ಉಪ ಚುನಾವಣೆ: ಜೆಡಿಎಸ್ ಸಾಲಮನ್ನಾ ಅಸ್ತ್ರ
Team Udayavani, Oct 21, 2019, 4:52 PM IST
ಮಂಡ್ಯ: ಮುಂಬರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ಆಪರೇಷನ್ ಕಮಲದಿಂದ ಕಳೆದುಕೊಂಡಿರುವ ಮೂರು ಕ್ಷೇತ್ರಗಳಲ್ಲೂ ತನ್ನ ಪಾರುಪತ್ಯವನ್ನು ಮುಂದುವರಿಸುವುದಕ್ಕಾಗಿ ಸಾಲ ಮನ್ನಾವನ್ನು ಅಸ್ತ್ರವನ್ನಾಗಿ ಪ್ರಯೋಗಿಸಲು ಮುಂದಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಬಿಜೆಪಿಯ ಆಪರೇಷನ್ ಕಮಲದಿಂದ ಜೆಡಿಎಸ್ ನಾಯಕತ್ವದ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಮಧ್ಯಂತರ ಸಾರ್ವತ್ರಿಕ ಚುನಾವಣೆಯ ಭಜನೆಯನ್ನು ಮಾಡುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಪ್ರಯತ್ನ ಮಾಡಿತ್ತು. ಆದರೆ, ಅಧಿಕೃತವಾಗಿ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈಗ ಚುನಾವಣಾ ಕ್ಷೇತ್ರಗಳತ್ತ ಮುಖ ಮಾಡಿದೆ.
ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ರಣೋತ್ಸಾಹದಲ್ಲಿ ಕಾಂಗ್ರೆಸ್ ಜತೆಗಿನ ಗೆಳೆತನವನ್ನು ಆರಂಭಿಸಿದ ಜೆಡಿಎಸ್, ಸರ್ಕಾರ ಪತನದ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಮಾನ ವಿರೋಧ ಎದುರಿಸುತ್ತಿರುವ ಹೊತ್ತಿನಲ್ಲಿ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಆದ್ದರಿಂದಲೇ ತನ್ನ ಅಧಿಕಾರವಧಿಯ ಹದಿನಾಲ್ಕು ತಿಂಗಳ ಆಡಳಿತದ ಜನಪರ ಕಾರ್ಯಕ್ರಮಗಳನ್ನು ನೆನಪಿಸುವ ಸಾಹಸಕ್ಕೆ ಮುಂದಾಗಿದ್ದು ಅದರಲ್ಲಿ ಸಾಲ ಮನ್ನಾ ಪ್ರಮುಖವಾಗಿದೆ.
ಸಾಲಮನ್ನಾ ಪುಸ್ತಕದ ಕರಪತ್ರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ನಾಯಕತ್ವದ ಸರ್ಕಾರವೇ ಅಧಿಕಾರದಲ್ಲಿ ಇದ್ದರೂ ಜೆಡಿಎಸ್ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಪರಾಭವಗೊಂಡಿದ್ದು ಜೆಡಿಎಸ್‌ಗೆ ಬಹುದೊಡ್ಡ ಹಿನ್ನಡೆಯಾಗಿದ್ದು, ಆನಂತರದ ಬೆಳವಣಿಗೆಯಲ್ಲಿ ಸ್ಥಳೀಯ ಜೆಡಿಎಸ್ ನಾಯಕರು ಹಾಗೂ ಕುಮಾರಸ್ವಾಮಿ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಾಗಿದ್ದು, ಈ ನಡುವೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ ಸಾಲ ಮನ್ನಾ ಪುಸ್ತಕವನ್ನು ಕರಪತ್ರದ ಮಾದರಿಯಲ್ಲಿ ಮನೆ ಮನೆಗೆ ತಲುಪಿಸುವರೇ ಎಂಬ ಅನುಮಾನಗಳು ಮೂಡಿವೆ.
