ಭೈರಪ್ಪ ಸಾಹಿತ್ಯದಲ್ಲಿ ಭಾರತೀಯತೆ, ಆತ್ಮದಲ್ಲಿ ವಿಶ್ವತತ್ವ
Team Udayavani, Jan 20, 2019, 7:26 AM IST
ಮೈಸೂರು: ಯಾವ ಹಂತದಲ್ಲಿ ನೋಡಿದರೂ ಭೈರಪ್ಪನವರ ಕಾದಂಬರಿಗಳು ವಿಶ್ವ ತತ್ವವನ್ನು ಭಾರತೀಯ ನೆಲೆಯಲ್ಲಿ ನೋಡುತ್ತವೆ. ಅವರ ಸಾಹಿತ್ಯದ ಶರೀರ ಭಾರತೀಯತೆ, ಆದರೆ, ಅದರ ಆತ್ಮ ವಿಶ್ವವಾಗಿದೆ ಎಂದು ಶತಾವಧಾನಿ ಡಾ. ಆರ್. ಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕಲಾಮಂದಿರದಲ್ಲಿ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಭೈರಪ್ಪ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ನಾವು ಜಗತ್ತಿಗೆ ಕಾಣಬೇಕಾದುದು, ಜಗತ್ತಿಗೆ ಒಳಿತು ಮಾಡಬೇಕಾದುದು ಈ ಶರೀರದ ಮೂಲಕ. ಹಾಗೆಯೇ ಭೈರಪ್ಪನವರ ಸಾಹಿತ್ಯ ಶರೀರ ಭಾರತೀಯವಾದುದು, ಕನ್ನಡದ್ದು, ಆದರೆ ಆತ್ಮ ಮಾತಿಗೆ ಮೀರಿದ ರಸಭಾವಗಳದ್ದು ಎಂದು ಬಣ್ಣಿಸಿದರು.
ಇಂತಹ ಸಿದ್ಧಿಯನ್ನು ಭೈರಪ್ಪನವರು ನೀಡಿದ್ದಾರೆ. ಇದು ಆಗೀಗ ಬರುವಂಥದ್ದಲ್ಲ. ಶತ ಶತಮಾನಗಳಿಗೊಮ್ಮೆ ಬರುವ ಪ್ರತಿಭೆ. ಅದೊಂದು ಕಾಲಮಾನದಲ್ಲಿ ಕುವೆಂಪು, ಕಾರಂತ, ಬೇಂದ್ರೆ, ಗೋವಿಂದ ಪೈಯವರಂಥ ಅದ್ಭುತ ಪ್ರತಿಭಾಶಾಲಿಗಳು ಬಂದರು. ಕನ್ನಡವು ವೈವಿಧ್ಯತೆಯಿಂದ ಪುಣ್ಯ ಮಾಡಿದೆ.
ಅಂಥ ಕನ್ನಡವನ್ನು ಕಲಿತ ನಾವು ಪುಣ್ಯಾತ್ಮರು. ಆ ಪುಣ್ಯಕ್ಕೆ ಮತ್ತೂಂದು ಗರಿ ತಂದುಕೊಟ್ಟವರು ಭೈರಪ್ಪನವರು ಎಂದು ವಿಶ್ಲೇಷಿಸಿದರು. ಹಾಗೆಯೇ, ನಾವು ಭೈರಪ್ಪನವರ ಕಾಲದಲ್ಲಿದ್ದೆವು, ಅವರನ್ನು ನೋಡಿದೆವು, ಅವರ ಜೊತೆ ಮಾತನಾಡಿದೆವು, ಅವರು ಕೂಡ ನಮ್ಮ ಜೊತೆ ಮಾತನಾಡಿದರು ಎಂಬ ಭಾಗ್ಯಕ್ಕಿಂತ ಮಿಗಿಲಾದುದಿಲ್ಲ ಎಂದರು.
