ಇಂದಿನಿಂದ ಶಕ್ತಿ ದೇವಿಯರ ಆರಾಧನೆ
Team Udayavani, Sep 29, 2019, 10:57 AM IST
ಬೆಳಗಾವಿ: ನವರಾತ್ರಿ ಉತ್ಸವ ರವಿವಾರದಿಂದ ಆರಂಭಗೊಳ್ಳಲಿದ್ದು, ಗಡಿ ಜಿಲ್ಲೆ ಬೆಳಗಾವಿಯ ಶಕ್ತಿ ದೇವತೆಯರ ದೇವಸ್ಥಾನಗಳು ಒಂಬತ್ತು ದಿನಗಳ ಉತ್ಸವಕ್ಕೆ ಸಜ್ಜುಗೊಂಡಿವೆ.
ಶಕ್ತಿ ದೇವತೆಯರ ದರ್ಶನ ಪಡೆದು ಒಂಭತ್ತು ದಿನಗಳ ಕಾಲ ಎಣ್ಣೆಯ ದೀಪ ಹಚ್ಚಿ ಭಕ್ತಿ ಭಾವದಿಂದ ಬೇಡಿಕೊಂಡು ಆರಾಧಿಸುವ ಪರಂಪರೆ ಬೆಳೆದು ಬಂದಿದೆ. ಎಲ್ಲ ದೇವಸ್ಥಾನಗಳಲ್ಲೂ ಘಟಸ್ಥಾಪನೆಯೊಂದಿಗೆ ಆರಂಭವಾಗುವ ದಸರಾ ಹಬ್ಬ ವಿಜಯ ದಶಮಿವರೆಗೂ ಅದ್ಧೂರಿಯಾಗಿ ನೆರವೇರಲಿದೆ.
ನಗರ ಸೇರಿದಂತೆ ಜಿಲ್ಲಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಒಂಭತ್ತು ದಿನ ಧಾರ್ಮಿಕ ಚಟುವಟಿಕೆಗಳಲ್ಲಿ ಮಿಂದೇಳುವ ಜನರು ಈಗಾಗಲೇ ಎಲ್ಲ ಕಡೆಗೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೆ.29ರಂದು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಘಟಸ್ಥಾಪನೆ ಆಗಿ ದಸರಾಗೆ ವಿಧ್ಯುಕ್ತವಾಗಿ ಚಾಲನೆ ಸಿಗಲಿದೆ. ಏಳುಕೊಳ್ಳದ ಸವದತ್ತಿಯ ಶ್ರೀ ಯಲ್ಲಮ್ಮ ದೇವಿ, ಚಿಂಚಲಿಯ ಶ್ರೀ ಮಾಯಕ್ಕಾ ದೇವಿ, ಮಹಾರಾಷ್ಟ್ರದ ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ದೇವಿ, ಸುಳೇಭಾವಿಯ ಶ್ರೀ ಮಹಾಲಕ್ಷ್ಮೀ ದೇವಿ ಸೇರಿದಂತೆ ಎಲ್ಲ ಶಕ್ತಿ ದೇವತೆಯರನ್ನು ಆಯಾ ಪ್ರದೇಶದ ಜನರು ಆರಾಧಿಸುತ್ತಾರೆ.
ಪೌರಾಣಿಕ ಹಾಗೂ ಮೂರು ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸವದತ್ತಿಯ ಏಳುಕೊಳ್ಳದ ಶ್ರೀಯಲ್ಲಮ್ಮ ದೇವಸ್ಥಾನ ಈಗ ನವರಾತ್ರಿ ಉತ್ಸವಕ್ಕಾಗಿ ಸಜ್ಜಾಗಿದೆ. ಯಲ್ಲಮ್ನ ದೇವಿಯ ಸನ್ನಿಧಿ ಶಕ್ತಿ ಪೀಠಗಳಲ್ಲಿ ಒಂದಾಗಿ ಇರುವುದರಿಂದ ಅನಾದಿ ಕಾಲದಿಂದಲೂ ನವರಾತ್ರಿಯ ಸಂಭ್ರಮ ಇಲ್ಲಿದೆ. ಮಹಾನವಮಿ ಅಮವಾಸ್ಯೆಯಿಂದ ವಿಜಯ ದಶಮಿವರೆಗೂ ಸಂಭ್ರಮದಿಂದ ಜಾತ್ರೆ ನೆರವೇರುತ್ತದೆ.
