Team Udayavani, Mar 29, 2019, 3:34 PM IST
ಹುಬ್ಬಳ್ಳಿ: ಕಟ್ಟಡ ದುರಂತದಿಂದ ಆಡಳಿತ ವರ್ಗ ಎಚ್ಚೆತ್ತುಕೊಂಡಿದ್ದು, ಮಹಾನಗರ ವ್ಯಾಪ್ತಿಯ ಬಹುಮಹಡಿ ಹಾಗೂ ವಾಣಿಜ್ಯ ಕಟ್ಟಡಗಳ ಸುಸ್ಥಿತಿ ಪರಿಶೀಲನೆಗೆ ನಿರ್ಧರಿಸಲಾಗಿದೆ. ಎರಡು ವರ್ಷದ ಈಚೆಗೆ ನೀಡಿದ ಕಟ್ಟಡ ಅನುಮತಿ ಹಾಗೂ ಕಟ್ಟಡ ಪೂರ್ಣಗೊಳಿಸಿದ ಪ್ರಮಾಣ ಪತ್ರಗಳ ತೀವ್ರ ಪರಿಶೀಲನೆ ನಡೆಯಲಿದೆ.
ಧಾರವಾಡದಲ್ಲಿ ಸಂಭವಿಸಿದ ಬಹುಮಹಡಿ ಕಟ್ಟಡ ದುರಂತ ನಂತರ ಮಹಾನಗರ ವ್ಯಾಪ್ತಿಯ ಬಹುಮಹಡಿ ಕಟ್ಟಡಗಳ ಸುಭದ್ರತೆಯ ಬಗ್ಗೆ ಜಿಲ್ಲಾಡಳಿತ ದೃಷ್ಟಿ ನೆಟ್ಟಿದೆ. ಹೀಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಹಮಹಡಿ ಕಟ್ಟಡ, ವಾಣಿಜ್ಯ ಕಟ್ಟಡ ವಸ್ತುಸ್ಥಿತಿ ಅರಿಯಲು ಪಾಲಿಕೆ ಅಧಿಕಾರಿಗಳ ಮೂಲಕ ವರದಿ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.
ಇದರೊಂದಿಗೆ ವಸತಿಗೆ ಯೋಗ್ಯವಲ್ಲದ ಕಟ್ಟಡಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ. ನಿರ್ಮಾಣ ಹಂತದ ಕಟ್ಟಡಗಳ ಕಾಮಗಾರಿ ಗುಣಮಟ್ಟ, ಬಳಸುತ್ತಿರುವ ಸಾಮಗ್ರಿಗಳ ಗುಣಮಟ್ಟದ ಪರಿಶೀಲನೆ ನಡೆಯಲಿದೆ. ಪ್ರಮುಖವಾಗಿ ಕಟ್ಟಡ ಪೂರ್ಣ ಪ್ರಮಾಣ ಪತ್ರ ನೀಡಿರುವ ಬಗ್ಗೆ ಅಧಿಕಾರಿಗಳು ಹೆಚ್ಚು ಒತ್ತು ನೀಡಲಿದ್ದಾರೆ.
ಅಧಿಕಾರಿಗಳ ತಂಡ ರಚನೆ: ಕಟ್ಟಡಗಳ ಪರಿಶೀಲನೆ ವಾರ್ಡುವಾರು ನಡೆಯಲಿದ್ದು, ಇದಕ್ಕಾಗಿ ವಲಯ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡದಲ್ಲಿ ಪಾಲಿಕೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಜಮೇದಾರರು ಇರಲಿದ್ದು, ತಮ್ಮ ವಲಯ ವ್ಯಾಪ್ತಿಯ ಕಟ್ಟಡಗಳ ಸುಭದ್ರತೆ ಹಾಗೂ ದಾಖಲೆ ಪರಿಶೀಲನೆ ನಡೆಸಲಿದ್ದಾರೆ. ಕಟ್ಟಡದ
ಸುಭದ್ರತೆ ಬಗ್ಗೆ ಸಂಶಯ ವ್ಯಕ್ತವಾದರೆ ಮೂರನೇ ವ್ಯಕ್ತಿಯಿಂದ ಕಟ್ಟಡ ಪರಿಶೀಲಿಸಿ ಸುಭದ್ರತಾ (ಸ್ಟೆಬಿಲಿಟಿ) ಪ್ರಮಾಣ ಪತ್ರ ನೀಡುವಂತೆ ನೋಟಿಸ್ ಜಾರಿ ಮಾಡಲಿದ್ದಾರೆ. ಹೀಗೆ ನೋಟಿಸ್ ಜಾರಿ ಮಾಡಿದ 7 ದಿನದೊಳಗೆ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ.
