ಜಿಲ್ಲೆಯಲ್ಲಿ ಆಲೆಮನೆ ಪಾಲಾಗುತ್ತಿರುವ ಕಬ್ಬು
ಟನ್ ಕಬ್ಬು ಕೇವಲ 1200 ರೂ.ಗೆ ಮಾರಾಟ • ಒಣಗುತ್ತಿರುವ ಕಬ್ಬಿನಿಂದ ಕಂಗಾಲಾಗಿರುವ ರೈತ
Team Udayavani, Jul 3, 2019, 11:23 AM IST
ಮಂಡ್ಯ ತಾಲೂಕಿನ ಜೀಗುಂಡಿ ಪಟ್ಟಣ ಸಮೀಪದ ಆಲೆಮನೆ ಬಳಿ ಸಂಗ್ರಹವಾಗಿರುವ ಕಬ್ಬಿನ
ಮಂಡ್ಯ: ನೀರಿಲ್ಲದೆ ಒಣಗುತ್ತಿರುವ ಕಬ್ಬು ಬೆಳೆನೋಡಲಾಗದೆ, ಬೆಳೆಗೆ ನೀರು ಹರಿಸದೆ ದ್ವೇಷ ಸಾಧಿಸುತ್ತಿ ರುವ ಸರ್ಕಾರದ ಧೋರಣೆಯನ್ನು ಸಹಿಸದೆ, ಸಕ್ಕರೆ ಕಾರ್ಖಾನೆಗಳ ಆರಂಭಕ್ಕಾಗಿ ಕಾಯದೆ ರೈತರು ತಾವು ಬೆಳೆದಿ ರುವ ಕಬ್ಬಿನೊಂದಿಗೆ ಆಲೆಮನೆಗಳ ಹಾದಿ ಹಿಡಿದಿದ್ದಾರೆ.
ಕೇಂದ್ರ ಸರ್ಕಾರ ಟನ್ ಕಬ್ಬಿಗೆ 2700 ರೂ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ನೀರಿನ ಕೊರತೆಯಿಂದ ಬೆಳೆ ಒಣಗುತ್ತಿರುವುದು ಹಾಗೂ ಸಕ್ಕರೆ ಕಾರ್ಖಾನೆಗಳು ಆರಂಭವಾಗುವ ಮುನ್ಸೂಚನೆಗಳು ಕಾಣುತ್ತಿಲ್ಲದ ಕಾರಣ, ಬಹುತೇಕ ರೈತರು ಕಬ್ಬನ್ನು ಆಲೆಮನೆಗಳಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ.
1200 ರೂ.ನಿಂದ 1400 ರೂ.ಗೆ ಮಾರಾಟ: ರೈತರು ತಾವೇ ತಮ್ಮ ಜಮೀನಿನಲ್ಲಿ ಬೆಳೆದಿರುವ ಕಬ್ಬನ್ನು ಕಡಿದು ಆಲೆಮನೆಗಳಿಗೆ ಸಾಗಿಸಿದರೆ ಟನ್ ಕಬ್ಬಿಗೆ 1800 ರೂ.ನಿಂದ 2200 ರೂ. ನೀಡಲಾಗುತ್ತಿದೆ. ಆಲೆಮನೆಯವರೇ ಜಮೀ ನಿಗೆ ಹೋಗಿ ಕಬ್ಬು ಕಟಾವು ಮಾಡಿಸಿ ತೆಗೆದುಕೊಂಡು ಬರುವುದಾದರೆ ಪ್ರತಿ ಟನ್ ಕಬ್ಬಿಗೆ 1200 ರೂ.ನಿಂದ 1400 ರೂ. ರೈತರ ಕೈ ಸೇರುತ್ತಿದೆ.
ಕಬ್ಬು ಕಡಿದ ಬಳಿಕ ಹತ್ತು ದಿನಗಳೊಳಗೆ ಸಾಗಿಸಿದರೆ ಪ್ರತಿ ಟನ್‌ಗೆ 600 ರೂ. ಪಾವತಿ ಮಾಡಲಾಗುತ್ತಿದ್ದು, ಆನಂತರ ಒಂದು ತಿಂಗಳೊಳಗೆ ಉಳಿದ ಹಣವನ್ನು ರೈತರಿಗೆ ಕೊಡುತ್ತಿದ್ದಾರೆ. ಎಫ್ಆರ್‌ಪಿ ಬೆಲೆಗೆ ಹೋಲಿಸಿದರೆ 500 ರೂ.ಗಳಿಂದ 900 ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಜಿಲ್ಲಾದ್ಯಂತ ಕಂಡು ಬರುತ್ತಿದೆ.
