ಆಂಗ್ಲ ಮಾಧ್ಯಮದಿಂದ ಪ್ರಾಥಮಿಕ ಶಿಕ್ಷಣಕ್ಕೆ ಹಿನ್ನಡೆ
Team Udayavani, Jun 10, 2019, 3:00 AM IST
ಮೈಸೂರು: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಹೆಚ್ಚು ಹೆಚ್ಚು ತೆರೆಯುತ್ತಿರುವ ಸರ್ಕಾರದ ನಡೆ ಕನ್ನಡ ವಿರೋಧಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಕಲಾಮಂದಿರ ಆವರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಡಳಿತಕ್ಕೂ ತೊಂದರೆ: ಪ್ರಾಥಮಿಕ ಶಿಕ್ಷಣದಲ್ಲಿ ನೆಲದ ಭಾಷೆ ಅವಜ್ಞೆಗೆ ಗುರಿಯಾದರೆ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೆ ಹಿನ್ನಡೆಯಾಗಲಿದೆ. ಜೊತೆಗೆ ಉನ್ನತ ಶಿಕ್ಷಣಕ್ಕೂ ಹೊಡೆತ ಬೀಳುತ್ತದೆ. ಸುಲಲಿತ ಆಡಳಿತಕ್ಕೂ ತೊಂದರೆಯಾಗುತ್ತದೆ ಎಂಬುದನ್ನು ನಮ್ಮ ಸರ್ಕಾರಗಳು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಕನ್ನಡ ಮಾಧ್ಯಮದ ಜೊತೆಗೆ ಬೇರೆ ಭಾಷೆಗಳನ್ನು ಒಂದು ಭಾಷೆಯಾಗಿ ಕಲಿತರೆ ತಪ್ಪೇನು ಇಲ್ಲ. ಆದರೆ, ಪ್ರಾಥಮಿಕ ಶಿಕ್ಷಣದಲ್ಲಿ ಬೇರೆ ಭಾಷೆಯನ್ನು ಮಾಧ್ಯಮವಾಗಿ ಕಲಿಯುವುದರಿಂದ, ಆ ಮಗುವಿನ ಯೋಚನಾ ಶಕ್ತಿ, ಸೃಜನಾತ್ಮಕ ಶಕ್ತಿಯೇ ಕುಂದಿ ಹೋಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.
ಎಳವೆಯಲ್ಲಿ ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯವೋ ಹಾಗೆಯೇ ಪ್ರಾಥಮಿಕ ಶಿಕ್ಷಣವನ್ನೂ ತಾಯಿ ಭಾಷೆ ಅಂದರೆ ನೆಲದ ಭಾಷೆಯಲ್ಲಿ ಕಲಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಪ್ರಾಥಮಿಕ ಶಿಕ್ಷಣವನ್ನು ನೆಲದ ಭಾಷೆಯಲ್ಲಿ ನೀಡದೇ ಹೋದರೆ, ಮಗುವಿಗೆ ತಾಯಿ ಎದೆ ಹಾಲು ನೀಡದೇ ಇಂಗ್ಲಿಷಿನ ಅಂದರೆ ಹೊರಗಿನ ಅನ್ನ ತಿನ್ನಿಸಿದಂತಾಗುತ್ತದೆ. ಆ ಹಸುಗೂಸಿಗೆ ಹೊರಗಿನ ಗಟ್ಟಿ ಅನ್ನ ಅರಗಿಸಿಕೊಳ್ಳಲಾದೀತೇ ಎಂದು ಪ್ರಶ್ನಿಸಿದರು.
ಮಕ್ಕಳು ಕನ್ನಡ ಭಾಷೆ ಕುರಿತು ಯಾವುದೇ ಕೀಳರಿಮೆ ಇಟ್ಟುಕೊಳ್ಳಬಾರದು. ನಮ್ಮ ಭಾಷೆಯಿಂದ ಮಾತ್ರವೇ ನಮ್ಮ ನಾಡು, ನುಡಿ, ಪರಂಪರೆ ಉಳಿಯಬೇಕಿದೆ. ಹಾಗಾಗಿ ಕನ್ನಡ ಕುರಿತು ಪ್ರತಿಯೊಬ್ಬರು ಬದ್ಧತೆ ಹೊಂದಬೇಕು ಎಂದರು.
