ತಂದೆಯಿಂದಲೇ ಮಗಳಿಗೆ ಅಧಿಕಾರ ಹಸ್ತಾಂತರ
Team Udayavani, Jun 22, 2023, 2:40 PM IST
ಮಂಡ್ಯ: ತಂದೆಯೇ ಮಗಳಿಗೆ ಅಧಿಕಾರ ಹಸ್ತಾಂತರಿಸಿದ ಅಪರೂಪದ ಘಟನೆಗೆ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ತಂದೆಗೆ ಮಗಳು ಓದಿ ನನ್ನ ಇಲಾಖೆಗೆ ಸೇರಿ ನನ್ನಿಂದಲೇ ಅಧಿಕಾರ ಸ್ವೀಕರಿಸುತ್ತಿರುವುದು ಭಾವುಕತೆ, ಸಂತೋಷ ಒಂದೆಡೆಯಾದರೆ, ಮ ಗಳಿಗೆ ತಂದೆ ಇಲಾಖೆಯಲ್ಲಿಯೇ ಕೆಲಸ ಪಡೆದು ತಂದೆಯಿಂದ ಅಧಿಕಾರ ಸ್ವೀಕರಿಸುತ್ತಿರುವುದು ಆನಂದದ ವಿಶೇಷ ಸಂದರ್ಭ ಎದುರಾಗಿತ್ತು.
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ.ಎಸ್.ವೆಂಕಟೇಶ್ ಅವರು ತನ್ನ ಮಗಳಾದ ನೂತನ ಎಸ್‌ಐ ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದು ವಿಶೇಷವಾಗಿತ್ತು. ಇದಕ್ಕೆ ಠಾಣೆಯ ಸಿಬ್ಬಂದಿಗಳು ಸಾಕ್ಷಿಯಾಗಿದ್ದರು.
ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರಾದ ಎಸ್‌ಐ ವೆಂಕಟೇಶ್ ಅವರು, 16 ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ನಂತರ ಪಿಎಸ್‌ಐ ಪರೀಕ್ಷೆ ಬರೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಅಲ್ಲದೆ, ವೆಂಕಟೇಶ್ ಮಿಲಿಟರಿಯಲ್ಲಿದ್ದಾಗ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಲ್ಲದೆ, ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಹೊಂದಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ಆದ ಬಳಿಕ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯಕ್ಕೆ ಬಂದು ಸೆಂಟ್ರಲ್ ಠಾಣೆಯಲ್ಲಿ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಮಗಳು ಬಿ.ವಿ.ವರ್ಷಾ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದ ಬಳಿಕ ಪಿಎಸ್‌ಐ ಪರೀಕ್ಷೆ ಬರೆದು 2022ರ ಬ್ಯಾಚ್‌ನಲ್ಲಿ ಪಿಎಸ್‌ಐ ಆದ ಅವರು, ಕಲುಬುರಗಿಯಲ್ಲಿ ತರಬೇತಿ ಮುಗಿಸಿ, ನಂತರ ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎಸ್‌ಐ ಆಗಿ ಮೊದಲ ನಿಯೋಜ ನೆಯೂ ಮಂಡ್ಯದಲ್ಲೇ ಆಗಿದ್ದು, ಅದೃಷ್ಟವೋ ಅಥವಾ ಕಾಕತಾಳೀಯ ಎಂಬಂತೆ ತನ್ನ ತಂದೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯೇ ಸಿಕ್ಕಿದೆ.
ಅದರಂತೆ ಅಧಿಕಾರ ಪಡೆಯಲು ಠಾಣೆಗೆ ಆಗಮಿಸಿದ ವರ್ಷಾ ತಂದೆ ವೆಂಕಟೇಶ್ ಅವರಿಂದ ಅಧಿಕಾರ ಸ್ವೀಕರಿಸಿ ತಮ್ಮ ಪೊಲೀಸ್ ವೃತ್ತಿ ಜೀವನ ಆರಂಭಿಸಿದ್ದಾರೆ.
ಸಚಿವ ಅಭಿನಂದನೆ: ಅಧಿಕಾರ ಸ್ವೀಕರಿಸಿದ ಎಸ್‌ಐ ವರ್ಷಾ, ಎಸ್‌ಐ ವೆಂಕಟೇಶ್ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರಿಗೂ ಕರೆ ಮಾಡಿ, ಇದು ಕೆಲವರಿಗೆ ಸಿಗುವ ಅಪರೂಪ ದ ಅವಕಾಶ. ತಾವು ಜಿಲ್ಲೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ನಾನು ನಿರೀಕ್ಷೆಯೇ ಮಾಡಿರಲಿಲ್ಲ. ನನ್ನ ಮಗಳು ಪಿಎಸ್‌ಐ ಆಗುತ್ತಾಳೆ ಎಂಬ ನಂಬಿಕೆ ಇರಲಿಲ್ಲ. ಮಕ್ಕಳು ತಂದೆ-ತಾಯಿ ಆಸೆಯಂತೆ ಓದಿ ಈಡೇರಿಸಿದಾಗ ಆಗುವ ಖುಷಿಯೇ ಬೇರೆ. ಅದರಲ್ಲೂ ನನ್ನ ಇಲಾಖೆಯಲ್ಲೇ, ನನ್ನಿಂದಲೇ ಅಧಿಕಾರ ಸ್ವೀಕರಿಸುತ್ತಾಳೆ ಎಂಬ ಕಲ್ಪನೆ ಇರಲಿಲ್ಲ. ಎಲ್ಲವೂ ಅನಿರೀಕ್ಷಿತ. ಮಗಳಿಗೆ ಪ್ರಾಮಾಣಿ ಕತೆ, ಸೌಜನ್ಯ, ನೊಂದವರಿಗೆ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಕಲ್ಪಿಸಲು ಸಲಹೆ ನೀಡಿದ್ದೇನೆ. ●ವೆಂಕಟೇಶ್, ಪಿಎಸ್‌ಐ, ಎಸ್ಪಿ ಕಚೇರಿ, ಮಂಡ್ಯ
ನನ್ನ ತಂದೆಯಿಂದಲೇ ಅಧಿಕಾರ ಸ್ವೀಕರಿಸುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ತುಂಬಾ ಖುಷಿಯಾಗುತ್ತಿದೆ. ನನ್ನ ತಂದೆ ಆಶಯದಂತೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುವ ಗುರಿ ಇದೆ. ತಂದೆಯು ತಾಳ್ಮೆ, ಸಹನೆ, ಕಾನೂನು ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಅದರಂತೆ ಮುನ್ನಡೆಯುತ್ತೇನೆ. ●ಬಿ.ವಿ.ವರ್ಷಾ, ಎಸ್‌ಐ, ಸೆಂಟ್ರಲ್ ಪೊಲೀಸ್ ಠಾಣೆ, ಮಂಡ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.