ಮಂಡ್ಯದಲ್ಲೇ ಮನೆ ಕಟ್ತೀವಿ ಅಂದವರು ಮಾಯವಾದ್ರು!
16 ದಿನಗಳಿಂದ ಬಾಡಿಗೆ ಮನೆಗೂ ಬಾರದ ಸುಮಲತಾ • ತೋಟದ ಮನೆ ಮಾಡ್ತೇನೆ ಎಂದ ನಿಖೀಲ್ ಸಹ ನಾಪತ್ತೆ
Team Udayavani, May 5, 2019, 11:45 AM IST
ಮಂಡ್ಯ: ಚುನಾವಣಾ ಪೂರ್ವದಲ್ಲಿ ಮಂಡ್ಯದಲ್ಲೇ ಮನೆ ಕಟ್ಟಿಸುತ್ತೇವೆ, ಜಮೀನು ಖರೀದಿಸಿ ತೋಟದ ಮನೆಯಲ್ಲೇ ವಾಸ ಮಾಡುವೆ ಎಂದೆಲ್ಲಾ ಜನರಿಗೆ ಭರವಸೆಗಳನ್ನು ನೀಡಿದ್ದ ರಾಜಕಾರಣಿಗಳೆಲ್ಲರೂ ಇದೀಗ ಜಿಲ್ಲೆಯಿಂದಲೇ ನಾಪತ್ತೆಯಾಗಿದ್ದಾರೆ. ಚುನಾವಣಾ ಸಮಯದಲ್ಲಿ ಮಾತಿನಲ್ಲೇ ಮನೆ ಕಟ್ಟಿದವರು ಈಗ ಎಲ್ಲಿ ಹೋದರು ಎನ್ನುವುದು ಜನಸಾಮಾನ್ಯ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.
ಚುನಾವಣೆ ಮುಗಿದು 16 ದಿನಗಳಾಗಿವೆ. ಮತದಾರರಿಗೆ ಕೃತಜ್ಞತೆ ಹೇಳುವುದಕ್ಕೆ ರಾಜಕಾರಣಿಗಳು ಬಂದು ಹೋಗಿದ್ದೆಷ್ಟೋ ಅಷ್ಟೇ. ಆನಂತರ ಮದುವೆ ಹೆಸರಿನಲ್ಲಿ ಜಿಲ್ಲೆಗೆ ಹೀಗೆ ಬಂದು ಹಾಗೆ ಹೋದರು. ಸದಾಕಾಲ ಜನರೊಟ್ಟಿಗೆ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ, ಜನರ ಮಧ್ಯೆ ಇರುತ್ತೇವೆ ಎಂದವರೆಲ್ಲರೂ ಈಗ ಜನರನ್ನು ಬಿಟ್ಟು ರಾಜಧಾನಿ ಸೇರಿಕೊಂಡಿದ್ದಾರೆ.
ಒಂದು ದಿನವೂ ಉಳಿಯಲಿಲ್ಲ: ಚುನಾವಣೆಗೂ ಮುನ್ನ ನಾನು ಮಂಡ್ಯದ ಸೊಸೆ, ಈ ಮಣ್ಣಿನ ಮಗಳು ಎಂಬೆಲ್ಲಾ ಡೈಲಾಗ್ ಹೊಡೆದಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಡ್ಯದಲ್ಲಿ ಬಾಡಿಗೆ ಪಡೆದಿರುವ ಮನೆಯಲ್ಲಿ ಒಂದು ದಿನವೂ ಬಂದು ಉಳಿದು ಕೊಳ್ಳಲಿಲ್ಲ. ಚುನಾವಣಾ ಪ್ರಚಾರ ಸಮಯದಲ್ಲಿ ನಿತ್ಯವೂ ಕಾಣಿಸಿಕೊಳ್ಳುತ್ತಿದ್ದವರು ಈಗಂತೂ ಜಿಲ್ಲೆಯ ಯಾವ ಮೂಲೆಯಲ್ಲೂ ಕಾಣಸಿಗುತ್ತಿಲ್ಲ. ಪ್ರಚಾರದ ಸಮಯದಲ್ಲಿ ನಿಮ್ಮ ಸೇವೆ ಮಾಡುವುದಕ್ಕೆ ಅವಕಾಶ ನೀಡಿ ಎಂದು ಗೋಗರೆಯುತ್ತಿದ್ದವರು ಈಗ ಯಾರಿಗೂ ಸಿಗದಂತಾಗಿದ್ದಾರೆ.