ಭೈರಪ್ಪನವರ ಕೃತಿಗಳ ಕುರಿತು ಮಾತನಾಡಿದ ಶತಾವಧಾನಿ ಗಣೇಶ್, ಭೈರಪ್ಪನವರ ಕೃತಿಗಳ ಬಗ್ಗೆ ಒಂದು ತಿಂಗಳ ಕಾಲ ಭಾಷಣ ಮಾಡಬಹುದು. ಅವರ ಕಾದಂಬರಿಗಳ ಕುರಿತು ಎಷ್ಟೆಷ್ಟು ಚಿಂತನೆ ಮಾಡುತ್ತೇವೆಯೋ ಅಷ್ಟಷ್ಟು ಹೊಳೆಯುತ್ತಾ ಹೋಗುತ್ತದೆ. ಅವರ ಕೃತಿಯನ್ನು ಯಾವ ದೃಷ್ಟಿಯಿಂದ ನೋಡಿದರೂ ಸ್ವಾರಸ್ಯವಾಗಿರುತ್ತದೆ ಎಂದು ಹೇಳಿದರು.
ಸಾಕ್ಷಿ: ಸಾಕ್ಷಿ ಕಾದಂಬರಿ ನಮ್ಮ ಸಾಕ್ಷಿ ಪ್ರಜ್ಞೆಯನ್ನು ವಿಸ್ತರಿಸುವ ಕೃತಿಯಾಗಿದೆ. ಸಾಧನಗಳಿಗೆ ಬೆಲೆ ಕೊಟ್ಟಾಗ ಸಾಕ್ಷಿ ಪ್ರಜ್ಞೆ ಕಾಣೆಯಾಗುತ್ತದೆ ಎಂಬುದನ್ನು ಇದು ತಿಳಿಸುತ್ತದೆ. ಧರ್ಮ ಅರ್ಥ ಕಾಮಗಳನ್ನು ಮೀರಿ ಹೋಗುವ ವಸ್ತುವನ್ನು ಇಲ್ಲಿ ಕಾಣಬಹುದು. ಸಾಕ್ಷಿ ಪ್ರಜ್ಞೆ ಎಂಬುದು ಬಹಳ ಮುಖ್ಯ. ಸಾಕ್ಷಿ ಪ್ರಜ್ಞೆ ಇಲ್ಲದಿದ್ದರೆ ಕಾವ್ಯ ಉಳಿಯುವುದಿಲ್ಲ. ಸಾಕ್ಷಿಯ ಜೀವಾಳ ಸಹಾನುಭೂತಿ ಶಾಂತತೆ. ದ್ವಂದ್ವಗಳನ್ನು ಮೀರಬೇಕು, ನಾನು ಎಂಬುದನ್ನು ಬಿಡಬೇಕು ಎಂಬುದನ್ನು ಸೂಚಿಸುತ್ತದೆ ಎಂದರು.
ವಂಶವೃಕ್ಷ: ವಂಶವೃಕ್ಷ ಕಾದಂಬರಿ ವ್ಯಕ್ತಿಗತ ಜೀವನದಲ್ಲಿ ಬರುವ ಸಂಘರ್ಷಗಳನ್ನು ಹೇಳುತ್ತದೆ. ಇಲ್ಲಿ ಯಾವ ಪಾತ್ರವೂ ಕೆಟ್ಟ ಪಾತ್ರವಲ್ಲ. ಕರ್ಮ ಸಿದ್ಧಾಂತವನ್ನು ಇಲ್ಲಿ ನಿಕಷಕ್ಕೊಡ್ಡಿದ್ದಾರೆ. ವಂಶವೃಕ್ಷದ ಎಲ್ಲ ಪಾತ್ರಗಳೂ ನೋವನ್ನನುಭವಿಸುತ್ತವೆ. ಕರ್ಮ ಸಿದ್ಧಾಂತವು ಎಷ್ಟು ಮೌಡ್ಯತೆಯಿಂದ ಕೂಡಿದೆ ಎಂಬುದುನ್ನು ಇಲ್ಲಿನ ಪಾತ್ರಗಳು ನಿರೂಪಿಸುತ್ತವೆ ಎಂದು ಗಣೇಶ್ ಅಭಿಪ್ರಾಯಿಸಿದರು.
