Biometric: ನೋಂದಣಿ, ಖರೀದಿಗೆ ಬಯೋಮೆಟ್ರಿಕ್
Team Udayavani, Dec 16, 2023, 3:18 PM IST
ಮಂಡ್ಯ: ಜಿಲ್ಲೆಯಲ್ಲಿ ಭತ್ತ ಕಟಾವು ನಡೆಯುತ್ತಿದ್ದು, ಖರೀದಿ ಕೇಂದ್ರ ತೆರೆಯಲು ವಿಳಂಬವಾಗುತ್ತಿದೆ. ಇದರಿಂದ ಭತ್ತ ದಲ್ಲಾಳಿಗಳ ಪಾಲಾಗುತ್ತಿದೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೋಂದಣಿ ಹಾಗೂ ಖರೀದಿ ಕೇಂದ್ರ ಗುರುತಿಸಿ ಆದೇಶ ಹೊರಡಿಸಿದೆ. ಆದರೆ, ಬಯೋಮೆಟ್ರಿಕ್ ಪರಿಕರಗಳು ಬಾರದ ಹಿನ್ನೆಲೆಯಲ್ಲಿ ನೋಂದಣಿ ವಿಳಂಬವಾಗುತ್ತಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅ ಧಿಕಾರಿಗಳ ಸಭೆ ನಡೆಸಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಟಾಸ್ಕ್ಫೋರ್ಸ್ ಸಮಿತಿ ರಚನೆ ಮಾಡಿದ್ದರು. ಅದರಂತೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಆಯಾ ತಾಲೂಕುಗಳ ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಈ ಬಾರಿ ಬಯೋಮೆಟ್ರಿಕ್ ಮೂಲಕ ಭತ್ತ, ರಾಗಿ ಖರೀದಿಗೆ ರೈತರಿಂದ ನೋಂದಣಿ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆದರೆ, ಇನ್ನೂ ನೋಂದಣಿಗೆ ಬಯೋಮೆಟ್ರಿಕ್ ಯಂತ್ರಗಳು ಬಾರದಿರುವುದರಿಂದ ನೋಂದಣಿ ಹಾಗೂ ಖರೀದಿ ಆರಂಭವೇ ಆಗಿಲ್ಲ.
33 ನೋಂದಣಿ ಕೇಂದ್ರಗಳು: ಜಿಲ್ಲಾದ್ಯಂತ ಭತ್ತ ಖರೀದಿಗೆ 33 ನೋಂದಣಿ ಕೇಂದ್ರಗಳು, 13 ಖರೀದಿ ಕೇಂದ್ರಗಳನ್ನು ತೆರೆಯಲು ಗುರುತಿಸಲಾಗಿದೆ. ಮಂಡ್ಯ, ಮದ್ದೂರು, ಕೆ.ಆರ್.ಪೇಟೆ ತಲಾ 6, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ತಲಾ 4 ಹಾಗೂ ನಾಗಮಂಗಲದಲ್ಲಿ 3 ನೋಂದಣಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ.
13 ಭತ್ತ, 7 ರಾಗಿ ಖರೀದಿ ಕೇಂದ್ರ: ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ ತಲಾ 2, ನಾಗಮಂಗಲ, ಪಾಂಡವಪುರ ತಲಾ 1 ಹಾಗೂ ಶ್ರೀರಂಗಪಟ್ಟಣದ 3 ಕಡೆ ಸೇರಿದಂತೆ 13 ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದರಂತೆ ಜಿಲ್ಲೆಯ ಏಳು ಕಡೆ ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ಏಳು ತಾಲೂಕುಗಳ ಆಯಾ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿಸಲು ಸಿದ್ಧತೆ ನಡೆದಿದೆ.
ಬಯೋಮೆಟ್ರಿಕ್ ಮೂಲಕ ನೋಂದಣಿ: ಈ ಬಾರಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಲು ಮುಂದಾಗಿದೆ. ಆದ್ದರಿಂದ ಇನ್ನೂ ಏಜೆನ್ಸಿಯಿಂದ ನೋಂದಣಿ ಕೇಂದ್ರಗಳಿಗೆ ಬಯೋಮೆಟ್ರಿಕ್ ಪರಿಕರಗಳು ಬರಲು ತಡವಾಗಿದ್ದರಿಂದ ನೋಂದಣಿ ಹಾಗೂ ಖರೀದಿ ಎರಡೂ ವಿಳಂಬವಾಗುತ್ತಿದೆ. ಬಯೋಮೆಟ್ರಿಕ್ ಪರಿಕರಗಳು ಬಂದರೆ ಇನ್ನೆರಡು ದಿನಗಳಲ್ಲಿ ನೋಂದಣಿ ಆರಂಭವಾಗಲಿದೆ.