ನಿಖೀಲ್ ನಾಪತ್ತೆ: ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್ಕುಮಾರಸ್ವಾಮಿ, ಜಿಲ್ಲೆಯ ಜನರು ತಮ್ಮ ಹೃದಯದಲ್ಲಿ ನನ್ನ ತಾತ ಹಾಗೂ ತಂದೆ ಸ್ಥಾನ ನೀಡಿದ್ದಾರೆ. ಅದರಂತೆ ನನಗೂ ಒಂದು ಸ್ಥಾನ ಕೊಡಿ. ನಿಮ್ಮ ಗುಲಾಮನಾಗಿ ಕೆಲಸ ಮಾಡುತ್ತೇನೆ ಎಂದು ಬಡಬಡಿಸಿದ್ದರು. ಅಲ್ಲದೆ, ನಿಮ್ಮೂರಿನಲ್ಲೇ ಕಚೇರಿ ತೆರೆಯುತ್ತೇನೆ. ಮಂಡ್ಯ ಸಮೀಪದಲ್ಲೇ ಜಮೀನು ಖರೀದಿಸಿ ತೋಟದ ಮನೆ ಮಾಡುತ್ತೇನೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಕಷ್ಟ-ಸುಖಗಳಿಗೆಲ್ಲಾ ಸ್ಪಂದಿಸುತ್ತೇನೆ ಎಂದು ಚುನಾವಣೆ ವೇಳೆ ನಿಖೀಲ್ ಬಡಾಯಿ ಕೊಚ್ಚಿಕೊಂಡಿದ್ದರು. ಚುನಾವಣೆ ಮುಗಿದ ಮೇಲೆ ಅವರೂ ನಾಪತ್ತೆಯಾಗಿದ್ದಾರೆ. ಅವರು ಯಾರ ಕೈಗೂ ಸಿಗುತ್ತಿಲ್ಲ. ಜಿಲ್ಲೆಯ ಜನರು ಈಗ ನಿಖೀಲ್ ಎಲ್ಲಿದ್ದೀಯಪ್ಪ…! ಎಂದು ಕೇಳುವಂತಹ ಪರಿಸ್ಥಿತಿ ಸೃಷ್ಠಿಯಾಗಿದೆ.
ರೈತರ ಗೋಳು ಕೇಳ್ಳೋರಿಲ್ಲ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಬಿರುಗಾಳಿ ಮಳೆಗೆ ರೈತರು ಬೆಳೆ ನಷ್ಟಕ್ಕೊಳಗಾಗಿದ್ದಾರೆ. ಹಲವೆಡೆ ಬರದಿಂದ ರೈತರ ಬದುಕು ದುಸ್ತರವಾಗಿದೆ. ಇಂತಹ ಸಮಯದಲ್ಲಿ ಸೌಜನ್ಯಕ್ಕಾದರೂ ಜನರ ಬಳಿ ಬಂದು ಅವರ ಕಷ್ಟ-ಸುಖ ವಿಚಾರಿಸುತ್ತಿಲ್ಲ. ರೈತರ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಪ್ರಭಾವಿ ಅಭ್ಯರ್ಥಿಗಳು ಜನರಿಂದ ದೂರ ಸರಿದಿದ್ದಾರೆ.
ಚುನಾವಣೆ ಮುಗಿದ ಬಳಿಕ ಯಾರೂ ರೈತರು ಹಾಗೂ ಜನಸಾಮಾನ್ಯರ ಕಷ್ಟದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿ ಜನರ ಕಷ್ಟ-ಸುಖಗಳನ್ನು ವಿಚಾರಿಸಿದ್ದರೆ ಭವಿಷ್ಯದ ರಾಜಕೀಯ ನಾಯಕರಾಗಲು ತುದಿಗಾಲಲ್ಲಿ ನಿಂತಿರುವವರ ಬಗ್ಗೆ ಜನರಿಗೆ ಹೊಸ ಭರವಸೆ ಮೂಡುತ್ತಿತ್ತು. ರಾಜಕೀಯ ಬದಲಾವಣೆಯ ಗಾಳಿ ಬೀಸಿದ ಅನುಭವವಾಗುತ್ತಿತ್ತು. ಅಂತಹ ಪ್ರಯತ್ನಗಳನ್ನೇ ನಡೆಸದೆ ಸುಮಲತಾ ಹಾಗೂ ನಿಖೀಲ್ ಚುನಾವಣಾ ಸಮಯದಲ್ಲಿ ಹೇಳುವಂತೆ ಚುನಾವಣಾ ಗಿಮಿಕ್ ಮಾತುಗಳನ್ನಾಡಿದರೇ ಎಂಬ ಅನುಮಾನಗಳು ಜನರನ್ನು ಕಾಡಲಾರಂಭಿಸಿವೆ.
