ಕಬ್ಬು ಖರೀದಿಯಲ್ಲಿ ದಲ್ಲಾಳಿಗಳ ದರ್ಬಾರ್!
ಹಂಚಿಕೆಯಾಗದ ಮೈಷುಗರ್, ಪಿಎಸ್‌ಎಸ್‌ಕೆ ಕಬ್ಬು • ರೈತರಿಗೆ ಕಹಿ, ಮಧ್ಯವರ್ತಿಗಳಿಗೆ ಸಿಹಿ
Team Udayavani, Aug 20, 2019, 5:21 PM IST
ಮಂಡ್ಯ: ಜಿಲ್ಲೆಯೊಳಗೆ ಕಬ್ಬು ಖರೀದಿಯಲ್ಲಿ ದಲ್ಲಾಳಿಗಳ ದರ್ಬಾರ್. ಟನ್ ಕಬ್ಬು ಕೇವಲ 1400 ರೂ.ನಿಂದ 1700 ರೂ. ಮಾರಾಟ, ಕಬ್ಬು ಕಡಿಯಲು ಸಿಗದ ಕೂಲಿಯಾಳುಗಳು, ಕಾರ್ಖಾನೆಗಳಿಗೆ ಹಂಚಿಕೆಯಾದರೂ ಸಮರ್ಪಕವಾಗಿ ರವಾನೆಯಾಗದ ಪಿಎಸ್‌ಎಸ್‌ಕೆ ಹಾಗೂ ಮೈಷುಗರ್ ವ್ಯಾಪ್ತಿಯ ಕಬ್ಬು, ವಿಧಿಯಿಲ್ಲದೆ ಸಿಕ್ಕಷ್ಟು ಬೆಲೆಗೆ ಕಬ್ಬು ಕೊಟ್ಟು ಗದ್ದೆ ಖಾಲಿ ಮಾಡುತ್ತಿರುವ ರೈತರು.
ಇದು ಸಿಹಿ ಕಬ್ಬು ಬೆಳೆದವರ ಕಹಿ ಅನುಭವದ ಗೋಳಿನ ಕತೆ. ಪ್ರತಿ ಬಾರಿ ಕಷ್ಟಪಟ್ಟು ಬೆಳೆದ ಕಬ್ಬನ್ನು ಕಂಪನಿಗೆ ಕೊಟ್ಟು ಹಣಕ್ಕಾಗಿ ವರ್ಷವಿಡಿ ಹೋರಾಟ ಮಾಡುವುದು ವಾಡಿಕೆಯಾಗಿ ಬೆಳೆದುಬಂದಿರುವ ಸಂಪ್ರದಾಯ. ಈವರೆಗೆ ಕಾರ್ಖಾನೆಯವರ ಕಪಿಮುಷ್ಠಿಯೊಳಗೆ ಮಾತ್ರ ಸಿಲುಕಿದ್ದ ರೈತರು, ಈ ವರ್ಷ ಮಧ್ಯವತಿಗಳ ಹಿಡಿತಕ್ಕೂ ಸಿಲುಕಿ ಅರಣ್ಯರೋಧನ ಅನುಭವಿಸುತ್ತಿದ್ದಾರೆ.
1400 ರೂ.ನಿಂದ 1700 ರೂ.ಗೆ ಮಾರಾಟ: ಈ ವರ್ಷ ಮೈಷುಗರ್ ಕಾರ್ಖಾನೆ ಕಬ್ಬು ಅರೆಯಲಾಗದ ಸ್ಥಿತಿಯಲ್ಲಿದ್ದರೆ, ಪಿಎಸ್‌ಎಸ್‌ಕೆ ಕಾರ್ಖಾನೆಯೂ 2 ವರ್ಷಗಳಿಂದ ಸ್ಥಗಿತಗೊಂಡಿದೆ. ಎರಡೂ ಕಂಪನಿಗಳ ವ್ಯಾಪ್ತಿಯಲ್ಲೂ ಲಕ್ಷಾಂತರ ಟನ್ ಕಬ್ಬು ಬೆಳೆದು ನಿಂತಿದೆ. ಬೆಳೆದು ನಿಂತಿರುವ ಕಬ್ಬನ್ನು ಜಿಲ್ಲಾಡಳಿತ ಇದುವರೆಗೂ ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಜವಾಬ್ದಾರಿ ಕಳೆದುಕೊಂಡಿದೆಯೇ ವಿನಃ ಆ ಕಬ್ಬು ಸಕಾಲದಲ್ಲಿ ಕಾರ್ಖಾನೆಗೆ ರವಾನೆಯಾಗುತ್ತಿದೆಯೇ, ಕಬ್ಬು ಕಡಿಯುವ ಹಾಗೂ ಸಾಗಣೆಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳೇನು ಎಂಬ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇಲ್ಲಿ ರೈತರ ಹಿತಾಸಕ್ತಿಯನ್ನು ಜಿಲ್ಲಾಡಳಿತ ಮರೆತಿರುವುದರಿಂದ ದಲ್ಲಾಳಿಗಳಿಗೆ ಸುಗ್ಗಿಯಾಗಿ ಪರಿಣಮಿಸಿದೆ.
ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 2613 ರೂ.ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ಕಬ್ಬು ಖರೀದಿಸಿ ಕಾರ್ಖಾನೆಗೆ ಸಾಗಿಸುವ ಮೂಲಕ ಹೆಚ್ಚು ಹಣ ಗಳಿಸುತ್ತಾ ರೈತರನ್ನು ಶೋಷಣೆ ಮಾಡುತ್ತಿದ್ದಾರೆ.
ಫೀಲ್ಡ್ಮನ್‌ಗಳು ಶಾಮೀಲು: ರೈತರಿಂದ ಕಬ್ಬನ್ನು ಖರೀದಿ ಮಾಡುವುದಕ್ಕೆ ಮಧ್ಯವರ್ತಿಗಳು ವಿವಿಧ ಕಂಪನಿಗಳ ಫೀಲ್ಡ್ಮನ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ರೈತರನ್ನು ಸಂಪರ್ಕಿಸಿ ಕಬ್ಬಿಗೆ ಬೆಲೆ ಕಟ್ಟುತ್ತಾರೆ. ಫೀಲ್ಡ್ ಮನ್‌ಗಳ ಮೂಲಕ ರೈತನ ಹೆಸರಿನಲ್ಲಿ ಪರ್ಮಿಟ್ ಪಡೆದು ಕಬ್ಬು ಕಟಾವು ಮಾಡಿಸಿಕೊಂಡು ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಇದಲ್ಲಿ ಫೀಲ್ಡ್ಮನ್‌ಗಳಿಗೆ ಪರ್ಸೆಂ ಟೇಜ್ ನೀಡುತ್ತಾ ದಲ್ಲಾಳಿಗಳೂ ಬಂಡವಾಳವಿಲ್ಲದೆ ಹಣ ಜೇಬಿಗಿಳಿಸುತ್ತಿದ್ದಾರೆ.
ಕೂಲಿಯಾಳುಗಳ ಕೊರತೆ: ಕಬ್ಬು ಕಡಿಯುವುದಕ್ಕೆ ಮುಖ್ಯವಾಗಿ ಕೂಲಿಯಾಳುಗಳ ಸಮಸ್ಯೆ ರೈತರನ್ನು ಕಾಡುತ್ತಿದೆ. ಕಬ್ಬು ಕಡಿಯಲು ಉತ್ತರ ಕರ್ನಾಟಕದಿಂದ ವಿವಿಧ ಕಂಪನಿಗಳವರು ಕೂಲಿಯಾಳುಗಳನ್ನು ಕರೆ ತಂದಿದ್ದಾರೆ. ಇವರು ಕಂಪನಿ ಸೂಚಿಸುವ ಕಬ್ಬು ಮಾತ್ರ ಕಡಿಯಲು ಬರುತ್ತಾರೆ. ಸ್ಥಳೀಯ ಕೂಲಿಯಾಳುಗಳೂ ರೈತರಿಗೆ ಸಿಗುತ್ತಿಲ್ಲ ಇದು ಕಬ್ಬು ಬೆಳೆದವರನ್ನು ಹೈರಾಣಾಗುವಂತೆ ಮಾಡಿದೆ. ಇಂತಹ ಸನ್ನಿವೇಶದಲ್ಲಿ ಕಬ್ಬು ಗದ್ದೆಯಲ್ಲೇ ಒಣಗಿ ಬೆಂಡಾಗುವುದನ್ನು ನೋಡಲಾಗದೆ ರೈತರು ಸಿಕ್ಕಷ್ಟು ಬೆಲೆಗೆ ಕಬ್ಬನ್ನು ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ಇದರ ಜೊತೆಗೆ ರೈತರ ಮತ್ತೂಂದು ಸಮಸ್ಯೆ ಏನೆಂದರೆ ಹಲ ರೈತರು ಕಬ್ಬನ್ನು ಸಾಗಣೆ ಮಾಡುವುದಕ್ಕೆ ಬೇರೆಯವರ ಜಮೀನನ್ನೇ ಅವಲಂಬಿಸಿದ್ದಾರೆ. ಕಬ್ಬು ಸಾಗಿಸಲು ಅವಲಂಬಿಸಿರುವ ಜಮೀನಿನವರು ಕಬ್ಬಿನ ನಾಟಿ ಆರಂಭಿಸುವುದರೊಳಗೆ ಕಬ್ಬು ಸಾಗಣೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅವರ್ಯಾರೂ ಜಿಲ್ಲಾಡಳಿತ ಕಂಪನಿಗಳಿಗೆ ಕಬ್ಬು ಹಂಚಿಕೆ ಮಾಡುವವರೆಗೆ ಕಾದುಕೂರಲು ತಯಾರಿಲ್ಲ. ಅದಕ್ಕಾಗಿ ಮಧ್ಯವರ್ತಿಗಳು ಹೇಳಿದ ಬೆಲೆಗೆ ಕಬ್ಬನ್ನು ಕೊಟ್ಟುಬಿಡುವ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.
