ಸಾಕಾರಗೊಳ್ಳದ ಯೋಜನೆ, ನಿರೀಕ್ಷಿಸಿ ಫಲವಿಲ
Team Udayavani, Feb 15, 2018, 5:37 PM IST
ಮಂಡ್ಯ: ಹಳೆಯ ಯೋಜನೆಗಳು ದಶಕಗಳಾದರೂ ಜಾರಿಯಾಗಿಲ್ಲ. ಜಿಲ್ಲೆಯ ಪ್ರಗತಿಯನ್ನು ಗುರಿಯಾಗಿಸಿ ಕೊಂಡು ರೂಪಿಸಿಲಾದ ಹತ್ತು ಹಲವು ಯೋಜನೆಗಳು ಘೋಷಣಾ ಹಂತದಲ್ಲೇ ಇವೆ. ಇನ್ನು ಬಜೆಟ್‌ನಲ್ಲಿ ಸರ್ಕಾರದಿಂದ ಹೊಸದಾಗಿ ನಿರೀಕ್ಷಿಸುವುದಾದರೂ ಏನನ್ನು. “ಬಜೆಟ್ ಎನ್ನುವುದು ಬರೀ ಓಳು’ ಎಂಬ ಭಾವನೆ ಜಿಲ್ಲೆಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿ ಹೇಗಿರಬೇಕು ಎಂಬ ಪರಿಕಲ್ಪನೆಯೇ ಜನಪ್ರತಿನಿಧಿಗಳಿಗೇ ಇಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಕ್ಕದ ಜಿಲ್ಲೆಯವರಾಗಿದ್ದರೂ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿರುವ ಇದೇ ಜಿಲ್ಲೆಯವರಾದ ಅಂಬರೀಶ್ ಮೂರು ವರ್ಷ ಉಸ್ತುವಾರಿ ಸಚಿವರಾಗಿದ್ದರೂ ಅಭಿವೃದ್ಧಿಯತ್ತ ಮಂಡ್ಯ ಸಾಗಲಿಲ್ಲ.
ನಾಲ್ಕು ವರ್ಷಗಳಿಂದ ಜಿಲ್ಲೆಯ ಆರ್ಥಿಕ ಜೀವನಾಡಿ ಮೈಷುಗರ್ ಕಾರ್ಖಾನೆಯ ಪುನಃ ಶ್ಚೇತನಕ್ಕೆ ಜನರು ಕೂಗಿಡುತ್ತಿದ್ದರೂ ಅದು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ದಶಕಗಳಿಂದಲೂ ತರಕಾರಿ ಮಾರು ಕಟ್ಟೆ ಕನಸು ಕನಸಾಗಿಯೇ ಉಳಿದಿದೆ. ಕೆ.ಆರ್ .ಪೇಟೆಯಲ್ಲಿ ಫುಡ್‌ಪಾರ್ಕ್‌ಗೆ ಶಂಕುಸ್ಥಾಪನೆ ಮಾಡಿದ್ದೇ ದೊಡ್ಡ ಸಾಧನೆ. ಅಮೃತ ಮಹೋತ್ಸವದ ನೆನಪಿನ “ಅಮೃತ ಭವನ’ಕ್ಕೆ ಶಂಕುಸ್ಥಾಪನೆಯಾದರೂ ಕೆಲಸ ಪ್ರಾರಂಭ ವಾಗಿಲ್ಲ. ನಗರದ ಬೈಪಾಸ್ ರಸ್ತೆ ನಿರ್ಮಾಣಕ್ಕೂ ಚಾಲನೆ ಸಿಕ್ಕಿಲ್ಲ. ಬೃಹತ್ ಮಂಡ್ಯ, ತೂಬಿನಕೆರೆ ಬಳಿ ಉಪನಗರ ಹಗಲುಗನಸಾಗಿಯೇ ಉಳಿದಿದೆ.
ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಅವಕಾಶಗಳಿದ್ದರೂ ಸರ್ಕಾರಕ್ಕೆ ಆಸಕ್ತಿ ಇಲ್ಲ. ಹಲವಾರು ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ತಾಣಗಳಿದ್ದರೂ ಒಂದೂ ಅಭಿವೃದ್ಧಿಯನ್ನು ಕಂಡಿಲ್ಲ. ಹೀಗೆ ಜಿಲ್ಲೆಯ ಅಭಿವೃದ್ಧಿಗೆ ಒಂದು ರೀತಿಯ ಶೂನ್ಯ ಆವರಿಸಿದೆ.
ಬೃಹತ್ ಮಂಡ್ಯ ಮರೀಚಿಕೆ: ಯಡಿಯೂರಪ್ಪನೇತೃತ್ವದ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ “ಬೃಹತ್ ಮಂಡ್ಯ’ ಯೋಜನೆಯನ್ನು ಘೋಷಿಸಲಾಗಿತ್ತು. ನಗರದ ಸಮಗ್ರ ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ನಗರಕ್ಕೆ ಸಮೀಪದಲ್ಲಿರುವ ಗ್ರಾಮಗಳನ್ನು ನಗರಸಬೆ ವ್ಯಾಪ್ತಿಗೆ ಸೇರಿಸಿಕೊಂಡು ಬೃಹತ್ ಮಂಡ್ಯ ಯೋಜನೆಯನ್ನು ಸಾಕಾರಗೊಳಿಸುವುದು. ನಗರದ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದರೊಂದಿಗೆ ಸುಸಜ್ಜಿತ ಬಡಾವಣೆಗಳನ್ನು ನಿರ್ಮಿಸಿ ಮಂಡ್ಯ ನಗರಸಭೆಯನ್ನು ಮಹಾನಗರ ಪಾಲಿಕೆಗೆ ಮೇಲ್ದರ್ಜೆ ಗೇರಿಸುವುದು ಯೋಜನೆಯ ಹಿಂದಿನ ಕನಸಾಗಿತ್ತು.
ಈ ಯೋಜನೆಗೆ ಇದುವರೆಗೂ ಚಾಲನೆಯೇ ದೊರಕಿಲ್ಲ. ಇಷ್ಟು ವರ್ಷಗಳಾದರೂ ಮಂಡ್ಯ ಬೃಹತ್ತಾಗಿ ಬೆಳೆಯಲೂ ಇಲ್ಲ. ನಗರ ಬೆಳವಣಿಗೆ ಕಾಣು ವುದಿರಲಿ, ನಗರದೊಳಗಿನ ಪ್ರಮುಖ ರಸ್ತೆಗಳೆಲ್ಲಾ ಗುಂಡಿ ಬಿದ್ದು ಹಾಳಾಗಿದ್ದರೂ ಕೇಳ್ಳೋರೂ ಇಲ್ಲ. ಅದನ್ನು ದುರಸ್ತಿಗೊಳಿಸುವಂತೆ ಹೇಳ್ಳೋರೂ ಇಲ್ಲ.
ತಲೆ ಎತ್ತದ ಅಮೃತ ಭವನ: ಅಮೃತ ಮಹೋತ್ಸವದ ಸವಿನೆನಪಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಅಮೃತ ಭವನ ನಿರ್ಮಿಸಲು ಘೋಷಣೆ ಮಾಡಿ ಎರಡು ವರ್ಷಗಳಾದವು. ಎರಡು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೇ ¸ವನಕ್ಕೆ ಅಡಿಗಲ್ಲು ಬಿದ್ದಿದೆ. ಕಾಮಗಾರಿ ಆರಂಭವಾಗಿಲ್ಲ.