ಧಾತು: ಧಾತು ಕಾದಂಬರಿಯಲ್ಲಿ ಜನಿವಾರ, ಸೆಗಣಿ ಮುದ್ದೆ, ಮೀಸೆ ಇವುಗಳೆಲ್ಲವೂ ಜಾತಿಯ ಸಂಕೇತಗಳಾಗಿ ಬರುತ್ತವೆ. ಆದರೆ, ನಾವು ಅವುಗಳನ್ನು ನೋಡುವ ವಿಧಾನದಲ್ಲಿ ಒಳಿತು ಕೆಡುಕು ಅಡಗಿರುತ್ತದೆ. ಧಾತು ಎಂಬುದು ನಾಮ ಪದವೂ ಹೌದು, ಕತೃì ಪದವೂ ಹೌದು. ಸಮಾಜದ ನೀತಿ ರೀತಿ, ಏಕೆ ಹೀಗಾಗಿದೆ ಎಂಬುದನ್ನು ಯೋಚಿಸುವಂತೆ ಈ ಕಾದಂಬರಿ ಮಾಡುತ್ತದೆ. ಅನುಭವಗಳ ಗಾಢತೆಯಿಂದ ಕಾದಂಬರಿ ಪರಿಪೂರ್ಣವಾಗಿದೆ ಎಂದರು.
ತಂತು: ಕಾಳಿದಾಸನ ಮೇಘದೂತ ಇದ್ದಂತೆ, ಭೈರಪ್ಪನವರ ಕಾದಂಬರಿಗಳಲ್ಲಿ ಜಲಪಾತ. ಪ್ರೀತಿ, ದಾಂಪತ್ಯ, ಲೈಂಗಿಕತೆಯನ್ನು ಇಲ್ಲಿ ಚೆನ್ನಾಗಿ ವ್ಯಾಖ್ಯಾನಿಸಲಾಗಿದೆ. ತಂತು ಕಾದಂಬರಿ ಆಧುನಿಕ ಭಾರತದ, ಮಹಾಭಾರತವೆಂದು ಹೇಳಬಹುದು. ಇಲ್ಲಿ ಬರುವ ಬೇರೆ ಬೇರೆ ಪಾತ್ರಗಳು ಆಧುನಿಕ ರಾಜಕೀಯ ವ್ಯಕ್ತಿಗಳನ್ನು ಸೂಚಿಸುತ್ತವೆ. ಮಂದ್ರ ಕಲೆಯ ಒಂದು ಪ್ರಕಾರವನ್ನು ವಿಶದವಾಗಿ ಹೇಳುತ್ತದೆ ಎಂದು ವಿವರಿಸಿದರು.
ಭೈರಪ್ಪನವರು ಸನಾತನ ಧರ್ಮವನ್ನು ಅಂದಾಭಿಮಾನದಿಂದ ನೋಡುತ್ತಾರೆ ಎನ್ನುವವರು ಅವರನ್ನು ಬೇರೊಂದು ನೆಲೆಯಲ್ಲಿ ನೋಡಬೇಕು. ಅವರು ಸನಾತನ ಧರ್ಮದಲ್ಲಿರುವ ನೂನ್ಯತೆಗಳನ್ನೂ ಸಹ ತಮ್ಮ ಕಾದಂಬರಿಗಳಲ್ಲಿ ಚಿಕಿತ್ಸಕ ಮನೋಭಾವದಿಂದ ನೋಡುತ್ತಾರೆ. ಅವರ ಸಾಹಿತ್ಯದ ನೆಲೆ ಇರುವುದೇ ಭಾರತೀಯತೆಯಲ್ಲಿ ಎಂದು ವಿವರಿಸಿದರು.
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.