ಹೇಮಾವತಿ ನಾಲೆಗಳಿಗೆ ಹರಿಯದ ನೀರು
16,137 ಹೆಕ್ಟೇರ್‌ನಲ್ಲಿ ಒಣಗುತ್ತಿರುವ ಬೆಳೆ • ನಾಲ್ಕು ತಾಲೂಕುಗಳ ರೈತರ ಬವಣೆ ಕೇಳುವವರಿಲ್ಲ
Team Udayavani, Jul 20, 2019, 1:46 PM IST
ಹೇಮಾವತಿ ಜಲಾಶಯದ ಅಚ್ಚುಕಟ್ಟು ನಾಲೆ.
ಮಂಡ್ಯ: ನಾಲೆಗಳಿಗೆ ನೀರು ಹರಿಸುವ ವಿಷಯದಲ್ಲಿ ರಾಜ್ಯಸರ್ಕಾರ ತಾರತಮ್ಯ ಧೋರಣೆ ಅನುಸರಿಸು ತ್ತಿದೆ. ಅನ್ನದಾತರ ಒಂದು ತಿಂಗಳ ನಿರಂತರ ಹೋರಾಟಕ್ಕೆ ಮಣಿದು ಕೆಆರ್‌ಎಸ್ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡುಗಡೆ ಮಾಡಿದ್ದೇನೋ ಸರಿ. ಆದರೆ, ಹೇಮಾವತಿ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸದ ಪರಿಣಾಮ ಜಿಲ್ಲೆಯ ನಾಲ್ಕು ತಾಲೂಕುಗಳ ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ 16137 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗುತ್ತಿದೆ.
ಹೇಮಾವತಿ ನಾಲೆಯ ನೀರಿನ ಅಚ್ಚುಕಟ್ಟು ವ್ಯಾಪ್ತಿಗೆ ಕೆ.ಆರ್.ಪೇಟೆ 10,145 ಹೆಕ್ಟೇರ್ ಪ್ರದೇಶ ಅವಲಂಬಿತವಾಗಿದೆ. ಈ ನೀರಿನ ಉಪಯೋಗ ಪಡೆಯುತ್ತಿರುವುದರಲ್ಲಿ ಕೆ.ಆರ್.ಪೇಟೆ ಪ್ರಥಮ ಸ್ಥಾನದಲ್ಲಿದೆ. ಉಳಿದಂತೆ ನಾಗಮಂಗಲ ತಾಲೂಕಿನ 2704 ಹೆಕ್ಟೇರ್, ಪಾಂಡವಪುರ ತಾಲೂಕಿನ 1975 ಹೆಕ್ಟೇರ್, ಮಂಡ್ಯ ತಾಲೂಕಿನ 1313 ಹೆಕ್ಟೇರ್ ಪ್ರದೇಶ ಹೇಮಾವತಿ ನೀರನ್ನೇ ಆಶ್ರಯಿಸಿದೆ.
ಜು.16ರ ಮಧ್ಯರಾತ್ರಿಯಿಂದ ಕೃಷ್ಣರಾಜಸಾಗರ ಜಲಾಶಯದಿಂದ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಒಣಗುತ್ತಿರುವ ಬೆಳೆಗಳಿಗೆ ಗುಟುಕು ಜೀವ ದೊರಕಿದಂತಾಗಿದೆ. ಆದರೆ, ಹೇಮಾವತಿ ಜಲಾಶಯದಿಂದ ಒಣಗುತ್ತಿರುವ ಬೆಳೆಗಳಿಗೆ ಇದುವರೆಗೂ ಒಂದು ಹನಿ ನೀರನ್ನೂ ಬಿಡುಗಡೆ ಮಾಡಿಲ್ಲ. ಇದರಿಂದ ಆ ಭಾಗದ ರೈತರು ಬೆಳೆ ನೀರಿಲ್ಲದೆ ನೆಲಕಚ್ಚುತ್ತಿರುವುದನ್ನು ಕಂಡು ಗೋಳಿಡುತ್ತಿದ್ದಾರೆ. ಆದರೆ, ಅವರ ಗೋಳನ್ನು ಕೇಳ್ಳೋರೇ ಇಲ್ಲವಾಗಿದೆ.
