ಕಬ್ಬು ಕಟಾವಿಗೆ ಕೂಲಿ ಆಳುಗಳ ಕೊರತೆ
Team Udayavani, Oct 2, 2019, 5:07 PM IST
ಮಂಡ್ಯ: ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಕಟಾವಿಗೆ ಕೂಲಿಯಾಳುವಳ ಸಮಸ್ಯೆ ಬೆಳೆಗಾರರನ್ನು ಕಾಡುತ್ತಿದೆ. ಅಲ್ಲದೆ, ಲಭ್ಯವಿರುವ ಕೂಲಿಯಾಳುಗಳು ಹೆಚ್ಚಿನ ಕೂಲಿಗೆ ಬೇಡಿಕೆ ಇಡುತ್ತಿರುವುದು ಬೆಳೆಗಾರರು ಮತ್ತಷ್ಟು ಕಂಗೆಡುವಂತೆ ಮಾಡಿದೆ. ಎರಡೂ ಸಕ್ಕರೆ ಕಾರ್ಖಾನೆಗಳೂ ಕಬ್ಬು ನುರಿಯುವಿಕೆಯನ್ನು ಸ್ಥಗಿತಗೊಳಿಸಿದ್ದು, ಈ ಕಂಪನಿಗಳ ವ್ಯಾಪ್ತಿಯ ಕಬ್ಬನ್ನು ಕಟಾವು ಮಾಡಿ ಸಾಗಿಸುವುದು ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲಾಡಳಿತ ಕಾರ್ಖಾನೆಗಳಿಗೆ ಕಬ್ಬನ್ನು ಹಂಚಿಕೆ ಮಾಡಿ ಜವಾಬ್ದಾರಿ ಕಳೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರ ಕಟಾವು ಮತ್ತು ಸಾಗಣೆ ವೆಚ್ಚ ಭರಿಸುವುದಕ್ಕೆ ಮೀನಮೇಷ ಎಣಿಸುತ್ತಿರುವುದರಿಂದ ಬೆಳೆದಿರುವ ಕಬ್ಬು ಗದ್ದೆಯಲ್ಲೇ ಒಣಗುವಂತಾಗಿದೆ.
ಆಳುಗಳೇ ಸಿಗುತ್ತಿಲ್ಲ: ಮೈಷುಗರ್ ಕಂಪನಿಯ ಕಬ್ಬು ಕಡಿಯಲು ಪ್ರತಿ ವರ್ಷ ಸುಮಾರು 750 ಮಂದಿ ಕೂಲಿಯಾಳುಗಳು ಬಳ್ಳಾರಿಯಿಂದ ಸ್ವಯಂ ಪ್ರೇರಿತ ರಾಗಿ ಜಿಲ್ಲೆಗೆ ಬರುತ್ತಿದ್ದರು. ಅದೇ ಮಾದರಿಯಲ್ಲಿ ಈ ವರ್ಷವೂ ಕಬ್ಬು ಕಟಾವಿಗೆ ಕೂಲಿಯಾಳುಗಳು ಬಂದಿದ್ದರು. ಆದರೆ, ಕಾರ್ಖಾನೆಗಳು ಆರಂಭ ವಾಗುವ ಲಕ್ಷಣಗಳು ಕಾಣದಿದ್ದರಿಂದ ಅವರೆಲ್ಲರೂ ಕೂಲಿ ಅರಸಿಕೊಂಡು ನೆರೆ ಜಿಲ್ಲೆಗಳಿಗೆ ಹೊರಟು ಹೋದರು. ಇದೀಗ ಖಾಸಗಿ ಕಾರ್ಖಾನೆಗಳಿಗೆ ಹಂಚಿಕೆಯಾಗಿರುವ ಮೈಷುಗರ್ ಹಾಗೂ ಪಿಎಸ್ ಎಸ್‌ಕೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಕಡಿಯುವುದಕ್ಕೆ
ಆಳುಗಳೇ ಸಿಗದಂತಾಗಿದೆ. ಹೆಚ್ಚಿನ ಕೂಲಿಗೆ ಬೇಡಿಕೆ: ಕಡಿಮೆ ಸಂಖ್ಯೆಯಲ್ಲಿರುವ ಕೂಲಿಯಾಳುಗಳು ಕಬ್ಬು ಕಡಿಯುವುದಕ್ಕೆ ಹೆಚ್ಚಿನ ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಹಾಲಿ ನೀಡುವ ಕೂಲಿ ದರಕ್ಕಿಂತಲೂ 50 ರಿಂದ 100 ರೂ. ಹೆಚ್ಚಿರುವುದು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡುವ ಆಳುಗಳನ್ನು ಕರೆಸಿದ್ದಾರೆ.
