ಕೈ ಬಂಡಾಯ ಶಮನ; ಕಮಲ, ದಳಕ್ಕೆ ಬಿಸಿ ತುಪ್ಪ
Team Udayavani, Apr 24, 2023, 12:27 PM IST
ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಬಂಡಾಯದ ಬಾವುಟ ಹಾರಿದ್ದು, ಸದ್ಯ ಕಾಂಗ್ರೆಸ್‌ನಲ್ಲಿ ಬಂಡಾಯ ಸ್ವಲ್ಪಮಟ್ಟಿಗೆ ಶಮನಗೊಂಡಿದ್ದರೆ, ಬಿಜೆಪಿ ಹಾಗೂ ಜೆಡಿಎಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮಂಡ್ಯ, ಮದ್ದೂರು ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಜೋರಾ ಗಿಯೇ ತಟ್ಟಿತ್ತು. ಇದೀಗ ಅದು ಸ್ವಲ್ಪಮಟ್ಟಿಗೆ ಕಡಿಮೆಯಾದಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅತೃಪ್ತರ ಮನವೊಲಿಸಲಾಗಿದೆ. ಆದರೂ, ಇನ್ನೂ ಅಸಮಾಧಾನ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ.
ಅಸಮಾಧಾನನಿರತ ಮನೆಗೆ ಭೇಟಿ ನೀಡಿದ ಡಿಕೆಶಿ: ಕಳೆದ ಎರಡು ದಿನಗಳ ಹಿಂದೆ ಮಂಡ್ಯಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಸಮಾಧಾನಿತರ ಮನೆಗಳಿಗೆ ಖುದ್ದು ಭೇಟಿ ನೀಡಿ, ಮನವೊಲಿಸುವ ಪ್ರಯತ್ನ ಮಾಡಿದ್ದರು. ಮಾಜಿ ಸಚಿವ ಎಂ.ಎಸ್. ಆತ್ಮಾನಂದ ನಿವಾಸದಲ್ಲಿ ಅಮರಾವತಿ ಚಂದ್ರಶೇಖರ್, ಸತೀಶ್ ಸಿದ್ಧಾರೂಢ, ಎಂ.ಡಿ.ಜಯರಾಂ ಸೇರಿದಂತೆ ಇತರೆ ಮುಖಂಡರ ಜೊತೆ ಮಾತುಕತೆ ನಡೆಸಿದ್ದರು. ಆಗ ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿ ರವಿಕುಮಾರ್ ಗೌಡ ಪರ ಚುನಾವಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಅದರಂತೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಡಾ.ಎಚ್. ಕೃಷ್ಣ ಮನೆಗೂ ಭೇಟಿ ನೀಡಿ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆದಿತ್ತು.
ಹೊಗೆಯಾಡುತ್ತಿರುವ ಮುಖಂಡರ ಅಸಮಾಧಾನ: ಕಾಂಗ್ರೆಸ್‌ನ ಅಸಮಾಧಾನಿತರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರೂ, ಹೊಗೆಯಾಡುತ್ತಲೇ ಇದೆ. ಈಗಾಗಲೇ ಟಿಕೆಟ್ ವಂಚಿತರು ಡಿ.ಕೆ.ಶಿವಕುಮಾರ್ ಮನವೊಲಿಕೆಗೆ ಒಪ್ಪಿಗೆ ಸೂಚಿಸಿದ್ದರೂ ಟಿಕೆಟ್ ಸಿಗಲಿಲ್ಲ ಎಂಬ ಅಸಮಾಧಾನ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಬೇಕಾದರೂ ಸ್ಫೋಟವಾಗುವ ಸಾಧ್ಯತೆ ಹೆಚ್ಚಿದೆ. ಕೆ.ಆರ್.ಪೇಟೆ ಕೈಗೆ ಒಗ್ಗೂಡಿದ ಮುಖಂಡರು: ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯ್ ರಾಮೇಗೌಡ ಅಸಮಾಧಾನಗೊಂಡಿದ್ದರು. ಆದರೆ, ಹೈಕಮಾಂಡ್ ನೇತೃತ್ವದ ಮಾತುಕತೆ ಸಫಲಗೊಂಡಿದ್ದರಿಂದ ವಿಜಯ್ ರಾಮೇಗೌಡ ಕೂಡ ದೇವರಾಜು ಅವರಿಗೆ ಬೆಂಬಲ ಘೋಷಿಸಿದರು. ಅಲ್ಲದೆ, ಕೆ.ಆರ್.ಪೇಟೆಯ ಆರು ಮಂದಿ ಆಕಾಂಕ್ಷಿತರು ಜೆಡಿಎಸ್‌ನಿಂದ ಬಂದಿದ್ದ ಬಿ.ಎಲ್.ದೇವರಾಜುಗೆ ಬೆಂಬಲ ವ್ಯಕ್ತಪಡಿಸಿ ಒಗ್ಗಟ್ಟು ಪ್ರದರ್ಶಿಸಿದರು.
ಜೆಡಿಎಸ್‌ಗೆ ಅಭ್ಯರ್ಥಿಗಳ ಬಂಡಾಯದ ಬಿಸಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ ಜೋರಾ ಗಿಯೇ ತಟ್ಟಿದೆ. ಕ್ಷೇತ್ರದಲ್ಲದ ವ್ಯಕ್ತಿಯನ್ನು ಅಭ್ಯರ್ಥಿ ಯನ್ನಾಗಿಸಿರುವುದು ಕಣ್ಣು ಕೆಂಪಗಾಗುವಂತೆ ಮಾಡಿದೆ. ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಲಾಗಿದೆ. ಅದಕ್ಕಾಗಿ ಕೆ.ಎಸ್.ವಿಜಯಾನಂದ, ಅಳಿಯ ಎಚ್.ಎನ್.ಯೋಗೇಶ್, ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಅವರಿಂದ ನಾಮಪತ್ರ ಸಲ್ಲಿಸಿ, ಜೆಡಿಎಸ್ ವರಿಷ್ಠರ ವಿರುದ್ಧವೇ ತೊಡೆತಟ್ಟಲಾಗಿದೆ. ಇದು ಯಾವ ಮಟ್ಟಕ್ಕೆ ಹೋಗಲಿದೆ ಕಾದು ನೋಡಬೇಕು.