3 ಸಾವಿರ ಇತಿಹಾಸದ ಐತಿಹ್ಯ: ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಸುಮಾರು 3ಸಾವಿರ ವರ್ಷಗಳ ಇತಿಹಾಸವಿದೆ. ಪುರಾಣಗಳಲ್ಲಿ ಉಲ್ಲೇಖ ಇರುವ ಜಮದಗ್ನಿ ಮುನಿಯ ಪತ್ನಿ, ಪರಶುರಾಮನ ತಾಯಿ ರೇಣುಕಾ ದೇವಿಯೇ ಈ ಯಲ್ಲಮ್ಮ. ಜಮದಗ್ನಿ ಮುನಿ ಮಗನಿಗೆ ನೀಡಿದ ಮಾತಿನಂತೆ ತಾಯಿ ರೇಣುಕಾ ಯಲ್ಲಮ್ಮನಾಗಿ ಏಳು ಕೊಳ್ಳದ ಸವದತ್ತಿಗೆ ಬಂದು ಪ್ರತಿಷ್ಠಾಪನೆಗೊಂಡಳು ಎಂಬ ಐತಿಹ್ಯವಿದೆ.
ಈ ಪ್ರದೇಶವನ್ನು ಅಳಿದ ರಟ್ಟ ವಂಶದ ಅರಸರ ಕಾಲದಲ್ಲಿ ದೇವಸ್ಥಾನ ನಿರ್ಮಾಣವಾಗಿದೆ ಎನ್ನುತ್ತಾರೆ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ. ದೇವಸ್ಥಾನದಲ್ಲಿ ಜಮದಗ್ನಿ ಋಷಿ, ಪರಶುರಾಮ, ಮಲ್ಲಿಕಾರ್ಜುನ, ದತ್ತಾತ್ರೇಯ, ಮಾತಂಗಿ, ಅನ್ನಪೂರ್ಣೇಶ್ವರಿ ದೇವಿಯರ ದೇವಸ್ಥಾನಗಳಿವೆ. ಮಕ್ಕಳಿಲ್ಲದವರು ದೇವಸ್ಥಾನದಲ್ಲಿರುವ ಪರಶುರಾಮನ ತೊಟ್ಟಿಲು ತೂಗುವ ಹರಕೆ ಹೊತ್ತು ತೂಗುತ್ತಾರೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಸವದತ್ತಿ ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರಗಳಲ್ಲಿ ಒಂದು. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಬರುವ ಭಕ್ತರೇ ಹೆಚ್ಚು. ರಾಜ್ಯದ ಇತರ ಜಿಲ್ಲೆಗಳು ಹಾಗೂ ಮಹಾರಾರಾಷ್ಟ್ರ , ಗೋವಾ, ಆಂಧ್ರ, ತಮಿಳುನಾಡುಗಳಿಂದಲೂ ಭಕ್ತರು ಯಲ್ಲಮ್ಮ ದೇವತೆಯ ದರ್ಶನಕ್ಕೆ ಬರುತ್ತಾರೆ. ಒಂಭತ್ತು ದಿನಗಳ ಕಾಲ ದೇವಿ ವಿವಿಧ ಅವತಾರಗಳಲ್ಲಿ ಕಂಗೊಳಿಸುತ್ತಾಳೆ.
