ಮಳೆ ಎಫೆಕ್ಟ್: ಬೆಲ್ಲದ ಉತ್ಪಾದನೆ ಕುಸಿತ
ಜಿಲ್ಲೆ ಆಲೆಮನೆಗಳಲ್ಲಿ ತಿರುಗದ ಗಾಣಗಳು ಕೂಲಿಯಾಳುಗಳು, ಕಚ್ಚಾ ವಸ್ತುವಿನ ಕೊರತೆ
Team Udayavani, Nov 7, 2019, 4:16 PM IST
ಮಂಡ್ಯ ಮಂಜುನಾಥ್
ಮಂಡ್ಯ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಆಲೆಮನೆಗಳಲ್ಲಿರುವ ಗಾಣದ ಚಕ್ರಗಳು ತಿರುಗದಂತೆ ಮಾಡಿತು. ಪರಿಣಾಮ ಬೆಲ್ಲದ ಉತ್ಪಾದನೆ ಕುಸಿತವಾಗಿ, ಬೇಡಿಕೆ ಸೃಷ್ಟಿಯಾಗಿ ಬೆಲೆಯಲ್ಲೂ ಏರಿಕೆ ಕಂಡಿತು. ಸಕ್ಕರೆ ಕಾರ್ಖಾನೆಗಳಿಗೆ ರವಾನೆಯಾಗದ ಕಬ್ಬನ್ನು ಆಲೆಮನೆಗಳತ್ತ ತಿರುಗಿಸುವುದಕ್ಕೆ ರೈತರಿಗೆ ಅವಕಾಶವಾಗಲೇ ಇಲ್ಲ.
ಇದು ರೈತರನ್ನು ಸತ್ವಪರೀಕ್ಷೆಗೆ ಗುರಿಪಡಿಸಿದೆ. ಜಿಲ್ಲೆಯಲ್ಲಿ 3400ಕ್ಕೂ ಹೆಚ್ಚು ಗಾಣಗಳಿದ್ದರೂ ಅದರಲ್ಲಿ 1500ಕ್ಕೂ ಹೆಚ್ಚು ಸ್ಥಗಿತಗೊಂಡಿವೆ. 1200 ರಿಂದ 1300 ಗಾಣಗಳು ತಿರುಗುತ್ತಿದ್ದವಾದರೂ ಈ ಬಾರಿ ಮಳೆಯಿಂದ ಅದು ಸಾಧ್ಯವಾಗಲೇ ಇಲ್ಲ. ಕೇವಲ 100 ರಿಂದ 150 ಗಾಣಗಳು ಚಾಲನೆಯಾಗಿದ್ದರಿಂದ ಬೆಲ್ಲದ ಉತ್ಪಾದನೆಯೂ ಕುಸಿದಿದೆ.
ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಕಬ್ಬಿನ ಬೆಳೆ ಬಂದಿದೆ. ಸಕ್ಕರೆ ಕಾರ್ಖಾನೆಗಳು ಅರೆಯಲಾಗದಷ್ಟು ಕಬ್ಬು ಇನ್ನೂ ಜಿಲ್ಲೆಯಲ್ಲಿ ಉಳಿದುಕೊಂಡಿದೆ. ಅದನ್ನು ಸಾಗಣೆ ಮಾಡಲಾಗದೆ ರೈತರು ಪರಿತಪಿಸುತ್ತಿದ್ದರೆ, ಜಿಲ್ಲಾಡಳಿತಕ್ಕೆ ಕಬ್ಬನ್ನು ಎಲ್ಲಿಗೆ ಸಾಗಿಸುವುದು ಎನ್ನುವುದೇ ದೊಡ್ಡ ತಲೆನೋವಾಗಿದೆ. ಈ ವೇಳೆ ಆಲೆಮನೆಗಳಿಗಾದರೂ ಸಾಗಿಸೋಣವೆಂದರೆ ಅವುಗಳೂ ಓಡದೆ ಸ್ಥಗಿತಗೊಂಡಿರುವುದು ರೈತರನ್ನು ದಿಕ್ಕೆಡಿಸಿದೆ.