ಇಂದು ಸ್ವಾಭಿಮಾನಿ ಪಡೆಯಿಂದ ಸಭೆ: ಜೆಡಿಎಸ್ ವಿರುದ್ಧ ಬಂಡಾಯ ಸಾರಿರುವ ಶಾಸಕ ಎಂ.ಶ್ರೀನಿವಾಸ್ ನೇತೃತ್ವದ ಬಣದಿಂದ ಏ.24ರ ಬೆಳಗ್ಗೆ 10 ಗಂಟೆಗೆ ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸಭೆ ಕರೆಯ ಲಾಗಿದೆ. ಈಗಾಗಲೇ ಜೆಡಿಎಸ್ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವ ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್ ಹಾಗೂ ಮುದ್ದನಘಟ್ಟ ಮಹಾಲಿಂಗೇಗೌಡ ಮೂವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿ, ಇಬ್ಬರು ನಾಮಪತ್ರ ವಾಪಸ್ ಪಡೆಯಲಿದ್ದಾರೆ.
ವಿಜಯ್ ಆನಂದ್ ಕಣಕ್ಕೆ: ಜೆಡಿಎಸ್ ಬಂಡಾ ಯವಾಗಿ ನಾಮಪತ್ರ ಸಲ್ಲಿಸಿರುವ ಮೂವರ ಪೈಕಿ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಅವರು ಕಣದಲ್ಲಿ ಉಳಿಯುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಇವರ ಜತೆಯಲ್ಲಿ ನಾಮಪತ್ರ ಸಲ್ಲಿಸಿ ರುವ ಎಚ್.ಎನ್.ಯೋಗೇಶ್ ಹಾಗೂ ಮುದ್ದನ ಘಟ್ಟ ಮಹಾಲಿಂಗೇ ಗೌಡ ಇಬ್ಬರು ವಾಪಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಜೆಪಿಗೂ ಬಂಡಾಯಗಾರರ ಸಮಸ್ಯೆ: ಬಿಜೆಪಿಗೂ ಬಂಡಾಯಗಾರರು ತಲೆ ನೋವು ತಂದಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಎದ್ದಿರುವ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಟಿಕೆಟ್ ಸಿಗದೇ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದರೆ, ಅತ್ತ ನಾಗಮಂಗಲ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್ ಆಲಿಯಾಸ್ ಫೈಟರ್ ರವಿ ಅವರು ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಫೈಟರ್ ರವಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಬಿಜೆಪಿಯಿಂದ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಮುಖಂಡರ ಮನವೊಲಿಕೆ, ಪಕ್ಷಾಂತರ ಹೆಚ್ಚಳ: ನಾಮಪತ್ರ ಪಡೆಯಲು ಸೋಮವಾರ ಕೊನೇ ದಿನವಾದ ಹಿನ್ನೆಲೆಯಲ್ಲಿ ಬಂಡಾಯಗಾರರ ಶಮನಗೊಳಿಸುವ ಪ್ರಯತ್ನಗಳು ಮೂರು ಪಕ್ಷಗಳಲ್ಲೂ ನಡೆಯುತ್ತಿದೆ. ಮನವೊಲಿಕೆ ಮಾಡುತ್ತಾ ಪಕ್ಷದಿಂದ ಹೊರ ಹೋಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ, ಇದರ ಜತೆಗೆ ಪಕ್ಷಾಂತರ ಪರ್ವವೂ ಹೆಚ್ಚಾಗಿದೆ. ಟಿಕೆಟ್ ಸಿಗದ ಆಕಾಂಕ್ಷಿಗಳು ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ, ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳನ್ನು ತಮ್ಮ ಪಕ್ಷಕ್ಕೆ ಕರೆತರುವ ಮೂಲಕ ತಮ್ಮ ಬಲ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇದು ನನ್ನ ಅಚಲ ನಿರ್ಧಾರವಾಗಿದೆ. ಇದು ನನ್ನ ರಾಜಕೀಯದ ಭವಿಷ್ಯದ ನಿರ್ಧಾರವಾಗಿದೆ. ಕಳೆದ ಅನೇಕ ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಅದಕ್ಕಾಗಿ ನನಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಆದರೆ, ನನನ್ನು ಕಡೆಗಣಿಸಲಾಗಿದೆ. – ಕೆ.ಎಸ್.ವಿಜಯ್ ಆನಂದ್, ಜೆಡಿಎಸ್ ಬಂಡಾಯ ಅಭ್ಯರ್ಥಿ
ನನ್ನ ಮನೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಮನವೊಲಿಸಿದ್ದಾರೆ. ಆದರೆ, ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ. ಕಾಂಗ್ರೆಸ್ ಸೇರ್ಪಡೆಗೊಂಡು ಒಂದು ರೀತಿಯ ಡೋಲಾಯಮಾನ ಸ್ಥಿತಿಗೆ ತಲುಪಿದ್ದೇನೆ. ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. – ಡಾ.ಎಚ್.ಕೃಷ್ಣ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ
-ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.