ಕಾಲುಸಂಕ; ಮಲೆನಾಡಿಗರ ಜೀವಕ್ಕೇ ಕಂಟಕ!
ಅಪಾಯಕಾರಿ ಕಾಲುಸಂಕಗಳ ಮೂಲಕ ಹೊಳೆ ದಾಟುವ ಜನರ ಪರಿಸ್ಥಿತಿ ಶೋಚನೀಯ
Team Udayavani, Jul 13, 2019, 11:44 AM IST
ಮೂಡಿಗೆರೆ: ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ಬಸರೀಕಲ್ ಗ್ರಾಮದಲ್ಲಿ ಸೋಮಾವತಿ ಹೊಳೆಗೆ ಗ್ರಾಮಸ್ಥರು ನಿರ್ಮಿಸಿರುವ ಕಾಲುಸಂಕ.
ಮೂಡಿಗೆರೆ: ಭಾಗಶ: ಗುಡ್ಡಗಾಡು ಪ್ರದೇಶದಿಂದ ಕೂಡಿರುವ ತಾಲೂಕಿನ ರೈತರು, ಕೂಲಿ ಕಾರ್ಮಿಕರು ಸಣ್ಣಪುಟ್ಟ ಹಳ್ಳಕೊಳ್ಳಗಳನ್ನು ದಾಟಲು ನಿರ್ಮಿಸಿಕೊಂಡಿರುವ ಕಾಲುಸಂಕಗಳು ಅಪಾಯದಲ್ಲಿದ್ದು, ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಹೊಳೆ ದಾಟುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಲ್ಯ ಗ್ರಾಮದ ಬಳಿಯ ಬಸರೀಕಲ್ನಲ್ಲಿ ಮಳೆಗಾಲದಲ್ಲಿ ಸೋಮಾವತಿ ಹೊಳೆ ದಾಟಲು ಸ್ಥಳೀಯರೇ ನಿರ್ಮಿಸಿದ ತಾತ್ಕಾಲಿಕ ಕಾಲುಸಂಕವೊಂದಿದ್ದು, ಗಟ್ಟಿಮುಟ್ಟಾಗಿದೆ. ಬಸರೀಕಲ್ನಿಂದ ಬಾಯಿಕುಂಡ್ರಿ, ಬೆಳ್ಳ, ಗುಚ್ಚರ್ಕ ಗ್ರಾಮಗಳಿಗೆ ಜನರು ತೆರಳಲು ಸುಮಾರು 12 ಕಿ.ಮೀ. ಸುತ್ತಿ ಬರಬೇಕಾಗುತ್ತದೆ. ಆದರೆ, ಸ್ಥಳೀಯರು ನಿರ್ಮಿಸಿದ ಈ ಕಾಲುಸಂಕದಿಂದ ಆ ಗ್ರಾಮಗಳಿಗೆ ನೇರವಾಗಿ ತೆರಳಲು ಅನುಕೂಲವಾಗಿದೆ. ಸೋಮಾವತಿ ಹೊಳೆ ದಾಟಲು ಸೇತುವೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಹಲವು ಬಾರಿ ಇಲ್ಲಿನ ಗ್ರಾಪಂ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಹಾಗೆಯೇ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಚುಮುಟಿಗೆರೆ ಶಾಲೆ ಹತ್ತಿರ ಹಿರೇಶಿಗಿರ ಕಾಲೋನಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕವೊಂದಿದ್ದು, ಈಗಲೋ ಆಗಲೋ ಬೀಳುವಂತಿದೆ. ಒಂದೊಮ್ಮೆ ಈ ಬಾರಿ ಮಳೆ ಹೆಚ್ಚಾಗಿ ಬಂದಲ್ಲಿ ಈ ಕಾಲುಸಂಕ ಮುರಿದುಬಿದ್ದರೆ ಹಿರೇಶಿಗಿರ ಕಾಲೋನಿಗೆ 4 ಕಿ.ಮೀ.ನಷ್ಟು ಸುತ್ತಿಕೊಂಡು ಹೋಗಬೇಕಾಗುತ್ತದೆ. ಹಾಗಾಗಿ, ಮಳೆ ಹೆಚ್ಚಾಗುವ ಮುನ್ನ ಹಿರೇಶಿಗಿರ ಕಾಲೋನಿಗೆ ತೆರಳಲು ಕಾಲುಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದೇ ಗ್ರಾಪಂ ವ್ಯಾಪ್ತಿಯಲ್ಲಿ ತಮಟೆಬೈಲ್ನಿಂದ ಸೀಗೆಹಳ್ಳಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕ ಇದೀಗ ಸಂಪೂರ್ಣ ನೆಲಕಚ್ಚಿದೆ. ಆದರೆ, ಇಲ್ಲಿ ಬದಲಿ ರಸ್ತೆ ಇರುವುದರಿಂದ ಈ ಕಾಲುಸಂಕದ ಬಗ್ಗೆ ಜನರು ತಲೆಕೆಡಿಸಿಕೊಂಡಿಲ್ಲ.
