ಪೇಸಿಎಂ ಪೋಸ್ಟರ್ ಅಂಟಿಸಿ ಕೈ ಪ್ರತಿಭಟನೆ
Team Udayavani, Sep 28, 2022, 4:23 PM IST
ಮಂಡ್ಯ: ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪೇ ಸಿಎಂ ಪೋಸ್ಟರ್ ಅಂಟಿಸುವ ಮೂಲಕ ಪ್ರತಿಭಟನೆ ನಡೆಸಿದರು. ನಗರದ ಕುರುಬರ ಹಾಸ್ಟೆಲ್ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಪೇ ಸಿಎಂ ಪೋಸ್ಟರ್ ಮೆರವಣಿಗೆ ನಡೆಸಿದರು.
ನಂತರ ನಗರದ ಪ್ರಮುಖ ಬೀದಿಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ ಧಿಕ್ಕಾರ ಕೂಗಿದರು.
ಲೂಟಿ ಮಾಡುವುದನ್ನು ಬಿಟ್ಟಿಲ್ಲ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಮಾತನಾಡಿ, ಪೇ ಸಿಎಂ ಅಭಿಯಾನ ಆರಂಭಿಸಿದ್ದೇವೆ. ನ್ಯಾಯ ಎನ್ನುವುದು ಎಲ್ಲರಿಗೂ ಒಂದೇ ಆಗಿದೆ ಎಂಬುದನ್ನು ಪೊಲೀಸರು ಅರ್ಥ ಮಾಡಿಕೊಳ್ಳಬೇಕು. ಶೇ.40ರಷ್ಟು ಕಮಿಷನ್ ಸುಳ್ಳು ಎಂಬುದೇ ಸುಳ್ಳಾ?. ಬಿಜೆಪಿಯವರಂಥ ಅಯೋಗ್ಯರು ಆಡಳಿತ ನಡೆ ಸುವುದೇ ಅವಮಾನ ಮಾಡಿದಂತಾಗಿದೆ. ಕೋವಿಡ್ ಸಂದರ್ಭದಲ್ಲಿ ದುಡ್ಡು ಮಾಡಿಕೊಂಡವರೆಲ್ಲಾ ಸಚಿವರಾಗಿದ್ದಾರೆ. ಡಾ.ಸುಧಾಕರ್, ಅಶೋಕ್, ಅಶ್ವತ್ಥನಾರಾಯಣ್ ಸೇರಿದಂತೆ ಪ್ರಮುಖರು ಲೂಟಿ ಮಾಡುವುದನ್ನೂ ಇನ್ನೂ ಬಿಟ್ಟಿಲ್ಲ ಎಂದು ಆರೋಪಿಸಿದರು.
ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ. ಆದರೆ, ವ್ಯಂಗ್ಯ ಚಿತ್ರಗಳನ್ನು ಹಾಗೂ ವ್ಯಂಗ್ಯ ಚಿತ್ರಕಾರರ ವಿರುದ್ಧ ಕ್ರಮ ಕೈಗೊಳ್ಳುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿದಂತಾಗಲಿದೆ. ಆ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಮ್ಮ ಇಬ್ಬರು ಕಾರ್ಯಕರ್ತರನ್ನು ಬಂ ಧಿಸಿರುವುದು ಸರಿಯಲ್ಲ. ಇವರೂ ಕಾಂಗ್ರೆಸ್ ವಿರುದ್ಧ ಮಾಡಿದ್ದಾರೆ. ಅವರನ್ನು ಏಕೆ ಬಂಧಿಸುತ್ತಿಲ್ಲ. ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ಎಂದು ಕಿಡಿಕಾರಿದರು.
ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್. ಚಿದಂಬರ್ ಮಾತನಾಡಿ, ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಹಗರಣಗಳಲ್ಲೇ ಅಧಿಕಾರ ನಡೆಸುತ್ತಿದೆ. ಇಲಾಖೆಗಳಲ್ಲಿಯೂ ನಡೆಯುತ್ತಿರುವ ಹಗರಣಗಳನ್ನು ಕಂಡರೂ ಕಾಣದಂತೆ ದಶರಥನ ರೀತಿ ಆಡಳಿತ ನಡೆಸುತ್ತಿರುವ ಬಿಜೆಪಿ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ನಗರಸಭೆ ಸದಸ್ಯ ರಾಮಲಿಂಗಣ್ಣ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್, ಮುಖಂಡರಾದ ಚಂದ್ರು, ಪ್ರಸನ್ನ, ಗುಣವಂತ, ನಿರಂಜನ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಮಾತಿನ ಚಕಮಕಿ: ಪೇ ಸಿಎಂ ಪೋಸ್ಟರ್ ಅಂಟಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಮುಂದಾದರು. ಆಗ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.