ಕನ್ನಡ ಶಾಲೆ ಉಳಿಸಿ: ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಇಂಗ್ಲಿಷ್ ಮಾಧ್ಯಮ ಸರ್ವವ್ಯಾಪಿಯಾಗಿರುವುದರಿಂದ ಇದಕ್ಕೆ ಕನ್ನಡದ ಪೋಷಕರು, ಮಕ್ಕಳು ಬಲಿಯಾಗುತ್ತಿದ್ದಾರೆ. ಇದರಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದೊದಗಿದ್ದು, ಇದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಂಗ್ಲ ಮಾಧ್ಯಮ ಕೃತಕ, ಅಸಹಜ ಹಾಗೂ ಕ್ಲಿಷ್ಟ, ಹಾಗೆಯೇ ಕನ್ನಡಭಾಷೆಯಿಂದ ಮಾತೃವೇ ನೈಜ ಸೃಜನಶೀಲತೆ, ವೈಚಾರಿಕತೆ, ವೈಜ್ಞಾನಿಕ ದೃಷ್ಟಿಕೋನ, ಸಕಾರಾತ್ಮಕತೆ ಬೆಳೆಯಲು ಸಾಧ್ಯ ಎಂಬುದನ್ನು ಮಕ್ಕಳಿಗೆ ಒತ್ತಿ ಹೇಳಬೇಕಿದೆ ಎಂದರು.
ಕನ್ನಡ ಮಾಧ್ಯಮ ಪ್ರಶಸ್ತಿ: ಈ ಸಂದರ್ಭ ಮೈಸೂರು ವಿಭಾಗದಲ್ಲಿ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿಯ 171 ಮತ್ತು ಪಿಯುಸಿಯ 150 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಥಮ ನಗದು ಬಹುಮಾನ 10 ಸಾವಿರ ರೂ., ದ್ವಿತೀಯ 9 ಸಾವಿರ ರೂ., ತೃತೀಯ ಬಹುಮಾನ 8 ಸಾವಿರ ರೂ. ಸೇರಿದಂತೆ ಪ್ರಶಸ್ತಿ ಪತ್ರಗಳನ್ನು ವಿವರಿಸಲಾಯಿತು. ಜೊತೆಗೆ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ, ತಂದೆ ಹಾಗೂ ತಾಯಿ ಸೇರಿದಂತೆ ಮೂವರಿಗೆ ಅವರ ಸ್ವಂತ ಸ್ಥಳದಿಂದ ಮೈಸೂರಿಗೆ ಬಂದು ಹೋಗುವ ಪ್ರಯಾಣ ವೆಚ್ಚವನ್ನೂ ಸಹ ಇದೇ ಸಂದರ್ಭದಲ್ಲಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಎಲ್. ನಾಗೇಂದ್ರ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಪ್ರಾಧ್ಯಾಪಕಿ ಹಾಗೂ ಕನ್ನಡಪರ ಚಿಂತಕಿ ಡಾ. ಎಂ.ಪಿ. ರೇಖಾವಸಂತ, ಕಸಾಪ ಜಿಲ್ಲಾಧ್ಯಕ್ಷ ರಾಜಣ್ಣ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ,
ಡಿಡಿಪಿಐ ಪಾಂಡುರಂಗ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಚೆನ್ನಪ್ಪ, ಪ್ರಾಧಿಕಾರದ ಸದಸ್ಯರಾದ ಗಿರೀಶ್ ಪಟೇಲ್, ಪ್ರಭಾಕರ ಪಾಟೀಲ್, ಮಹಂತೇಶ್ ಲಕ್ಷ್ಮಣ್ ಹಟ್ಟಿ, ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರಾದ ವಿಶ್ವನಾಥ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಇತರರಿದ್ದರು.
ಹಿಂದಿ ಹೇರಿಕೆಯಿಂದ ಕನ್ನಡಕ್ಕೆ ಹಿನ್ನಡೆ: ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿರುವುದರಿಂದ ಹಿಂದಿಯೇತರ ರಾಜ್ಯದ ಭಾಷೆಗಳು ಕಳೆದು ಹೋಗುವ ಸ್ಥಿತಿಯಲ್ಲಿವೆ. ಹಾಗೆಯೇ ರಾಜ್ಯ ಸರ್ಕಾರಗಳೂ ಕೂಡ ನೆಲದ ಭಾಷೆಯ ಕುರಿತು ನಿರ್ಲಕ್ಷ್ಯ ತಾಳುತ್ತಿರುವುದರಿಂದ ಕನ್ನಡವೂ ಸೇರಿದಂತೆ ಸಂವಿಧಾನ ಅಂಗೀಕರಿಸಿದ 22 ಭಾಷೆಗಳಿಗೂ ತೀವ್ರ ಹಿನ್ನಡೆಯಾಗಿದೆ. ಅದರಲ್ಲೂ ಹಿಂದಿಯೇತರ ರಾಜ್ಯಗಳು ಇದರಿಂದ ತೀವ್ರ ಹಿನ್ನಡೆ ಅನುಭವಿಸಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.