ವಿವಿಧೋದ್ದೇಶದ ಹೊಣೆ; ಏಕೋದ್ದೇಶಕ್ಕೆ ಮಾತ್ರ ಸಂಬಳ!
ಇದು ಪಾಲಿಕೆಯ 60 ಎಂಪಿಡಬ್ಲ್ಯು ಕಾರ್ಯಕರ್ತರ ಸ್ಥಿತಿ
Team Udayavani, Mar 30, 2019, 9:53 AM IST
ಮಹಾನಗರ : ಪಾಲಿಕೆಯಲ್ಲಿ ಕೆಲಸ ಮಾಡುವ ವಿವಿಧೋದ್ದೇಶ ಕಾರ್ಯಕರ್ತರನ್ನು ವಿವಿಧೋದ್ದೇಶದ ಕೆಲಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಸಂಬಳ ನೀಡುವುದು ಏಕ ಉದ್ದೇಶದ ಕೆಲಸಕ್ಕಾಗಿ! ಅಷ್ಟೇ ಅಲ್ಲ, ಈ ಕಾರ್ಯಕರ್ತರು ತಮ್ಮ ಅಲ್ಪ ಸಂಬಳದ ಬಹುಪಾಲನ್ನು ಮನೆ ಮನೆ ಭೇಟಿಗಾಗಿಯೇ ಖರ್ಚು ಮಾಡುತ್ತಾರೆ.
ಇದು ಸುಮಾರು ಏಳು ವರ್ಷಗಳಿಂದ ಪಾಲಿಕೆಯ ವಿವಿಧೋದ್ದೇಶ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಸುಮಾರು 60 ಮಂದಿಯ ಸ್ಥಿತಿ. ಮಲೇರಿಯಾ ಸಂಬಂಧಿ ಕೆಲಸ, ತೆರಿಗೆ ಸಂಗ್ರಹ, ಪಲ್ಸ್ ಪೋಲಿಯೋ ಸಂಬಂಧಿ ಕೆಲಸ, ನೀರಿನ ಶುಲ್ಕ ಸಂಗ್ರಹ ಸೇರಿದಂತೆ ನಾನಾ ಕೆಲಸಗಳನ್ನು ಈ ಕಾರ್ಯಕರ್ತರೇ ಮಾಡಬೇಕು. ಆದರೆ ಸಂಬಳ ಮಾತ್ರ ಮಲೇರಿಯಾ ಸೆಲ್‌ಗೆ ಸಂಬಂಧಿಸಿದ ಕೆಲಸಕ್ಕಷ್ಟೇ ಮಲೇರಿಯಾ ಸೆಲ್‌ನಿಂದಲೇ ನೀಡಲಾಗುತ್ತಿದೆ.
ಸುಮಾರು ಏಳು ವರ್ಷಗಳಿಂದ ಮಲೇರಿಯಾ ಸಂಬಂಧಿಸಿ ಮಾಹಿತಿ ಕಲೆ ಹಾಕುವುದು, ಹೈ ರಿಸ್ಕ್
ಪ್ರದೇಶಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುವುದು, ರಕ್ತ ಪರೀಕ್ಷೆ ನಡೆಸುವುದು, ಅರಿವು ಮೂಡಿಸುವುದು ಮುಂತಾದ ಕೆಲಸಗಳನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಆದರೆ ಕೆಲವು ಸಮಯಗಳಿಂದ ಮಲೇರಿಯಾ ಸಂಬಂಧಿಸಿ ಮನೆ ಮನೆ ಭೇಟಿಯ ಜತೆಗೆ ನೀರಿನ ಶುಲ್ಕ ಸಂಗ್ರಹದ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿದೆ. ಆದರೆ ಇದಕ್ಕೆ ಸಂಬಳ ನೀಡುತ್ತಿಲ್ಲ. ಸಂಬಳ ಕೇಳಿದರೆ ಅಧಿಕಾರಿಗಳು ಸತಾಯಿಸುತ್ತಾರೆ ಎನ್ನುತ್ತಾರೆ ನೊಂದ ವಿವಿಧೋದ್ದೇಶ ಕಾರ್ಯಕರ್ತರು.
ವಿವಿಧೋದ್ದೇಶದ ಕೆಲಸಕ್ಕೆ ಸಂಬಳ ಕೇಳಿದರೆ, ನಿಮ್ಮನ್ನು ಮಲೇರಿಯಾ ನಿಯಂತ್ರಣ ಸೆಲ್‌ನ ಕೆಲಸಕ್ಕಾಗಿ ನಿಯೋಜಿಸಿದ್ದು, ನೀರಿನ ಶುಲ್ಕ ಸಂಗ್ರಹ ಕೆಲಸವನ್ನು ಯಾಕೆ ವಹಿಸಿಕೊಂಡಿದ್ದೀರಿ ಎಂದು ಅಧಿಕಾರಿಗಳು ಕೇಳುತ್ತಾರೆ. ಆದರೆ ನೀಡಿದ ಕೆಲಸವನ್ನು ಮಾಡದಿದ್ದರೆ ವಿವಿಧೋದ್ದೇಶ ಕೆಲಸಕ್ಕೆ ನೇಮಿಸಿಕೊಂಡದ್ದು; ಎಲ್ಲ ಕೆಲಸಗಳನ್ನು ಮಾಡಬೇಕು ಎಂಬರ್ಥದಲ್ಲಿ ಮಾತನಾಡುತ್ತಾರೆ ಎನ್ನುತ್ತಾರೆ ಕಾರ್ಯಕರ್ತರು.
