ಸಕ್ಕರೆ ಜಿಲ್ಲೆ ಸಮಸ್ಯೆಗೆ ಸ್ಪಂದಿಸದ ಕೇಂದ್ರ ಬಜೆಟ್
Team Udayavani, Feb 1, 2019, 7:04 AM IST
ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಮೂರು ವರ್ಷ ಸತತ ಬರಗಾಲದ ಸುಳಿಗೆ ಸಿಲುಕಿದ ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆ ಸಾಲ ಮನ್ನಾ ಆಗಬಹುದೆಂಬ ನಿರೀಕ್ಷೆಯಲ್ಲಿ ಶಬರಿಯಂತೆ ಕಾದು ಕುಳಿತರು. ಟನ್ ಕಬ್ಬಿಗೆ 3000 ರೂ. ಸಿಗಬಹುದೆಂಬ ಕನಸು ಕಂಡರು. ಸಕ್ಕರೆ ಜಿಲ್ಲೆಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬ ಹುದೆಂಬ ಕುತೂಹಲದಲ್ಲಿದ್ದರು.
ಇವುಗಳಲ್ಲಿ ಯಾವೊಂದು ಬೇಡಿಕೆಗೂ ಕೇಂದ್ರಸರ್ಕಾರ ಕಿವಿಗೊಡಲಿಲ್ಲ, ರೈತರ ಬದುಕು ಉದ್ಧಾರವಾಗಲೂ ಇಲ್ಲ. ಕೇಂದ್ರದ ಈ ರೈತ ವಿರೋಧಿ ನಿಲುವಿನ ಬಗ್ಗೆ ಜಿಲ್ಲೆಯ ಅನ್ನದಾತರಲ್ಲಿ ಆಕ್ರೋಶವಿದೆ. ಬಿಜೆಪಿ ನೇತೃತ್ವದ ಪಂಜಾಬ್, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಿದ ಕೇಂದ್ರ ಸರ್ಕಾರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿರುವ ಕರ್ನಾಟಕದ ಬಗ್ಗೆ ಮಾತ್ರ ಮಲತಾಯಿ ಧೋರಣೆ ತಳೆಯಿತು. ಇದು ರೈತರ ಶಾಪಕ್ಕೆ ಕಾರಣವಾಯ್ತು.
2,761 ಕೋಟಿ ರೂ. ಸಾಲದ ಹೊರೆ: ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದ ಮಂಡ್ಯ ಜಿಲ್ಲೆಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯಸರ್ಕಾರದ ಮೂಲಕ ಅನ್ನದಾತರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕಿತ್ತು. ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳಲ್ಲಿನ ರೈತರನ್ನು ಸಾಲದಿಂದ ಋಣಮುಕ್ತರನ್ನಾಗಿ ಮಾಡುವುದಕ್ಕೆ ತೋರಿದ ಒಲವನ್ನು ಕರ್ನಾಟಕದ ರೈತರ ಮೇಲೂ ತೋರಿದ್ದರೆ ಉದಾತ್ತ ಕೊಡುಗೆ ನೀಡಿ ದಂತಾಗುತ್ತಿತ್ತು. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1.08 ಲಕ್ಷ ರೈತರು 2,761 ಕೋಟಿ ರೂ. ಸಾಲ ಪಡೆದಿದ್ದಾರೆ.
ಆ ರಾಜ್ಯಗಳಿಗೆ ನೀಡಿದ ಮಾದರಿಯಲ್ಲೇ ಹಣಕಾಸಿನ ನೆರವನ್ನು ನೀಡಿ ಲಕ್ಷಾಂತರ ರೈತರಿಗೆ ಹೊಸ ಬದುಕನ್ನು ಸೃಷ್ಟಿಸಿಕೊಡುವ ಅವಕಾಶವಿತ್ತು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಸಾಲ ಮನ್ನಾಗೆ ಆಸಕ್ತಿ ತೋರದೆ ಅಲ್ಲಿ ರಾಜಕೀಯ ಮಾಡುವುದರೊಂದಿಗೆ ರೈತರ ಕೆಂಗಣ್ಣಿಗೆ ಗುರಿಯಾಯಿತು.
ವೈಜ್ಞಾನಿಕ ಅಧ್ಯಯನ ಕೇಂದ್ರವಿಲ್ಲ: ರೈತರಿಗೆ ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನದ ತಿಳಿವಳಿಕೆ ನೀಡಲಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವಲ್ಲೂ ಹಿಂದೆ ಬಿದ್ದಿತು. ಕಬ್ಬು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದರೂ ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ ಕೇಂದ್ರದ ಸ್ಥಾಪನೆಗೆ ಒಲವು ತೋರಲಿಲ್ಲ. ಕಬ್ಬಿನ ಉತ್ಪನ್ನಗಳು ಹೆಚ್ಚು ಬಳಕೆಯಾಗು ವುದರೊಂದಿಗೆ ರೈತರಿಗೆ ಹೆಚ್ಚಿನ ಆದಾಯ ಸೃಷ್ಟಿಸಿಕೊಡುವ ಪ್ರಯತ್ನಗಳನ್ನಾಗಲೀ, ಮೊಲಾಸಸ್ ಬಳಕೆ ಬಗ್ಗೆ ತಿಳಿವಳಿಕೆ ಹಾಗೂ ಅದಕ್ಕೆ ಪೂರಕವಾಗುವ ಉದ್ಯಮಗಳನ್ನು ತೆರೆಯುವುದಕ್ಕೂ ಮನಸ್ಸು ಕೊಡಲಿಲ್ಲ. ಸಹ ವಿದ್ಯುತ್, ಎಥನಾಲ್ ಘಟಕಗಳನ್ನ ಬರ ಪೀಡಿತ ಮಂಡ್ಯ ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದರೆ ಹೆಚ್ಚಿನ ಅಭಿವೃದ್ಧಿಯಾಗುತ್ತಿತ್ತು.
