ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವರಾರು?
ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಇಂಗ್ಲಿಷ್ ಮೀಡಿಯಂ ವಸತಿ ಶಾಲೆ (ಇಣಚಗಲ್) ಕಥೆ-ವ್ಯಥೆ
Team Udayavani, Dec 14, 2019, 3:57 PM IST
ಡಿ.ಬಿ. ವಡವಡಗಿ
ಮುದ್ದೇಬಿಹಾಳ: ವಿವಾದದಲ್ಲೇ ಪ್ರಾರಂಭಗೊಂಡಿರುವ ಇಲ್ಲಿನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಇಂಗ್ಲಿಷ್ ಮೀಡಿಯಂ ವಸತಿ ಶಾಲೆ (ಇಣಚಗಲ್)ಗೆ ಸಮಸ್ಯೆಗಳೇ ಕಂಟಕವಾಗಿ ಕಾಡತೊಡಗಿದ್ದು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಅಧಿಕಾರಿ ವರ್ಗದವರನ್ನು ಕಂಗೆಡಿಸಿದಂತಾಗಿದೆ.
ಸದ್ಯ ಮಹಾರಾಷ್ಟ್ರದಲ್ಲಿ ವಾಸವಾಗಿರುವ ಮುದ್ದೇಬಿಹಾಳ ತಾಲೂಕಿನ ಇಣಚಗಲ್‌ನ ನಿವೃತ್ತ ನ್ಯಾಯಾಧೀಶ, ಕನ್ನಡಿಗ ಜಿ.ಡಿ.ಇನಾಮದಾರ ಅವರು 4-5 ವರ್ಷಗಳ ಹಿಂದೆ ತಮ್ಮೂರಿಗೆ ಏನಾದರೂ ಕೊಡುಗೆ ನೀಡಬೇಕೆಂದು ತೀರ್ಮಾನಿಸಿ ಅತಿ ಹಿಂದುಳಿದ ಆ ಭಾಗದ ಬಡಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತಮ್ಮ ಸ್ವಂತ ಜಮೀನು ದಾನ ನೀಡಲು ಮುಂದೆ ಬಂದು ಆಗಿನ ಸರ್ಕಾರದ ಮನವೊಲಿಸಿ ಈ ಶಾಲೆಯನ್ನು ಮಂಜೂರು ಮಾಡಿಸಿಕೊಂಡಿದ್ದರು.
ಸರ್ಕಾರದ ಮಂಜೂರಾತಿ ದೊರಕಿದ ಮೇಲೆ ಇಲ್ಲಿನ ಮಾರುತಿನಗರದಲ್ಲಿ ತಾತ್ಕಾಲಿಕವಾಗಿ ಶಾಲೆ ಪ್ರಾರಂಭಿಸಲಾಗಿತ್ತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮಾನದಂಡಗಳ ಅನುಸಾರವೇ ಮಕ್ಕಳನ್ನು ಪ್ರವೇಶ ಪರೀಕ್ಷೆ ಮೂಲಕ ದಾಖಲು ಮಾಡಿಕೊಳ್ಳಲಾಗಿತ್ತು. ಕೆಲ ರಾಜಕೀಯ ಕಾರಣಗಳಿಗಾಗಿ ಪ್ರಾರಂಭದಲ್ಲೇ ಶಾಲೆ ವಿವಾದಕ್ಕೆ ಸಿಲುಕಿಕೊಂಡಿತು. ಆಗ ಶಾಸಕರಾಗಿದ್ದ ಸಿ.ಎಸ್. ನಾಡಗೌಡ ಅವರು ಶಾಲೆಯನ್ನು ಇಣಚಗಲ್‌ನಿಂದ ಬೇರೆ ಕಡೆ ಸ್ಥಳಾಂತರಗೊಳಿಸಿದ್ದರು. ಇದಕ್ಕೆ ನ್ಯಾ| ಇನಾಮದಾರ ಅವರು ತಡೆಯೊಡ್ಡಿ ಕಾನೂನು ಹೋರಾಟ ನಡೆಸಿ ಈ ಶಾಲೆಯನ್ನು ಉಳಿಸಿಕೊಂಡಿದ್ದರು.
ಕಾನೂನು ಸಮರದಲ್ಲಿ ಹಿನ್ನಡೆ ಎದುರಿಸಿದ ನಾಡಗೌಡರು ಇದೇ ಹೆಸರಿನ ಇನ್ನೊಂದು ಶಾಲೆಯನ್ನು ಮಂಜೂರು ಮಾಡಿಸಿ ಮುದ್ದೇಬಿಹಾಳದಲ್ಲಿ ನಡೆಯುವಂತೆ ನೋಡಿಕೊಂಡಿದ್ದರು. ಎರಡು ಶಾಲೆಗಳು ಒಂದೇ ಕಟ್ಟಡದಲ್ಲಿ ನಡೆಯತೊಡಗಿದ್ದರಿಂದ ಸಮಸ್ಯೆ ಸೃಷ್ಟಿಯಾಗತೊಡಗಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಇಣಚಗಲ್‌ನಲ್ಲಿ ಶಾಲಾ ಕಟ್ಟಡ ನಿರ್ಮಾಣಗೊಳ್ಳುವವರೆಗೆ ಈ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಲು ತೀರ್ಮಾನಿಸಿದರು.
