ಜಿಲ್ಲೆಯ 89 ಗ್ರಾಮದಲ್ಲಿ ಫ್ಲೋರೈಡ್ ನೀರು
Team Udayavani, Jul 10, 2023, 5:35 PM IST
ಮಂಡ್ಯ: ಜಿಲ್ಲೆಯ ಕುಡಿಯಲು ಬಳಸುತ್ತಿರುವ 89 ಗ್ರಾಮಗಳ ಕೊಳವೆ ಬಾವಿಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬಂದಿದ್ದು, ಪ್ರತಿದಿನ ನಿಧಾನವಾಗಿ ಸಾರ್ವಜನಿಕರ ದೇಹ ಸೇರುತ್ತಿದೆ.
ಜಿಲ್ಲೆಯಲ್ಲಿ ಮೊದಲು 2013-14ರಲ್ಲಿ 378 ಗ್ರಾಮಗಳು ಹಾಗೂ 455 ಜನವಸತಿ ಪ್ರದೇಶಗಳಲ್ಲಿನ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಕಂಡು ಬಂದಿತ್ತು. ನಂತರ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿದ ಬಳಿಕ ಆ ಸಂಖ್ಯೆ ಇಳಿಕೆಯಾಗಿದೆ.
ತಾಲೂಕುವಾರು ಗ್ರಾಮಗಳ ವಿವರ: ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಹೆಚ್ಚು 29 ಗ್ರಾಮಗಳ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬಂದಿದೆ. ಉಳಿದಂತೆ ಪಾಂಡವಪುರ 23, ಕೆ.ಆರ್.ಪೇಟೆ 15, ಮಂಡ್ಯ 12, ಮಳವಳ್ಳಿ 5, ಶ್ರೀರಂಗಪಟ್ಟಣ 3 ಹಾಗೂ ಮದ್ದೂರಿನ 2 ಗ್ರಾಮಗಳಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿದೆ.
20 ಜಿಲ್ಲೆಗಳು ಫ್ಲೋರೈಡ್ ಪೀಡಿತ: ರಾಜ್ಯದಲ್ಲಿ ಮಂಡ್ಯ ಜಿಲ್ಲೆಯು ಸೇರಿದಂತೆ 20 ಜಿಲ್ಲೆಗಳನ್ನು ಫ್ಲೋರೈಡ್ ಪೀಡಿತ ಜಿಲ್ಲೆಗಳನ್ನಾಗಿ ಘೋಷಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 1.5 ಪಿಪಿಎಂಗಿಂತ ಹೆಚ್ಚು ಫ್ಲೋರೈಡ್ ಅಂಶ ಪತ್ತೆಯಾಗಿದೆ. 1.5 ಪಿಪಿಎಂ ಅಂಶ ಕಂಡು ಬಂದರೆ ಹೆಚ್ಚು. ಆದರೆ, ನಾಗಮಂಗಲ ತಾಲೂಕಿನ ತಿಗಳರಪಾಳ್ಯ ಗ್ರಾಮದಲ್ಲಿ 4.31 ಪಿಪಿಎಂ ಅಂಶ ಪತ್ತೆಯಾಗಿದೆ. ಇನ್ನುಳಿದಂತೆ ಜಿಲ್ಲೆಯ 89 ಗ್ರಾಮಗಳಲ್ಲೂ 1.5 ಪಿಪಿಎಂಗಿಂತ ಹೆಚ್ಚು ಫ್ಲೋರೈಡ್ ಅಂಶ ಕಂಡು ಬಂದಿದೆ.
900 ಮಂದಿಗೆ ಚಿಕಿತ್ಸೆ: ಕಳೆದ ವರ್ಷ ಜಿಲ್ಲೆಯಲ್ಲಿ 1640 ಮಂದಿಗೆ ಫ್ಲೋರೋಸಿಸ್ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 1290 ಮಂದಿಗೆ ಫ್ಲೋರೋಸಿಸ್ ಸಮಸ್ಯೆ ಕಾಣಿಸಿಕೊಂಡಿತ್ತು. ಇವರ ಪೈಕಿ 900 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಫ್ಲೋರೋಸಿಸ್‌ನಿಂದ ಹಲ್ಲುಗಳ ಸಮಸ್ಯೆ, ಮೂಳೆ ಸವೆತ, ನಿಶ್ಯಕ್ತಿ, ಗ್ಯಾಸ್ಟ್ರಿಕ್, ರಕ್ತಹೀನತೆ, ಅಜೀರ್ಣತೆ, ವಾಂತಿ, ಕಣ್ಣು ಮಂಜಾಗುವುದು, ದೇಹದ ತೂಕ ಇಳಿಕೆ, ಕರುಳು ಸಮಸ್ಯೆಗಳು ಬರಲಿವೆ.
ನಿರ್ವಹಣೆಯಿಲ್ಲದ ಶುದ್ಧ ನೀರು ಘಟಕಗಳಲ್ಲೂ ಪತ್ತೆ: ಜಿಲ್ಲೆಯಲ್ಲಿ ಜಿಪಂನ ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳ ನಿರ್ವಹಣೆಯನ್ನು ಗ್ರಾಪಂಗಳಿಗೆ ವಹಿಸಲಾಗಿದೆ. ಆದರೆ, ಕೆಲವು ಕಡೆ ಸರಿಯಾಗಿ ನಿರ್ವಹಣೆ, ಸ್ವತ್ಛತೆ ಕಾಪಾಡದೆ ಇರುವುದರಿಂದ ಫ್ಲೋರೈಡ್ ಅಂಶ ಸೇರುತ್ತಿದೆ. ಕೆಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಇದರಿಂದ ಶುದ್ಧ ಕುಡಿಯುವ ನೀರು ಸಮರ್ಪ ಕವಾಗಿ ಸರಬರಾಜು ಆಗುತ್ತಿಲ್ಲ ಎಂದು ತಿಳಿದು ಬಂದಿದೆ.