ನಗರಸಭೆ ಆವರಣದಲ್ಲಿ ಶಿಥಿಲಾವಸ್ಥೆ ಯಲ್ಲಿರುವ ಜಯಚಾಮರಾಜೇಂದ್ರ ಪುರ ಭವನವನ್ನು ಕೆಡವಿ ಅದೇ ಸ್ಥಳದಲ್ಲಿ ಅಮೃತ ಭವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಅಮೃತ ಭವನಕ್ಕೆ ಸರ್ಕಾರದಿಂದ 4.98 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಇದರಲ್ಲಿ ಮೊದಲ ಹಂತದಲ್ಲಿ 2.43 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, 1.43 ಕೋಟಿ ರೂ. ಹಣ ಜಿಲ್ಲಾಧಿಕಾರಿ ಖಾತೆಗೆ ಬಂದು ಸೇರಿದೆ. ಆದರೂ ಭವನ ನಿರ್ಮಾಣಕ್ಕೆ ಚಾಲನೆಯೇ ಸಿಕ್ಕಿಲ್ಲ. ಇದಕ್ಕೆ ಕಾರಣವೇನೆಂಬುದೂ ನಿಗೂಢವಾಗಿದೆ.
ಮಂಡ್ಯ ಉಪ ನಗರಕ್ಕೂ ಗ್ರಹಣ ಮಂಡ್ಯದಿಂದ ಎಂಟು ಕಿ.ಮೀ. ದೂರ ದಲ್ಲಿರುವ ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿ ಉಪ ನಗರ ನಿರ್ಮಾಣ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿ ನಾಲ್ಕು ವರ್ಷಗಳಾದವು. ಅದಕ್ಕೂ ಗ್ರಹಣ ಹಿಡಿದಿದೆ. ಮಂಡ್ಯ ನಗರದ ಬೆಳವಣಿಗೆಗೆ ಪೂರಕ ವಾಗುವಂತೆ ತೂಬಿನಕೆರೆ ಬಳಿ ಉಪ ನಗರ ನಿರ್ಮಿಸಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಘೋಷಣೆ ಮಾಡಿತು.
ಉಪ ನಗರ ನಿರ್ಮಾಣಕ್ಕೆ ಎಲೆಚಾಕನಹಳ್ಳಿ, ಊರಮಾರಕಸಲಗೆರೆ, ಯಲಿಯೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೆಂಬ ಕಾರಣವನ್ನು ಮುಂದಿಟ್ಟು ಕೊಂಡು ಯೋಜನೆ ಜಾರಿಗೆ ಸರ್ಕಾರ ಆಸಕ್ತಿ ತೋರಲೇ ಇಲ್ಲ. ಉಪನಗರದಿಂದ ಆಗುವ
ಅನುಕೂಲತೆಗಳನ್ನು ಜನರಿಗೆ ವಿವರಿಸಿ ಅವರ ಮನವೊಲಿಸುವ ಪ್ರಯತ್ನಗಳು ಸರ್ಕಾರದ ಮಟ್ಟದಲ್ಲಿ ನಡೆಯಲೇ ಇಲ್ಲ.
