ಕಾಂಗ್ರೆಸ್ ಸೇರುವರೇ ಸಂಸದೆ ಸುಮಲತಾ?
ಕೈ ನಾಯಕರೊಟ್ಟಿಗೆ ರಾರಾಜಿಸುತ್ತಿರುವ ಪೋಸ್ಟರ್ •ಸುಮಲತಾ ಸೆಳೆಯಲು ಕೈ-ಕಮಲ ಯತ್ನ
Team Udayavani, Jun 4, 2019, 9:38 AM IST
ಮಂಡ್ಯ: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ನಂತರದಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿದ ಸುಮಲತಾ ಸೇರುವ ಪಕ್ಷ ಯಾವುದು ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ.
ಚುನಾವಣೆಯಲ್ಲಿ ವಿಜಯಿಯಾಗಿರುವ ಸುಮಲತಾ ಅವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಸೇರುವಂತೆ ಉಭಯ ಪಕ್ಷಗಳ ನಾಯಕರಿಂದ ಒತ್ತಡ ಹೆಚ್ಚಾಗಿದೆ. ಎರಡೂ ಪಕ್ಷಗಳ ನಾಯಕರು ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಅದರಂತೆ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಿದ ಬಿಜೆಪಿಯನ್ನು ಸೇರುವರೋ ಅಥವಾ ಕಾಂಗ್ರೆಸ್ ಪರಾಜಿತ ಶಾಸಕರ ಚುನಾವಣಾ ಕಾರ್ಯಾಚರಣೆಯೇ ತಮ್ಮ ಗೆಲುವಿಗೆ ಕಾರಣ ಎಂಬ ಭಾವನೆಯೊಂದಿಗೆ ಕಾಂಗ್ರೆಸ್ ಸೇರುವರೋ? ಎಂಬ ಪ್ರಶ್ನೆ ಮೂಡಿದ್ದವು.
ಆದರೆ, ಚುನಾವಣೆ ಹಾಗೂ ಫಲಿತಾಂಶದ ನಂತರದಲ್ಲಿ ನಡೆದಿರುವ ಕೆಲವೊಂದು ಬೆಳವಣಿಗೆಗಳು ಸುಮಲತಾ ಬಿಜೆಪಿಗಿಂತ ಕಾಂಗ್ರೆಸ್ ಸೇರುವ ಕಡೆಗೆ ಹೆಚ್ಚಿನ ಒಲವು ತೋರುತ್ತಿರುವಂತೆ ಕಂಡು ಬರುತ್ತಿದ್ದಾರೆ.
ಚುನಾವಣೆಯಲ್ಲಿ ವಿಜಯ: ಮಾಜಿ ಸಚಿವರಾಗಿದ್ದ ದಿವಂಗತ ಅಂಬರೀಶ್ ಇದ್ದದ್ದು ಕಾಂಗ್ರೆಸ್ ಪಕ್ಷದಲ್ಲಿ. ಅವರ ನಿಧನದ ಬಳಿಕ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ಸುಮಲತಾ, ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಮೊದಲು ಬೇಡಿಕೆ ಇಟ್ಟಿದ್ದರು. ಮೈತ್ರಿ ಕಾರಣದಿಂದ ಸುಮಲತಾಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸಿ ಚುನಾವಣೆಯಲ್ಲಿ ವಿಜಯಿಯಾದರು.
ಸುಮಲತಾ ಚುನಾವಣಾ ಸ್ಪರ್ಧೆ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪರಾಜಿತ ಶಾಸಕರೆಲ್ಲರೂ ಇದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯ. ಚುನಾವಣೆ ಮುಗಿದ ನಂತರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಎನ್.ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್ ಸೇರಿದಂತೆ ಮಂಡ್ಯದ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಔತಣಕೂಟ ಏರ್ಪಡಿಸಿದ್ದರು. ಈ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿತ್ತು. ಅಲ್ಲದೆ, ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಸಹಕಾರ ಇತ್ತು. ಹೀಗಾಗಿಯೇ ಸುಮಲತಾ ಭಾರೀ ಅಂತರದ ಗೆಲುವು ಸಾಧಿಸುವುದು ಸಾಧ್ಯವಾಯಿತು ಎಂಬ ವಿಚಾರವೂ ಈಗ ಗುಟ್ಟಾಗೇನೂ ಉಳಿದಿಲ್ಲ.
ಫ್ಲೆಕ್ಸ್‌ಗಳಲ್ಲಿ ರಾರಾಜಮಾನ: ಫಲಿತಾಂಶದ ಹೊರಬಿದ್ದ ನಂತರ ಸುಮಲತಾ ಕೃತಜ್ಞತೆ, ಅಭಿನಂದನೆ ಸಲ್ಲಿಸಿದ್ದ ಫ್ಲೆಕ್ಸ್‌ಗಳಲ್ಲೂ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳು ರಾರಾಜಿಸಿದ್ದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕಾಂಗ್ರೆಸ್‌ನ ಹಲವಾರು ಮುಖಂಡರು ಫೋಟೋಗಳು ರಾರಾಜಿಸಿದ್ದವು. ಇವು ಸುಮಲತಾ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲಾರರು ಎಂಬ ಮುನ್ಸೂಚನೆಯನ್ನು ನೀಡಿದ್ದವು.
