![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 23, 2021, 6:28 PM IST
ಕೆ.ಆರ್.ಪೇಟೆ: ಮಕ್ಕಳ ಕೊರತೆಯಿಂದ ಮುಚ್ಚಿ ಹೋಗಿದ್ದ ಸರ್ಕಾರಿ ಉರ್ದು ಶಾಲೆಯನ್ನು ಅಕ್ರಮವಾಗಿ ಧಾರ್ಮಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿಕೊಂಡ ಆರೋಪ ಪ್ರಕರಣ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ.
45 ವರ್ಷಗಳ ಹಿಂದೆ ಈ ಶಾಲೆ ನಿರ್ಮಾಣ:ತಾಲೂಕಿನ ಹೋಬಳಿ ಕೇಂದ್ರವಾದ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇಲ್ಲಿನ ಮಸೀದಿಯ ಸಮೀಪ ಸರ್ಕಾರಿ ಉರ್ದು ಶಾಲೆಯೊಂದಿದೆ. ಕಳೆದ 45 ವರ್ಷಗಳ ಹಿಂದೆ ಈ ಶಾಲೆ ನಿರ್ಮಾಣವಾಗಿದ್ದು, ಸರ್ಕಾರಿ ಶಾಲೆಗೆ ಪ್ರಾಥಮಿಕ ಶಿಕ್ಷಣ ಇಲಾಖೆ ವತಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸವಲತ್ತುಗಳು ಲಭ್ಯವಾಗಿವೆ.
ಅನ್ನಪೂರ್ಣ ಅಡುಗೆ ಮನೆ ನಿರ್ಮಾಣ: ಎಲ್ಲ ಪರಿ ಕರ ಶಾಲೆಯ ಹೊರ ಗೋಡೆಗಳ ಮೇಲೂ ಮಕ್ಕಳ ಕಲಿಕೆಗೆ ಪೂರಕವಾದ ಚಿತ್ರಗಳನ್ನು ಬಿಡಿಸಲಾಗಿದೆ. ಬಡ ಮುಸ್ಲಿಂ ಮಕ್ಕಳ ಕಲಿಕೆಗಾಗಿ ಸರ್ಕಾರ ಬಿಸಿಯೂಟ ಸಿದ್ಧಪಡಿಸಿಲು ಕಳೆದ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಅನ್ನಪೂರ್ಣ ಅಡುಗೆ ಮನೆ ನಿರ್ಮಿಸಿ ಅಡುಗೆ ಮಾಡಲು ಅಗತ್ಯವಾದ ಪಾತ್ರೆ, ಸಿಲಿಂಡರ್, ಸ್ಟೌವ್ ಮತ್ತಿತರ ಎಲ್ಲಾ ಪರಿಕರಗಳನ್ನು ಪೂರೈಕೆ ಮಾಡಿದೆ.
ಧಾರ್ಮಿಕ ಮುಖಂಡರಿಂದ ಆಕ್ರಮಣ?: ಉರ್ದು ಶಾಲೆಯ ಆವರಣದಲ್ಲಿ ಎರಡು ಕೊಠಡಿಗಳು ಇದೆ. ಕಳೆದ ಎರಡು ವರ್ಷಗಳ ಹಿಂದೆಯೇ ಮಕ್ಕಳ ದಾಖಲಾತಿ ಇಲ್ಲದೇ ಶಾಲೆ ಮುಚ್ಚಿತ್ತು. ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಸಂಪೂರ್ಣವಾಗಿ ಮುಚ್ಚಿದಂತಾಗಿದೆ. ಅಚ್ಚರಿ ಎಂದರೆ ಹೊರಗಿನಿಂದ ಬಂದ ಕೆಲವು ಧಾರ್ಮಿಕ ಮುಖಂ ಡರು ಸರ್ಕಾರಿ ಶಾಲೆಯನ್ನು ಆಕ್ರಮಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಿಸಿಯೂಟ ಅಡುಗೆ ಸಾಮಾನು ಬಳಕೆ: ಸರ್ಕಾರಿ ಶಾಲೆಗೆ ಹಸಿರು ಬಣ್ಣ ಬಳಿದು ಹೊರ ರಾಜ್ಯದ ಧಾರ್ಮಿಕ ಮುಖಂಡರೊಬ್ಬರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಸರ್ಕಾರಿ ಶಾಲೆಯೊಳಗೆ ಅಕ್ರಮ ಕೊಠಡಿ ನಿರ್ಮಿಸಿ ಶಾಲೆಯ ಎಲ್ಲಾ ಅಡುಗೆ ಪರಿಕರಗಳನ್ನು ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ನ್ಯಾ.ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸಿಗೆ ಆಗ್ರಹ
ಬಾಬಯ್ಯನ ದೇವಸ್ಥಾನವನ್ನಾಗಿಸಿದ ಗ್ರಾಪಂ: ಸದರಿ ಸರ್ಕಾರಿ ಉರ್ದುಶಾಲೆ ರಾಜ್ಯ ಸರ್ಕಾರದ ಆಸ್ತಿಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇರ ನಿಯಂತ್ರಣದಲ್ಲಿದೆ. ಸರ್ಕಾರಿ ಶಾಲೆಯನ್ನು ಬಾಬಯ್ಯನ ದೇವಸ್ಥಾನ ಎಂದು ಹೇಳಿ ಇಲ್ಲಿ ಗ್ರಾಮ ಪಂಚಾಯತಿ ನಿರ್ಣಯ ಸಂಖ್ಯೆ : 4/28 – 16/01/2021, ನಿರ್ಣಯಿಸಿ ದಿನಾಂಕ: 03/04/21ರಂದು ಸಂಖ್ಯೆ 3/21-22ರಲ್ಲಿ ಸರ್ಕಾರಿ ಶಾಲೆಯನ್ನೇ ಧಾರ್ಮಿಕ ಕೇಂದ್ರದ ಆಸ್ತಿಯನ್ನಾಗಿ ಈ-ಸ್ವತ್ತು ಮಾಡಿಕೊಟ್ಟಿದ್ದು, ಈಗ ಬಯಲಿಗೆ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹೋರಾಟ ಎಚ್ಚರಿಕೆ: ಸರ್ಕಾರಿ ಶಾಲೆಯನ್ನು ಸರ್ಕಾರದ ಗಮನಕ್ಕೆ ಬರದಂತೆ ಸಂತೇಬಾಚಹಳ್ಳಿ ಗ್ರಾಪಂ ಪಿಡಿಒ ಬಾಬಯ್ಯನ ದೇವಸ್ಥಾನ ಎಂದು ಈ-ಸ್ವತ್ತು ಮಾಡಿ ಅಕ್ರಮ ದಾಖಲೆ ಮಾಡಿಕೊಟ್ಟಿದ್ದಾರೆ ಎಂದು ತಾಲೂಕು ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ಹರೀಶ್ ಆರೋಪಿಸಿದ್ದಾರೆ. ಅವರನ್ನು ತಕ್ಷಣವೇ ಅಮಾನತು ಮಾಡಬೇಕು. ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಅನ್ಯರ ಹೆಸರಿಗೆ ಮಾಡಿ ಗ್ರಾಮದಲ್ಲಿ ಧಾರ್ಮಿಕ ಕಲಹಕ್ಕೆ ನಾಂದಿ ಹಾಡಿರುವ ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಉರ್ದು ಶಾಲೆಯನ್ನು ಮತ್ತೆ ಶಾಲೆಯನ್ನಾಗಿ ಪರಿವರ್ತಿಸಬೇಕು. ಇಲ್ಲದಿದ್ದರೆ ಶಿಕ್ಷಣ ಇಲಾಖೆ ಮತ್ತು ಪಿಡಿಒ ವಿರುದ್ಧ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ
ಸಂತೇಬಾಚಹಳ್ಳಿ ಸರ್ಕಾರಿ ಉರ್ದು ಶಾಲೆಯಲ್ಲಿ ಧಾರ್ಮಿಕ ಮುಖಂಡರ ಅಕ್ರಮ ಪ್ರವೇಶ ಪ್ರಕರಣದ ಆರೋಪ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಅಕ್ರಮವಾಗಿ ಪ್ರವೇಶವಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ.
-ಎಸ್.ಅಶ್ವಥಿ, ಜಿಲ್ಲಾಧಿಕಾರಿ
ಸಂತೇಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಅಕ್ರಮ ಧಾರ್ಮಿಕ ಕೇಂದ್ರವನ್ನಾಗಿಸಿಕೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಲ್ಲದೇ ಅಕ್ರಮ ವಾಸಿಗಳನ್ನು ಸ್ಥಳದಿಂದ ಖಾಲಿ ಮಾಡಿಸಿ ಶಾಲೆಯನ್ನು ನಮ್ಮ ಇಲಾಖೆಯ ವಶಕ್ಕೆ ಪಡೆಯಲಾಗುವುದು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಅಗತ್ಯ ಸಿದ್ಧತೆ ನಡೆಸುತ್ತಿರುವೆ.
– ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ
ಸಂತೇಬಾಚಹಳ್ಳಿ ಸರ್ಕಾರಿ ಉರ್ದು ಶಾಲೆಯಲ್ಲಿ ಧಾರ್ಮಿಕ ಮುಖಂಡರ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ನಮಗೆ ಶಿಕ್ಷಣ ಇಲಾಖೆಯಿಂದ ಅಥವಾ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ದೂರವಾಣಿ ಮುಖಾಂತರ ನಮಗೆ ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟ ದಾಖಲಾತಿಗಳನ್ನು ಹಾಜರುಪಡಿಸಿ ದೂರು ನೀಡಿದಲ್ಲಿ ಕಾನೂ ನಾತ್ಮಕವಾಗಿ ನಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆ.
– ಸುರೇಶ್, ಪಿಎಸ್‌ಐ, ಪಟ್ಟಣ ಪೊಲೀಸ್ ಠಾಣೆ, ಕೆ.ಆರ್.ಪೇಟೆ
ಬಾಬಯ್ಯನ ದೇವಸ್ಥಾನದ ಹೆಸರಿನಲ್ಲಿ ಸ್ವತ್ತು ಇದ್ದು, ಮಸೀದಿಯ ಎಲ್ಲಾ ಮುಖಂಡರು ಸೇರಿ ನಮ್ಮ ಗುರುಗಳಿಗೆ ಮನೆ ಮಾಡಿಕೊಟ್ಟಿದ್ದೇವೆ. ಶಾಲೆಯವರು ನಮ್ಮ ಸ್ವತ್ತಿನಲ್ಲಿ ಕಟ್ಟಡ ಕಟ್ಟಿದ್ದಾರೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ನಾವು ಶಾಲಾ ಕಟ್ಟಡವನ್ನು ಉಪಯೋಗಿಸಿ ಕೊಳ್ಳುತ್ತಿದ್ದೇವೆ.
– ಬಸೀರ್, ಮುಸ್ಲಿಂ ಸಮಾಜದ ಮುಖಂಡ
You seem to have an Ad Blocker on.
To continue reading, please turn it off or whitelist Udayavani.