ಮೈಷುಗರ್ ಬಗ್ಗೆ ನಿರಾಸಕ್ತಿ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಯಾಗಿರುವ ಮೈಸೂರು ಸಕ್ಕರೆ ಕಂಪನಿ ಬಗ್ಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿರಾಸಕ್ತಿ ವಹಿಸಿದೆ. ಮೂರೂವರೆ ವರ್ಷ ಸಕ್ಕರೆ ಸಚಿವರೇ ಕಾರ್ಖಾನೆಯ ಅಧ್ಯಕ್ಷರಾಗಿದ್ದರು. ಆದರೂ ಕಾರ್ಖಾನೆ ಉದ್ಧಾರವಾಗಲಿಲ್ಲ. ಜಿಲ್ಲೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರ ಮೈಷುಗರ್ ಕಾರ್ಖಾನೆಗೆ 120 ಕೋಟಿ ರೂ. ಘೋಷಿಸಿದ್ದೆಷ್ಟೋ ಅಷ್ಟೇ. ಇದರಲ್ಲಿ ಕಾರ್ಖಾನೆಗೆ ದಕ್ಕಿದ್ದು 95.29 ಕೋಟಿ ರೂ. ಮಾತ್ರ. ಈ ಹಣದಲ್ಲಿ ಬ್ಯಾಂಕ್ ಮತ್ತು ವಿವಿಧ ಹಣಕಾಸು ಸಂಸ್ಥೆಗಳಿಗೆ ಪಾವತಿಸ ಬೇಕಾದ ಬಾಕಿಗಳನ್ನು ಏಕಕಾಲಿಕ ತೀರುವಳಿ ಯೋಜನೆಯಡಿ 35.31 ಕೋಟಿ ರೂ., ಕಾರ್ಖಾನೆ ಪಾವತಿಸಬೇಕಾದ ಶಾಸನಬದ್ಧ ಬಾಕಿಗಳ ಪಾವತಿಗೆ 39.98 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ ಮತ್ತು ಬಂಡವಾಳ ಕಾಮಗಾರಿಗಳಿಗೆ 20 ಕೋಟಿ ರೂ. ಹಣವನ್ನು ಮೃದು ಸಾಲ ನೀಡಿ ಕೈ ತೊಳೆದುಕೊಂಡಿತು.
ಪ್ರತಿ ವರ್ಷದ ಬಜೆಟ್‌ನಲ್ಲಿ 40 ಅಥವಾ 60 ಕೋಟಿ ರೂ. ಹಣ ನೀಡಿ ಕೈತೊಳೆದುಕೊಳ್ಳುತ್ತಿದ್ದ ರಾಜ್ಯಸರ್ಕಾರ, ಕಳೆದ ಬಜೆಟ್‌ನಲ್ಲಿ ಕಾರ್ಖಾನೆಗೆ ಬಿಡಿಗಾಸನ್ನೂ ನೀಡಲಿಲ್ಲ. ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಮರು ಚಾಲನೆ ಸಿಕ್ಕಿತಾದರೂ 80 ಸಾವಿರ ಟನ್ ಕಬ್ಬು ಅರೆಯುವುದಕ್ಕಷ್ಟೇ ಕಾರ್ಖಾನೆ ಶಕ್ತವಾಯಿತು. ಕಾರ್ಖಾನೆ ಶುರುವಾಗಿದ್ದಕ್ಕಷ್ಟೇ ಖುಷಿಪಡಬೇಕಾಯಿತೇ ಹೊರತು ಕಂಪನಿಯ ಪುನಃಶ್ಚೇತನ, ಪ್ರಗತಿ ಗಾಳಿಗೋಪುರವಾಗಿದೆ. ಆರು ತಿಂಗಳಿಗೊಮ್ಮೆ ವ್ಯವಸ್ಥಾಪಕ ನಿರ್ದೇಶಕರು ಬದಲಾಗುತ್ತಿದ್ದಾರೆ. ಕಾರ್ಖಾನೆ ಸ್ಥಿತಿಯಲ್ಲಿ ಎಳ್ಳಷ್ಟೂ ಬದಲಾವಣೆ ಕಂಡು ಬಂದಿಲ್ಲ.
ತರಕಾರಿ ಮಾರುಕಟ್ಟೆ ಇನ್ನೂ ಕನಸು: ನಗರದೊಳಗೆ ಹಳೆಯ ಮಾರುಕಟ್ಟೆ ಇರುವ ಜಾಗದಲ್ಲಿ ನೂತನವಾಗಿ ಹೊಸ ಮಾರುಕಟ್ಟೆ ನಿರ್ಮಿಸಬೇಕೆಂಬುದು ದಶಕಗಳ ಕನಸು. ಇದಕ್ಕಾಗಿ 5 ಕೋಟಿ ರೂ. ಅವಶ್ಯಕತೆ ಇದೆ. ಸರ್ಕಾರದಿಂದ ಇನ್ನೂ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇದರಿಂದ ವರ್ತಕರು, ವ್ಯಾಪಾರಸ್ಥರು ಹಳೆಯ ಮಾರುಕಟ್ಟೆಯ ಅವ್ಯವಸ್ಥಿತ ಗೂಡಿನೊಳಗೆ ವ್ಯಾಪಾರ ನಡೆಸುವಂತಾಗಿದೆ.
