ತೊಗರಿ ಬೆಳೆಗಾರರಲ್ಲಿ ಸಂತಸ ಛಾಯೆ
ಮಸಾರಿ ಭೂಮಿಯಲ್ಲಿ 5-6 ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಗುಳ್ಯಾಳು ತೊಗರಿ ಗಿಡಗಳು
Team Udayavani, Dec 2, 2019, 1:39 PM IST
ಡಿ.ಬಿ. ವಡವಡಗಿ
ಮುದ್ದೇಬಿಹಾಳ: ತಾಲೂಕಿನಲ್ಲಿ ಸತತ ಬರಗಾಲದಿಂದ ಬೇಸತ್ತು ಕಂಗೆಟ್ಟಿದ್ದ ಮಳೆ ಆಧಾರಿತ ಮಸಾರಿ ಖುಷ್ಕಿ ಜಮೀನು ಹೊಂದಿರುವ ರೈತರಿಗೆ ಈ ಬಾರಿ ಮುಂಗಾರು ಕೈ ಹಿಡಿದು ಮುರುಟಿ ಹೋಗಿದ್ದ ಮುಖದಲ್ಲಿ ಸಂತಸದ ಗೆರೆ ಕಾಣುವಂತೆ ಮಾಡಿದೆ. ಅದರಲ್ಲೂ ಮಸಾರಿ ಭೂಮಿಯಲ್ಲಿನ ತೊಗರಿ ಬೆಳೆಯಂತೂ ಬಂಪರ್ ಬೆಳೆಯಾಗಿ ಹೊರಹೊಮ್ಮುವ ಲಕ್ಷಣಗಳು ಕಂಡು ಬಂದಿದ್ದು ಉತ್ತರ ಕರ್ನಾಟಕದ ತೊಗರಿ ಕಣಜ ಖ್ಯಾತಿಯ ಕಿರೀಟಕ್ಕೆ ಈ ತಾಲೂಕು ಗರಿ ಮೂಡಿಸುವ ಸಾಧ್ಯತೆ ಹೇರಳವಾಗಿದೆ.
ಕಳೆದ 2-3 ತಿಂಗಳ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆ ಆಗಿದೆ. ಮಳೆಗೂ ಮುನ್ನ, ಒಂದೆರಡು ಮಳೆ ಆದ ಮೇಲೆ ಬಿತ್ತುಣಿಕೆ ಮಾಡಿರುವ ಖುಷ್ಕಿ ಜಮೀನು ರೈತರು ತಮ್ಮ ಹೊಲದಲ್ಲಿನ ಬೆಳೆಗೆ ರೋಗ ಬಾಧೆ ಕಾಡದೇ ಇದ್ದಲ್ಲಿ
ಹಿಂದಿನ ಕಹಿ ಅನುಭವ ಮರೆತು ಮರಳಿ ಕೃಷಿಯತ್ತ ಮುಖ ಮಾಡುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ತಾಲೂಕಿನ ಕೃಷಿ ಚಿತ್ರಣ: ಮುದ್ದೇಬಿಹಾಳ ತಾಲೂಕಲ್ಲಿದ್ದ ತಾಳಿಕೋಟೆ ಭಾಗವನ್ನು ಬೇರ್ಪಡಿಸಿ ನೂತನ ತಾಲೂಕನ್ನಾಗಿ ಮಾಡಿದರೂ ಕೃಷಿ ಇಲಾಖೆ ವಿಭಜನೆಗೊಂಡಿಲ್ಲ. ಹೀಗಾಗಿ ಮುದ್ದೇಬಿಹಾಳ ತಾಲೂಕಿನ ಕೃಷಿ ಇಲಾಖೆ ಎಂದೇ ಪರಿಗಣಿಸಲ್ಪಡುತ್ತಿದೆ. ಮುದ್ದೇಬಿಹಾಳ, ಢವಳಗಿ, ನಾಲತವಾಡ ಮತ್ತು ತಾಳಿಕೋಟೆ ಹೋಬಳಿ ಮಾಡಿ ಆಯಾ ಕಡೆ ರೈತ ಸಂಪರ್ಕ ಕೇಂದ್ರ ನಿರ್ಮಿಸಿ ರೈತರಿಗೆ ಇಲಾಖೆ ಪ್ರಯೋಜನ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.
