ಬೀದಿ ಬದಿ ವ್ಯಾಪಾರಿಗಳ ತೆರವು
ಪೊಲೀಸರ ಸಹಕಾರದಿಂದ ಯಶಸ್ವಿ ಕಾರ್ಯಾಚರಣೆಬಿಗಿ ನಿಲುವು ತಾಳಿದ ಪುರಸಭೆ ಅಧಿಕಾರಿಗಳು
Team Udayavani, Nov 17, 2019, 1:24 PM IST
ಮುದ್ದೇಬಿಹಾಳ: ಅಂತೂ ಇಂತೂ ಸುದೀರ್ಘ ಲೆಕ್ಕಾಚಾರದ ನಂತರ ಬಿಗಿ ನಿಲುವು ತಳೆದ ಪುರಸಭೆ ಅ ಧಿಕಾರಿಗಳು ಪೊಲೀಸ್ ಬಂದೋಬಸ್ತ್ ಮಧ್ಯೆ ಪಟ್ಟಣದ ಪ್ರಮುಖ ರಸ್ತೆಗಳ ಫುಟ್‌ಪಾತ್ ಅತಿಕ್ರಮಿಸಿದ್ದ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಎಡೆಬಿಡದೆ ನಡೆಸಿದರು.
ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಹಾಯ್ದು ಹೋಗುತ್ತದೆ. ಈ ಹೆದ್ದಾರಿ ಇಕ್ಕೆಲಗಳಲ್ಲಿ ಫುಟ್‌ಪಾತ್, ಚರಂಡಿ ನಿರ್ಮಿಸಬೇಕಿದೆ. ಆದರೆ ಬೀದಿ ಬದಿ ವ್ಯಾಪಾರಸ್ಥರು ಈ ಜಾಗ ಅತಿಕ್ರಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದುದರಿಂದ ಕಾಮಗಾರಿ ವಿಳಂಬಗೊಂಡು ಸಾರ್ವಜನಿಕ ಟೀಕೆಗೆ ಒಳಗಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪುರಸಭೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ಬೀದಿಬದಿ ವ್ಯಾಪಾರಸ್ಥರ ಸಭೆ ನಡೆಸಿ ಶುಕ್ರವಾರದವರೆಗೆ ಅತಿಕ್ರಮಣ ತೆರವಿಗೆ ಗಡುವು ನೀಡಿದ್ದರು. ಆದರೂ ಯಾರೂ ಸ್ಪಂದಿಸದೆ ಇರುವುದರಿಂದ ತೆರವು ಕಾರ್ಯಾಚರಣೆ ನಡೆಸುವ ಅನಿವಾರ್ಯತೆಗೆ ಸಿಲುಕಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಧ್ಯೆ ಕಾರ್ಯಾಚರಣೆ ನಡೆಸಿದರು.
ಬಸ್ ನಿಲ್ದಾಣ ಮುಂಭಾಗ, ಬಸವೇಶ್ವರ ವೃತ್ತ ಸುತ್ತಮುತ್ತ, ಮುಖ್ಯ ಬಜಾರ್ ಸಂಪರ್ಕಿಸುವ ಮಹಾತ್ಮ ಗಾಂಧಿ ಮುಖ್ಯ ರಸ್ತೆ ಮುಂತಾದೆಡೆ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುವ ರೀತಿಯಲ್ಲಿ ಇಟ್ಟುಕೊಂಡಿದ್ದ ಡಬ್ಟಾ ಅಂಗಡಿಗಳನ್ನು, ತರಕಾರಿ ಮತ್ತು ಹಣ್ಣು ಮಾರಾಟಗಾರರನ್ನು ಬಲವಂತವಾಗಿ ನಿಗದಿಪಡಿಸಿದ ಸ್ಥಳಕ್ಕೆ ರವಾನಿಸುವ ಕಾರ್ಯ ವ್ಯಾಪಾರಸ್ಥರ ತರಕಾರಿನ ನಡುವೆಯೂ ಯಶಸ್ವಿಯಾಗಿ ನಡೆಯಿತು.