ಕ್ಲಿಯರ್ ಕಿರಿಕಿರಿ
ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಪ್ರತಿನಿತ್ಯದ ದುಡಿಮೆ. ಮನೆ ಭೇಟಿ ಮಾಡುವುದರೊಂದಿಗೆ ಮಲೇರಿಯಾ ಇಲ್ಲ ಎಂಬುದಾಗಿ ತಿಂಗಳಿಗೆ 70 ಕ್ಲಿಯರ್ ಪತ್ರ ತರಬೇಕು ಎಂಬುದಾಗಿ ಮೇಲಧಿಕಾರಿಗಳು ಕಡ್ಡಾಯ ಮಾಡಿದ್ದಾರೆ. ಆದರೆ, ಜ್ವರ ಲಕ್ಷಣ ಇಲ್ಲದೆ, ಯಾರೂ ರಕ್ತ ಪರೀಕ್ಷೆ ಮಾಡಿಸಲು ಒಪ್ಪುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ, ನಿಮ್ಮ ಸಮಸ್ಯೆ ನಮ್ಮ ಬಳಿ ಹೇಳಬಾರದು, ಹೇಳಿದ ಕೆಲಸವನ್ನಷ್ಟೇ ಮಾಡಬೇಕು ಎನ್ನುತ್ತಿದ್ದಾರೆ ಎಂಬುದು ಕಾರ್ಯಕರ್ತರ ಅಳಲು.
ಪಾಲಿಕೆ ಆಯುಕ್ತರನ್ನು ಭೇಟಿ ಮಾಡಲಿ
ಎಂಪಿಡಬ್ಲ್ಯು ಕಾರ್ಯಕರ್ತರನ್ನು ವಿವಿಧೋದ್ದೇಶ ಕೆಲಸಗಳಿಗಾಗಿಯೇ ನೇಮಿಸಿಕೊಂಡಿರುವುದು. ಮಲೇರಿಯಾ ಪ್ರಕರಣಗಳು ಹೆಚ್ಚು ಇದ್ದ ಸಂದರ್ಭ ಮಲೇರಿಯಾ ನಿಯಂತ್ರಣ ಸೆಲ್‌ನಲ್ಲಿ ಅವರನ್ನು ಕೆಲಸಕ್ಕೆ ಬಳಸಿಕೊಳ್ಳುಲಾಗುತ್ತಿದೆ. ಪಾಲಿಕೆ ನಿಧಿಯಿಂದಲೇ ಸಂಬಳ ನೀಡಲಾಗುತ್ತದೆ. ಸಮಸ್ಯೆಗಳಿದ್ದಲ್ಲಿ ಅವರು ಪಾಲಿಕೆ ಆಯುಕ್ತರ ಬಳಿ ಮಾತನಾಡಿ ಬಗೆಹರಿಸಿಕೊಳ್ಳಬಹುದು.
– ಡಾ| ಮಂಜಯ್ಯ ಶೆಟ್ಟಿ ,
ಆರೋಗ್ಯಾಧಿಕಾರಿ, ಮನಪಾ
ಪರಿಶೀಲಿಸಿ ಕ್ರಮ
ನಾನು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಎಂಪಿಡಬ್ಲ್ಯು ಕಾರ್ಯಕರ್ತರ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ. ಕಾರ್ಯಕರ್ತರ ಪೈಕಿ ಯಾರಾದರೂ ಭೇಟಿಯಾಗಿ ಸಮಸ್ಯೆ ಬಗ್ಗೆ ತಿಳಿಸಿದರೆ ಪೂರಕ.
– ನಾರಾಯಣಪ್ಪ, ಆಯುಕ್ತರು,
ಮಂಗಳೂರು ಮಹಾನಗರ ಪಾಲಿಕೆ
10 ಸಾವಿರ ಸಂಬಳ; 4 ಸಾವಿರ ಖರ್ಚು!
ವಿವಿಧೋದ್ದೇಶ ಕಾರ್ಯಕರ್ತರು ಮಲೇರಿಯಾ ನಿಯಂತ್ರಣ ಸಂಬಂಧಿ ಕೆಲಸ ಮತ್ತು ಇತ್ತೀಚೆಗೆ ವಹಿಸಲಾದ ನೀರಿನ ಶುಲ್ಕ ಸಂಗ್ರಹ ಎರಡನ್ನೂ ನಿಭಾಯಿಸಿದರೂ ಮೊದಲಿನಂತೆಯೇ 12 ಸಾವಿರ ರೂ. ಸಂಬಳವನ್ನು ಪಡೆಯುತ್ತಿದ್ದಾರೆ. ಇದರಲ್ಲಿ 2 ಸಾವಿರ ರೂ. ಪಿಎಫ್, ಇಎಸ್‌ಐಗೆ ಕಡಿತಗೊಂಡರೆ, ಕೈ ಸೇರುವುದು 10 ಸಾವಿರ ರೂ. ಪ್ರತಿ ದಿನ ಕನಿಷ್ಠ 60 ಮನೆಗಳಿಗೆ ಭೇಟಿ ನೀಡುವುದರಿಂದ ಬಸ್, ರಿಕ್ಷಾ ಬಾಡಿಗೆಗೆ ದಿನಕ್ಕೆ 200 ರೂ.ಗಳಷ್ಟು ಖರ್ಚಾಗುತ್ತದೆ. ಸಿಗುವ 10 ಸಾವಿರ ರೂ. ಸಂಬಳದಲ್ಲಿ ತಿಂಗಳಿಗೆ 4 ಸಾವಿರ ರೂ. ಮನೆ ಮನೆ ಭೇಟಿಗೆಂದೇ ಖರ್ಚು ಮಾಡಬೇಕಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಎಂಪಿಡಬ್ಲ್ಯು ಕಾರ್ಯಕರ್ತೆಯೋರ್ವರು.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.