ತಾಲೂಕಿನ ಊರುಬಗೆ ಗ್ರಾಪಂ ವ್ಯಾಪ್ತಿಯ ಮೂಲರಹಳ್ಳಿಯಿಂದ ಹಡಗುಡ್ಡೆ ಗ್ರಾಮದಲ್ಲಿ 14ಗಿರಿಜನ ಮಲಕುಡುಗೆ ಸಮುದಾಯದವರು ವಾಸವಿದ್ದು, ಮೂಲರಹಳ್ಳಿಯಿಂದ ಹಡಗುಡ್ಡೆ ಗ್ರಾಮಕ್ಕೆ ತೆರಳಲು ಕಾಲುಸಂಕವೊಂದನ್ನು ಅಲ್ಲಿನ ಜನರೇ ನಿರ್ಮಿಸಿಕೊಂಡಿದ್ದಾರೆ. ಆದರೆ, ಈ ಕಾಲುಸಂಕ ಅಷ್ಟೇನೂ ಸುರಕ್ಷಿತವಲ್ಲದ ಕಾರಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಜನರು ಪರ್ಯಾಯ ವ್ಯವಸ್ಥೆ ಮಾಡಿಕೊಡಲು ಆಗ್ರಹಿಸಿ ಚುನಾವಣೆಗೆ ಬಹಿಷ್ಕಾರ ಹಾಕಿದ್ದರು. ಇದರ ಪರಿಣಾಮವಾಗಿ ಮಾಜಿ ಸಚಿವೆ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಮ್ಮ ಅನುದಾನದಲ್ಲಿ ಸೇತುವೆಗೆ ಹಣ ಬಿಡುಗಡೆಗೊಳಿಸಿ, ಇದೀಗ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ.
ಆಯಾ ಗ್ರಾಮದ ಗ್ರಾಮಸ್ಥರು ನಿರ್ಮಿಸುವ ಅಷ್ಟೇನೂ ಭದ್ರವಲ್ಲದ ತಾತ್ಕಾಲಿಕ ಕಾಲುಸಂಕಗಳ ಮೂಲಕ ಓಡಾಡುವ ಜನರು ಯಾವಾಗಲೂ ಜೀವ ಭಯದಿಂದಲೇ ತೆರಳಬೇಕಾಗುತ್ತದೆ. ಮಳೆಗಾಲದಲ್ಲಿ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುವುದರಿಂದ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ, ಸಂಬಂಧಿಸಿದ ಅಕಾರಿಗಳು ಈ ರೀತಿಯ ಕಾಲುಸಂಕಗಳ ಬಗ್ಗೆ ಗಮನ ಹರಿಸಿ ಸುಭದ್ರ ಕಾಲು ಸೇತುವೆ ನಿರ್ಮಾಣ ಮಾಡಿಕೊಡಲು ಇನ್ನಾದರೂ ಗಮನ ಹರಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.