ಒಪ್ಪಿಗೆಯಾಗದ ಕಬ್ಬಿಗೆ ಪ್ರಾಶಸ್ತ್ಯ: ಜಿಲ್ಲೆಯಲ್ಲಿರುವ ಕಬ್ಬು ಅರೆಯುವಿಕೆ ಆರಂಭಿಸಿರುವ ಐಸಿಎಲ್, ಚಾಂಷುಗರ್ ಹಾಗೂ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗಳು ಒಪ್ಪಿಗೆ ಕಬ್ಬು ಅರೆಯುವುದಕ್ಕೆ ನೀಡುವ ಮಹತ್ವಕ್ಕಿಂತ ಒಪ್ಪಿಗೆಯಾಗದಿರುವ ಕಬ್ಬನ್ನು ಅರೆಯುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಒಪ್ಪಿಗೆ ಮಾಡಿಕೊಂಡಿರುವ ಕಬ್ಬನ್ನು ಯಾವಾಗ ಬೇಕಾದರೂ ಅರೆಯಬಹುದು. ಆ ರೈತರು ಕಂಪನಿಗೆ ಕಬ್ಬು ನೀಡದೆ ಬೇರೆಲ್ಲೂ ಸಾಗಣೆ ಮಾಡುವುದಿಲ್ಲವೆಂಬ ದೃಢ ವಿಶ್ವಾಸ ಕಂಪನಿಯವರಲ್ಲಿದೆ. ಅಲ್ಲದೆ, ಕಬ್ಬು ಅರೆಯುವಲ್ಲಿ ಪೈಪೋಟಿಗಿಳಿದಿರುವ ಮೂರು ಕಂಪನಿಗಳು ಹೆಚ್ಚು ಕಬ್ಬನ್ನು ಪಡೆದು ಶೀಘ್ರ ಅರೆದು ಮುಗಿಸಲು ಮುಂದಾಗಿವೆ. ಅದಕ್ಕಾಗಿ ಸಾಧ್ಯವಾದಷ್ಟು ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ವ್ಯಾಪ್ತಿಯ ಕಬ್ಬಿಗೆ ಲಗ್ಗೆ ಇಟ್ಟಿವೆ ಎಂದು ಹೇಳಲಾಗುತ್ತಿದೆ.
ಇಳುವರಿ ನಷ್ಟದ ಆತಂಕ: ಒಪ್ಪಿಗೆ ಕಬ್ಬನ್ನು ಅರೆ ಯುವುದಕ್ಕೆ ಕಂಪನಿಗಳು ವಿಳಂಬ ಮಾಡುತ್ತಿ ರುವುದರಿಂದ ಕಂಪನಿ ವ್ಯಾಪ್ತಿಯ ಕಬ್ಬು ಬೆಳೆಗಾರರು ಇಳುವರಿ ನಷ್ಟವಾಗುವ ಆತಂಕ ಎದುರಿಸುತ್ತಿದ್ದಾರೆ. 14 ತಿಂಗಳು ಕಳೆದಿರುವ ಕಬ್ಬನ್ನು ಅರೆಯದೆ 11 ತಿಂಗಳ ಕಬ್ಬನ್ನು ಅರೆಯುವುದಕ್ಕೆ ಮುಂದಾಗಿರುವ ಆಡಳಿತ ಮಂಡಳಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಫೀಲ್ಡ್ಮನ್‌ಗಳು ಹಾಗೂ ಮಧ್ಯವರ್ತಿಗಳ ಹಿಡಿತಕ್ಕೆ ಸಿಲುಕಿ ಕಬ್ಬು ಬೆಳೆಗಾರರು ನಲುಗುತ್ತಿದ್ದಾರೆ. ಸರ್ಕಾರದ ಸುಳ್ಳು ಭರವಸೆ, ಜನಪ್ರತಿನಿಧಿಗಳ ಬೇಜವಾಬ್ದಾರಿತನ, ವ್ಯವಸ್ಥೆ ಯೊಳಗಿನ ಲೋಪವನ್ನೆಲ್ಲಾ ಕಂಡು ಅಸಹಾಯಕ ರಾಗಿರುವ ಕಬ್ಬಿಗರು ಸಂಕಷ್ಟದಿಂದ ಪಾರಾಗುವ ಮಾರ್ಗ ಕಾಣದೆ ಪರದಾಡುತ್ತಿರುವುದಂತೂ ಸುಳ್ಳಲ್ಲ.
● ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.