ರೈತ ಸ್ನೇಹಿ ಹೇಮಗಿರಿ ಜಾತ್ರೆಗೆ ಸಿದ್ಧತೆ
ಹಸಿರು ಹೊದ್ದು ಕಂಗೊಳಿಸುತ್ತಿರುವ ಹೇಮಗಿರಿ ಬೆಟ್ಟ, 13 ಲಕ್ಷ ರೂ.ವರೆಗೆ ರಾಸುಗಳ ಮಾರಾಟ
Team Udayavani, Feb 15, 2021, 6:52 PM IST
ಕೆ.ಆರ್.ಪೇಟೆ: “ತಾಲೂಕಿನೆಲ್ಲೆಡೆ ಚಿಗುರೊಡೆಯುತ್ತಿರುವ ಹಸಿರಿನ ಸಸ್ಯರಾಶಿ ವೈಭವ. ಹೇಮಾವತಿಯಿಂದ ನೀರಿನಿಂದ ಒಡಲು ತುಂಬಿಕೊಂಡಿರುವ ಕೆರೆ, ಕಟ್ಟೆಗಳು. ಇಳಿಮುಖವಾಗುತ್ತಿರುವ ಕೋವಿಡ್ ಸೋಂಕಿತರ ಸಾವು. ಧಾರ್ಮಿಕ ಸಮಾರಂಭ, ಜಾತ್ರಾ ಮಹೋತ್ಸವ ಗಳ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದು.’
ಹೀಗೆ ಹತ್ತು ಹಲವು ವಿಶೇಷತೆಗಳು ತಾಲೂಕಿನಲ್ಲಿ ಹಬ್ಬದ ಸಂಭ್ರಮ ಸೃಷ್ಟಿಸಿದೆ. ಹೀಗಾಗಿ ರಾಜ್ಯದ ಪ್ರಮುಖ ಜಾತ್ರೆಗಳಲ್ಲಿ ತನ್ನದೇ ಆದ ಮಹತ್ವ ಪಡೆದಿರುವ ರೈತ ಸ್ನೇಹಿ ಹೇಮಗಿರಿ ದನಗಳ ಜಾತ್ರೆ ಆಚರಣೆಗೆ ತಾಲೂಕಿನ ಜನತೆ ಸಕಲ ಸಿದ್ಧತೆ ಮಾಡಿಕಂಡಿದ್ದಾರೆ.
ಹೌದು, ವರ್ಷಾರಂಭದ ಬಳಿಕ ತಾಲೂಕಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಇದಾಗಿದೆ. ಸರ್ಕಾರದ ಜಾತ್ರಾ ಮಹೋತ್ಸವಗಳ ಆಚರಣೆಗೆ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಈ ಭಾಗದ ಜನತೆ, ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಫೆ.19ರಂದು ನಡೆಯುವ ಹೇಮಗಿರಿ ದನಗಳ ಜಾತ್ರೆಗೆ ಈಗಾಗಲೇ ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿಕೊಂಡು ಮೆರವಣಿಗೆ ಮೂಲಕ ಜಾತ್ರಾ ಸ್ಥಳಕ್ಕೆ ಕರೆತರುತ್ತಿದ್ದಾರೆ. ವರ್ತಕರು ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಂಗೊಳಿಸುತ್ತಿರುವ ಹೇಮಗಿರಿ: ಹೇಮಗಿರಿ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಹೇಮಾವತಿ ನದಿ ಮೈದುಂಬಿ ಹರಿಯುವುದರಿಂದ, ಹೇಮಗಿರಿ ಹಸಿರು ಹೊದ್ದು ಕಂಗೊಳಿಸುತ್ತಿದೆ. ಇದು ಪ್ರವಾಸಿತಾಣವಾಗಿದ್ದು, ವರ್ಷವಿಡೀ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಹೇಮವತಿ ನದಿ ದಡದಲ್ಲಿರುವ ಚಿಕ್ಕ ಬೆಟ್ಟದ ಮೇಲೆ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ನೆಲೆನಿಂತಿದ್ದಾನೆ. ಬೆಟ್ಟದ ಸಾಲಿನಲ್ಲಿ ಅಲ್ಪ ಪ್ರಮಾಣದ ಚಿನ್ನದ ನಿಕ್ಷೇಪವಿದೆ ಎಂದು ಹಲವರು ಹೇಳುತ್ತಾರೆ. ಮುಂಜಾನೆ ಮತ್ತು ಸಂಜೆ ವೇಳೆ ಸೂರ್ಯನ ರಶ್ನಿ ಬೆಟ್ಟದ ಮೇಲೆ ಬಿದ್ದಾಗ ಬೆಟ್ಟ ಸ್ವರ್ಣ ಬಣ್ಣಕ್ಕೆ ತಿರುಗುತ್ತದೆ, ಹೀಗಾಗಿ ಹೇಮಗಿರಿ ಎಂಬ ಹೆಸರು ಬಂದಿದೆ. ಬೆಟ್ಟವನ್ನು ಏರಿ ನಿಂತರೆ ಸುತ್ತಲ ಪ್ರಕೃತಿ ಸೌಂದರ್ಯ ನೋಡುಗರ ಮನಸೂರೆಗೊಳಿಸುತ್ತದೆ.