ವರ್ಷದಿಂದ ವರ್ಷಕ್ಕೆ ಯೋಜನೆಯ ಅಂದಾಜು ವೆಚ್ಚ ಹೆಚ್ಚಾಗುತ್ತಲೇ ಇದೆ. ಆದರೂ ಸರ್ಕಾರ ಉದ್ದೇಶಿತ ಯೋಜನೆಗೆ ಹಣ ಬಿಡುಗಡೆ ಮಾಡುವ ಬದ್ಧತೆ ಪ್ರದರ್ಶಿಸುತ್ತಿಲ್ಲ. ಹೀಗಾಗಿ ದಶಕದಿಂದಲೂ ತರಕಾರಿ ಮಾರುಕಟ್ಟೆ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿಲ್ಲ.
ಫುಡ್‌ಪಾರ್ಕ್‌ಗೆ ಸಿಗದ ಚಾಲನೆ ರಾಜ್ಯದಲ್ಲಿ ಎಸ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ಅಂದಿನ ಶಾಸಕ ಕೃಷ್ಣ ಒತ್ತಾಸೆಯ ಫಲವಾಗಿ ಕೆ.ಆರ್.ಪೇಟೆ ತಾಲೂಕಿನ ಬಣ್ಣೇನಹಳ್ಳಿಯ ಬಳಿ ಕೈಗಾರಿಕಾ ಅಭಿವೃದ್ಧಿಗೆ ರೈತರಿಂದ 300 ಎಕರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಗಿತ್ತು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಣ್ಣೆನಹಳ್ಳಿಯ ಕೈಗಾರಿಕಾ ಅಭಿವೃದ್ದಿಗೆ ಕಾಯ್ದಿರಿಸಿದ್ದ 300 ಎಕರೆ ಭೂಮಿಯಲ್ಲಿ 129 ಎಕರೆ ಭೂಮಿಯನ್ನು ಮೆಗಾ ಫುಡ್ ಪಾರ್ಕ್ ನಿರ್ಮಾಣಕ್ಕಾಗಿ ಪೇವರಿಚ್ ಮೆಗಾ ಫುಡ್ ಪಾರ್ಕ್ ಎಂಬ ಕಂಪನಿಗೆ ನೀಡಲಾಯಿತು.
ಈ ಜಾಗದಲ್ಲಿ ಸಂಸ್ಥೆಯು 123 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ತಂತ್ರಜ್ಞಾನದಲ್ಲಿ ಬೃಹತ್ ಆಹಾರ ವಸ್ತುಗಳ ತಯಾರಿಕಾ ಘಟಕ ಮತ್ತು ಸಂರಕ್ಷಣಾ ಘಟಕವನ್ನು ಆರಂಭಿಸಲು ಉದ್ದೇಶಿಸಿರುವುದಾಗಿ ಘೋಷಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು ಆಗಮಿಸಿ 27 ಆಗಸ್ಟ್ 2014 ರಂದು ಶಂಕುಸ್ಥಾಪನೆ ನೆರವೇರಿಸಿದರು. ಫುಡ್‌ಪಾರ್ಕ್ ನಿರ್ಮಾಣದಿಂದ 15 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಘೋಷಿಸಿದರು. ಸ್ವತಃ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ಮಾಡಿದ ಫುಡ್‌ಪಾರ್ಕ್ ಕಾಮಗಾರಿ ಇದುವರೆಗೂ ಆರಂಭಗೊಂಡಿಲ್ಲ.
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.