ಪರಿಣಾಮ ಯಾವುದೇ ಮೂಲಸೌಕರ್ಯ ಇಲ್ಲದ ವಿದ್ಯಾನಗರದ ಖಾಸಗಿ ಶಾಲೆಯ ಕಟ್ಟಡವೊಂದನ್ನು ಬಾಡಿಗೆ ಪಡೆದುಕೊಂಡು ಅಲ್ಲಿ 6-7 ತಿಂಗಳ ಹಿಂದೆ ಈ ಶಾಲೆ ಪ್ರಾರಂಭಿಸಲಾಯಿತು.
ಶಾಲೆ ಬಗ್ಗೆ ಪಕ್ಷಿನೋಟ: ಈ ಶಾಲೆಯಲ್ಲಿ 6-9 ತರಗತಿಗಳು ನಡೆಯುತ್ತವೆ. 6, 7ಕ್ಕೆ ತಲಾ 50, 8, 9ಕ್ಕೆ ತಲಾ 49 ಸೇರಿ ಒಟ್ಟು 198
ವಿದ್ಯಾರ್ಥಿಗಳಿದ್ದು ಇವರಲ್ಲಿ 118 ಬಾಲಕ, 80 ಬಾಲಕಿಯರು ಇದ್ದಾರೆ. ಓರ್ವ ಪ್ರಾಂಶುಪಾಲ, ಬೋಧನೆಗಾಗಿ 3 ಸರ್ಕಾರಿ, 6 ಹೊರಗುತ್ತಿಗೆ ಸೇರಿ 9 ಶಿಕ್ಷಕರು, ವಿದ್ಯಾರ್ಥಿಗಳ ಆಗು ಹೋಗು ನೋಡಿಕೊಳ್ಳಲು ತಲಾ ಓರ್ವ ವಾರ್ಡನ್, ವಾಚ್‌ಮನ್, ಸ್ವೀಪರ್, ಫ್ಯೂನ್, ಸ್ಟಾಫ್ ನರ್ಸ್, ಎಫ್‌ಡಿಎ ಹಾಗೂ ಅಡುಗೆ ಮಾಡಲು ಮೂವರು ಮಹಿಳಾ ಅಡುಗೆ ಸಿಬ್ಬಂದಿ ಇದ್ದಾರೆ. ಈ ಸಿಬ್ಬಂದಿಯನ್ನು ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ.
ಕಟ್ಟಡದ ಮೊದಲ, ಎರಡನೇ ಅಂತಸ್ತನ್ನು ಈ ಶಾಲೆಗೆ ಬಿಟ್ಟುಕೊಡಲಾಗಿದ್ದು,ನೆಲ ಅಂತಸ್ತಿನಲ್ಲಿ ಖಾಸಗಿ ಶಾಲೆಯೊಂದನ್ನು ನಡೆಸಲಾಗುತ್ತಿದೆ. ಈ ಕಟ್ಟಡಕ್ಕೆ ಪಿಡಬ್ಲೂಡಿಯವರು ಇನ್ನೂ ಬಾಡಿಗೆ ಅಂತಿಮಗೊಳಿಸಿಲ್ಲ.
ಸಮಸ್ಯೆಗಳೇನು?: ಈ ಕಟ್ಟಡಕ್ಕೆ ಮೂಲ ಸೌಕರ್ಯಗಳ ಕೊರತೆ ಇದೆ. ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಶಾಲಾ ಆವರಣದಲ್ಲಿನ ಬೋರ್‌ವೆಲ್ ನೀರನ್ನು ಬಳಸಲಾಗುತ್ತಿದೆ. ಪ್ರಾರಂಭದಲ್ಲಿ ಈ ನೀರನ್ನುಫಿಲ್ಟರ್ ಮಾಡಿ ಕುಡಿಯಲು ಬಳಸಲಾಗುತ್ತಿತ್ತು. ಈಗ 2 ದಿನಗಳಿಂದ ಈ ವ್ಯವಸ್ಥೆ ಬದಲಾಯಿಸಿ ಶುದ್ಧ ಘಟಕದಿಂದ ನೀರು ತಂದು ಕುಡಿಯಲು ಕೊಡಲಾಗುತ್ತಿದೆ. ಅಡುಗೆ ಕೋಣೆಯಲ್ಲಿ ನೈರ್ಮಲ್ಯ ಅನ್ನುವುದು ಎಲ್ಲೂ ಕಂಡು ಬರುವುದಿಲ್ಲ. ಕಾರಿಡಾರ್‌ನಲ್ಲಿ ಅಕ್ಕಿ ಸ್ವತ್ಛಗೊಳಿಸುತ್ತಿದ್ದು ಅಲ್ಲಿ ಚಪ್ಪಲಿ ಧರಿಸಿದವರು ತಿರುಗಾಡುವುದರಿಂದ ಚಪ್ಪಲಿಗಂಟಿದ ಧೂಳು, ಮಣ್ಣಿನ ಕಣ ಅಕ್ಕಿ ಸೇರಿಕೊಳ್ಳುತ್ತದೆ. ಮಕ್ಕಳಿಗೋಸ್ಕರ ತಯಾರಿಸಿರುವ ಊಟದ ಮೆನುವಿನ ಪ್ರಕಾರ ಊಟ ಬಡಿಸುವುದಿಲ್ಲ. ಪೌಷ್ಟಿಕಾಂಶ ಇರುವ ಆಹಾರ, ಹಸಿರು ಪಲೆÂ, ತರಕಾರಿ ಬಳಕೆ ಕಡಿಮೆ ಇದೆ. ಮಕ್ಕಳಿಗೆ ಬದನೆಕಾಯಿ, ಆಲೂಗಡ್ಡೆ ಮಾತ್ರ ಯಥೇತ್ಛವಾಗಿ ಕೊಡಲಾಗುತ್ತದೆ. ಅನೇಕ ಬಾರಿ ಕೊಳೆತ ಟೊಮೇಟೋ, ಹಸಿ ಮೆಣಸಿನಕಾಯಿ, ತರಕಾರಿ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಕಂಡು ಬಂದಿವೆ.
