ಮೈಷುಗರ್ ಚಕ್ರ ತಿರುಗುವುದು ಅನುಮಾನ
ಆಲೆಮನೆಗಳು, ಖಾಸಗಿ ಕಂಪನಿಗಳತ್ತ ಕಬ್ಬು ರವಾನೆ • ಕಬ್ಬು ಅರೆಯುವಿಕೆ ಬಗ್ಗೆ ಸರ್ಕಾರ ಕಡೆಗಣನೆ
Team Udayavani, Jul 21, 2019, 3:00 PM IST
ಮಂಡ್ಯ: ಪ್ರಸಕ್ತ ವರ್ಷ ಮೈಸೂರು ಸಕ್ಕರೆ ಕಾರ್ಖಾನೆ ಚಕ್ರಗಳು ತಿರುಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಖಾಸಗಿಯವರ ಉಸ್ತುವಾರಿಯಲ್ಲಿ ಕಾರ್ಖಾನೆ ಮುನ್ನಡೆಸುವ ಸರ್ಕಾರದ ಪ್ರಯತ್ನವೂ ಫಲ ನೀಡಿಲ್ಲ. ಕಂಪನಿ ಆರಂಭದ ಚಟುವಟಿಕೆಗಳಿಗೆ ಇದುವರೆಗೂ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕಬ್ಬು ಅರೆಯುವಿಕೆ ಕಾರ್ಯಕ್ಕೆ ಗ್ರಹಣ ಹಿಡಿದಂತಾಗಿದೆ.
2015ರ ಏ.21ರಂದು ಕಾರ್ಖಾನೆ ಗಾಲಿಗಳು ತಿರುಗದೆ ನಿಂತು 2017ರ ಏ.14ರಂದು ಮತ್ತೆ ಚಾಲನೆ ಪಡೆದುಕೊಂಡಿದ್ದವು. ಎರಡು ವರ್ಷ ಕುಂಟುತ್ತಾ, ತೆವಳುತ್ತಾ ಸಾಗಿದ ಕಾರ್ಖಾನೆ ಪುನಃ ನಿಲ್ಲುವ ಸ್ಥಿತಿ ತಲುಪಿದೆ. ಕಾರ್ಖಾನೆ ಪುನಶ್ಚೇತನ, ಸಹ ವಿದ್ಯುತ್ ಘಟಕ, ಡಿಸ್ಟಿಲರಿ ಘಟಕ ಆರಂಭ ಎಲ್ಲವೂ ಕೇವಲ ಭ್ರಮೆಯಾಗಿದೆ.
ಮೈಷುಗರ್ ಆರಂಭ ಮಾಡುವ ಸಲುವಾಗಿ ಕಾರ್ಖಾನೆ ಆಡಳಿತ ಮಂಡಳಿ ರಾಜ್ಯಸರ್ಕಾರಕ್ಕೆ 69 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ 18 ಕೋಟಿ ರೂ. ಕಂಪನಿ ನೌಕರರ ವಿಆರ್‌ಎಸ್‌ಗೆ, 5 ಕೋಟಿ ರೂ. ಮದ್ಯಸಾರ ಘಟಕಕ್ಕೆ, 20 ಕೋಟಿ ರೂ. ಕಾರ್ಖಾನೆ ಚಾಲನೆ ಮತ್ತು ಮೇಲುಸ್ತುವಾರಿಗೆ ಹಾಗೂ 15 ಕೋಟಿ ರೂ. ದುಡಿಮೆ ಬಂಡವಾಳಕ್ಕೆಂದು ತೋರಿಸಲಾಗಿತ್ತು. ಈ ಹಣದ ಬಗ್ಗೆ ಸರ್ಕಾರ ನಿರ್ದಿಷ್ಟ ತೀರ್ಮಾನ ಕೈಗೊಂಡಿಲ್ಲ. ಒಂದು ರೂಪಾಯಿ ಹಣವನ್ನೂ ಕಂಪನಿಗೆ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ.
ಕಂಪನಿ ನೌಕರರು ಬೇಡ: ಕಾರ್ಖಾನೆ ಚಾಲನೆ ಮತ್ತು ನಿರ್ವಹಣೆಯ ಟೆಂಡರ್ ಆಗಿರುವ ಬಾಗಲಕೋಟೆ ಮೂಲದ ಕಂಪನಿಯೊಂದು ಮೈಷುಗರ್ ಕಾರ್ಖಾನೆ ಮುನ್ನಡೆಸಲು ಮುಂದಾಗಿದೆ. ಆದರೆ, ಆ ಕಂಪನಿ ಮಾಲೀಕರು ಕಾರ್ಖಾನೆ ಚಾಲನೆಗೆ ನಮ್ಮಲ್ಲಿರುವ ನೌಕರರೇ ಸಾಕು. ಮೈಷುಗರ್ ನೌಕರರು ಬೇಡ ಎನ್ನುವ ಷರತ್ತನ್ನಿಟ್ಟಿದೆ. ಜೊತೆಗೆ ಕಬ್ಬು ಅರೆಯುವುದಕ್ಕೆ ಕಂಪನಿಯ ಯಂತ್ರೋಪಕರಣಗಳನ್ನು ಸಿದ್ಧಗೊಳಿಸಲು 50 ದಿನ ಕಾಲಾವಕಾಶದ ಅಗತ್ಯವಿರುವುದಾಗಿ ತಿಳಿಸಿದೆ. ಈ ಬಗ್ಗೆಯೂ ಸರ್ಕಾರದ ತೀರ್ಮಾನ ಹೊರಬಿದ್ದಿಲ್ಲ.