ಕಬ್ಬು ಕಟಾವು ಮಾಡಿ ಆಲೆಮನೆಗೆ ಸಾಗಣೆ ಮಾಡುವುದಕ್ಕೆ ಬೆಳೆಗಾರರಿಗೆ 350 ರೂ.ಗಳಿಂದ 650 ರೂ.ಗಳವರೆಗೆ ಖರ್ಚಾಗುತ್ತಿದೆ. ಮನೆಯವರೇ ನಿಂತು ಕಡಿದು ಅವರೇ ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದರೆ ಅವರಿಗೆ 250 ರೂ.ನಿಂದ 350 ರೂ. ಖರ್ಚು ಬೀಳುತ್ತಿದೆ. ಸದ್ಯ ಕಬ್ಬು ಕಟಾವು ಮಾಡುವುದಕ್ಕೆ ಸ್ಥಳೀಯವಾಗಿ ಕೂಲಿ ಆಳುಗಳೂ ಸಿಗುತ್ತಿಲ್ಲ. ಕೆಲವರು ಬಳ್ಳಾರಿ ಕಡೆಯಿಂದ ಕೂಲಿ ಆಳುಗಳನ್ನು ಕರೆಸಿ ಕಬ್ಬನ್ನು ಕಡಿಸಿ ಸಾಗಣೆ ಮಾಡುತ್ತಿದ್ದಾರೆ.
ಬೆಳೆದ ಬೆಳೆಗೆ ನೀರಿಲ್ಲ: 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 27,279 ಹೆಕ್ಟೇರ್ ಹಾಗೂ ಹಿಂಗಾರು ಹಂಗಾಮಿನಲ್ಲಿ 4598 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ಇದರಲ್ಲಿ 12 ತಿಂಗಳು ಪೂರೈಸಿರುವ ಕಬ್ಬೇ ಹೆಚ್ಚಾಗಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಮಂಕಾಗಿರುವುದರಿಂದ ಕಟಾವಿಗೆ ಬಂದಿರುವ ಕಬ್ಬು ಒಣಗುತ್ತಿದೆ. ಬೇಸಿಗೆ ಬೆಳೆಗೆ ಕಟ್ಟು ನೀರು ಪದ್ಧತಿಯಡಿ ನೀರು ಹರಿಸಿದ್ದರ ಪರಿಣಾಮ ಇಲ್ಲಿಯವರೆಗೆ ಕಬ್ಬು ಬೆಳೆ ಜೀವ ಉಳಿಸಿಕೊಂಡು ಬಂದಿತ್ತು.
ಅಂತಿಮ ಹಂತದಲ್ಲಿರುವ ಕಬ್ಬಿನ ಬೆಳೆಗೆ ಇನ್ನು ಒಂದೇ ಒಂದು ಕಟ್ಟು ನೀರು ಹರಿಸುವುದು ಅವಶ್ಯಕತೆ ಇದೆ. ಆ ನೀರು ಹರಿಸಿದರೆ ಬೆಳೆ ರೈತರ ಕೈಸೇರುತ್ತದೆ. ಅದಕ್ಕಾಗಿ ನೀರು ಹರಿಸುವಂತೆ ಅನ್ನದಾತರು ಪರಿಪರಿಯಾಗಿ ಅಂಗಲಾಚು ತ್ತಿದ್ದರೂ ಆಳುವವರ ಮನಸ್ಸು ಮಾತ್ರ ಕರಗುತ್ತಿಲ್ಲ.
ಅವಧಿ ಮೀರದ ಕಬ್ಬು ಕಟಾವು: ಮುಂದೆ ಬೆಳೆಗಳಿಗೆ ನೀರು ಸಿಗುವ ಸಾಧ್ಯತೆಗಳಿಲ್ಲದಿರುವುದನ್ನು ಮನಗಂಡಿರುವ ರೈತರು ಕಟಾವಿಗೆ ಬಂದಿರುವ ಬೆಳೆ ಹಾಗೂ ಅವಧಿ ಮೀರದಿರುವ ಕಬ್ಬನ್ನೇ ಕಟಾವು ಮಾಡಿ ಆಲೆಮನೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಕಬ್ಬನ್ನು ಜಮೀನಿನಲ್ಲೇ ಬಿಟ್ಟರೆ ಕಬ್ಬು ಮತ್ತಷ್ಟು ಒಣಗಿ ಇಳುವರಿ ಕುಂಠಿತಗೊಳ್ಳಬಹುದೆಂಬ ಆತಂಕ ಅವರನ್ನು ಕಾಡುತ್ತಿದೆ. ಅದಕ್ಕಾಗಿ ಕಬ್ಬನ್ನು ಕಡಿದು ಸಿಕ್ಕಷ್ಟು ಹಣಕ್ಕೆ ಮಾರಾಟ ಮಾಡುವ ನಿರ್ಧಾರ ಮಾಡಿದ್ದಾರೆ.