ಆ ಕೂಲಿಯಾಳುಗಳು ಕಾರ್ಖಾನೆಯವರ ವ್ಯಾಪ್ತಿಯ ಕಬ್ಬು ಕಟಾವು ಮಾಡುವುದಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಅಲ್ಲದೆ, ಈಗಾಗಲೇ ಕಬ್ಬು ಕಟಾವಿನ ಹಂತ ತಲುಪಿರುವುದರಿಂದ ಆ ಕಂಪನಿಗಳ ರೈತರು ತಮ್ಮ ಕಬ್ಬನ್ನು ಕಟಾವು ಮಾಡುವುದಕ್ಕೆ ಮೊದಲ ಆದ್ಯತೆ ನೀಡುವಂತೆ ಆಡಳಿತ ಮಂಡಳಿಗಳ ಎದುರು ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳ ವ್ಯಾಪ್ತಿಯ ಕಬ್ಬು ಕಟಾವು ಮಾಡಲಾಗದೆ ಒಣಗುವ ಪರಿಸ್ಥಿತಿ ತಲುಪಿದೆ.
ಇಳುವರಿ ಹೆಚ್ಚಳ: ಕಳೆದೆರಡು ವರ್ಷಗಳಿಂದ ವಿಸಿಎಫ್-517 ತಳಿಯ ಕಬ್ಬನ್ನು ರೈತರು ಬೆಳೆಯುತ್ತಿದ್ದು, ಇದರ ಉತ್ಪಾದನೆ ಹಾಗೂ ಇಳುವರಿ ಪ್ರಮಾಣ ಹೆಚ್ಚಾಗಿದೆ. ಪ್ರತಿ ಎಕರೆಗೆ 40 ಟನ್ ಉತ್ಪಾದನೆಯಾಗುತ್ತಿದ್ದ ಕಡೆ 60ರಿಂದ 70 ಟನ್ ಉತ್ಪಾದನೆಯಾಗುತ್ತಿದೆ. ಮಂಡ್ಯ, ಪಾಂಡವಪುರ ತಾಲೂಕಿನ ಶೇ.99ರಷ್ಟು ಬೆಳೆಗಾರರು, ಇದೇ ತಳಿಯ ಕಬ್ಬನ್ನು ಬೆಳೆದಿರುವುದರಿಂದ ಪ್ರಮಾಣ ಹೆಚ್ಚಿದೆ. ಈ ತಳಿಯ ಕಬ್ಬು ಇತರೆ ಕಂಪನಿಗಳ ವ್ಯಾಪ್ತಿ ಯಲ್ಲಿ ಪ್ರಚಾರದಲ್ಲಿದ್ದರೂ ಹೆಚ್ಚು ಪ್ರಮಾಣದಲ್ಲಿಲ್ಲದಿರುವುದು ಕಂಡುಬಂದಿದೆ.