ಒಣಗುತ್ತಿರುವ ಬೆಳೆ: ಹೇಮಾವತಿ ಜಲಾನಯನ ಪ್ರದೇಶದಲ್ಲೂ ಕಬ್ಬು, ರಾಗಿ, ಮುಸುಕಿನ ಜೋಳ, ಹುರುಳಿ, ತರಕಾರಿ, ತೋಟಗಾರಿಕೆ ಬೆಳೆಗಳೂ ಸೇರಿದಂತೆ ವಿವಿಧ ಬೆಳೆಗಳನ್ನು ಅವಲಂಬಿಸಿದ್ದಾರೆ. ಆ ಭಾಗದಲ್ಲೂ ಸುಮಾರು 6 ಸಾವಿರ ಹೆಕ್ಟೇರ್ ಕಬ್ಬು ಬೆಳೆ ವಿಸ್ತೀರ್ಣವಿದೆ. ಒಟ್ಟು ವಿಸ್ತೀರ್ಣದಲ್ಲಿ ಅರ್ಧಭಾಗದಷ್ಟು ಕಬ್ಬು ಬೆಳೆ ಇದೆ. ಆ ಪ್ರದೇಶಕ್ಕೂ ನೀರು ಹರಿಸಿದ್ದರೆ ಬೆಳೆಗಳು ಜೀವಕಳೆ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ, ರಾಜ್ಯಸರ್ಕಾರ ನೀರು ಹರಿಸುವ ವಿಚಾರದಲ್ಲಿ ಅನುಸರಿಸುತ್ತಿರುವ ತಾರತಮ್ಯ ನೀತಿಯಿಂದ ಆ ಭಾಗದ ಕಬ್ಬು ಬೆಳೆ ನೀರಿಲ್ಲದೆ ಒಣಗುವಂತಾಗಿದೆ. ಸರ್ಕಾರದ ರೈತ ವಿರೋಧಿ ನಿಲುವಿನ ವಿರುದ್ಧ ಅನ್ನದಾತರು ಅಸಮಾಧಾನ ಹೊರಹಾಕಿದ್ದಾರೆ.
ಕೆರೆಗಳಿಗೂ ನೀರಿಲ್ಲ: ಹೇಮಾವತಿ ಜಲಾಶಯದ ನೀರನ್ನು ನಾಲೆಗಳಿಗೆ ಹರಿಸಿದ್ದರೆ ಕೆರೆ-ಕಟ್ಟೆಗಳು ತುಂಬಿಕೊಂಡು ಜನ-ಜಾನುವಾರುಗಳಿಗೆ ನೀರು ದೊರಕುವುದರ ಜೊತೆಗೆ ಅಂತರ್ಜಲದ ಮಟ್ಟದಲ್ಲಿ ಕೊಂಚ ಏರಿಕೆಯಾಗಲು ಸಾಧ್ಯವಾಗುತ್ತಿತ್ತು. ಕೆರೆಗಳೆಲ್ಲವೂ ನೀರಿಲ್ಲದೆ ಬರಡಾಗಿದ್ದು, ಅಂತರ್ಜಲ ಮಟ್ಟವೂ ಪಾತಾಳ ಸೇರಿಕೊಂಡಿದೆ. ಬೆಳೆ ಹಾಗೂ ಮಳೆ ಪರಿಸ್ಥಿತಿಯನ್ನು ಮನಗಂಡು ನೀರು ಹರಿಸುವ ಉದಾರತೆಯನ್ನು ಮೆರೆದಿದ್ದರೆ ಆ ಭಾಗದ ರೈತರ ಹಿತ ಕಾಪಾಡಿದಂತಾಗುತ್ತಿತ್ತು. ಹೇಮಾವತಿ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ರೈತರನ್ನೇ ಮರೆತಿರುವ ಸರ್ಕಾರ ಕೆಆರ್‌ಎಸ್ ಜೊತೆಯಲ್ಲೇ ಹೇಮಾವತಿ ಅಣೆಕಟ್ಟೆಯಿಂದಲೂ ಏಕಕಾಲಕ್ಕೆ ನೀರು ಬಿಡುಗಡೆ ಮಾಡಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಆರೋಪಕ್ಕೆ ಗುರಿಯಾಗಿದೆ.
ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬಿತ್ತನೆ ಚಟುವಟಿಕೆ ಕುಂಠಿತಗೊಂಡಿದೆ. ಹಾಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ರೈತರು ಪರದಾಡುತ್ತಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರು ಟ್ಯಾಂಕರ್‌ಗಳ ಮೂಲಕ ನೀರನ್ನು ಬೆಳೆಗಳಿಗೆ ಹರಿಸಿಕೊಳ್ಳುತ್ತಾ ಬೆಳೆ ನಷ್ಟದಿಂದ ಪಾರಾಗುವುದಕ್ಕೆ ಹರಸಾಹಸ ನಡೆಸುತ್ತಿದ್ದಾರೆ. ಕೆರೆಗಳಲ್ಲೂ ನೀರಿಲ್ಲದ ಕಾರಣ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಿದೆ. ಈಗ ಹೇಮಾವತಿ ಜಲಾಶಯದಿಂದ ನೀರು ಕೊಟ್ಟಿದ್ದರೆ ಸಂಕಷ್ಟ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುತ್ತಿತ್ತು ಎನ್ನುವುದು ರೈತರು ಹೇಳುವ ಮಾತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.