ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆಗೆ ವಸೂಲಿ
Team Udayavani, Oct 22, 2019, 3:00 AM IST
ಕೆ.ಆರ್.ನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡ ಕುಟುಂಬಗಳ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಗೆ ತಾಲೂಕಿನ ಕೆಲವು ಆನ್‌ಲೈನ್ ಸೇವಾ ಕೇಂದ್ರಗಳು ಜನಸಾಮಾನ್ಯರಿಂದ 100 ರೂ.ಗೂ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ ಎಂದು ತಾಲೂಕು ಪಂಚಾಯ್ತಿ ಸದಸ್ಯ ಲೋಕೇಶ್ ದೂರಿದರು.
ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಗತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಈ ವಿಷಯ ಪ್ರಸ್ತಾಪಿಸಿದ ಅವರು, ಆರೋಗ್ಯ ಕಾರ್ಡ್ ವಿತರಣೆ ಮತ್ತಿತರ ಸೌಲಭ್ಯಕ್ಕಾಗಿ ಅಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.
ನೋಟಿಸ್:ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ , ತಾಲೂಕಿನ ಹೆಬ್ಟಾಳು ಮತ್ತು ಹೊಸೂರು ಗ್ರಾಮಗಳಲ್ಲಿ ಈ ಬಗ್ಗೆ ಅಧಿಕೃತ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಆನ್‌ಲೈನ್ ಸೇವಾ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಪಂ ಇಒ ಎಚ್.ಡಿ.ಗಿರೀಶ್ ಮಾತನಾಡಿ, ಪಟ್ಟಣ ಮತ್ತು ಸಾಲಿಗ್ರಾಮದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯ್ತಿಗಳಲ್ಲಿ ವಿಕಲಚೇತನರು ಮತ್ತು ಪೌರ ಕಾರ್ಮಿಕರಿಗೆ ಮೊದಲ ಹಂತದಲ್ಲಿ ನೀಡಿ ಆನಂತರ ಎಲ್ಲರಿಗೂ ವಿಸ್ತರಿಸಲಾಗುವುದು ಎಂದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೇಶ್ ಮಾತನಾಡಿ, ತಾಲೂಕಿನಲ್ಲಿ ಅನುಮತಿ ಇಲ್ಲದೆ ಅನಧಿಕೃತ ಪ್ರಯೋಗಾಲಯಗಳು (ಲ್ಯಾಬರೋಟರಿ) ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿರುವುದರ ಜೊತೆಗೆ ಬಡವರ ಸುಲಿಗೆ ಮಾಡುತ್ತಿವೆ. ಅವುಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ?, ಕೂಡಲೇ ಅವುಗಳ ಮಾಲೀಕರಿಗೆ ನೋಟಿಸ್ ನೀಡಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಇಂತಹ ಪ್ರಯೋಗಾಲಯಗಳ ಮೇಲೆ ನಿಯಂತ್ರಣ ಹೇರಲು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಿದ್ದು ಈ ವಿಚಾರವನ್ನು ಅವರ ಗಮನಕ್ಕೆ ತಂದು ದಾಳಿ ನಡೆಸಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕೆರೆ ಹರಾಜು ಪ್ರಕ್ರಿಯೆ: ಸದಸ್ಯ ಚಂದ್ರಶೇಖರ್ ಮಾತನಾಡಿ, ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಟ್ನಾಳು ಗ್ರಾಮದ ಕೆರೆಯನ್ನು ಬಹಿರಂಗವಾಗಿ ಹರಾಜು ಮಾಡುತ್ತಿದ್ದು, ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ಪಂಚಾಯ್ತಿ ಅಧ್ಯಕ್ಷರು, ಅಭಿವೃದ್ದಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಪ್ರಚಾರವಿಲ್ಲದೆ ಮಾಡುತ್ತಿದ್ದಾರೆ. ಇದರಿಂದ ಪಂಚಾಯ್ತಿಯ ಆದಾಯಕ್ಕೆ ಖೋತಾ ಬೀಳಲಿದ್ದು ಇದರ ಬಗ್ಗೆ ನಿಮಗೆ ತಿಳಿಸಿದರೂ ಹರಾಜನ್ನು ನಿಲ್ಲಿಸಲು ಪ್ರಯತ್ನಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ ಗಿರೀಶ್, ನಾನು ಕರೆ ಮಾಡಿ ಕೆರೆ ಹರಾಜು ಬಿಡ್ ನಿಲ್ಲಿಸುವಂತೆ ಸೂಚಿಸಿದ್ದರೂ ಪಂಚಾಯಿತಿ ಆಡಳಿತ ಮಂಡಳಿಯ ಅನುಮೋದನೆಯ ಮೇರೆಗೆ ಹರಾಜು ನಡೆಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಏನಾದರೂ ಲೋಪ ಎಸಗಿದ್ದರೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಅಪೂರ್ಣ ಮಾಹಿತಿ: ತಾಪಂ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್ ಮಾತನಾಡಿ, ಸಭೆಗೆ ಬರುವಾಗ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯೊಂದಿಗೆ ಬರಬೇಕು. ಪ್ರತಿ ಸಭೆಗಳಲ್ಲೂ ಕೆಲವರು ಅಪೂರ್ಣ ಮಾಹಿತಿ ನೀಡುತ್ತಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಹೀಗಾದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಸೂಚಿಸಿದರು.
ಸಭೆಯಲ್ಲಿ ಸದಸ್ಯರಾದ ಶ್ರೀನಿವಾಸ ಪ್ರಸಾದ್, ಮುಂಡೂರು ಕುಮಾರ್, ಜಯರಾಮೇಗೌಡ, ಜಿ.ಎಸ್.ಮಂಜುನಾಥ್, ನಾಗರಾಜ್, ಪುಟ್ಟಗೌರಮ್ಮ, ಸಿದ್ದಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್, ಬಿಸಿಎಂ ವಿಸ್ತರಣಾಧಿಕಾರಿ ಜಿ.ಜೆ.ಮಹೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಶಾಲೆ, ಹಾಸ್ಟೆಲ್‌ಗೆ ಯೋಗ್ಯವಲ್ಲದ ನೀರು: ತಾಲೂಕಿನ ಕಾಳೇನಹಳ್ಳಿ ಬಳಿಯ ಆದರ್ಶ ಶಾಲೆ ಮತ್ತು ಶಾಲೆಯ ಹಿಂಭಾಗದಲ್ಲಿರುವ ಬಾಲಕಿಯರ ವಸತಿ ನಿಲಯಕ್ಕೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಅಲ್ಲಿರುವ ಕೊಳವೆ ಬಾವಿ ನೀರು ಬಳಕೆಗೆ ಯೋಗ್ಯವಿಲ್ಲದಿದ್ದರೂ ಅದನ್ನೇ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ದೊಡ್ಡೇಕೊಪ್ಪಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ತೆಗೆದುಗೊಳ್ಳುತ್ತಿಲ್ಲ ಎಂದು ಸದಸ್ಯರು ದೂರಿದರು.
ತಕ್ಷಣ ಸ್ಥಳದಲ್ಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದ ಇಒ ಗಿರೀಶ್, ಕೂಡಲೇ ಆದರ್ಶ ಶಾಲೆಯ ಬಳಿಗೆ ಆಗಮಿಸುವಂತೆ ಸೂಚಿಸಿದರು. ಸಭೆ ಮುಗಿಯುತ್ತಿದ್ದಂತೆ ಅಧ್ಯಕ್ಷರೊಡಗೂಡಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
45 ಶಾಲಾ ಕೊಠಡಿ ನಿರ್ಮಾಣ: ತಾಲೂಕಿನ ಶಿಕ್ಷಣ ಇಲಾಖೆಯ ವ್ಯಾಪ್ತಿಯ 95 ಶಿಥಿಲ ಶಾಲಾ ಕೊಠಡಿಗಳನ್ನು ನೆಲಸಮ ಮಾಡಲು ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 45 ಕೊಠಡಿಗಳಿಗೆ ಅನುಮೋದನೆ ದೊರೆತಿದ್ದು, ಶಾಲಾ ಅನುದಾನ ಬಳಸಿಕೊಂಡು ಎಸ್‌ಡಿಎಂಸಿ ವತಿಯಿಂದ ನೆಲಸಮ ಮಾಡುವಂತೆ ತಿಳಿಸಲಾಗಿದೆ. ಅಲ್ಲದೇ ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ಶಾಲಾ ಕಾಂಪೌಡ್ ನಿರ್ಮಿಸಲು ಸರ್ಕಾರದಿಂದ ಆದೇಶವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.