ಸಮಸ್ಯೆ ಒಂದೆರಡಲ್ಲ:ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಕಬ್ಬಿನ ರಚ್ಚು ನೀರಿನಲ್ಲಿ ಸಂಪೂರ್ಣ ನೆನೆದು ಒದ್ದೆಯಾಗಿದೆ. ಅದನ್ನು ಒಣಗಿಸುವುದಕ್ಕೂ ಮಳೆ ಬಿಡುವು ಕೊಡಲೇ ಇಲ್ಲ.
ಬೆಲ್ಲ ತಯಾರಿಸುವ ಕೊಪ್ಪರಿಗೆಗಳಲ್ಲೂ ನೀರು ತುಂಬಿ ಕೊಂಡಿತ್ತು. ಕೂಲಿಯಾಳುಗಳ ಕೊರತೆ ಇದೆಲ್ಲದರಿಂದ ಆಲೆಮನೆಗಳಿಗೆ ಚಾಲನೆ ಕೊಡಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಮೇ-ಜೂನ್ ತಿಂಗಳಲ್ಲಿ ಉತ್ತರ ಪ್ರದೇಶದಿಂದ ಬರುವ ಕೂಲಿಯಾಳುಗಳೇ ಜಿಲ್ಲೆಯೊಳಗೆ ಬೆಲ್ಲ ಉತ್ಪಾದನೆಗೆ ಪ್ರಮುಖ ಆಧಾರವಾಗಿದ್ದಾರೆ. ಬೆಲ್ಲ ತಯಾರಿಕೆಗೆಂದು ಹೊರಗಿ ನಿಂದ ಬರುವ ಇವರು ದೀಪಾವಳಿ ಸಮಯಕ್ಕೆ ಮತ್ತೆ ತವರಿಗೆ ಹೊರ ಡುತ್ತಾರೆ. ಮತ್ತೆ ತಿಂಗಳಾನುಗಟ್ಟಲೆ ಬರುವುದಿಲ್ಲ.
ಸ್ಥಳೀಯರಲ್ಲಿ ಬೆಲ್ಲ ತಯಾರಿಸುವ ನೈಪುಣ್ಯತೆ ಇಲ್ಲದೆ, ಅದನ್ನು ಕಲಿಯುವುದಕ್ಕೂ ನಿರಾಸಕ್ತಿ ವಹಿಸಿದ್ದಾರೆ. ಹಾಗಾಗಿ ಬೆಲ್ಲ ತಯಾರಿಕೆಯಲ್ಲಿ ಕೂಲಿಯಾಳುಗಳ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಹಾಗಾಗಿ ಉತ್ತರ ಭಾರತದವರನ್ನೇ ಆಶ್ರಯಿಸುವುದು ಆಲೆಮನೆ ಮಾಲೀಕರಿಗೆ ಅನಿವಾರ್ಯವಾಗಿದೆ.
ಬೆಲ್ಲಕ್ಕೆ ಬೇಡಿಕೆ ಸೃಷ್ಟಿ: ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಉತ್ತರಭಾರತ ಸೇರಿದಂತೆ ಅನೇಕ ರಾಜ್ಯಗಳಲ್ಲಿರುವ ಆಲೆಮನೆಗಳು ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಉತ್ಪಾದನೆ ಆರಂಭಿಸುತ್ತವೆ. ಈಗ ಆ ಭಾಗದಲ್ಲೂ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಬೆಲ್ಲಕ್ಕೆ ಎರಡು ತಿಂಗಳಿಂದ ಬೇಡಿಕೆ ಸೃಷ್ಟಿಯಾಗಿದೆ. ಈ ಸಮಯದಲ್ಲಿ ಬೆಲ್ಲವನ್ನು ತಯಾರಿಸಿ ಮಾರುಕಟ್ಟೆಗೆ ಸಾಗಿಸುವುದರೊಂದಿಗೆ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಆಲೆಮನೆ ಮಾಲೀಕರ ಆಸೆಗೆ ಮಳೆ ಭಂಗ ತಂದಿತು.