ಒಂದು ವೇಳೆ ಈ ಅಸ್ಪಷ್ಟತೆಯ ನಡುವೆಯೂ ಕಾರ್ಖಾನೆ ಆರಂಭಕ್ಕೆ ಚಾಲನೆ ಸಿಗುವುದಾದರೆ ಮೈಷುಗರ್ ವ್ಯಾಪ್ತಿಯಲ್ಲಿರುವ ಕಬ್ಬನ್ನು ಕಟಾವು ಮಾಡಲು ಬಳ್ಳಾರಿ ಜಿಲ್ಲೆಯಿಂದ ಕೂಲಿಯಾಳುಗಳನ್ನು ಕರೆತರಬೇಕಿದೆ. ಕಾರ್ಖಾನೆ ಆರಂಭ ಎರಡು ತಿಂಗಳು ವಿಳಂಬವಾದರೆ ಆ ಸಮಯಕ್ಕೆ ಕೂಲಿಯಾಳುಗಳು ಸಿಗುವುದೂ ಕಷ್ಟ. ಆಗ ಕಬ್ಬು ಕಟಾವು ಮಾಡಿ ಅರೆಯುವುದು ಕಷ್ಟ ಸಾಧ್ಯವಾಗಲಿದೆ.
ಆ ವೇಳೆಗೆ ಜಿಲ್ಲೆಯ ಚಾಮುಂಡೇಶ್ವರಿ, ಎನ್‌ಎಸ್‌ಎಲ್, ಕೋರಮಂಡಲ್ ಸಕ್ಕರೆ ಕಾರ್ಖಾನೆಗಳ ಜೊತೆಗೆ ನೆರೆಯ ಬಣ್ಣಾರಿ ಅಮ್ಮನ್ ಕಾರ್ಖಾನೆ ಕೂಡ ಮೈಷುಗರ್ ಕಬ್ಬನ್ನು ಕಸಿದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. ಇದೂ ಸಹ ಕಂಪನಿ ಕಾರ್ಯಾರಂಭಕ್ಕೆ ತೊಡಕಾಗುವ ಸಾಧ್ಯತೆಗಳಿವೆ.
ಉರುಳುವ ಸ್ಥಿತಿಯಲ್ಲಿ ಸರ್ಕಾರ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಉರುಳುವ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳೆಲ್ಲರೂ ರೆಸಾರ್ಟ್ ರಾಜಕೀಯದಲ್ಲಿ ಮುಳುಗಿಹೋಗಿದ್ದಾರೆ. ಸರ್ಕಾರದಿಂದ ಹಣ ಸಿಗದೆ ಕಂಪನಿ ಕಾರ್ಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಮೈಷುಗರ್ ಕಾರ್ಖಾನೆ ಆರಂಭದ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳುವುದಕ್ಕೆ ಯಾರೂ ಸಹ ಆಸಕ್ತಿ ವಹಿಸಿಲ್ಲ. ಇವೆಲ್ಲಾ ಅಂಶಗಳು ಕಾರ್ಖಾನೆ ಆರಂಭದ ಬಗ್ಗೆ ಅನುಮಾನಗಳು ದಟ್ಟವಾಗಿ ಮೂಡಲು ಕಾರಣವಾಗಿವೆ.
ಈ ಸರ್ಕಾರ ಉರುಳಿ ಅಸ್ತಿತ್ವಕ್ಕೆ ಬರುವ ಹೊಸ ಸರ್ಕಾರ ಮೈಷುಗರ್ ಆರಂಭದ ಬಗ್ಗೆ ಆಸಕ್ತಿ ವಹಿಸಿದರೂ ಸುಗಮವಾಗಿ ಮುನ್ನಡೆಸುವುದು ಕಷ್ಟವಾಗಲಿದೆ. ಈಗಿರುವ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು, ನೌಕರರ ನೇತೃತ್ವದಲ್ಲಿ ಕಾರ್ಖಾನೆಯನ್ನು ಮುನ್ನಡೆಸಿದರೆ ಒಂದು ಲಕ್ಷ ಟನ್ ಕಬ್ಬು ಅರೆಯುವುದೂ ಕಷ್ಟವಾಗಲಿದೆ. ಹೊಸ ಸರ್ಕಾರ ಖಾಸಗಿಯವರ ಮೂಲಕ ಕಾರ್ಖಾನೆಯನ್ನು ಮುನ್ನಡೆಸುವ ಮನಸ್ಸು ಮಾಡಿದರೆ ಕಡೇ ಘಳಿಗೆಯಲ್ಲಿ ಒಂದಷ್ಟು ಕಬ್ಬು ದೊರೆತು ಚಾಲನೆಗೆ ಅವಕಾಶ ಸಿಗಬಹುದೆಂಬ ಆಶಾಭಾವನೆ ಹೊಂದಬಹುದು.