ಜನ್ಮದಿನದ ಶುಭಾಶಯ: ಮೊನ್ನೆಯಷ್ಟೇ ನಡೆದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹುಟ್ಟುಹಬ್ಬಕ್ಕೂ ಸುಮಲತಾ ಶುಭಕೋರಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಸುಮಲತಾ, ನನ್ನ ಹಿತೈಷಿ ಹಾಗೂ ಮಂಡ್ಯ ಜನರ ಪ್ರೀತಿ ಪಾತ್ರರಾದ ಚಲುವರಾಯಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದು ಸುಮಲತಾ ಕಾಂಗ್ರೆಸ್ ಸೇರುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಪಕ್ಷಗಳ ಒತ್ತಾಯ: ಕಳೆದ ಕೆಲ ದಿನಗಳಿಂದ ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು. ಈ ನಡುವೆ ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಬಾರದು ಎಂದು ಮಂಡ್ಯದ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದರು. ಒಂದೆಡೆ ಬಿಜೆಪಿ ಹಾಗೂ ಮತ್ತೂಂದೆಡೆ ಕಾಂಗ್ರೆಸ್ ಎರಡೂ ಪಕ್ಷದ ನಾಯಕರೂ ಸುಮಲತಾ ಅವರನ್ನು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಸುಮಲತಾ ಕಾಂಗ್ರೆಸ್ ಸೇರ್ಪಡೆ ಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ಹೊಸ ಕುತೂಹಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಹೀನಾಯ ಸೋಲಿನಿಂದ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಧೂಳೀಪಟವಾಗುವುದರೊಂದಿಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಕ್ಷೇತ್ರದೊಳಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಕಾಂಗ್ರೆಸ್ ಶಾಸಕರಿಗೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಜೆಡಿಎಸ್ ಕೋಟೆಯೊಳಗೆ ಅಧಿಕಾರಕ್ಕೆ ಹೋರಾಟ ನಡೆಸಬಹುದು ಎಂಬ ಹೊಸ ಉತ್ಸಾಹವನ್ನು ಕೈ ಮುಖಂಡರು-ಕಾರ್ಯಕರ್ತರಲ್ಲಿ ಮೂಡಿಸಿದೆ.
ಕಮಲಕ್ಕೆ ಸಂಜೀವಿನಿ: ಇನ್ನೊಂದೆಡೆ ಬಿಜೆಪಿ ನಾಯಕರು ನೆಲೆಯೇ ಇಲ್ಲದ ಮಂಡ್ಯದೊಳಗೆ ಬಿಜೆಪಿ ಬೇರುಗಳನ್ನು ಭದ್ರವಾಗಿ ಬೇರೂರುವಂತೆ ಮಾಡುವ ಸಲುವಾಗಿ ಸುಮಲತಾ ಅವರನ್ನು ಸೆಳೆಯುವುದಕ್ಕೆ ತಂತ್ರಗಾರಿಕೆ ನಡೆಸಿದೆ. ಸಕ್ಕರೆ ನಾಡಿನಲ್ಲಿ ಸಮರ್ಥ ನಾಯಕರಿಲ್ಲದೆ ಸೊರಗಿರುವ ಕಮಲಕ್ಕೆ ಸುಮಲತಾ ಸಂಜೀವಿನಿಯಂತೆ ಕಂಡುಬಂದಿದ್ದಾರೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಬಿಜೆಪಿಗೆ ಶಕ್ತಿ ತುಂಬುವ ಆಲೋಚನೆಯಲ್ಲಿ ಬಿಜೆಪಿಯವರು ಇದ್ದಾರೆ. ಸುಮಲತಾ ಜನಪ್ರಿಯತೆಯನ್ನು ಮಾನದಂಡವಾಗಿಸಿಕೊಂಡು ಮಂಡ್ಯದಲ್ಲಿ ಕಮಲ ಅರಳಿಸುವ ಉತ್ಸಾಹದಲ್ಲಿದ್ದಾರೆ. ಆದರೆ, ಚುನಾವಣಾ ಬೆಂಬಲಕ್ಕಷ್ಟೇ ಬಿಜೆಪಿಯನ್ನು ಸೀಮಿತಗೊಳಿಸಿರುವ ಸುಮಲತಾ ಆ ಪಕ್ಷ ಸೇರುವ ಬಗ್ಗೆ ಒಲವನ್ನೇ ತೋರಿಸುತ್ತಿಲ್ಲ. ಇದು ಬಿಜೆಪಿ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.
ಚುನಾವಣೆ ನಂತರ ಕಾಂಗ್ರೆಸ್ ಮಾಜಿ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಸುಮಲತಾ ಹೆಚ್ಚಿನ ಒಡನಾಟ ಹೊಂದಿದ್ದಾರೆಯೇ ವಿನಃ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೇ ನಡೆಸಿಲ್ಲ. ಹಾಗಾಗಿ ಸುಮಲತಾ ಬಿಜೆಪಿ ಸೇರುವ ಸಾಧ್ಯತೆಗಳೇ ಕಂಡುಬರುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.