ಬೆಲೆ ಹೆಚ್ಚಳ: ಬೆಲ್ಲದ ಉತ್ಪಾದನೆ ಕುಸಿತ ಕಂಡಿರುವುದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಚ್ಚು ಬೆಲ್ಲ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 3100 ರೂ., ಗರಿಷ್ಠ 3550 ರೂ., ಮಾದರಿ 3350 ರೂ. ಇದೆ. ಬಾಕ್ಸ್ ಬೆಲ್ಲ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 3200 ರೂ., ಗರಿಷ್ಠ 3650 ರೂ., ಮಾದರಿ 3450 ರೂ., ಕುರಿಕಾಲಚ್ಚು ಬೆಲ್ಲ ಕ್ವಿಂಟಲ್‌ಗೆ 2900 ರೂ., ಗರಿಷ್ಠ 3300 ರೂ., ಮಾದರಿ 3100 ರೂ., ಬಕೆಟ್ ಬೆಲ್ಲ ಕ್ವಿಂಟಲ್‌ಗೆ ಕನಿಷ್ಠ 2900 ರೂ., ಗರಿಷ್ಠ 3370 ರೂ., ಮಾದರಿ 3100 ರೂ. ಇದೆ.
ಬೆಲ್ಲದ ಅವಕ ಕಡಿಮೆ ಇರುವುದರಿಂದ ಹೆಚ್ಚಿನ ರೈತರಿಗೆ ಇದರ ಲಾಭ ಸಿಗದಂತಾಗಿದೆ. ಸಾಮರ್ಥ್ಯ ಕ್ಷೀಣ: ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವ ತಂತ್ರಜ್ಞಾನದಲ್ಲಿ ಪ್ರಗತಿ ಕಂಡಿಲ್ಲ. ಇನ್ನೂ ಹಳೆಯ ಮಾದರಿಯಲ್ಲೇ ಬೆಲ್ಲ ತಯಾರಿಸಲಾಗುತ್ತಿದೆ. ಕಬ್ಬು ನುರಿಸುವ ಸಾಮರ್ಥ್ಯವನ್ನೂ ಹೆಚ್ಚಿಸಿಲ್ಲ. ಇದರ ಪರಿಣಾಮ ಕಬ್ಬಿನ ಒಟ್ಟು ಉತ್ಪಾದನೆಯಲ್ಲಿ ಆಲೆಮನೆಗಳು ಶೇ.5ರಷ್ಟು ಕಬ್ಬನ್ನು ಮಾತ್ರ ಅರೆಯುವುದಕ್ಕೆ ಶಕ್ತವಾಗಿವೆ.
ಬೆಲ್ಲದ ಉತ್ಪಾದನೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಬೇಡಿಕೆ ಸೃಷ್ಟಿಯಾಗಿ, ಬೆಲೆಯಲ್ಲೂ ಏರಿಕೆಯಾಗಿದೆ. ಆದರೆ, ಇದು ತಾತ್ಕಾಲಿಕವಷ್ಟೇ. ಇದು ನಿರಂತರ ವಾಗಿರುವುದಿಲ್ಲವೆಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಬೆಲ್ಲ ತಯಾರಿಕೆಯಲ್ಲಿ ಸುಧಾರಿತ ತಂತ್ರಜ್ಞಾನ ಹಾಗೂ ಗುಣಮಟ್ಟದ ಹೆಚ್ಚಳದೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿಗಿಳಿಯುವಂತೆ ಉದ್ಯಮ ಬೆಳವಣಿಗೆ ಸಾಧಿಸಿದರೆ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯವಾಗಿ ಬೆಲ್ಲ ಉದ್ಯಮ ಪ್ರಗತಿ ಕಾಣುವುದರೊಂದಿಗೆ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.