ಕಬ್ಬು ಬಾಕಿ ಪಾವತಿಸದಿದ್ದರೆ ಹೋರಾಟ
ಬಾಕಿ ಹಣ ಪಾವತಿಸದ ಕೊಪ್ಪ ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ
Team Udayavani, Jun 11, 2019, 11:27 AM IST
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆಯ ಹೊರನೋಟ.
ಮದ್ದೂರು: ಕೊಪ್ಪ ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆಗೆ ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು ಕೂಡಲೇ ರೈತರಿಗೆ ಹಣ ಪಾವತಿಸದಿದ್ದಲ್ಲಿ ಕಾರ್ಖಾನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಎಚ್ಚರಿಕೆ ನೀಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ರೈತರು ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಹಣವನ್ನು ಸಕಾಲದಲ್ಲಿ ವಿತರಿಸದೆ ನಿರ್ಲಕ್ಷ್ಯ ವಹಿಸಿದೆ. 12 ಕೋಟಿಗೂ ಅಧಿಕ ಹಣ ಪಾವತಿಸಬೇ ಕಾಗಿದೆ. ಕಾರ್ಖಾನೆ ಎದುರು ಕಬ್ಬು ಬೆಳೆಗಾರರು ನಿರಂತರ ಪ್ರತಿಭಟನೆ ಕೈಗೊಂಡು ಹಣ ನೀಡುವಂತೆ ಒತ್ತಾಯಿಸುತ್ತಿದ್ದರೂ ಆಡಳಿತ ಮಂಡಳಿ ಹಣ ವಿತರಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಈಗಾಗಲೇ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಮಕ್ಕಳನ್ನು ಶಾಲೆಗೆ ಸೇರಿಸಲು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯಬೇಕಿದೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಪರಿಹಾರ ಕೊಟ್ಟಿಲ್ಲ: ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಸೆಂಟ್ ವಾಶ್ ವಾಟರ್ ಟ್ಯಾಂಕ್ ಹಾನಿಗೊಂಡು ಲಕ್ಷಾಂತರ ರೂ. ಬೆಳೆ ಹಾನಿ ಸಂಭವಿಸಿದ್ದರೂ ತಾಲೂಕು ಆಡಳಿತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಮಾಹಿತಿ ಒದಗಿಸಿದ್ದರೂ ಕಾರ್ಖಾನೆ ಅಧಿಕಾರಿಗಳು ಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆಂದರು.
ಶಿಂಷಾ ನದಿಗೆ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಜನ, ಜಾನುವಾರು, ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತಿದ್ದು ನದಿ ಹಾಗೂ ನಾಲೆಗೆ ತ್ಯಾಜ್ಯ ನೀರು ಹರಿಯದಂತೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಇಲ್ಲದಿದ್ದರೆ ಜೂ.12ರಿಂದ ಮೇಲಿನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.