ಪಾಂಡವಪುರ: ಯುವ ಜನರಲ್ಲಿ ಹೊಸ ಆದರ್ಶಗಳು ಮತ್ತು ಜೀವನ ಮೌಲ್ಯಗಳನ್ನು ಬೆಳೆಸಿ ವಿಶ್ವಮಾನವತೆಯ ಗುಣ ಬಲಪಡಿಸುವಂತಹ ಸಾಹಿತ್ಯ ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು ಸಲಹೆ ನೀಡಿದರು.
ಪಟ್ಟಣದ ವಿಜಯ ಬಿಇಡಿ. ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಯುವ ಬರಹಗಾರರ ಬಳಗದ ಪಾಂಡವಪುರ ತಾಲೂಕು ಘಟಕದ ವತಿಯಿಂದ ನಡೆದ ಪುತಿನ ಸ್ಮರಣಾರ್ಥ ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮಿಲನದ ಸಮಾರೋಪ ಸಮಾರಂಭದಲ್ಲಿ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಮಾಜದಲ್ಲಿನ ಮೌಡ್ಯತೆಯ ವಿರುದ್ಧ ಜನಜಾಗೃತಿ ಮೂಡಿಸುವ ಸಾಹಿತ್ಯದ ಅಗತ್ಯತೆ ಇದೆ ಎಂದು ಹೇಳಿದರು.
ಚಿಂತನಾಶೀಲ ಮನೋಭಾವ ಹೆಚ್ಚಿಸಿ: ಸಾಹಿತ್ಯಕ್ಕೆ ಸಮಾಜದ ಪರಿವರ್ತನೆ ಮಾಡುವ ಶಕ್ತಿ ಇದೆ. ಈ ಕಾಯಕವನ್ನು ಬಿಎಂಶ್ರೀ, ಕುವೆಂಪು, ಪುತಿನರಂತಹ ಕವಿಗಳು ಸಾಹಿತ್ಯದ ಮೂಲಕ ಸಮರ್ಥವಾಗಿ ಮಾಡಿದರು. ಅದಕ್ಕಾಗಿ ಅವರು ನಿತ್ಯ ಸ್ಮರಣೀಯರು ಎಂದ ಅವರು, ಜನರಲ್ಲಿ ಚಿಂತನಾಶೀಲತೆಯ ಮನೋಭಾವ ಬೆಳೆಸುವ ಬರಹಗಳು ಹೆಚ್ಚು ಪ್ರಕಟಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಇರುವ ಎಲೆ ಮರೆಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕು. ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹವನ್ನು ಸಂಘಟನೆಗಳು ನೀಡಬೇಕು. ಈ ದಿಕ್ಕಿನಲ್ಲಿ ಕಳೆದ ಎರಡು ದಶಕಗಳಿಂದ ಜಿಲ್ಲಾ ಯುವ ಬರಹಗಾರರ ಬಳಗವು ನಾಡಿನ ವಿವಿಧೆಡೆ ಇರುವ ಯುವ ಕವಿಗಳನ್ನು ಬೆಳೆಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಡುತ್ತಿರುವುದು ಶ್ಲಾಘನೀಯ ಎಂದರು. ಡಾ. ಎ.ಆರ್. ಮದನಕುಮಾರ್ ಮಾತನಾಡಿ, ಸ್ವಾರ್ಥಪರ ನಿಲುವುಗಳಿರುವ ಜನರಿಂದ ತುಂಬಿರುವ ಸಮಾಜದಲ್ಲಿ ಹಲವು ಮಂದಿ ವಿವಿಧ ಕ್ಷೇತ್ರದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಗೌರವಿಸಿದಾಗ ಅವರು ಮತ್ತಷ್ಟು ಸಮಾಜಮುಖೀಯಾಗಿ ಕೆಲಸ ಮಾಡಬಲ್ಲರು. ಜೊತೆಗೆ ಸಾಮಾಜಿಕ ಆರೋಗ್ಯ ಮತ್ತು ಸಾಮರಸ್ಯ ಕಾಯಬಲ್ಲರು ಎಂದರು.
ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರದ ಸಾಧಕರಾದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ವೆಂಕಟೇಗೌಡ ಸೇವಾ ಸಮಿತಿಯ ಅಧ್ಯಕ್ಷ ಡಾ. ಕೆ.ವೈ. ಶ್ರೀನಿವಾಸ್, ಬೆಂಗಳೂರಿನ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ. ಪುಟ್ಟರಾಜು, ಬೀದರಿನ ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕ ಸಂಜೀವಕುಮಾರ್ ಅತಿವಾಳೆ, ಮದ್ದೂರು ತಾಲ್ಲೂಕಿನ ಚಂದೂಪುರದ ಡಿ.ಕೆ.ಗೌಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಹೆಚ್. ಪುಟ್ಟಸ್ವಾಮಿ, ರಂಗಭೂಮಿ ಕಲಾವಿದ ಹಾಗೂ ಗಾಯಕ ಬೇವಿನಕುಪ್ಪೆ ನಾಗಲಿಂಗೇಗೌಡ, ನಾಗಮಂಗಲದ ಹಾರ್ಟ್ ಟ್ರಸ್ಟ್ ನಿರ್ದೇಶಕ ಡಿ.ಆರ್. ವಸಂತ್ ಕುಮಾರ್ ಅವರಿಗೆ ‘ಕನ್ನಡ ಸೇವಾರತ್ನ’ ಪ್ರಶಸ್ತಿ ಪ್ರದಾನ ಮಡಲಾಯಿತು.
ಅಭಿನಂದನಾ ನುಡಿ: ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಅಭಿನಂದನಾ ನುಡಿಗಳನ್ನಾಡಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾಯರ್ದರ್ಶಿ ಕೆ. ಯುವರಾಜ್ ಕವಿಗಳಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು. ತಾಲೂಕು ಯುವ ಬರಹಗಾರರ ಬಳಗದ ಅಧ್ಯಕ್ಷ ರಂಗನಾಥ್ ಕ್ಯಾತನಹಳ್ಳಿ, ಪ್ರಧಾನ ಕಾರ್ಯದರ್ಶಿ ಸುಜಾತ ಕೃಷ್ಣ, ಸಂಚಾಲಕಿ ವಿ. ತ್ರಿವೇಣಿ ಉಪಸ್ಥಿರಿದ್ದರು.
ಇದಕ್ಕೂ ಮುನ್ನ ನಡೆದ ಕವಿ-ಕಾವ್ಯ ಸಮ್ಮಿಲನದ ಮೊದಲನೆಯ ಕವಿಗೋಷ್ಠಿಯು ಕೆ.ಆರ್. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ದ. ಸತೀಶ್ ಚಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎರಡನೆಯ ಕವಿಗೋಷ್ಠಿಯು ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಆರ್. ಮದನಕುಮಾರ್ ಅಧ್ಯಕ್ಷತೆಯಲ್ಲಿ ನಡೆದವು. ಈ ಎರಡು ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 74 ಮಂದಿ ಕವಿ-ಕವಯಿತ್ರಿಯರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.