![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 4, 2021, 8:05 PM IST
ಮಂಡ್ಯ: ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಕೋವಿಡ್ ಸೋಂಕಿತ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ಇಂಡುವಾಳು ಗ್ರಾಮದ ಸುನೀಲ್(29) ಮೃತಪಟ್ಟ ಯುವಕ. ಈತನಿಗೆ 14 ದಿನದ ಹಿಂದೆ ಸೋಂಕು ದೃಢಪಟ್ಟಿತ್ತು. ಮೊದಲ ಮೂರು ದಿನ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದನು. ಮನೆಗೆ ಬಂದ ಎರಡು ದಿನದಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಮಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿವೇಟರ್ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಮಧ್ಯಾಹ್ನ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಆಸ್ಪತ್ರೆಯಲ್ಲಿ ವಿದ್ಯುತ್ ಬ್ಯಾಕಪ್ ಇಲ್ಲದಿರುವ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಆರೋಪ:
ಮೃತ ಯುವಕನ ಸಂಬಂಧಿಕರು ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಕೆಲಕಾಲ ಗೊಂದಲ ಏರ್ಪಟ್ಟಿತ್ತು. ವೈದ್ಯರು ಸಹ ಮೃತಪಟ್ಟು ನಾಲ್ಕು ಗಂಟೆ ಕಳೆದರೂ ಶವ ಕೊಡದೆ ಸತಾಯಿಸಿದ್ದರಿಂದ ಮೃತನ ಪೋಷಕರು ಕೂಗಾಡಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟ-ನೂಕಾಟ ನಡೆದಿದ್ದು, ಮೃತನ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ:
ನಂತರ ಜಿಲ್ಲಾಧಿಕಾರಿ ಎಸ್.ಅಶ್ವಥಿ ನೇತೃತ್ವದಲ್ಲಿ ವೈದ್ಯರು ಹಾಗೂ ಮೃತನ ಪೋಷಕರ ಸಭೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ರೋಗಿಗಳ ಸಂಬಂಧಿಕರಿಗೂ ನಿರ್ಬಂಧ:
ಘಟನೆ ನಡೆಯುತ್ತಿದ್ದಂತೆ ಸೋಂಕಿತ ರೋಗಿಗಳ ಆರೈಕೆಗಾಗಿ ಇದ್ದ ಸಂಬಂಧಿಕರಿಗೂ ಆಸ್ಪತ್ರೆ ಸಿಬ್ಬಂದಿಗಳು ನಿರ್ಬಂಧ ಹೇರಿದ್ದಾರೆ. ಸೋಂಕಿತ ರೋಗಿಗಳೊಂದಿಗೆ ಯಾರೂ ಇರಬಾರದು ಎಂದು ಎಲ್ಲರನ್ನು ಹೊರಗೆ ಕಳುಹಿಸಿದ್ದರಿಂದ ರೋಗಿಗಳ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕಿಡಿಕಾರಿದರು.
You seem to have an Ad Blocker on.
To continue reading, please turn it off or whitelist Udayavani.