ತಾಲೂಕಿನ ಕೃಷಿ ಇಲಾಖೆ ವ್ಯಾಪ್ತಿಗೆ 4 ಹೋಬಳಿಯ 153 ಗ್ರಾಮ, 27 ತಾಂಡಾ ಬರುತ್ತವೆ. ಒಟ್ಟು ಭೌಗೋಳಿಕ ಕ್ಷೇತ್ರ 149744 ಹೆಕ್ಟೇರ್ ಇದೆ. ಈ ಪೈಕಿ ಸಾಗುವಳಿ ಕ್ಷೇತ್ರ 138437 ಹೆ., ಮುಂಗಾರು ಕ್ಷೇತ್ರ 61636 ಹೆ., ಹಿಂಗಾರು ಕ್ಷೇತ್ರ 67447 ಹೆ. ಇದೆ. ಆಮಲಟ್ಟಿ ಎಡದಂಡೆ ಕಾಲುವೆ ನೀರಾವರಿ-7015 ಹೆ., ಕೊಳವೆ ಬಾವಿ ನೀರಾವರಿ-5995 ಹೆ., ತೆರೆದ ಬಾವಿ ನೀರಾವರಿ-7015 ಹೆ. ಸೇರಿ ಒಟ್ಟು 25240 ಹೆ. ನೀರಾವರಿ ಕ್ಷೇತ್ರ ಇದೆ. ತಾಳಿಕೋಟೆ ಹೊಸ ತಾಲೂಕು ಆಗಿ ರಚನೆಗೊಂಡಿದ್ದರಿಂದ ಕೃಷಿ ಇಲಾಖೆಯನ್ನು ವಿಭಜಿಸಿದ ನಂತರ ಈ ಕ್ಷೇತ್ರದಲ್ಲಿ ಕಡಿತ ಆಗಲಿದೆ.
ನೀರಾವರಿ ಬೆಳೆ ಬಗ್ಗೆ ಯಾರೂ ಹೆಚ್ಚು ಚಿಂತನೆ ನಡೆಸುವುದಿಲ್ಲ. ಆದರೆ ಮಳೆಯನ್ನೇ ನಂಬಿರುವ ಒಣ ಬೇಸಾಯದ ರೈತರು ಮಾತ್ರ ಕಳೆದ 4-5 ವರ್ಷಗಳಿಂದ ಪ್ರತಿ ಬಾರಿ ಮಳೆರಾಯನ ಮುನಿಸಿಗೆ ಬಲಿಯಾಗುತ್ತ ಬರಗಾಲದ ಬವಣೆಗೆ ಸಿಕ್ಕಿ ನರಳುತ್ತಿದ್ದರು. ಇಂಥವರ ಜಮೀನಿನಲ್ಲಿ ಉತ್ತಮ ಮಳೆ ಆಗಿದ್ದು ಫಲವತ್ತಾದ ಬೆಳೆ ಬಂದಲ್ಲಿ ಕಾಣುವ ಸಂತಸ, ಸಂಭ್ರಮ ಬೇರಾವುದರಿಂದಲೂ ಕಾಣುವುದಿಲ್ಲ. ಇಂಥ ಸಂತಸ, ಸಂಭ್ರಮ ಈಗ ಕಂಡು ಬರುತ್ತಿರುವುದಕ್ಕೆ ಉತ್ತಮ ಮಳೆ, ಫಲವತ್ತಾದ ಬೆಳೆ ಕಾರಣ ಎನ್ನುವ ಮಾತು ರೈತರಿಂದ ಕೇಳಿಬರುತ್ತಿದೆ.
ಗುರಿ-ಸಾಧನೆ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಆಹಾರ ಧಾನ್ಯದಲ್ಲಿ ಬರುವ ಏಕದಳ ಬೆಳೆ ಜೋಳ, ಸಜ್ಜೆ, ನವಣೆ, ದ್ವಿದಳ ಬೆಳೆ ತೊಗರಿ, ಹೆಸರು, ಹುರುಳಿ, ಉದ್ದು, ಅಜವಾನ, ಮಡಿಕೆ, ಅಲಸಂದಿ, ಎಣ್ಣೆಕಾಳು ಬೆಳೆ ಸೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಸೋಯಾ ಅವರೆ, ಔಡಲ, ವಾಣಿಜ್ಯ ಬೆಳೆ ಹತ್ತಿ, ಕಬ್ಬು ಬೆಳೆದಿದ್ದಾರೆ. ಏಕದಳದಲ್ಲಿ ನೀರಾವರಿಗೆ
2012 ಹೆ., ಖುಷ್ಕಿಗೆ 317 ಹೆ. ಬಿತ್ತನೆ ಗುರಿ ಇತ್ತು.
