ಯಾರೇ ಅಭ್ಯರ್ಥಿಯಾದರೂ ಒಗ್ಗೂಡಿ ಜೆಡಿಎಸ್ ಗೆಲ್ಲಿಸಿ
Team Udayavani, Oct 12, 2019, 3:00 AM IST
ಹುಣಸೂರು: ಉಪ ಚುನಾವಣೆಯನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಿ, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಗೆಲುವಿಗಾಗಿ ಶ್ರಮಿಸಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು. ಹುಣಸೂರು ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆಯ ಕಲ್ಯಾಣಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
17 ಆಕಾಂಕ್ಷಿಗಳು: ಜೆಡಿಎಸ್ ಟಿಕೆಟ್‌ಗಾಗಿ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಎರಡು ಬಾರಿ ಸಭೆ ನಡೆದಿದೆ. ಈಗಾಗಲೇ ಎಲ್ಲರೂ ಸೇರಿ ಪಕ್ಷ ನಿರ್ಣಯಿಸುವ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಒಲವು ತೋರಿದ್ದು, ತಾವು, ಎಚ್.ಡಿ.ಕುಮಾರಸ್ವಾಮಿ ಹಾಗೂ ಸಾ.ರಾ.ಮಹೇಶ್ ಮತ್ತಿತರ ಮುಖಂಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರೆಂದು ಆಕಾಂಕ್ಷಿಗಳು ತಿಳಿಸಿದ್ದಾರೆ. ಉಪ ಚುನಾವಣೆಗಾಗಿ ಜೆಡಿಎಸ್ ಪಕ್ಷದ ಉನ್ನತ ಮಟ್ಟದ ಸಮಿತಿಯಲ್ಲಿ ಶೀಘ್ರವೇ ಸರ್ವ ಸಮ್ಮತ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದರು.
ಕಹಿ ಅನುಭವ: ಟಿಕೆಟ್‌ಗೆ ಅರ್ಜಿ ಹಾಕಿರುವ ಎಲ್ಲರೂ ಪಕ್ಷಕ್ಕೆ ದುಡಿದವರೇ ಆಗಿದ್ದು, ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡಿ, ಪಕ್ಷಕ್ಕೆ ಶಕ್ತಿ ತುಂಬಬೇಕು. ನೀವೇ ಪಕ್ಷದ ಆಸ್ತಿ, ತಾವು ಈವರೆಗೆ 16 ಚುನಾವಣೆ ಎದುರಿಸಿದ್ದು, 13 ಬಾರಿ ಗೆದ್ದಿದ್ದೇನೆ. ಚುನಾವಣೆ ಎಂದರೆ ಕಹಿ ಅನುಭವವೂ ಇದೆ. ಇದರಿಂದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು.
11,7627 ರೈತರ ಸಾಲ ಮನ್ನಾ: ಹುಣಸೂರು ತಾಲೂಕಿನ 11,7627 ಮಂದಿ ರೈತರ ಸಾಲ ಮನ್ನಾ ಆಗಿದೆ. ಇದು ರೈತ ಪರ ಸಾಧನೆಯಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಇಳಿವಯಸ್ಸಿನಲ್ಲೂ ರೈತಪರ ಹೋರಾಟ ನಡೆಸಿದ್ದೇನೆಂದರು.
ಪ್ರಮುಖ ಆಕಾಂಕ್ಷಿಯಾದ ದೇವರಹಳ್ಳಿ ಸೋಮಶೇಖರ್ ತಾವು ಸಮಾಜ ಸೇವೆ ಮೂಲಕ ಪಕ್ಷ ಸಂಘಟಿಸಿದ್ದೇನೆ. ಪಕ್ಷವು ತಾಲೂಕಿನಲ್ಲಿ ಸಂಘಟನಾತ್ಮಕವಾಗಿದ್ದು, ಈ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ 30-40 ಸಾವಿರ ಅಂತರದಿಂದ ಗೆಲುವು ಸಾಧಿಸಲಿದೆ ಎಂದರು.