ಮೃಗು ಋಷಿ ತಪ್ಪಸ್ಸು ಮಾಡಿರುವ ಕ್ಷೇತ್ರ: ಮೃಗು ಋಷಿಗಳು ಇಲ್ಲಿನ ಸುಂದರ ಪ್ರಕೃತಿಗೆ ಮನಸೋತು ಬೆಟ್ಟದಲ್ಲಿಯೇ ತಪಸ್ಸು ಮಾಡಿದ್ದರು ಎನ್ನಲಾಗಿದ್ದು, ತಪಸ್ಸು ಮಾಡಿದ್ದ ಗುಹೆ ಇಂದಿಗೂ ಬೆಟ್ಟದಲ್ಲಿ ಕಾಣಬಹುದು. ಹೀಗಾಗಿ ಅದನ್ನು ಮೃಗು ಋಷಿ ಗುಹೆಯೆಂದೇ ಕರೆಯಲಾಗುತ್ತಿದೆ. ಮೃಗು ಋಷಿಗಳ ತಪಸ್ಸಿಗೆ ಮೆಚ್ಚಿ ಮಹಾವಿಷ್ಣು ನೀಡಿದ ದರ್ಶನ ರೂಪವೇಇಂದಿನ ಶ್ರೀಹೇಮಗಿರಿ ಕಲ್ಯಾಣವೆಂಕಟರಮಣಸ್ವಾಮಿ.
ದನಗಳ ಬೃಹತ್ ಜಾತ್ರೆ:
ಹೇಮಗಿರಿಯ ಮತ್ತೂಂದು ವಿಶೇಷವೆಂದರೆ ಅದು ದನಗಳ ಬೃಹತ್ ಜಾತ್ರೆ. ಈ ಜಾತ್ರೆ ರಾಜ್ಯದಲ್ಲಿಯೇಹೆಸರುವಾಸಿಯಾಗಿದೆ. ಸಂಕ್ರಾಂತಿ ಬಳಿಕ ರೈತರು, ತಮ್ಮ ದನಕರುಗಳನ್ನು ಅಲಂಕರಿಸಿ ಜಾತ್ರೆಗೆ ಕರೆತರುತ್ತಾರೆ. ಇಲ್ಲಿ ಹೊಸ ಹಳ್ಳಿಕಾರ್ ತಳಿ ಹೋರಿಗಳು, ವ್ಯವಸಾಯಕ್ಕೆ ಬಳಕೆಯಾಗುವ ದನಗಳು ಭಾಗವಹಿಸುತ್ತವೆ. ಹೇಮಗಿರಿ ಬೆಟ್ಟದ ಮೇಲೆ ನಿಂತು ಕಣ್ಣಾಯಿಸಿದರೇ, ಒಂದು ಕಡೆ ಮೈದುಂಬಿ ಹರಿಯುವ ಹೇಮಾವತಿ ನದಿ. ಮತ್ತೂಂದೆಡೆ ಕಣ್ಣು ಹಾಯಿಸಿದಷ್ಟು ಕಾಣುವ ದನಗಳ ಸಾಲು ನೋಡುಗರನ್ನು ಹುಬ್ಬೇರುವಂತೆ ಮಾಡುತ್ತದೆ. ಜಾತ್ರೆಯಲ್ಲಿ 50 ಸಾವಿರ ರೂ.ನಿಂದ 13 ಲಕ್ಷ ರೂ. ವರೆಗಿನ ಒಂದು ಜೊಡಿ ಎತ್ತು ಬಿಕರಿಯಾಗುತ್ತವೆ. ದನಗಳನ್ನು ಕೊಳ್ಳಲು ರಾಜ್ಯ ಸೇರಿದಂತೆ ಕೇರಳ, ತಮಿಳುನಾಡಿನಿಂದಲೂ ರೈತರು ಜಾತ್ರೆಯತ್ತ ಹೆಜ್ಜೆ ಹಾಕುತ್ತಾರೆ.