ನೀರಿಗೆ ಹಾಹಾಕಾರ: ಬೇಸಿಗೆ ಅವಧಿಯಲ್ಲಿ ನಾಗಮಂಗಲ ಹಾಗೂ ಕೆ.ಆರ್.ಪೇಟೆಯಲ್ಲಿ ಕುಡಿಯುವ ನೀರಿಗೆ ಎಲ್ಲಿಲ್ಲದ ಹಾಹಾಕಾರ ಸೃಷ್ಟಿಯಾಗಿದೆ. ಕೆರೆ-ಕಟ್ಟೆಗಳೆಲ್ಲವೂ ಬತ್ತಿಹೋಗಿವೆ. ಜನ-ಜಾನುವಾರುಗಳು ನೀರಿಲ್ಲದೆ ಪರಿತಪಿಸುತ್ತಿವೆ. ರೇಷ್ಮೆ ಬೆಳೆಗಾರರು ಉತ್ತಮ ಬೆಲೆ ಕಾಣದೆ ಕಂಗಾಲಾಗಿದ್ದಾರೆ. ರೈತರ ಆತ್ಮಹತ್ಯೆ ಕೊನೆಯಾಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಜನರನ್ನು ಬಾಧಿಸುತ್ತಿದ್ದರೂ ಅವರತ್ತ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ.
ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅಂಬರೀಶ್ ಅಪಘಾತಕ್ಕೀಡಾದ ಅಭಿಮಾನಿಯೊಬ್ಬರ ಯೋಗಕ್ಷೇಮ ವಿಚಾರಿಸುವ ಹಾಗೂ ಬೆಂಬಲಿಗರ ಮದುವೆ ಸಮಾರಂಭಗಳಿಗೆ ಬಂದು ಹೋಗುವ ಸುಮಲತಾ ಅಂಬರೀಶ್ ಅವರು ಸಂಕಷ್ಟಕ್ಕೊಳಗಾಗಿರುವ ಜನರನ್ನು ಭೇಟಿ ಮಾಡಿ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ.
ಸೌಜನ್ಯ ತೋರಲಿಲ್ಲ: ಯುವ ರಾಜಕೀಯ ನಾಯಕರಾಗುವ ಮಹತ್ವಾಕಾಂಕ್ಷೆ ಹೊಂದಿರುವ ನಿಖೀಲ್ ಜನರ ಬಗ್ಗೆ ಅವರಿಗಿರುವ ಪ್ರೀತಿ, ಅಭಿಮಾನ ತೋರ್ಪಡಿಸುವುದಕ್ಕೆ ಒಂದು ಅವಕಾಶವಿತ್ತು. ಅವರೂ ಗ್ರಾಮೀಣ ಜನರು ಅನುಭವಿಸುತ್ತಿರುವ ನೋವುಗಳಿಗೆ ಸಮಾಧಾನ ಹೇಳುವ ಕಿಂಚಿತ್ ಸೌಜನ್ಯವನ್ನೂ ತೋರ್ಪಡಿಸಲಿಲ್ಲ. ಮುಂದಿನ ಜನಪ್ರತಿನಿಧಿಗಳಾಗುವವರು ಹೀಗೆ ವರ್ತಿಸಿದರೆ ಅವರ ಬಗ್ಗೆ ಜನರಿಗೆ ನಂಬಿಕೆ, ವಿಶ್ವಾಸ ಮೂಡುವುದಾದರೂ ಹೇಗೆ ಎನ್ನುವುದು ಜನ ಸಾಮಾನ್ಯರು ಕೇಳುತ್ತಿರುವ ಪ್ರಶ್ನೆಯಾಗಿದೆ.
● ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.