ಎಲ್ಲೆಡೆ ಯಂತ್ರ ಕಟಾವು ಆಗದು: ಯಂತ್ರದಿಂದ ಕಬ್ಬನ್ನು ಕಟಾವು ಮಾಡುವ ವಿಧಾನವನ್ನು ಜಿಲ್ಲೆಯಲ್ಲಿ ಮೊಟ್ಟ ಮೊದಲಬಾರಿಗೆ ಕೆ.ಆರ್.ಪೇಟೆ ತಾಲೂಕಿನ ಐಸಿಎಲ್ ಷುಗರ್ ಕಂಪನಿಯವರು ಪರಿಚಯಿಸಿದರು. ಆದರೆ, ಆ ಯಂತ್ರದ ಮೂಲಕ ಎಲ್ಲಾ ಜಮೀನುಗಳಲ್ಲೂ ಸುಲಭವಾಗಿ ಕಬ್ಬು ಕಟಾವು ಮಾಡಲಾಗುವುದಿಲ್ಲ.
ಯಂತ್ರದಿಂದ ಕಬ್ಬು ಕಟಾವು ಮಾಡಬೇಕಾದರೆ, ಆ ಜಮೀನು ಸಮತಟ್ಟಾಗಿರಬೇಕು. 4 ಪಟದ ಅಂತರದಲ್ಲಿ ಕಬ್ಬನ್ನು ನೆಟ್ಟಿರಬೇಕು ಹಾಗೂ ಜಮೀನು ತೇವಾಂಶದಿಂದ ಕೂಡಿರಬಾರದು. ಇಂತಹ ಪರಿಸ್ಥಿತಿ ಇದ್ದಲ್ಲಿ ಯಂತ್ರದಿಂದ ಕಬ್ಬು ಕಟಾವು ಸುಲಭವಾಗುವುದು. ಆದರೆ, ಜಿಲ್ಲೆಯ ಎಲ್ಲಾ ಕಡೆ ಇದೇ ಪರಿಸ್ಥಿತಿ ಇಲ್ಲದಿರುವುದರಿಂದ ಯಂತ್ರದಿಂದ ಕಬ್ಬು ಕಟಾವು ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ಮೈಷುಗರ್ ವ್ಯಾಪ್ತಿಯಲ್ಲೇ ಇನ್ನೂ 4 ಲಕ್ಷ ಟನ್ ಕಬ್ಬು ಕಟಾವಾಗದೆ ಉಳಿದಿದೆ. ಇದುವರೆಗೆ 1.45 ಲಕ್ಷ ಟನ್ ಕಬ್ಬು ಮಾತ್ರ ನುರಿಸಲಾಗಿದೆ. ಉಳಿದಿರುವ ಕಬ್ಬನ್ನು ಕಟಾವು ಮಾಡಿ ನುರಿಸುವುದು ಯಾವಾಗ ಎನ್ನುವುದು ಪ್ರಶ್ನೆಯಾಗಿದೆ.
ಸಾಗಣೆ, ಕಟಾವು ವೆಚ್ಚ ಅಂಕಿತ ಬಿದ್ದಿಲ್ಲ: ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಸರ್ಕಾರ ಜಿಲ್ಲಾಡಳಿತ ಸೂಚನೆ ನೀಡಿದೆಯೇ ವಿನಾ ಕಬ್ಬು ಕಟಾವು ಹಾಗೂ ಸಾಗಣೆ ವೆಚ್ಚವನ್ನು ಬಿಡುಗಡೆ ಮಾಡುವ ಬಗ್ಗೆ ಸೊಲ್ಲೆತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರು ಕಟಾವು ಮತ್ತು ಸಾಗಣೆಗೆ 5 ಕೋಟಿ ರೂ. ನಿಗದಿಪಡಿಸಿರುವುದಾಗಿ ಹೇಳಿದ್ದಾರೆಯೇ ವಿನಾ ಸರ್ಕಾರದಿಂದ ಆದೇಶ ಹೊರಬಿದ್ದಿಲ್ಲ. ಇದೂ ಸಹ ಕಬ್ಬು ಕಟಾವು ಮತ್ತು ಸಾಗಣೆಗೆ ಹಿನ್ನಡೆಯಾಗಲು ಕಾರಣವಾಗಿದೆ.
-ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.