ಈ ಹಿಂದೆಯೂ ಇಂತದ್ದೇ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಕೆಲ ದಿನಗಳ ನಂತರ ಪರಿಸ್ಥಿತಿ ಮತ್ತೆ ಮೊದಲಿನಂತೆ ಪ್ರಾರಂಭಗೊಂಡಿತ್ತು. ಇದರಿಂದ ಕಾಮಗಾರಿಗೆ ಅಡಚಣೆ ಆಗುವುದು ಮಾತ್ರವಲ್ಲದೆ ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ತಂದೊಡ್ಡಿತ್ತು. ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮುಂಭಾಗದಲ್ಲಂತೂ ಜನರು ನೆಮ್ಮದಿಯಿಂದ ಸಂಚರಿಸದೇ ಇರುವಂತಹ ಪರಿಸ್ಥಿತಿ ತಲೆದೋರಿತ್ತು.
ಪುರಸಭೆ ಆಡಳಿತ ಪೊಲೀಸರೊಂದಿಗೆ ಚರ್ಚಿಸಿ ಈ ದಿಟ್ಟ ಕ್ರಮಕ್ಕೆ ಮುಂದಾಗಿದ್ದು ಜನಸಾಮಾನ್ಯರಿಂದ ಪ್ರಶಂಸೆಗೊಳಗಾಯಿತು. ಏತನ್ಮಧ್ಯೆ ಕಾರ್ಯಾಚರಣೆಯ ಅರಿವು ಇಲ್ಲದೆ ಬೆಳಿಗ್ಗೆಯಿಂದ ತರಕಾರಿ, ಹಣ್ಣು ಮಾರಲು ಹಳ್ಳಿಗಳಿಂದ ಬಂದಿದ್ದ ಮತ್ತು ಸ್ಥಳೀಯ ವ್ಯಾಪಾರಸ್ಥರು ಪೊಲೀಸರ ದಿಢೀರ್ ಕಾರ್ಯಾಚರಣೆಯಿಂದ ಕಂಗಾಲಾದರು. ಕೆಲವರನ್ನು ಪುರಸಭೆ ವಾಹನಗಳಲ್ಲೇ ಸ್ಥಳಾಂತರಿಸಿದರೆ ಮತ್ತೇ ಕೆಲವು ವ್ಯಾಪಾರಸ್ಥರು ತಮ್ಮ ತರಕಾರಿ, ಹಣ್ಣು ಮುಂತಾದವುಗಳನ್ನು ತಾವೇ ಹೊತ್ತುಕೊಂಡು ಹೊರಟಿದ್ದು ಕಂಡುಬಂತು.
ಕೆಬಿಎಂಪಿ ಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಿದ್ದ ಎಲ್ಲ ಡಬ್ಟಾ ಅಂಗಡಿಗಳನ್ನೂ ತೆರವುಗೊಳಿಸಲು ಕ್ರಮ ಕೈಕೊಳ್ಳಲಾಯಿತು. ಈ ವೇಳೆ ಡಬ್ಟಾ ಅಂಗಡಿಯಲ್ಲಿ ಚರ್ಮಕುಟೀರ ಇಟ್ಟು ವ್ಯಾಪಾರ ನಡೆಸುತ್ತಿದ್ದ ಮಹಿಳೆಯೊಬ್ಬಳು ತನಗೆ ಹೊಟ್ಟೆಪಾಡಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಅಂಗಡಿ ಕಿತ್ತಬೇಡಿ. ಕಿತ್ತಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಕಣ್ಣೀರು ಸುರಿಸಿದರೂ ಪ್ರಯೋಜನ ಆಗಲಿಲ್ಲ. ಕೆಲವರು ಸ್ವಯಂ ಪ್ರೇರಣೆಯಿಂದ ಅಂಗಡಿ ತೆರವಿಗೆ ಮುಂದಾಗಿದ್ದದ್ದು ಕಂಡುಬಂತು. ಈ ವೇಳೆ ವ್ಯಾಪಾರಸ್ಥರ ಪ್ರತಿನಿ ಧಿಗಳು ಮತ್ತು ಪುರಸಭೆ, ಪೊಲೀಸ್ ಅ ಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದೂ ನಡೆಯಿತು. ಆದರೆ ನಗರ ಸೌಂದಯೀಕರಣ ಮತ್ತು ಸಂಚಾರ ಸಮಸ್ಯೆ ನಿಯಂತ್ರಣದ ಒತ್ತಡದಲ್ಲಿದ್ದ ಅಧಿಕಾರಿಗಳು ವಾಗ್ವಾದಗಳಿಗೆ ಹೆಚ್ಚು ಮಹತ್ವ ಕೊಡದೆ ತಮ್ಮ ಕೆಲಸ ತಾವು ಮಾಡಿದರು.
