನ್ನೂ ದೃಷ್ಟಿಯಲ್ಲಿಟ್ಟು ಕೊಂಡು ನೋಡಿದರೆ ನೇಮಕಾತಿ ಹಿಂದೆ ಕಾಂಚಾಣ ಜೋರಾಗಿ ಸದ್ದು ಮಾಡುತ್ತಿದೆಯೇ ಎಂಬ ಅನುಮಾನಗಳು ಮೂಡಿವೆ.
ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಹಣ ಪಡೆದು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಮಂಡ್ಯ ವಿಶ್ವವಿದ್ಯಾನಿಲ ಯದ ವಿಶೇಷಾಧಿಕಾರಿ ಮೇಲೆ ಕೇಳಿಬರುತ್ತಿರುವಂತೆಯೇ, ರಾಜಕೀಯ ವ್ಯಕ್ತಿಗಳು, ಪ್ರಭಾವಿಗಳ ಕಡೆಯವರನ್ನು ನೇಮಕಾತಿ ವೇಳೆ ಪರಿಗಣಿಸಲಿಲ್ಲವೆಂಬ ಕಾರಣಕ್ಕೆ ವಿಶೇಷಾಧಿಕಾರಿ ವಿರುದ್ಧ ಶಾಸಕ ಎಂ.ಶ್ರೀನಿವಾಸ್ ಹಾಗೂ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಮರ ನಡೆಸುತ್ತಿದ್ದಾರೆಂಬ ಆರೋಪವೂ ಕೇಳಿಬರುತ್ತಿದೆ.ಇದೆಲ್ಲದರ ನಡುವೆ ನೇಮಕಾತಿ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ಶಾಸಕರು ಹಾಗೂ ವಿಶೇಷಾಧಿಕಾರಿ ನಡುವೆ ನಡೆಯುತ್ತಿರುವ ಶೀತಲ ಸಮರ ಯಾವ ರೀತಿ ತಾರ್ಕಿಕ ಅಂತ್ಯ ಕಾಣಲಿದೆ ಎನ್ನುವುದನ್ನು ಕಾದುನೋಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.