2ನೇ ತಂಡದ ಗಜಪಡೆಯಲ್ಲಿ ಅಭಿಮನ್ಯು ಬಲಶಾಲಿ
Team Udayavani, Sep 16, 2018, 11:17 AM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಎಲ್ಲಾ 12 ಆನೆಗಳೂ ಶನಿವಾರ ತಾಲೀಮು ನಡೆಸಿದವು.
ಶುಕ್ರವಾರ ಸಂಜೆ ಎರಡನೇ ತಂಡದಲ್ಲಿ ಅರಮನೆ ಆವರಣ ಪ್ರವೇಶಿಸಿದ ಬಲರಾಮ, ಅಭಿಮನ್ಯು, ದ್ರೋಣ, ಪ್ರಶಾಂತ, ಕಾವೇರಿ ಹಾಗೂ ವಿಜಯ ಆನೆಗಳು ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಮೊದಲ ತಂಡದಲ್ಲಿ ಬಂದಿರುವ ವರಲಕ್ಷ್ಮಿ, ಚೈತ್ರ, ಗೋಪಿ, ವಿಕ್ರಮ, ಧನಂಜಯ ಆನೆಗಳನ್ನು ಕೂಡಿಕೊಂಡವು.
ಅಭಿಮನ್ಯು ಬಲಶಾಲಿ: ವಾಡಿಕೆಯಂತೆ ಶನಿವಾರ ಬೆಳಗ್ಗೆ ತಾಲೀಮಿಗೂ ಮುನ್ನ ಎರಡನೇ ತಂಡದಲ್ಲಿ ಕರೆತರಲಾಗಿರುವ ಆನೆಗಳನ್ನೂ ಶ್ರೀ ಕನ್ನಿಕಾಂಭ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ತೂಕ ಮಾಡಿಸಲಾಯಿತು. 4930 ಕೆ.ಜಿ. ತೂಕದೊಂದಿಗೆ ಅಭಿಮನ್ಯು ಬಲಶಾಲಿಯಾಗಿದ್ದರೆ, ನಂತರದಲ್ಲಿ ಬಲರಾಮ-4910 ಕೆ.ಜಿ., ದ್ರೋಣ-3900 ಕೆ.ಜಿ., ಪ್ರಶಾಂತ-4650 ಕೆ.ಜಿ., ಕಾವೇರಿ-2830 ಕೆ.ಜಿ., ವಿಜಯ-2790 ಕೆ.ಜಿ. ತೂಕವಿದೆ.
ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಶುಕ್ರವಾರದಿಂದ 350 ಕೆ.ಜಿ ತೂಕದ ಮರಳು ಮೂಟೆ ಹೊರುವ ತಾಲೀಮು ಆರಂಭಿಸಲಾಗಿದ್ದು, ಶನಿವಾರ ಬೆಳಗ್ಗೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 12 ಆನೆಗಳೂ ತಾಲೀಮಿನಲ್ಲಿ ಭಾಗವಹಿಸಿದ್ದರಿಂದ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಆನೆಗಳು ಹೋಗಿ-ಬರುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು, ವಿದೇಶಿ ಪ್ರವಾಸಿಗರು ಗಜಪಡೆಯ ಗಜ ಗಾಂಭೀರ್ಯದ ನಡಿಗೆಯನ್ನು ಕಣ್ತುಂಬಿಕೊಂಡರೆ, ಹಲವರು ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.