ಕಟ್ಟಡ ದುರಂತವನ್ನು ಗಂಭೀರವಾಗಿ ಜಿಲ್ಲಾಡಳಿತ ಪರಿಗಣಿಸಿದೆ. ಬಹುಮಹಡಿ, ವಾಣಿಜ್ಯ ಹಾಗೂ ವಸತಿ ಯೋಗ್ಯವಲ್ಲದ ಕಟ್ಟಡಗಳನ್ನು ಪರಿಶೀಲಿಸಿ ಏಪ್ರಿಲ್ 15 ರೊಳಗೆ ಸಂಪೂರ್ಣ ವರದಿ ನೀಡಲು ಮಹಾನಗರ ಪಾಲಿಕೆಗೆ ಜಿಲ್ಲಾಡಳಿತ ಸೂಚಿಸಿದ್ದು, ಒಂದು ವೇಳೆ ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್
ನೀಡಿದ್ದಾರೆ.
ಪ್ರಮಾಣ ಪತ್ರದ ಮೇಲೆ ಕಣ್ಣು: ಕಳೆದ ಎರಡು ವರ್ಷದ ಈಚೆಗೆ ಮಹಾನಗರ ಪಾಲಿಕೆಯಿಂದ ನೀಡಿರುವ ಕಟ್ಟಡ ಪರವಾನಗಿ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಿ ತಪಾಸಣೆ ಮಾಡಲಿದ್ದಾರೆ. ಈ ಕುರಿತು ತೀವ್ರ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ. ಇದರೊಂದಿಗೆ ನಿರ್ಮಾಣ ಹಂತದ ಕಟ್ಟಡಗಳ ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಸೂಚಿಸಿದ್ದಾರೆ. 2018 ರಲ್ಲಿ ಒಂದೇ ತಿಂಗಳಲ್ಲಿ ಪಾಲಿಕೆ ಅಧಿಕಾರಿಯೊಬ್ಬರು 300ಕ್ಕೂ ಹೆಚ್ಚು ಕಟ್ಟಡ ಪರವಾನಗಿ ಹಾಗೂ ಕಟ್ಟಡ ಪೂರ್ಣ ಪರವಾನಗಿ ನೀಡಿರುವುದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ.
ಪ್ರಮಾಣ ಪತ್ರ ನೀಡುವ ಕೇಂದ್ರಗಳು: ಕಟ್ಟಡ ಸುಭದ್ರತಾ ಪ್ರಮಾಣ ಪತ್ರವಿಲ್ಲದ ಕಟ್ಟಡದ ಮಾಲೀಕರು ಪಾಲಿಕೆಯ ಕ್ರಮದಿಂದ ಪಾರಾಗಲು ಈ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಮೂರನೇ ವ್ಯಕ್ತಿಯಿಂದ ಕಟ್ಟಡ ಪರಿಶೀಲಿಸಿ ಪ್ರಮಾಣ ಪತ್ರ ಪಡೆಯಬೇಕಿದೆ. ಇದಕ್ಕಾಗಿ ಮಹಾನಗರ ವ್ಯಾಪ್ತಿಯಲ್ಲಿ ಐದು ಕೇಂದ್ರಗಳನ್ನು ಗುರುತಿಸಿದ್ದು, ಇವು ಸರಕಾರದ ಮಾನ್ಯತೆ ಪಡೆದಿವೆ. ಬಿವಿಬಿ ಎಂಜಿನಿಯರಿಂಗ್ ಕಾಲೇಜ್, ಕೆಎಲ್‌ಇ ಎಂಜನಿಯರಿಂಗ್ ಕಾಲೇಜ್, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜ್, ಕರ್ನಾಟಕ ಟೆಸ್ಟಿಂಗ್ ಆ್ಯಂಡ್ ಲ್ಯಾಬೋರೇಟರ್ ಸೆಂಟರ್ ಹಾಗೂ ಎಸ್ಸಾರ್ ಲ್ಯಾಬೋರೇಟರಿ ಆ್ಯಂಡ್ ರಿಸರ್ಚ್ ಸೆಂಟರ್‌ಗಳ ಮೂಲಕ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.