ಸ್ಮಾರ್ಟ್ ಸಿಟಿಗೆ ತರಲಿಲ್ಲ: ಮಂಡ್ಯ ನಗರ ಇಂದಿಗೂ ದೊಡ್ಡ ಹಳ್ಳಿಯಂತೆಯೇ ಇದೆ. ಈ ನಗರವನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದರೊಂದಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು. ಇದರಿಂದ ಯುವಕರ ವಲಸೆ ತಪ್ಪಿ, ಸ್ಥಳೀಯವಾಗಿ ಉದ್ಯೋಗ ಸಿಗುವ ವಾತಾವರಣ ನಿರ್ಮಾಣವಾಗುತ್ತಿತ್ತು. ಪರ್ಯಾಯ ಇಂಧನಗಳ ಬಳಕೆ ಯೋಜನೆಗಳನ್ನು ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದರೆ ಪ್ರಗತಿ ಪಥದಲ್ಲಿ ಮುನ್ನಡೆಯಲು ಅವಕಾಶ ಸಿಗುತ್ತಿತ್ತು.
ಮಂಡ್ಯ ಜಿಲ್ಲೆಯನ್ನು ರಾಜ್ಯ ಬಿಜೆಪಿ ಸಂಸದರಾದಿಯಾಗಿ, ಕೇಂದ್ರದ ಯಾವುದೇ ನಾಯಕರಿಗೂ ಬೇಡವಾದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ ಎಂಬ ಸತ್ಯ ಕಂಡುಕೊಂಡಿರುವ ಬಿಜೆಪಿ ಸಂಸದರೂ ಸಹ ಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿ ಮಹತ್ವದ ಕೊಡುಗೆಯನ್ನು ದೊರಕಿಸಿಕೊಡುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಜೆಡಿಎಸ್ ಸಂಸದರೂ ಕೇಂದ್ರದಿಂದ ಹೊಸ ಕೊಡುಗೆಯನ್ನು ಜಿಲ್ಲೆಗೆ ತರುವ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಹೀಗಾಗಿ ಜಿಲ್ಲೆಯ ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದೆ.
14.25 ಟಿಎಂಸಿ ದೊರಕಿದ ನೆಮ್ಮದಿ: ಕಾವೇರಿ ನದಿ ನೀರು ಹಂಚಿಕೆಯಲ್ಲಿ 14.25 ಟಿಎಂಸಿ ನೀರು ರಾಜ್ಯಕ್ಕೆ ದೊರಕಿದ್ದು ಕಾವೇರಿ ಕಣಿವೆ ಪ್ರದೇಶದ ರೈತರಿಗೆ ತುಸು ನೆಮ್ಮದಿ ದೊರಕಿಸಿದೆ. ತಮಿಳುನಾಡಿಗೆ ಈ ನೀರಿನ ಹಂಚಿಕೆಯನ್ನು ಕಡಿಮೆ ಮಾಡುವ ಮೂಲಕ ನೀರಿನ ಹೊರೆಯನ್ನು ಇಳಿಸಿದೆ. ಇನ್ನೂ ರಾಜ್ಯಕ್ಕೆ ಸಿಗಬೇಕಾದ ನೀರಿನ ಹಕ್ಕು ದೊರಕಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಲೇ ಇದೆ.
ಆದರ್ಶ ಗ್ರಾಮಗಳಾಗಲಿಲ್ಲ: ಸಂಸದರ ಆದರ್ಶ ಗ್ರಾಮ ಯೋಜನೆ ಹೆಸರಿನಲ್ಲಿ ಗುರುತಿಸಲಾದ ಗ್ರಾಮಗಳೂ ಆದರ್ಶವಾಗುವಂತೆ ಬೆಳವಣಿಗೆಯನ್ನೇ ಕಾಣಲಿಲ್ಲ. ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರು ಹಾಗೂ ಮಂಡ್ಯ ತಾಲೂಕಿನ ಮಾರನಚಾಕನಹಳ್ಳಿ ಗ್ರಾಮಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗಿತ್ತು. ಆದರೆ, ಎರಡೂ ಗ್ರಾಮಗಳಲ್ಲೂ ಪ್ರಗತಿ ಕುಂಠಿತಗೊಂಡಿದೆ. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗೇ ಉಳಿದಿದೆ.
ಜಿಎಸ್‌ಟಿ ಹೊರೆಯಾದ ಕೋಪ: ಏಕರೂಪ ತೆರಿಗೆಯನ್ನು ಜಾರಿಗೊಳಿಸುವ ಮಹದುದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಜಿಎಸ್‌ಟಿ ಜನಸಾಮಾನ್ಯರಿಗೆ ತೀವ್ರ ಹೊರೆಯಾಗಿ ಪರಿಣಮಿಸಿರುವ ಆಕ್ರೋಶಕ್ಕೂ ಕೇಂದ್ರ ಗುರಿ ಯಾಗಿದೆ. ಜಿಎಸ್‌ಟಿ ಬಗ್ಗೆ ಇದುವರೆಗೂ ಸ್ಪಷ್ಟವಾದ ಚಿತ್ರಣವೇ ದೊರಕಿಲ್ಲ. ಜಿಎಸ್‌ಟಿಯಿಂದಲೇ ಗೃಹೋಪ ಯೋಗಿ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕೂಡ ಜನರನ್ನು ಬಾಧಿಸಿರುವ ಬಗ್ಗೆಯೂ ಕೇಂದ್ರದ ಬಗ್ಗೆ ಕೋಪವಿದೆ.
* ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.