ಗತವೈಭವ ನೆನಪು ಮಾತ್ರ :
ಎರಡು ದಶಕಗಳ ಹಿಂದೆ ಹೇಮಗಿರಿ ಜಾತ್ರೆ ಎಂದರೆ ಅದರ ಗತ್ತೇ ಬೇರೆಯಿತ್ತು. ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತಿತ್ತು. ವಾಹನ ಸೌಲಭ್ಯವಿಲ್ಲದಿದ್ದರೂ, ರಥೋತ್ಸವದಂದು ಬೆಟ್ಟದ ಸುತ್ತಲೂ ಸಾವಿರಾರು ಜನರು ತುಂಬಿರುತ್ತಿದ್ದರು.
ಸಂಕ್ರಾಂತಿ ಹಬ್ಬದ ದಿನ ಜಾನುವಾರುಗಳನ್ನು ಸಿಂಗರಿಸಿಕೊಂಡು ಎತ್ತಿನ ಗಾಡಿ ತುಂಬ ಒಣ ಹುಲ್ಲು, ಅಡುಗೆ ಮಾಡಲು ಸೌದೆ, ಸೀಮೆ ಎಣ್ಣೆ ದೀಪ, ಪಾತ್ರೆ ಮತ್ತು ತಿಂಗಳಿಗಾಗುವಷ್ಟು ಬಟ್ಟೆ ತುಂಬಿಕೊಂಡು ಜಾತ್ರೆಗೆ ಬರುತ್ತಿದ್ದರು. ರಥೋತ್ಸವ ಮುಗಿಸಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಊರಿಗೆ
ಹಿಂತಿರುಗಿತ್ತಿದ್ದರು. ಜಾತ್ರೆಯಲ್ಲಿ ಸಾರ್ವಜನಿಕ, ಪಶು ಆಸ್ಪತ್ರೆ ತೆರೆದು ಜನ, ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇಷ್ಟು ಸಾಕಲ್ಲವೇ, ಎರಡು ದಶಕಗಳ ಹಿಂದೆ ಜಾತ್ರೆ ನಡೆಯುತ್ತಿದ್ದ ವೈಭವ ಊಹಿಸಿಕೊಳ್ಳಲು. ಆದರೆ, ಪ್ರಸ್ತುತ 4-5 ದಿನಕ್ಕೆ, ರಥೋತ್ಸವ ಒಂದು ವಾರ ಬಾಕಿ ಇರುವಾಗಲೇ ಜಾನುವಾರು ಖಾಲಿಯಾಗಿ ಬಿಡುತ್ತಿವೆ. ಒಟ್ಟಾರೆ ಜಾತ್ರಾ ಮಾಳದಲ್ಲಿ ಒಂದು ಊರೇ ನಿರ್ಮಾಣವಾಗುತ್ತಿತ್ತು. ಆದರೆ, ಈಗ ಜಾತ್ರೆ ತನ್ನ ಕಳೆ ಕಳೆದುಕೊಳ್ಳುತ್ತಿದೆ. ಜಾತ್ರೆ ಎಂದರೆ ದೇವಾಲಯಕ್ಕೆ ಬಂದು ದೇವರ ಪೂಜೆ, ದರ್ಶನ ಮಾಡಿ ಹಿಂದಿರುಗುವ ಪದ್ಧತಿಯಾಗಿ ಮಾರ್ಪಟ್ಟಿದೆ.
ಕುಂದುತ್ತಿರುವ ಜಾತ್ರೆ ಕಳೆ :
ನೂರಾರು ವರ್ಷಗಳಿಂದ ಬೆಳೆದು ರೈತರಿಗೆ ಆಶ್ರಯ ನೀಡುತ್ತಿದ್ದ ಮರಗಳನ್ನು ಕಡಿದುಹಾಕಿರುವುದರಿಂದ ಹೆಚ್ಚು ರೈತರು ಜಾತ್ರೆಯತ್ತ ಹೆಜ್ಜೆ ಹಾಕುತ್ತಿಲ್ಲ. ಕಳೆದೆರಡು ದಶಕಗಳಿಂದ ಹೊಸದಾಗಿ ಮರ ಬೆಳೆಸದಿರುವುದುರಿಂದ ಜಾನುವಾರುಗಳಿಗೆ ನೆರಳು ಇಲ್ಲದೆ, ಸಾವಿರಾರು ಜಾನುವಾರುಗಳು ಸೇರುವ ಜಾತ್ರೆಯ ಕಲೆ ಕುಂದುತ್ತಿದೆ. ಫೆಬ್ರವರಿ ತಿಂಗಳ ಸುಡು ಬಿಸಿಲಿನಲ್ಲಿಯೇ ನಿಲ್ಲಬೇಕಾಗಿರುವುದರಿಂದ ರೈತರು ಬೇಗನೆ ಜಾತ್ರೆಯಿಂದ ಹಿಂದಿರುಗುತ್ತಿದ್ದಾರೆ. ಸಾಕಷ್ಟು ಸಮಸ್ಯೆ ಇರುವುದರಿಂದ ರಥೋತ್ಸವದ ವರೆಗೂ ಉಳಿಯದ ರೈತರು, ತಮ್ಮ ರಾಸುಗಳೊಂದಿಗೆ ಊರಿನತ್ತ ಹೆಜ್ಜೆ ಹಾಕುತ್ತಾರೆ.