ಆಲೆಮನೆಯತ್ತ ಕಾರ್ಖಾನೆ ಕಬ್ಬು: ಮೈಷುಗರ್ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷ ಟನ್ ಕಬ್ಬು ಇದ್ದು, ಒಪ್ಪಿಗೆ ಕಬ್ಬೇ 8 ಲಕ್ಷ ಟನ್‌ನಷ್ಟಿದೆ. ಈ ವರ್ಷ ಕಾರ್ಖಾನೆ ಆರಂಭವಾಗುವ ಲಕ್ಷಣಗಳು ಕಾಣಿಸದೆ ರೈತರು ಕಬ್ಬನ್ನು ಆಲೆಮನೆಗಳತ್ತ ಸಾಗಿಸುತ್ತಿದ್ದಾರೆ. ಕಬ್ಬು ಬೆಳೆಗಾರರಲ್ಲಿ ಕೆಲವರು ಟನ್ ಕಬ್ಬನ್ನು 1200 ರೂ.ಗೆ ಜಮೀನಿನಲ್ಲೇ ಆಲೆಮನೆ ಮಾಲೀಕರಿಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದರೆ, ಹಲವರು ಕಬ್ಬು ಕಡಿದು ಆಲೆಮನೆಗೆ ಸಾಗಿಸಿ ಟನ್ ಕಬ್ಬಿಗೆ 1600 ರೂ.ನಿಂದ 1700 ರೂ.ವರೆಗೆ ಪಡೆದುಕೊಂಡು ಸುಮ್ಮನಾಗುತ್ತಿದ್ದಾರೆ.
ಈಗಾಗಲೇ ಕಬ್ಬು ನೀರಿಲ್ಲದೆ ಒಣಗಿದೆ. ಕಾರ್ಖಾನೆ ಆರಂಭವಾಗುತ್ತದೆಂದು ಕಾದು ಕುಳಿತರೆ ಉರುವಲಾಗುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ರೈತರು ಮೈಷುಗರ್ ಕಾರ್ಖಾನೆ ಬಗ್ಗೆ ವಿಶ್ವಾಸ ಕಳೆದುಕೊಂಡು ತಾವು ಬೆಳೆದಿರುವ ಕಬ್ಬನ್ನು ಇಷ್ಟಬಂದ ಕಡೆಗೆ ಸಾಗಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕೆಲವರು ಖಾಸಗಿ ಕಾರ್ಖಾನೆಗಳ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿಗೂ ಕಬ್ಬನ್ನು ರವಾನೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
ಪರ್ಯಾಯ ವ್ಯವಸ್ಥೆಯೂ ಇಲ್ಲ:
ಮೈಷುಗರ್ ಕಾರ್ಖಾನೆ ಕಾರ್ಯಾರಂಭದ ಕುರಿತಂತೆ ಜಿಲ್ಲಾಡಳಿತ ಅಥವಾ ಕಾರ್ಖಾನೆ ಆಡಳಿತ ಇದುವರೆಗೂ ಸ್ಪಷ್ಟ ನಿಲುವನ್ನು ಪ್ರಕಟಿಸುತ್ತಿಲ್ಲ. ಕಂಪನಿ ಕಬ್ಬು ಅರೆಯಲಾಗದಿದ್ದರೆ ಪರ್ಯಾಯ ವ್ಯವಸ್ಥೆಯೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ.
ಈ ಹಿಂದೆ ಎರಡು ವರ್ಷ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದ್ದ ಸಮಯದಲ್ಲಿ ಮೈಷುಗರ್ ವ್ಯಾಪ್ತಿ ಕಬ್ಬನ್ನು ಬಣ್ಣಾರಿ ಅಮ್ಮನ್ ಸೇರಿದಂತೆ ವಿವಿಧ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಸಾಗಾಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಈಗ ಜಿಲ್ಲಾಡಳಿತ ಆ ನಿಟ್ಟಿನಲ್ಲೂ ಯಾವುದೇ ಪ್ರಯತ್ನ ನಡೆಸದ ಮೌನಕ್ಕೆ ಶರಣಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.