ಮೂರುಸಾವಿರ ಮಠ ಆಸ್ತಿ ಪರಭಾರೆ ಸಲ್ಲ
Team Udayavani, Feb 8, 2021, 5:20 PM IST
ಹುಬ್ಬಳ್ಳಿ: ಮೂರುಸಾವಿರಮಠದ ಆಸ್ತಿ ಪರಭಾರೆಯಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸುವುದು, ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಉನ್ನತ ಸಮಿತಿ ಪುನರಚನೆ, ದಾನ ಮಾಡಿರುವ ಆಸ್ತಿಯನ್ನು ಮಠಕ್ಕೆ ವಾಪಸ್ ಪಡೆಯುವುದು ಸೇರಿದಂತೆ ಮಠದ ಮೇಲೆ ಉಂಟಾಗಿರುವ ಕಳಂಕ ತೊಲಗಿಸಿ ಅಭಿವೃದ್ಧಿಗೆ ಆದ್ಯತೆ ನೀಡುವ ಕುರಿತು ನಿರ್ಧರಿಸಲಾಯಿತು.
ಇಲ್ಲಿನ ಅಕ್ಷಯ ಪಾರ್ಕ್ ಬಳಿಯಿರುವ ವಿಧಾನ ಪರಿಷತ್ತು ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರ ಕಚೇರಿಯಲ್ಲಿ ರವಿವಾರ ಸಂಜೆ ನಡೆದ ವೀರಶೈವ ಲಿಂಗಾಯತ ಸಮಾಜ ಹಾಗೂ ಪ್ರಮುಖ ಭಕ್ತರ ಸಭೆಯಲ್ಲಿ ಮಠದ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆದು ಅಭಿವೃದ್ಧಿಗೆ ಪೂರಕವಾಗಿ ರೂಪರೇಷೆ ರಚಿಸುವ ಕುರಿತು ಚರ್ಚಿಸಲಾಗಿದೆ.
ಪ್ರಮುಖ ನಿರ್ಧಾರಗಳು: ಕೆಎಲ್‌ಇ ಸಂಸ್ಥೆಗೆ ದಾನ ಮಾಡಿರುವ ಆಸ್ತಿಯನ್ನು ಮರಳಿ ಪಡೆಯುವಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದು, ಈ ಕುರಿತು ಭಕ್ತರ ನೇತೃತ್ವದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಮಿತಿಗಳನ್ನು ರಚಿಸುವುದು. ಈ ಸಮಿತಿಗಳ ಮೂಲಕ ಭಕ್ತರ ಮನೆಗಳಿಗೆ ತೆರಳಿ ಅರಿವು ಮೂಡಿಸುವುದು. ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿರುವ ಮಠದ ಉನ್ನತ ಸಮಿತಿ ಪುನರಚನೆಗೆ ಒತ್ತಾಯಿಸುವುದು. ಪಕ್ಷಾತೀತವಾಗಿ ಉದ್ಯಮಿಗಳು, ನಿವೃತ್ತ ಹಿರಿಯ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಹಿರಿಯ ಸಾಧಕರು, ಮಠ ಹಾಗೂ ಸಮಾಜದ ಬಗ್ಗೆ ಕಾಳಜಿ ಇರುವವರ ನೇತೃತ್ವದಲ್ಲಿ ಸಮಿತಿ ರಚನೆಯಾಗಬೇಕು. ಮಠದ ಆಸ್ತಿ ಪರಭಾರೆಯಾಗಿರುವ ಕುರಿತು ಕೂಡಲೇ ಉನ್ನತ ಸಮಿತಿ ಸಮಾಜಕ್ಕೆ ಸ್ಪಷ್ಟನೆ ನೀಡಬೇಕು. ಈ ವಿಚಾರದಲ್ಲಿ ಸಮಿತಿ ಹಿಂದೇಟು ಹಾಕಿದರೆ ಸಮಾಜ ಹಾಗೂ ಭಕ್ತರ ನೇತೃತ್ವದಲ್ಲಿ ನಿಯೋಗ ರಚಿಸಿ ಪೀಠಾಧಿಕಾರಿಗಳು, ಉನ್ನತ ಸಮಿತಿಗೆ ಭೇಟಿಯಾಗುವ ಕುರಿತು ನಿರ್ಧರಿಸಲಾಯಿತು.
ಸಭೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ರಾಜಕಾರಣಿಗಳನ್ನು ಸೇರಿಸಿಕೊಂಡು ಉನ್ನತ ಸಮಿತಿ ರಚಿಸಿರುವುದು ಮಠದ ಅವನತಿಗೆ ಕಾರಣವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಮಠದ ಪರಿಸ್ಥಿತಿ ಅದೋಗತಿಗೆ ತಲುಪಿಸಿದ್ದಾರೆ. ಭಕ್ತರು ನೀಡಿದ್ದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಮಠದ ಪರಿಸ್ಥಿತಿ ಚಿಂತಾಜನಕವಾಗಿರುವ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಗೆ ದಾನ ಮಾಡಲಾಗಿದೆ. ಇಂತಹ ಕೆಲಸಗಳಿಂದ ಮಠದ ಬಗ್ಗೆ ಇರುವ ಗೌರವ ಕಡಿಮೆಯಾಗುತ್ತಿದ್ದು, ಹಾದಿ ಬೀದಿಯಲ್ಲಿ ಮಾತನಾಡುವಂತಹ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಕೂಡಲೇ ಉನ್ನತ ಸಮಿತಿ ರದ್ದುಗೊಳಿಸಿ ಮಠದ ಬಗ್ಗೆ ಕಾಳಜಿ ಇರುವ ಗಣ್ಯರನ್ನು ಸೇರಿಸಿಕೊಂಡು ಪುನರಚನೆ ಮಾಡಬೇಕಿದೆ. ಈಗ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಭಕ್ತ ಸಮೂಹವನ್ನು ಎಚ್ಚರಿಸುವ ಕೆಲಸ ಆಗಬೇಕಿದೆ ಎಂದರು.
ಮಾಜಿ ಶಾಸಕ ಎಂ.ಎಸ್.ಅಕ್ಕಿ ಮಾತನಾಡಿ, ಸಮಾಜ ನೀಡಿರುವ ಆಸ್ತಿಯನ್ನು ದಾನ ಹಾಗೂ ಮಾರಾಟ ಮಾಡಲು ಅಧಿ ಕಾರ ಕೊಟ್ಟವರು ಯಾರು? ಉನ್ನತ ಸಮಿತಿಯ ಬೇಕಾಬಿಟ್ಟಿ ಕೆಲಸಗಳಿಂದ ಮಠದ ಮಾನ ಬೀದಿಗೆ ತಂದು ನಿಲ್ಲಿಸಿದ್ದಾರೆ. ಸಮಾಜ, ಭಕ್ತರ ಒಪ್ಪಿಗೆ ಇಲ್ಲದೆ ಮಠದ ಆಸ್ತಿ ಪರಭಾರೆ ಮಾಡಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಉನ್ನತ ಸಮಿತಿ ತನ್ನ ತಪ್ಪನ್ನು ಒಪ್ಪಿಕೊಂಡು ದಾನ ಮಾಡಿರುವ ಆಸ್ತಿಯನ್ನು ವಾಪಸ್ ಪಡೆಯಬೇಕು. ಉನ್ನತ ಸಮಿತಿ ಎಚ್ಚೆತ್ತುಕೊಳ್ಳದಿದ್ದರೆ ಮಠದ ಭಕ್ತರು ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
ಪಾಲಿಕೆ ಮಾಜಿ ಸದಸ್ಯ ಪಿ.ಕೆ.ರಾಯನಗೌಡ್ರ ಮಾತನಾಡಿ, ಮಠದ ಆರ್ಥಿಕ ಪರಿಸ್ಥಿತಿ ಸರಿಯಲ್ಲಿದ ಕಾರಣ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ ಎರಡು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕೆಎಲ್‌ಇ ಸಂಸ್ಥೆಗೆ ದಾನ ಮಾಡಲಾಗಿದೆ. ಈ ಬೆಳವಣಿಗೆ ನೋಡಿದರೆ ಉನ್ನತ ಸಮಿತಿಯ ಪಾತ್ರದ ಸಾಮಾನ್ಯ ಜನರಿಗೂ ಅರ್ಥವಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ಅನೀಲಕುಮಾರ ಪಾಟೀಲ ಮಾತನಾಡಿ, ಹಿಂದಿನ ಶ್ರೀಗಳು ದಾನ ಮಾಡಿದ್ದಾರೆ ಎನ್ನುವುದು ತಪ್ಪು. ಭಕ್ತರ ಆಸ್ತಿಯನ್ನು ಪರಭಾರೆ ಮಾಡಲು ಇವರಿಗೆ ಅ ಧಿಕಾರ ಕೊಟ್ಟವರು ಯಾರು? ಮಠದ ಅಭಿವೃದ್ಧಿಗೆ ಶ್ರಮಿಸಬೇಕಾದವರು ಮಠ ಹಾಳು ಮಾಡುತ್ತಿದ್ದಾರೆ. ಮಠದ ಭಕ್ತರೇ ಜಾಗೃತರಾಗಿ ಇದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು.
ಪ್ರಮುಖರಾದ ಅಶೋಕ ಬಳಿಗಾರ, ವಿ.ಕೆ.ಪಾಟೀಲ, ಈರಣ್ಣ ನೀರಲಗಿ, ಜಗನ್ನಾಥಗೌಡ ಪಾಟೀಲ, ನಾಗರಾಜ ಗೌರಿ, ರಜತ ಉಳ್ಳಾಗಡ್ಡಿಮಠ, ರವಿ ದಾಸನೂರು, ಬಾಬಣ್ಣ ಬಂಟನೂರು, ವಿಜುನಗೌಡ ಪಾಟೀಲ ಸೇರಿದಂತೆ ಇನ್ನಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.