ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, Jul 5, 2020, 5:02 AM IST
ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೈಷುಗರ್ ಕಂಪನಿಯಲ್ಲಿ ಸ್ವಯಂ, ಕಡ್ಡಾಯ ನಿವೃತ್ತಿ ಪಡೆದ ಕಾರ್ಮಿಕರ ಕುಟುಂಬದವರು ನಗರದಲ್ಲಿ ಶನಿವಾರ ಪ್ರತಿಭಟಿಸಿದರು. ಡೀಸಿ ಕಚೇರಿ ಎದುರು ಜಮಾಯಿಸಿದ ನಿವೃತ್ತಿ ಪಡೆದ ನೌಕರರು ಮತ್ತು ಕುಟುಂಬಸ್ಥರು, ಮನವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಸ್ಪಂದಿಸುವಂತೆ ಡೀಸಿ ವೆಂಕಟೇಶ್ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕ ಅಧಿಕಾರಿ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮೈಷುಗರ್ ಕಾರ್ಖಾನೆಯಲ್ಲಿ 35 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಪೈಕಿ ಕೆಲವರು ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಕಂಪನಿಯಿಂದಲೇ ಕಡ್ಡಾಯ ನಿವೃತ್ತಿ ಜಾರಿಗೊಳಿಸಲಾಗಿದೆ. ಆದರೆ, ಕಂಪನಿಯು ನಿಗದಿಗೊಳಿಸಿರುವ ನಿವೃತ್ತಿ ಯೋಜನೆಯ ಹಣದಲ್ಲಿ ಈವರೆಗೂ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಹೆಣ್ಣುಮಕ್ಕಳ ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ.
ಮುಂದಿನ ದಿನದಲ್ಲಿ ಕುಟುಂಬದ ನಿರ್ವಹಣೆ ಹೇಗೆಂಬುದೇ ಚಿಂತೆಯಾಗಿದೆ ಎಂದು ಅಳಲು ತೋಡಿಕೊಂಡರು. ಕೊರೊನಾದಿಂದ ಕೆಲಸ ಸಿಗುವುದು ಕಷ್ಟಕರ. ವಸತಿಗೃಹ ಖಾಲಿ ಮಾಡಿದರೆ ಬಾಡಿಗೆ ಮನೆ ಸಿಗುವುದಿಲ್ಲ. ಇದರಿಂದ ನಮ್ಮ ಕುಟುಂಬ ಬೀದಿ ಪಾಲಾಗುತ್ತದೆ. ಆದ್ದರಿಂದ ನಿವೃತ್ತ ಕಾರ್ಮಿಕ ಕುಟುಂಬಕ್ಕೆ ವಸತಿ ಗೃಹ, ನಿವೇಶನ ನೀಡಬೇಕು. ನಿಗದಿಪಡಿಸಿರುವ ಪಿಂಚಣಿ ಹಣ ಹೆಚ್ಚಿಸಬೇಕು.
10ರಿಂದ 15 ವರ್ಷ ಮೇಲ್ಪಟ್ಟು ಸೇವಾವಧಿಯ ನೌಕರರಿಗೆ ನಿವೃತ್ತಿ ಹಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ನಗರಸಭಾ ಸದಸ್ಯೆ ಜಿ.ಎನ್.ಲಲಿತಾ, ಜ್ಯೋತಿ, ಕನ್ಯಾ, ಉಮಾ, ವಿನೋದಾ, ಮಹದೇವಮ್ಮ, ವರಲಕ್ಷ್ಮೀ, ಸುಜಾತಾ, ನಾಗರತ್ನ ಮೊದಲಾದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.