ನೀರಾವರಿ-1911 ಹೆ., ಖುಷ್ಕಿ-5373 ಹೆ. ಗುರಿ ಸಾಧಿಸಲಾಗಿದೆ. ಖುಷ್ಕಿಯಲ್ಲಿ ಒಂದೂವರೆ ಸಾವಿರಪಟ್ಟು ಅಧಿಕ ಸಾಧನೆಗೆ ಉತ್ತಮ ಮಳೆ ಕಾರಣವಾಗಿದ್ದು 5006 ಹೆ. ಜಮೀನಿನಲ್ಲಿ ಸಜ್ಜಿ ಬೆಳೆದದ್ದು ಇದಕ್ಕೆ ಕಾರಣ. ದ್ವಿದಳದಲ್ಲಿ ನೀರಾವರಿಗೆ 8416 ಹೆ., ಖುಷ್ಕಿಗೆ 61141 ಹೆ. ಬಿತ್ತನೆ ಗುರಿ ಇತ್ತು. ನೀರಾವರಿ-3243 ಹೆ., ಖುಷ್ಕಿ-58613ಹೆ. ಗುರಿ ಸಾ ಸಲಾಗಿದೆ. 58232 ಹೆ.ನಲ್ಲಿ ತೊಗರಿ ಬೆಳೆದದ್ದು ಬಂಪರ್ ಎನ್ನಿಸಿಕೊಂಡಿದೆ.
ಎಣ್ಣೆಕಾಳು ಧಾನ್ಯಗಳಲ್ಲಿ ಗುರಿಸಾಧನೆ ಸಾಧ್ಯವಾಗಿಲ್ಲ. ರೈತರು ಈ ಧಾನ್ಯಗಳತ್ತ ಹೆಚ್ಚು ಆಸಕ್ತಿ ತೋರಿಸಿಲ್ಲ. ಆದರೆ ವಾಣಿಜ್ಯ ಬೆಳೆಯಲ್ಲಿ ಮಾತ್ರ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಸಾಧನೆ ಮಾಡಲಾಗಿದೆ. ನೀರಾವರಿಯಲ್ಲಿ 2584 ಹೆ. ಇದ್ದ ಗುರಿ 7122 ಹೆ.ಗೆ ಸಾಧನೆ ಆಗಿದ್ದರೆ ಖುಷ್ಕಿಯಲ್ಲಿ 2775 ಹೆ.ಇದ್ದ ಗುರಿ 7351 ಹೆ.ನಷ್ಟು ಸಾಧನೆ ಆಗಿದೆ. ಈ ಬಾರಿ ರೈತರು ಹತ್ತಿ ಬೆಳೆಯತ್ತ ಹೆಚ್ಚು ಆಕರ್ಷಿತರಾಗಿದ್ದು 393 ಹೆಕ್ಟೇರ್‌ನ ಗುರಿ 7351 ಹೆಕ್ಟೇರ್‌ಗೆ ಏರಿದ್ದು ಇದಕ್ಕೆ ಕಾರಣ.
ಢವಳಗಿ ಹೋಬಳಿಯಲ್ಲಿ ಅತಿ ಹೆಚ್ಚು ಶೇ. 138.9, ಮುದ್ದೇಬಿಹಾಳ ಹೋಬಳಿಯಲ್ಲಿ ಶೇ. 101, ನಾಲತವಾಡ ಹೋಬಳಿಯಲ್ಲಿ 91.8, ತಾಳಿಕೋಟೆ ಹೋಬಳಿಯಲ್ಲಿ ಅತಿ ಕಡಿಮೆ ಶೇ.89.8 ಗುರಿ ಸಾಧಿ ಸಿದಂತಾಗಿದೆ. ಒಟ್ಟಾರೆ ಕೃಷಿಯಲ್ಲಿ ತಾಲೂಕಿನ ಪ್ರಗತಿ ಶೇ. 105.07ರಷ್ಟಿರುವುದು ಸಂತಸ ಮೂಡಿಸಿದಂತಾಗಿದೆ.