ಪ್ರಮಾಣ ಪತ್ರ ಇಲ್ಲದ್ದಿದ್ದರೆ ಕ್ರಮ ನಿಶ್ಚಿತ
ಬಹುಮಹಡಿ ಹಾಗೂ ವಾಣಿಜ್ಯ ಕಟ್ಟಡದ ಮಾಲೀಕರು ಕಟ್ಟಡದ ಸುಭದ್ರತಾ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ. 7 ದಿನದೊಳಗೆ ಪ್ರಮಾಣ ಪತ್ರ ಸಂಬಂಧಿಸಿದ ವಲಯ ಕಚೇರಿಗಳಿಗೆ ಸಲ್ಲಿಕೆ ಮಾಡದಿದ್ದರೆ ನೋಟಿಸ್ ಜಾರಿಯಾಗಲಿದೆ. ನೋಟಿಸ್ ನೀಡಿದ ನಂತರ ಹೆಸ್ಕಾಂ ಮೂಲಕ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಿದ್ದಾರೆ. ಹೀಗಾಗಿ 7 ದಿನದೊಳಗೆ ಸುಭದ್ರತಾ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಕಟ್ಟಡಗಳಿಗೆ ನೋಟಿಸ್
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಇಲ್ಲಿನ ಹೊಸೂರು ವೃತ್ತದ ನಾಲಾ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಡೀ ಕಟ್ಟಡ ಕೆಲವೇ ಪಿಲ್ಲರ್‌ಗಳ ಮೇಲೆ ನಿಂತಿರುವುದು ಮೇಲ್ನೋಟಕ್ಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ 5 ನೇ ವಲಯ ಕಚೇರಿಯಿಂದ ನೋಟಿಸ್ ಜಾರಿ ಮಾಡಿಲಾಗಿದೆ. ಕೂಡಲೇ ಕಟ್ಟಡದ ಸುಭದ್ರತೆ ಪ್ರಮಾಣ ಪತ್ರ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ವಲಯ ಕಚೇರಿ ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಿರ್ಮಾಣವಾಗಿರುವ, ನಿರ್ಮಾಣ ಹಂತದಲ್ಲಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭವಾಗುತ್ತಿದೆ. 15 ದಿನದೊಳಗೆ ಜಿಲ್ಲಾಧಿಕಾರಿಗಳಿಗೆ ಈ ವರದಿ ಸಲ್ಲಿಸಲಾಗುತ್ತಿದೆ. ಸಮೀಕ್ಷೆಗಾಗಿ ವಲಯವಾರು ತಂಡಗಳನ್ನು ರಚಿಸಲಾಗಿದೆ. ಬಹುಮಡಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡಗಳ ಸುಭದ್ರತಾ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಿದೆ. ವಸತಿ ಯೋಗ್ಯವಲ್ಲದ ಕಟ್ಟಡಗಳನ್ನು ಗುರುತಿಸಿ ಕಾನೂನು ಪ್ರಕಾರ ತೆರವುಗೊಳಿಸುವ ಕಾರ್ಯ ನಡೆಯಲಿದೆ.
ಶಕೀಲ್ ಅಹ್ಮದ್, ಪಾಲಿಕೆ ಆಯುಕ್ತ
ಹೇಮರಡ್ಡಿ ಸೈದಾಪುರ