ವಕೀಲ ಚನ್ನಬಸಪ್ಪ, ಕೆಂಪನಾಯ್ಕ, ವೆಂಕಟೇಶನಾಯ್ಕ ಪರಿಶಿಷ್ಟ ಜನಾಂಗಕ್ಕೆ ಅವಕಾಶ ನೀಡಿದಲ್ಲಿ ಗೆಲುವಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಜಿಪಂ ಮಾಜಿ ಸದಸ್ಯರಾದ ತೊಂಡಾಳು ರಾಮಕೃಷ್ಣೇಗೌಡ, ಫಜಲುಲ್ಲಾ ಎಪಿಎಂಸಿ ಮಾಜಿ ಅಧ್ಯಕ್ಷ ರವಿಗೌಡ, ನಗರಸಭೆ ಮಾಜಿ ಅಧ್ಯಕ್ಷ ಮಹದೇವ್, ಗಣೇಶಗೌಡ, ಬಿಳಿಕೆರೆ ಪ್ರಸನ್ನ, ನಾಗೇಗೌಡ, ವೆಂಕಟೇಶ್, ಮೋದೂರು ಬಸವಣ್ಣ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಸದೃಢವಾಗಿದೆ. ಈ 17 ಮಂದಿ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ದುಡಿಯುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಮಹದೇವೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಸ್ವಾಮಿ, ಮಹಿಳಾ ಅಧ್ಯಕ್ಷೆ ವಸಂತಮ್ಮ, ಯುವ ಅಧ್ಯಕ್ಷರಾದ ರವೀಶ್, ಶಿವರಾಜು, ಎಸ್‌ಸಿ ಘಟಕದ ಅಧ್ಯಕ್ಷ ಪುಟ್ಟರಾಜು, ತಾಪಂ ಉಪಾಧ್ಯಕ್ಷ ಪ್ರೇಮೇಗೌಡ, ಸದಸ್ಯರಾದ ಪ್ರೇಮಕುಮಾರ್, ಪ್ರಭಾಕರ್, ಮುಖಂಡರಾದ ಕಿರಂಗೂರು ಬಸವರಾಜು, ಧನ್ಯಕುಮಾರ್, ಜಯರಾಂ, ಟಿ.ಸುಂದರ್, ಚಂದ್ರೇಗೌಡ ಇತರರಿದ್ದರು.
ಬಿಎಸ್‌ವೈ, ಸಿದ್ದು ಲಘು ಮಾತಿಗೆ ಉತ್ತರ: ನಮ್ಮದು ಅಪ್ಪ-ಮಕ್ಕಳ ಪಕ್ಷವೆಂದು ಜರಿಯುತ್ತಾರೆ. ಆದರೆ, ಪಕ್ಷವು ಜಾತ್ಯತೀತ ನೆಲೆಯಲ್ಲಿ ಹುಟ್ಟಿದ್ದು, ಎಲ್ಲಾ ವರ್ಗಗಳಿಗೆ ಪ್ರಾತಿನಿಧ್ಯ ನೀಡಿದೆ. ಇನ್ನು ಹಲವಾರು ಅಡೆತಡೆಗಳ ನಡುವೆಯೂ 14 ತಿಂಗಳ ಕುಮಾರಸ್ವಾಮಿ ಸರ್ಕಾರವು ಸಿದ್ದರಾಮಯ್ಯರ ಅವಧಿಯ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ ರೈತರ ಸಾಲಮನ್ನಾ ಮಾಡಿದೆ. ದೇಶದ ಯಾವ ರಾಜ್ಯವೂ ಈ ಕೆಲಸ ಮಾಡಿಲ್ಲ. ಆದರೆ, ಯಡಿಯೂರಪ್ಪ, ಸಿದ್ದರಾಮಯ್ಯ ಸಾಲ ಹೇಗೆ ಮನ್ನಾ ಮಾಡುತ್ತಾನೆಂದು ಲಘುವಾಗಿ ಮಾತನಾಡಿದ್ದರು ಎಂದು ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಫೆಬ್ರವರಿ-ಮಾರ್ಚ್‌ನಲ್ಲಿ ಮಹಾ ಚುನಾವಣೆ: ಸುಪ್ರೀಂ ಕೋರ್ಟ್ ಅ.22ಕ್ಕೆ ಅನರ್ಹ ಶಾಸಕರ ಬಗ್ಗೆ ನೀಡುವ ತೀರ್ಪಿನ ಮೇಲೆ ಉಪ ಚುನಾವಣೆ ಅವಲಂಬಿಸಿದೆ. ಆದರೆ, ಈ ಸರ್ಕಾರದದಲ್ಲಿ ಐಕ್ಯತೆ ಇಲ್ಲ, ಅನೈತಿಕ ಘಟನೆಗಳೇ ನಡೆಯುತ್ತಿದ್ದು, ಹೆಚ್ಚು ಕಾಲ ಉಳಿಯುವ ವಿಶ್ವಾಸವೂ ಇಲ್ಲ. ಮುಂದೆ ಮಹಾರಾಷ್ಟ್ರ, ಹರಿಯಾಣ ರಾಜ್ಯದ ಚುನಾವಣೆ ನಡೆಯುತ್ತಿದ್ದು, ಮುಂದಿನ ಫೆಬ್ರವರಿ-ಮಾರ್ಚ್‌ನಲ್ಲಿ ದೆಹಲಿ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿಯೂ ಒಟ್ಟಿಗೆ ಚುನಾವಣೆ ನಡೆದರೂ ಆಶ್ಚರ್ಯವಿಲ್ಲ. ಚುನಾವಣೆ ಯಾವಾಗಲೇ ಬರಲಿ ಗೆಲುವಿಗೆ ಶ್ರಮಿಸಿ ಎಂದು ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.