ಮಕ್ಕಳಿಗೆ ಮಲಗಲು ಸೂಕ್ತ ವ್ಯವಸ್ಥೆ ಇಲ್ಲ. ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿನೀರು ಕೊಡುತ್ತಿರಲಿಲ್ಲ. ಸಮಸ್ಯೆ ಕಂಡು ಬಂದ ಮೇಲೆ ಇದೀಗ ಬಿಸಿನೀರನ್ನು ಪ್ರಾರಂಭಿಸಲಾಗಿದೆ. 198 ಮಕ್ಕಳಿಗೆ ಮೂವರು ಅಡುಗೆಯವರು ಮಾತ್ರ ಇರುವುದರಿಂದ ಎಲ್ಲರಿಗೂ ಗುಣಮಟ್ಟದ ಊಟ ಮಾಡಿ ಬಡಿಸುವುದು ಸಾಧ್ಯವಾಗುತ್ತಿಲ್ಲ. ತಯಾರಿಸಿದ ಆಹಾರದಲ್ಲೇ ಕೆಲ ಪ್ರಮಾಣವನ್ನು ಅಡುಗೆಯವರು ಕದ್ದು ಮನೆಗೆ ಒಯ್ಯುತ್ತಿರುವುದು ಮಕ್ಕಳ ಊಟದ ಸಮಸ್ಯೆಯ ಗಂಭೀರತೆಗೆ ದಾರಿ ಮಾಡಿಕೊಟ್ಟಂತಾಗಿದೆ. ವಾರ್ಡನ್ ನಿಂಗನಗೌಡ ಪಾಟೀಲಗೆ ನಿಡಗುಂದಿ ಸೇರಿ ಮೂರು ಶಾಲೆಗಳ ಇನ್‌ಚಾರ್ಜ್ ಇರುವುದರಿಂದ ಈ ಮಕ್ಕಳ ಬಗ್ಗೆ ವೈಯುಕ್ತಿಕ ಕಾಳಜಿ ವಹಿಸುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.
ಗಂಭೀರಗೊಂಡ ಆರೋಗ್ಯ ಸಮಸ್ಯೆ: ಕಳೆದ ಮೂರು ದಿನಗಳಿಂದ ಇಲ್ಲಿನ ಬಾಲಕಿಯರಿಗೆ ಕೈ ಸೆಟೆದಂತಾಗುವುದು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವುದು ನಡೆದು ದಿಢೀರ್ ಅಸ್ವಸ್ಥರಾಗುತ್ತಿದ್ದಾರೆ. ಬಾಲಕರ ಮೈಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಇದು ಗಂಭೀರಗೊಂಡು ಕೆಲವರು ಜಿಲ್ಲಾಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದಾರೆ. ಇದಕ್ಕೆಲ್ಲ ಕಾರಣ ಅಲ್ಲಿ ಕೊಡುತ್ತಿರುವ ಅಪೌಷ್ಟಿಕ ಆಹಾರ ಮತ್ತು ನೀರು ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದನ್ನರಿತ ವೈದ್ಯರು ತಂಡೋಪತಂಡವಾಗಿ ಶಾಲೆಗೆ ಧಾವಿಸಿ ಮಕ್ಕಳಿಗೆ ಚಿಕತ್ಸೆ ನೀಡುವಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳೂ ಶಾಲೆಗೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ. ಗಂಭೀರತೆ ಅರಿತು ಆತಂಕಕ್ಕೀಡಾಗಿರುವ ಕೆಲ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯತೊಡಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.