ದರ ನಿಗದಿ: ಭತ್ತ ಹಾಗೂ ರಾಗಿಗೆ ಈಗಾಗಲೇ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 2,183 ರೂ., ಗ್ರೇಡ್ ಎ ಭತ್ತಕ್ಕೆ 2203 ರೂ. ನಿಗದಿಪಡಿಸಲಾಗಿದೆ. ರಾಗಿಗೆ ಕ್ವಿಂಟಾಲ್‌ಗೆ 3,846 ರೂ. ದರ ನಿಗದಿಪಡಿಸಲಾಗಿದೆ.
ದಲ್ಲಾಳಿಗಳಿಂದ ಭತ್ತ ಖರೀದಿ: ಕೃತಕ ಅಭಾವ ಸೃಷ್ಟಿ ಸಾಧ್ಯತೆ: ಈಗಾಗಲೇ ಭತ್ತ ಕಟಾವು ವೇಗವಾಗಿ ನಡೆಯುತ್ತಿದೆ. ಆದರೆ, ದಲ್ಲಾಳಿಗಳು ನೇರವಾಗಿ ರೈತರಿಂದ ಖರೀದಿಸುತ್ತಿದ್ದಾರೆ. ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರ ನೀಡಿ ಗದ್ದೆಗಳಲ್ಲಿಯೇ ಒಕ್ಕಣೆಯಾಗುತ್ತಿದ್ದಂತೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿಗೆ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರವು ನಿಗದಿತ ಅವಧಿಯಲ್ಲಿ ಖರೀದಿ ಕೇಂದ್ರ ತೆರೆಯದೇ ನಿರ್ಲಕ್ಷ್ಯ ವಹಿಸಿರುವುದರಿಂದ ದಲ್ಲಾಳಿಗಳು ಭತ್ತ ಖರೀದಿಗೆ ಮುಗಿಬಿದ್ದಿದ್ದಾರೆ. ಅಲ್ಲದೇ, ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರ ನೀಡಿ ಭತ್ತ ಖರೀದಿಸುತ್ತಿದ್ದಾರೆ. ಸರ್ಕಾರ ಸಾಮಾನ್ಯ ಭತ್ತಕ್ಕೆ 2,183 ರೂ. ನಿಗದಿ ಮಾಡಿದ್ದರೆ, ದಲ್ಲಾಳಿಗಳು 2,200 ರಿಂದ 2300 ರೂ. ನೀಡುತ್ತಿದ್ದಾರೆ. ಗ್ರೇಡ್ ಎ ಭತ್ತಕ್ಕೆ ಸರ್ಕಾರ 2,203 ರೂ. ನೀಡುತ್ತಿದ್ದರೆ ದಲ್ಲಾಳಿಗಳು 2,800ರಿಂದ 3 ಸಾವಿರ ರೂ.ವರೆಗೂ ನೀಡುತ್ತಿದ್ದಾರೆ. ಇದರಿಂದ ಈ ಬಾರಿ ನಿರೀಕ್ಷೆಗಿಂತ ಕಡಿಮೆ ರೈತರಿಂದ ನೋಂದಣಿ ಆಗುವ ಸಾಧ್ಯತೆ ಇದೆ.
ಮೂಲ ಸೌಕರ್ಯ ತಹಶೀಲ್ದಾರ್‌ಗಳ ಹೊಣೆ : ಭತ್ತ, ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಆಯಾ ವ್ಯಾಪ್ತಿಯ ತಹಶೀಲ್ದಾರ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕರು ಸಮನ್ವಯತೆಯಿಂದ ರೈತರಿಗೆ ಪ್ರಚಾರ, ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೋಂದಣಿ ಹಾಗೂ ಖರೀದಿ ಕೇಂದ್ರಗಳ ಗುರುತಿಸಿ ಸಿದ್ಧತೆ ನಡೆಸಲಾಗಿದೆ. ಬಯೋಮೆಟ್ರಿಕ್ ಮೂಲಕ ರೈತರ ನೋಂದಣಿ ನಡೆಯಲಿದೆ. ಇನ್ನೂ ಬಯೋಮೆಟ್ರಿಕ್ ಪರಿಕರಗಳು ಬಂದಿಲ್ಲ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ ಬಂದ ನಂತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ● ಕೃಷ್ಣಕುಮಾರ್, ಜಂಟಿ ನಿರ್ದೇಶಕರು,, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮಂಡ್ಯ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.