ಕೊಳವೆ ಬಾವಿ ಅವಲಂಬನೆ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‌ನಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಆದರೆ, ಕೆಲವು ಕಡೆ ಕೊಳವೆ ಬಾವಿಗಳ ನೀರನ್ನೇ ಸರಬರಾಜು ಮಾಡಲು ಅವಲಂಬಿಸಲಾಗುತ್ತಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಬೆರೆಯುವ ಸಾಧ್ಯತೆ ಇದೆ. ಆದ್ದರಿಂದ ಕೊಳವೆ ಬಾವಿ ನೀರು ಸರಬರಾಜು ಮಾಡದೆ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲು ಮುಂದಾಗಬೇಕಿದೆ.
ಶುದ್ಧ ನೀರು ಸೇವಿಸುವಂತೆ ಜಾಗೃತಿ: ಜಿಲ್ಲಾ ಆರೋಗ್ಯ ಇಲಾಖೆಯ ರಾಷ್ಟ್ರೀಯ ಫ್ಲೋರೋಸಿಸ್ ತಡೆ ನಿಯಂತ್ರಣ ತಂಡದಿಂದ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ನೀರು ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗುತ್ತಿದೆ. ಫ್ಲೋರೈಡ್ ಅಂಶ ಕಂಡು ಬರುವ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸೇವಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಶುದ್ಧ ನೀರು ಘಟಕಗಳಲ್ಲಿನ ನೀರನ್ನೇ ಬಳಸುವಂತೆ ಸೂಚಿಸಲಾಗುತ್ತಿದೆ. ಅಲ್ಲದೆ, ಫ್ಲೋರೈಡ್ ಅಂಶದಿಂದ ದೇಹದ ಆರೋಗ್ಯದಲ್ಲಾಗುವ ದುಷ್ಪರಿಣಾಮ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.
ವರ್ಷ ಪೂರ್ತಿ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಪರೀಕ್ಷೆ ನಡೆಸಿ ಫ್ಲೋರೈಡ್ ಅಂಶ ಕಂಡು ಬರುವ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಗೂ ಶುದ್ಧ ನೀರು ಸರಬರಾಜು ಮಾಡಲು ಕ್ರಮ ವಹಿಸುವಂತೆ ಮಾಹಿತಿ ನೀಡಲಾಗುತ್ತಿದೆ. ● ಡಾ.ಅನಿಲ್‌ಕುಮಾರ್, ಜಿಲ್ಲಾ ನೋಡೆಲ್ ಅಧಿಕಾರಿ, ಎನ್‌ಪಿಪಿಸಿಎಫ್ ಸಮಿತಿ
ಜಿಲ್ಲೆಯಲ್ಲಿ 2013-14ರಲ್ಲಿ 378 ಗ್ರಾಮಗಳು ಹಾಗೂ 455 ಜನವಸತಿ ಪ್ರದೇಶಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿತ್ತು. ಇದೀಗ 89 ಗ್ರಾಮಗಳಿಗೆ ಇಳಿಕೆಯಾಗಿದೆ. ಫ್ಲೋರೈಡ್ ಅಂಶ ಕಂಡು ಬರುವ ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡುವಂತೆ ಕುಡಿಯುವ ನೀರು ಸರಬರಾಜು ಇಲಾಖೆಗೆ ಮಾಹಿತಿ ನೀಡಿ ಕಡಿಮೆ ಮಾಡಲಾಗಿದೆ. ಗ್ರಾಮಗಳು, ಶಾಲೆಗಳು ಸೇರಿದಂತೆ ವಿವಿಧೆಡೆ ಜಾಗೃತಿ ಮೂಡಿಸಲಾಗುತ್ತಿದೆ. ● ಡಾ.ದಿವಾಕರ್, ಜಿಲ್ಲಾ ಸಲಹೆಗಾರರು, ಎನ್‌ಪಿಪಿಸಿಎಫ್ ಸಮಿತಿ
ನನಗೆ ಇತ್ತೀಚೆಗೆ ಹಲ್ಲು ನೋವು ಕಾಣಿಸಿಕೊಂಡಿತ್ತು. ನಾನು ಯಾವುದೇ ಮದ್ಯಪಾನ, ಧೂಮಪಾನ ಮಾಡಲ್ಲ. ಆದರೂ ಹಲ್ಲು ನೋವು ಬಂದಿತ್ತು. ಆಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ ಫ್ಲೋರೈಡ್ ಅಂಶದ ನೀರು ಸೇವನೆಯಿಂದ ಹಲ್ಲು ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿತು. ಕೂಡಲೇ ಗ್ರಾಪಂ ಗಮನಕ್ಕೆ ತಂದಿದ್ದೇನೆ. ಬಸರಾಳು ಗ್ರಾಪಂನ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಈಗಲೂ ಕೊಳವೆ ಬಾವಿ ನೀರು ಬಳಸಲಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಶುದ್ಧ ನೀರು ಸರಬರಾಜಿಗೆ ಕ್ರಮ ವಹಿಸಬೇಕು. ● ಸತೀಶ್, ಕೆಂಚನಹಳ್ಳಿ
-ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.