ಜಾತ್ರೆಯನ್ನು ಯಶಸ್ವಿಯಾಗಿ ನಡೆಸುತ್ತೇವೆ: ಸಚಿವ :
ರಾಜ್ಯದಲ್ಲಿಯೇ ಹೆಸರುಮಾಡಿರುವ ಹೇಮಗಿರಿ ಜಾತ್ರೆಯನ್ನು ಯಾವುದೇ ಲೋಪವಾಗದಂತೆ ನಡೆಸಲು ಸಿದ್ಧತೆಮಾಡಿಕೊಂಡಿದ್ದೇವೆ. ಎಲ್ಲಾ ಇಲಾಖೆ ಮುಖ್ಯಸ್ಥರ ಸಭೆ ನಡೆಸಿ ಸೂಕ್ತ ವ್ಯವಸ್ಥೆಗೆ ಸೂಚಿಸಲಾಗಿದೆ. ದನ ಕಟ್ಟುವ ಸ್ಥಳಕ್ಕೆ ವಿದ್ಯುತ್ ವ್ಯವಸ್ಥೆ, ಸಂಚಾರಿ ನೀರಿನ ಟ್ಯಾಂಕ್, ಕಿರು ನೀರು ಸರಬರಾಜು ಘಟಕಗಳ ಮೂಲಕ ಜನ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕಾಲುವೆಗಳಿಗೂ ನೀರನ್ನು ಹರಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದೇನೆ . ಜಾತ್ರೆಯಲ್ಲಿ ಎಲ್ಲಾ ಇಲಾಖೆಗಳಿಂದ ಮಳಿಗೆ ತೆರೆದು ಇಲಾಖೆಯಿಂದ ಸಿಗುವ ಸೌಲಭ್ಯದ ಬಗ್ಗೆ ಜನರಿಗೆಮಾಹಿತಿ ನೀಡಲಾಗುತ್ತದೆ. ತಾತ್ಕಾಲಿಕ ಪೊಲೀಸ್ ಠಾಣೆ, ಪಶು ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆ ತೆರೆಯಲಾಗುತ್ತದೆ. ಜೊತೆಗೆ ಒಂದು ಮಾಹಿತಿ ಕೇಂದ್ರ ತೆರೆದು ಜಾತ್ರೆಗೆ ಬರುವ ಜನ, ಜಾನುವಾರಿಗಳಿಗೆ ಸಣ್ಣ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಜಾತ್ರೆಗೆ ಬರುವ ರೈತರು ರಥೋತ್ಸವದವರೆಗೂ ಇದ್ದು ಜಾತ್ರೆ ಮೆರುಗು ಹೆಚ್ಚಿಬೇಕು ಎಂದು ಜಿಲ್ಲಾ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ರಥೋತ್ಸವದ ದೃಶ್ಯ. ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಮೂಲ ಸೌಲಭ್ಯದ ಕೊರತೆ :
ದನಗಳ ಜಾತ್ರೆ, ರಥೋತ್ಸವ, ತೆಪ್ಪೋತ್ಸವಕ್ಕೆ ರಾಜ್ಯದ ನಾನಾ ಭಾಗದಿಂದ ಲಕ್ಷಾಂತರ ಭಕ್ತಾಧಿಗಳು ಬರುತ್ತಾರೆ. ಆದರೆ, ಹೇಮಗಿರಿ ಕ್ಷೇತ್ರದಲ್ಲಿ ಶುದ್ಧ ನೀರಿನ ವ್ಯವಸ್ಥೆ ಇಲ್ಲ. ವಾರಗಟ್ಟಲೆ ದನಗಳೊಂದಿಗೆ ಜಾತ್ರೆ ಮಾಳದಲ್ಲಿಯೇ ವಾಸ್ತವ್ಯ ಹೂಡುವ ರೈತರಿಗೆ, ಮಹಿಳೆಯರಿಗೆ ಸೂಕ್ತ ಶೌಚಾಲಯ ವ್ಯವಸ್ತೆಯಿಲ್ಲ. ಹೀಗಾಗಿ ಜಾತ್ರೆಗೆ ಬರುವವರು ಬಯಲು ಆಶ್ರಯಿಸುತ್ತಿದ್ದಾರೆ. ಇದು ತಾಲೂಕು ಆಡಳಿತ, ಗ್ರಾಪಂ ಅಧಿಕಾರಿಗಳು, ಜನ ಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
-ಅಪ್ಪನಹಳ್ಳಿ ಅರುಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.