![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 21, 2020, 5:00 PM IST
ಕೆ.ಆರ್.ಪೇಟೆ: ದಿನದಿಂದ ದಿನಕ್ಕೆ ಕೋವಿಡ್ 19 ವೈರಾಣುಗಳ ಪತ್ತೆ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ತುರ್ತು ಕಾರ್ಯಗಳಿದ್ದರೆ ಮಾತ್ರ ಕಚೇರಿಗಳಿಗೆ ಬರಬೇಕು ಎಂದು ತಹಶೀಲ್ದಾರ್ ಶಿವಮೂರ್ತಿ ಆದೇಶ ನೀಡಿದ್ದಾರೆ.
ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಸುಮ್ಮನೆ ಊರಿಂದೂರಿಗೆ ಸುತ್ತಾಗಿ ಅನಗತ್ಯವಾಗಿ ಸಮಸ್ಯೆ ತಂದುಕೊಳ್ಳುವುದು ಬೇಡ. ಕೋವಿಡ್ 19 ತಡೆಯಲು ಕೇವಲ ಸರ್ಕಾರಿ ಆದೇಶಗಳು, ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸಿದರೆ ಸಾಲದು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಾಗ್ರತೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಡಳಿತ ಈಗಾಗಲೇ ಗುಂಪು ಗುಂಪಾಗಿ ಜನ ಸೇರಬಾರದು ಎಂಬ ಸಾರ್ವಜನಿಕರ ಹಿತದೃಷ್ಟಿಯಿಂದ ದೇವಾಲಯ, ಚರ್ಚ್, ಮಸೀದಿಗಳಲ್ಲಿಯೂ ಪ್ರವೇಶ ನಿಷೇಧಿಸಿದೆ. ಮದುವೆ, ಸಭೆ, ಸಮಾರಂಭಗಳಲ್ಲಿಯೂ ಹೆಚ್ಚು ಜನ ಸೇರದಂತೆ ನೀತಿ ನಿಯಮ ವಿಧಿಸಿದೆ. ಇಷ್ಟೆಲ್ಲಾ ಕ್ರಮಗಳು ಕೈಗೊಂಡಿರುವುದು ಸಾರ್ವಜನಿಕರಿಗಾಗಿಯೇ ಎಂಬುದನ್ನು ನೀವು ಅರ್ಥ ಮಾಡಿಕೊಂಡು ಅನಗತ್ಯವಾಗಿ ಸಮಸ್ಯೆಗಳಿಗೆ ಕಾರಣರಾಗಬೇಡಿ ಎಂದು ಮನವಿ ಮಾಡಿದರು.
ಉಪ ನೊಂದಣಾಧಿಕಾರಿಗಳ ಕಚೇರಿ, ಪುರಸಭೆ, ತಾಪಂ ಸೇರಿದಂತೆ ತಾಲೂಕು ಕಚೇರಿಗೆ ಸಾರ್ವಜನಿಕರ ಭೇಟಿ ಕಡ್ಡಾಯ ನಿಷೇಧ ಮಾಡಲಾಗಿದೆ. ತುರ್ತು ಕೆಲಸ ಮಾಡಲೆಂದೇ ನಾವಿಲ್ಲಿದ್ದೇವೆ. ಆದರೆ ಅಧಿಕಾರಿಗಳು ಮತ್ತು ನೌಕರರು ಮಾತ್ರ ಕಚೇರಿಯ ಒಳಭಾಗದಲ್ಲಿ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.
ಮುಖ್ಯದ್ವಾರದಿಂದಲೇ ವಾಪಸ್: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಭೇಟಿ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಿಬ್ಬಂದಿ ಮುಂಜಾನೆಯೇ ಮುಖ್ಯದ್ವಾರವನ್ನೆ ಮುಚ್ಚಿ ಸಾರ್ವಜನಿಕರನ್ನು ಹೊರಭಾಗದಲ್ಲಿಯೆ ತಡೆದು ನಿಲ್ಲಿಸಿದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ವಿವಿಧ ಕೆಲಸಗಳಿಗೆಂದು ಬಂದಿದ್ದ ತಾಲೂಕಿನ ಗ್ರಾಮೀಣರು ಅಲ್ಲಿಂದ ಜಾಗ ಖಾಲಿಮಾಡಿದರು.
You seem to have an Ad Blocker on.
To continue reading, please turn it off or whitelist Udayavani.