ಮಾಜಿ ಸೈನಿಕ, ಚಲವಾದಿ ಮಹಾಸಭಾ ಅಧ್ಯಕ್ಷ ರೇವಣೆಪ್ಪ ಹರಿಜನ ಅವರು ಮುಖ್ಯಾ ಧಿಕಾರಿಣಿ ಎಂ.ಬಿ. ಮಾಡಗಿ ಜೊತೆ ಬಹಿರಂಗವಾಗಿಯೇ ವಾಗ್ವಾದಕ್ಕಿಳಿದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು. ಡಬ್ಟಾ ಅಂಗಡಿ ತೆರವುಗೊಳಿಸುವುದಾದಲ್ಲಿ ಎಲ್ಲ ಅಂಗಡಿಗಳನ್ನೂ ತೆಗೆಯಬೇಕು, ಪುರಸಭೆ ಡಬ್ಟಾ ಅಂಗಡಿ ಬಿಟ್ಟು ಖಾಸಗಿ ಡಬ್ಟಾ ಅಂಗಡಿ ತೆರವಿಗೆ ಮುಂದಾದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಆದರೆ ಅ ಧಿಕಾರಿಗಳು ತಾರತಮ್ಯ ಎಣಿಸದೆ ಎಲ್ಲರನ್ನೂ, ಎಲ್ಲ ಅಂಗಡಿಗಳನ್ನೂ ತೆರವುಗೊಳಿಸಲು ಮುಂದಾಗಿ ಟೀಕೆಯಿಂದ ಪಾರಾದ ಘಟನೆ ನಡೆಯಿತು.
ತರಕಾರಿ ಮಾರಾಟಗಾರರಿಗೆ ಹೊಸ ತರಕಾರಿ ಮಾರುಕಟ್ಟೆಯಲ್ಲಿ, ಹಣ್ಣು ಮತ್ತು ಹೂವಿನ ವ್ಯಾಪಾರಸ್ಥರಿಗೆ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿ, ಸಣ್ಣ ಪುಟ್ಟ ಹೊಟೇಲ್‌ನವರಿಗೆ ಬಸವೇಶ್ವರ ವೃತ್ತದ ಬಳಿ ಇರುವ ಖುಲ್ಲಾ ಜಾಗೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ತಳ್ಳು ಗಾಡಿಯವರು ಓಣಿ ಓಣಿಗಳಲ್ಲಿ ಮಾರಾಟ ನಡೆಸುವಂತೆ ಸೂಚಿಸಲಾಗಿದೆ. ಬಸ್ ನಿಲ್ದಾಣ ಮುಂಭಾಗ ರಸ್ತೆ ಪಕ್ಕ ನಿಲ್ಲದಂತೆ ಆಟೋದವರಿಗೆ ಸೂಚನೆ ನೀಡಿದ್ದ ನಿಲ್ದಾಣದ ಒಳಗೆ ಒಂದು ಕಡೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಆದರೆ ಇದು ಇನ್ನೂ ಅಂತಿಮಗೊಂಡಿಲ್ಲ. ತೋಟಗಾರಿಕೆ ಕಚೇರಿ ಕಾಂಪೌಂಡ್‌ಗೆ ಹೊಂದಿಕೊಂಡು ಇರುವ ಡಬ್ಟಾ ಅಂಗಡಿಗಳನ್ನೂ ತೆರವುಗೊಳಿಸುವ ಮಾತು ಕೇಳಿಬರುತ್ತಿದ್ದು, ಅದಕ್ಕೆ ಪುರಸಭೆ ಇನ್ನೂ ಕೈ ಹಚ್ಚಿಲ್ಲ. ಪುರಸಭೆ ಮುಖ್ಯಾ ಧಿಕಾರಿ ಎಂ.ಬಿ.ಮಾಡಗಿ, ಎಸ್ ಡಿಸಿ ರಮೇಶ ಮಾಡಬಾಳ ಸೇರಿ ಪುರಸಭೆ ಸಿಬ್ಬಂದಿ, ಸಿಪಿಐ ಅನಂದ ವಾಗ್ಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ ಸೇರಿ ಜಿಲ್ಲಾ ಕೇಂದ್ರದಿಂದ ಆಗಮಿಸಿದ್ದ ಪೊಲೀಸರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು. ಆದರೆ ಕಾರ್ಯಾಚರಣೆ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಒಳ್ಳೆಯ ಕೆಲಸ ಎಂದರೆ ಮತ್ತೇ ಕೆಲವರು ಬಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿ ತೆರವುಗೊಳಿಸಬೇಕಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.