ಬೆಲ್ಲಕ್ಕೂ ಬೆಲೆ ಇಲ್ಲ: ಒಂದು ಕಾಲದಲ್ಲಿ ಇಂಡಿಯಾದಲ್ಲೇ ಹೆಸರಾಗಿದ್ದ ಮಂಡ್ಯ ಬೆಲ್ಲ ಈಗ ಆ ಪ್ರಖ್ಯಾತಿಯನ್ನು ಕಳೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಬೆಲ್ಲ 2600 ರೂ.ನಿಂದ 3000 ರೂ.ಗೆ ಮಾರಾಟವಾಗುತ್ತಿದೆ. ಉತ್ತಮವಾದ ಕಬ್ಬು ದೊರೆತರೆ ಬೆಲ್ಲದ ಗುಣಮಟ್ಟವೂ ಚೆನ್ನಾಗಿದ್ದು ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ.
ಪ್ರಸ್ತುತ ಆಲೆಮನೆಗಳಿಗೆ 10ರಿಂದ 11 ತಿಂಗಳ ಕಬ್ಬೇ ಹೆಚ್ಚಾಗಿ ಬರುತ್ತಿದೆ. ಇದರಲ್ಲಿ ಒಂದು ಟನ್‌ಗೆ 80ರಿಂದ 85 ಕೆಜಿ ಬೆಲ್ಲದ ಇಳುವರಿ ಬರುತ್ತಿದೆ. ಇದರ ಜೊತೆಗೆ ಸ್ವಲ್ಪ ಒಣಗಿರುವ ಕಬ್ಬು ಬರುತ್ತಿದೆ. ಹಾಗಾಗಿ ಉತ್ತಮ ಬೆಲ್ಲದ ಉತ್ಪಾದನೆಯನ್ನೂ ನಿರೀಕ್ಷಿಸದಂತಾಗಿದೆ. ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವುದಕ್ಕೂ ಆಳುಗಳು ಸಿಗುತ್ತಿಲ್ಲ. ಉತ್ತರ ಪ್ರದೇಶದಿಂದ ಆಳುಗಳನ್ನು ಕರೆಸಿ ಬೆಲ್ಲ ತಯಾರಿಸುವುದು ಅನಿವಾರ್ಯವಾಗಿದೆ.
ಮಂಡ್ಯ ಬೆಲ್ಲಕ್ಕೆ ಹೆಚ್ಚಿನ ಬೆಲೆ ಇಲ್ಲ. ಅವಧಿ ಮೀರಿದ ಹಾಗೂ ಒಣಗಿದ ಕಬ್ಬನ್ನು ಪಡೆಯು ವುದರಿಂದ ನಮಗೂ ಲಾಭ ಸಿಗುವುದಿಲ್ಲ. ನಷ್ಟದಲ್ಲೂ ನಾವು ಆಲೆಮನೆ ನಡೆಸುವಂತಾಗಿದೆ ಎಂದು ಜೀಗುಂಡಿಪಟ್ಟಣದ ಆಲೆಮನೆ ಮಾಲೀಕ ನವೀನ್‌ಕುಮಾರ್ ಹೇಳುತ್ತಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಬ್ಬಿದೆ. ಮುಂದೆ ನೀರಿನ ಕೊರತೆ ಉಂಟಾಗಿ ಕಬ್ಬಿಗೆ ದರ ಸಿಗದಿರಬಹುದು ಎಂಬ ಕಾರಣಕ್ಕೆ ರೈತರು ಆತುರಾತುರವಾಗಿ ಕಬ್ಬನ್ನು ಕಡಿದು ಆಲೆಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ನಷ್ಟವಾಗುತ್ತಿದ್ದರೂ ಕಬ್ಬು ಉರು ವಲಾಗುವುದರಿಂದ ತಪ್ಪಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಬಾಳಿನುದ್ದಕ್ಕೂ ಕಹಿ: ಸಿಹಿ ಕಬ್ಬನ್ನು ಬೆಳೆದು ಬಾಳಿನುದ್ದಕ್ಕೂ ಕಹಿಯನ್ನೇ ಅನುಭವಿಸುವುದು ಜಿಲ್ಲೆಯ ರೈತರಿಗೆ ಮಾಮೂಲಾಗಿದೆ. ಎದೆಯುದ್ದ ಕಬ್ಬು, ಮಂಡಿಯುದ್ದ ಸಾಲ ಎಂಬ ಮಾತು ಸ್ಥಳೀಯರಿಗೆ ಅಕ್ಷರಶಃ ಒಪ್ಪುವಂತಿದೆ.
ದಶಕದಿಂದ ಕಬ್ಬು ಬೆಳೆದ ಯಾವ ರೈತರೂ ತಮ್ಮ ಬದುಕನ್ನು ಬಂಗಾರವಾಗಿಸಿಕೊಂಡಿಲ್ಲ. ವರ್ಷಪೂರ್ತಿ ಕಷ್ಟಪಟ್ಟು ಕಬ್ಬು ಬೆಳೆಯುವ ರೈತರು ನಂತರ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುತ್ತಾರೆ. ಆನಂತರದಲ್ಲಿ ಹಣಕ್ಕಾಗಿ ತಿಂಗಳಾನುಗಟ್ಟಲೆ ಹೋರಾಟ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಹೀಗಾಗಿ ಕಬ್ಬು ಬೆಳೆಗಾರರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.