ಎಲ್ಲ ಕ್ಷೇತ್ರಗಳಲ್ಲಿ ವಿತರಣೆ: ರಾಜ್ಯದ ಎಲ್ಲಾ ಕ್ಷೇತ್ರಗಳ ಸಾಲ ಮನ್ನಾದ ವಿವರವನ್ನು ಕ್ಷೇತ್ರವಾರು ಪ್ರತ್ಯೇಕ ಪುಸ್ತಕಗಳನ್ನು ಮಾಡಿ ಹಂಚಿಕೆ ಮಾಡುವ ಮತ್ತು ಆ ಮೂಲಕ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುವ ಉದ್ದೇಶವನ್ನು ಜೆಡಿಎಸ್ ಹೊಂದಿದಂತೆ ಇದ್ದು, ಪ್ರಾಥಮಿಕವಾಗಿ ಉಪ ಚುನಾವಣೆ ಘೋಷಣೆಯಾಗಿರುವ ಕ್ಷೇತ್ರಗಳಲ್ಲಿ ಮೊದಲ ಕಂತಿನಲ್ಲಿ ವಿತರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಹದಿನಾಲ್ಕು ತಿಂಗಳ ಅವಧಿಯಲ್ಲಿ ಮಾಡಿದ ಅಷ್ಟೂ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲವೆಂಬ ಅಸಮಾಧಾನ ಜೆಡಿಎಸ್ ವರಿಷ್ಠರಲ್ಲಿದ್ದು, ಈಗ ಪುಸ್ತಕದ ರೂಪದಲ್ಲಿ ಸ್ವತಃ ಪಕ್ಷದ ಮೂಲಕವೇ ಜೆಡಿಎಸ್ ನಾಯಕತ್ವದ ಸರ್ಕಾರದ ಸಾಧನೆಗಳನ್ನು ತಲುಪಿಸುವ ಪ್ರಯತ್ನ ಆರಂಭಗೊಂಡಿದ್ದು, ಇದರಿಂದ ಮಂಡ್ಯ ಜಿಲ್ಲೆ ಕೂಡ ಹೊರತಾಗಿಲ್ಲ.
ಆಪರೇಷನ್ ಭೀತಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ದಾಖಲೆಯ ಗೆಲುವನ್ನು ಸಾಧಿಸಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡರೇ ಆಪರೇಷನ್ ಕಮಲಕ್ಕೆ ಒಳಗಾಗಿದ್ದು, ಜೆಡಿಎಸ್‌ಗೆ ಆಘಾತ ಉಂಟುಮಾಡಿತ್ತು. ಅಲ್ಲದೆ, ಜಿಲ್ಲೆಯ ಜೆಡಿಎಸ್‌ನ ಮತ್ತಿಬ್ಬರು ಶಾಸಕರನ್ನು ಬಿಜೆಪಿ ಆಪರೇಷನ್ ಕಮಲಕ್ಕೆ ಒಳಪಡಿಸುವ ವದಂತಿಯಿದ್ದು, ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಜೆಡಿಎಸ್ ಸಾಲಮನ್ನಾದ ಫಲಾನುಭವಿಗಳನ್ನು ಮುಂದಿಟ್ಟುಕೊಂಡು ಪಕ್ಷದ ಬಲವರ್ಧನೆಗೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಶ್ಚಿತ ಮತದಾರರು: ಸದ್ಯದ ಸ್ಥಿತಿಯಲ್ಲಿ ಕೆ.ಆರ್ .ಪೇಟೆ ಕ್ಷೇತ್ರವನ್ನು ಕೇಂದ್ರೀಕರಿಸಿರುವ ಜೆಡಿಎಸ್ ಸದರಿ ಕ್ಷೇತ್ರದಲ್ಲಿ ಇರುವ ಫಲಾನುಭವಿಗಳನ್ನು ಜಾಗೃತಗೊಳಿಸುವ ಮತ್ತು ಜೆಡಿಎಸ್‌ನ ಕಾಯಂ ಮತದಾರರನ್ನಾಗಿ ಪರಿವರ್ತಿಸುವ ಪ್ರಯತ್ನಕ್ಕೆ ಮುಂದಾದಂತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಮಹತ್ವದ ಅನುಕೂಲಗಳು ಆಗಲಿಲ್ಲವೆಂಬ ವಿರೋಧಿಗಳ ಬಾಯಿ ಮುಚ್ಚಿಸುವ ಪ್ರಯತ್ನ ಕೂಡ ಇದೇ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ ಸರ್ಕಾರದ ಅಧಿಕಾರವಧಿಯಲ್ಲಿ ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಪುನಶ್ಚೇತನಕ್ಕೆ ಸೂಕ್ತ ಆದ್ಯತೆ ನೀಡಲಿಲ್ಲ ಎಂಬ ಆರೋಪಗಳು ಗಟ್ಟಿಯಾಗಿ ಕೇಳಿಬರುತ್ತಿರುವ ದಿನಗಳಲ್ಲಿ ಅದೇ ರೈತರಿಗೆ ಸಾಲ ಮನ್ನಾದಿಂದ ಆಗಿರುವ ಅನುಕೂಲಗಳನ್ನು ಹೇಳುತ್ತಾ ಜೆಡಿಎಸ್ ರೈತಪರವಾದ ಪಕ್ಷ ಎಂದು ಬಿಂಬಿಸಿಕೊಳ್ಳುವ ಉದ್ದೇಶ ಕೂಡ ಸಾಲ ಮನ್ನಾ ಪುಸ್ತಕ ಪ್ರಕಟಣೆಯ ಹಿಂದಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್‌ನ ಆಂತರಿಕ ಅಸಹಕರವನ್ನು ಬಹಿರಂಗಪಡಿಸುತ್ತಿದ್ದು, ಕಾಂಗ್ರೆಸ್ಸಿಗರ ಕಿರುಕುಳವನ್ನೂ ಸಹಿಸಿಕೊಂಡು ಸಾಲ ಮನ್ನಾದಂತಹ ಮಹತ್ವದ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿರುವುದಕ್ಕೆ ಸಾಕ್ಷಿಯಾಗಿ ಹೊರತರಲಾಗಿರುವ ಈ ಪುಸ್ತಕದ ಮೂಲಕ ಜೆಡಿಎಸ್‌ಗೆ ಭವಿಷ್ಯ ಕಂಡು ಕೊಳ್ಳುವ ಪ್ರಯತ್ನ ನಡೆಸುತ್ತಿದ್ದು ಇದು ಎಷ್ಟು ಮಟ್ಟಿಗೆ ಫಲ ನೀಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಜೆಡಿಎಸ್ ಸಾಲಮನ್ನಾ ಪುಸ್ತಕದಲ್ಲೇನಿದೆ? :
ಜೆಡಿಎಸ್ ಹೊರಡಿಸಿರುವ ಸಾಲ ಮನ್ನಾ ಪುಸ್ತಕದಲ್ಲಿ ಫಲಾನುಭವಿಯ ಹೆಸರು, ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಮೊಬೈಲ್ ನಂಬರ್ ಇದ್ದು ಪ್ರತಿ ಕ್ಷೇತ್ರದಲ್ಲಿ ಎಷ್ಟು ಮಂದಿ ಫಲಾನುಭವಿಗಳಿಗೆ ಸಾಲ ಮನ್ನಾದ ಅನುಕೂಲ ಸಿಕ್ಕಿದೆ ಎನ್ನುವುದನ್ನು ದಾಖಲೆಗಳ ಸಹಿತಸಾಧನೆಯಾಗಿ ಪ್ರತಿಬಿಂಬಿಸುವ ಕೆಲಸವನ್ನು ಜೆಡಿಎಸ್ ಈ ಮೂಲಕ ಮಾಡುತ್ತಿದೆ.
ಪಕ್ಷ ಬಲವರ್ಧನೆ ಸಾಹಸ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾದ ಘೋಷಣೆಯಿಂದಲೇ ರೈತರ ಮನಗೆಲ್ಲುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ, ಮುಖ್ಯಮಂತ್ರಿ ಆದ ನಂತರವೂ ಮೈತ್ರಿ ಸರ್ಕಾರದಲ್ಲಿ ಕೂಡ ಕೊಟ್ಟ ಮಾತಿನಂತೆ ನಡೆದುಕೊಂಡಿರುವುದನ್ನು ನೆನೆಪಿಸುವ ಪ್ರಯತ್ನ ಇದಾಗಿದ್ದು, ಯಾವ ರೈತರ ಸಾಲ ಮನ್ನಾ ಘೋಷಣೆಯೊಡನೆ ಅಧಿಕಾರ ಹಿಡಿಯಲು ಸಾಧ್ಯವಾಯಿತೋ ಅದೇ ಸಾಲ ಮನ್ನಾದ ಸಾಧನೆಯನ್ನು ಮುಂದಿಟ್ಟು ಪಕ್ಷವನ್ನು ಕಟ್ಟುವ ಸಾಹಸಕ್ಕೆ ಮುಂದಾಗಿದ್ದಾರೆ.
-ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.