ವಿಶೇಷ ಅಲಂಕಾರ: ರಾಯಬಾಗ ತಾಲೂಕಿನ ಚಿಂಚಲಿಯ ಶ್ರೀ ಮಾಯಕ್ಕಾ ದೇವಿಯ ಸನ್ನಿ ಧಿಯಲ್ಲೂ ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿಯೂ ಲಕ್ಷಾಂತರ ಭಕ್ತರು ಮಾಯಕ್ಕಾ ದೇವಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ದೇವಿಯನ್ನು ವಿಶೇಷ ಅಲಂಕಾರಗಳಿಂದ ಸಿಂಗರಿಸಲಾಗುತ್ತದೆ. ದೀಪಕ್ಕೆ ಎಣ್ಣೆ ಹಾಕಿ ಭಕ್ತರು ಹರಕೆ ತೀರಿಸಿಕೊಳ್ಳುವುದು ವಾಡಿಕೆ. ಮಹಾರಾಷ್ಟ್ರದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮೀ ದೇವಿ, ಬೆಳಗಾವಿ ತಾಲೂಕಿನ ಸುಳೇಭಾವಿಯ ಶ್ರೀ ಮಹಾಲಕ್ಷ್ಮೀ ದೇವಿ, ಶಹಾಪುರದ ಶ್ರೀ ಅಂಬಾಬಾಯಿ ಸೇರಿದಂತೆ ವಿವಿಧ ಶಕ್ತಿ ದೇವತೆಗಳನ್ನು ವಿಶೇಷವಾಗಿ ಭಕ್ತಿ ಭಾವದಿಂದ ಆರಾಧಿಸಲಾಗುತ್ತದೆ. ಓಣಿ ಓಣಿಗಳಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಉತ್ತರ ಭಾರತದ ದಾಂಡಿಯಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕೋಟ್ಯಂತರ ಮೌಲ್ಯದ ದೀಪದ ಎಣ್ಣೆ ವಹಿವಾಟು :
ನವರಾತ್ರಿ ಹಬ್ಬಕ್ಕೆ ಲಕ್ಷಾಂತರ ಭಕ್ತರು ದೇವಿಯ ಸನ್ನಿ ಧಿಗೆ ಬಂದು ಯಲ್ಲಮ್ಮ ದೇವಿ ಗರ್ಭಗುಡಿ ಎದುರು ದೀಪಕ್ಕೆ ಎಣ್ಣೆ ಹಾಕುವ ಪ್ರತೀತಿ ಇದೆ. ಇಲ್ಲಿ ದೀಪಕ್ಕೆ ಎಣ್ಣೆ ಹಾಕಿದರೆ ನಮ್ಮ ಜೀವನವೂ ದೀಪದಂತೆ ಬೆಳಗುತ್ತದೆ ಎಂಬುದು ಭಕ್ತರಲ್ಲಿ ನಂಬಿಕೆ ಇದೆ. ಪುರಾತನ ಕಾಲದಿಂದಲೂ ಈ ಪರಂಪರೆ ನಡೆದುಕೊಂಡು ಬಂದಿದ್ದು, ಒಂಭತ್ತು ದಿನಗಳ ಕಾಲ ವಿವಿಧ ಅವತಾರಗಳಿಂದ ದೇವಿಯನ್ನು ಸಿಂಗರಿಸಲಾಗುತ್ತದೆ. ನವರಾತ್ರಿ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಎಣ್ಣೆಯ ವ್ಯವಹಾರ- ವಹಿವಾಟು ನಡೆಯುತ್ತದೆ. ಮಂದಿರ ಆವರಣದಲ್ಲಿರುವ ಅಂಗಡಿ ಮುಂಗಟ್ಟುಗಳು ಸಿಂಗಾರಗೊಂಡಿದ್ದು, ವ್ಯಾಪಾರಸ್ಥರು ಎಣ್ಣೆ
ಖರೀದಿಸಿ ಇಟ್ಟುಕೊಂಡಿದ್ದಾರೆ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.