3.55 ಕೋಟಿ ರೂ. ಚಿನ್ನ ವಾರಸುದಾರರಿಗೆ ವಾಪಸ್
Team Udayavani, Jan 1, 2023, 12:35 PM IST
ಮೈಸೂರು: ಮೈಸೂರು ನಗರದಲ್ಲಿ 2022ನೇ ವರ್ಷದಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ 346 ಆರೋಪಿಗಳನ್ನು ಬಂಧಿಸಿ 3.55 ಕೋಟಿ ರೂಪಾಯಿ ಮೌಲ್ಯದ ನಗನಾಣ್ಯಗಳು, ಚಿನ್ನಾಭರಣಗಳು, ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ 2022ರಲ್ಲಿ 753 ಕಳವು ಪ್ರಕರಣಗಳು ದಾಖಲಾಗಿವೆ. 6.34 ಕೋಟಿ ರೂ. ಮೌಲ್ಯದ ವಸ್ತುಗಳು ಕಳುವಾಗಿದ್ದವು. ಇದರಲ್ಲಿ 320 ಪ್ರಕರಣಗ ಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾನೂನಾತ್ಮಕವಾಗಿ ಪರಿಶೀಲಿಸಿ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಆಯ್ದ ವಾರಸುದಾರರಿಗೆ ಟ್ಯಾಬ್, ಚಿನ್ನಾಭರಣ, ನಗದು ಹಿಂದಿರುಗಿಸಲಾಯಿತು. ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸೈಬರ್ ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಣ ಕಳೆದುಕೊಂಡಿರುವ ವಿಚಾರ ಗೊತ್ತಾದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಒಂದು ಗಂಟೆಯೊಳಗಿನ ಅವಧಿಯು ಗೋಲ್ಡನ್ ಅವಧಿಯಾಗಿದೆ. ಈ ಸಮಯದಲ್ಲಿ ವಿಷಯ ಗೊತ್ತಾದರೆ ಪತ್ತೆ ಮಾಡುವುದು ಸುಲಭವಾ ಗುತ್ತದೆ. ಸಾರ್ವಜನಿಕರು 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಕೋರಿದರು.
ಚಿನ್ನಾಭರಣ 4.60 ಕೆಜಿ, ಬೆಳ್ಳಿ 16.90 ಕೆಜಿ, ದ್ವಿಚಕ್ರವಾಹನ 184, ತ್ರಿಚಕ್ರ ವಾಹನ 4, ಕಾರು 4, ಮೊಬೈಲ್ ಫೋನ್ 106, ಲ್ಯಾಪ್‌ಟಾಪ್ 18 ವಾರಸುದಾರರಿಗೆ ಹಿಂದಿರುಗಿಸಲಾಯಿತು. ದರೋಡೆ 4, ಸುಲಿಗೆ 22, ಸರಗಳ್ಳತನ 61, ಕನ್ನ ಕಳುವು 33, ಮನೆ ಕಳುವು 15, ಕಳ್ಳತನ 5, ವಾಹನ ಕಳವು 132, ಸಾಮಾನ್ಯ ಕಳವು 30 ಹೀಗೆ ಒಟ್ಟು 320 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ರೌಡಿಗಳ ಮನೆ ಮೇಲೆ ದಾಳಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ರೌಡಿಗಳ ಮನೆ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಗಿದೆ. ಚಟುವಟಿಕೆಯಲ್ಲಿರುವ ರೌಡಿಗಳ ವಿರುದ್ದ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅಪರಾಧಗಳ ನಿಯಂತ್ರಣ ಹಾಗೂ ಸಂಚಾರ ನಿಯಮ ಜಾರಿಗಾಗಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸರಿಂದ ಜಂಟಿಯಾಗಿ ವಾಹನಗಳ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳದಲ್ಲಿಯೇ ಕೂಲಂಕಷವಾಗಿ ವಿಚಾರಣೆ ಮಾಡಿ, ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. 2022ನೇ ಸಾಲಿನಲ್ಲಿ ಒಟ್ಟು 593 ಚಾಲನಾ ಪರವಾನಗಿಗಳ ಅಮಾನತ್ತಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಮಾದಕ ದ್ರವ್ಯ ನಿಯಂತ್ರಣ ಮಾದಕ ದ್ರವ್ಯ ಮಾರಾಟ ಮತ್ತು ನಿಯಂತ್ರಣ ಸಂಬಂಧ 2022ರಲ್ಲಿ ಮೈಸೂರು ನಗರದಲ್ಲಿ ಒಟ್ಟು 33 ಪ್ರಕರಣ ದಾಖಲಾಗಿವೆ. 61 ಆರೋಪಿಗಳನ್ನು ಬಂಧಿಸಲಾಗಿದೆ. 22.30 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ ಸಾರ್ವಜನಿಕರು ನೋಡುತ್ತ ನಿಲ್ಲುವುದನ್ನು ಕೆಲವು ಪ್ರಕರಣಗಳಲ್ಲಿ ವಿಡಿಯೋಗಳಲ್ಲಿ ಗಮನಿಸಿದ್ದೇನೆ. ಪ್ರತಿಯೊಬ್ಬ ಸಾರ್ವಜನಿಕರೂ ಪೊಲೀಸರೇ. ಸಮವಸ್ತ್ರ ಇರುವುದಿಲ್ಲ ಅಷ್ಟೆ. ಅಪರಾಧ ಕೃತ್ಯಗಳು ನಡೆದಾಗ ತಕ್ಷಣ ನೆರವಿಗೆ ಬರಬೇಕು. ಕನಿಷ್ಠ ಪೊಲೀಸರಿಗೆ ಮಾಹಿತಿ ನೀಡಬೇಕು. – ರಮೇಶ್ ಬಾನೋತ್, ಮೈಸೂರು ನಗರ ಪೊಲೀಸ್ ಆಯುಕ್ತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.