ಕಾವೇರಿ ಕಣಿವೆಯಲ್ಲಿ ಸಂಚಲನ ಮೂಡಿಸಿದ ಜೋಡೋ
Team Udayavani, Oct 9, 2022, 4:56 PM IST
ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳಿದ್ದರೂ ಕಾವೇರಿ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಸೀಟುಗಳನ್ನು ಪಡೆದರೆ ಮಾತ್ರ ಆಡಳಿತದ ಚುಕ್ಕಾಣಿ ಹಿಡಿಯಬಹುದೆಂಬ ಲೆಕ್ಕಾಚಾರದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ತೊಡಗಿದ್ದು ಅದಕ್ಕಾಗಿ ಅಸ್ತ್ರವನ್ನು ಸಿದ್ಧಪಡಿಸಿಕೊಳ್ಳುತ್ತಿದೆ.
ಎರಡು ರಾಷ್ಟ್ರೀಯ ಪಕ್ಷಗಳ ಈ ಜಂಗೀಕುಸ್ತಿಯಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ ಪಡಬೇಕಿದೆ. ಕಾವೇರಿ ಕೊಳ್ಳದ ಪ್ರದೇಶದಲ್ಲಿ ಕಳೆದ ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ನೆಲ ಕಚ್ಚಿದ ಕಾಂಗ್ರೆಸ್ಸಿಗೆ ಈಗ ಪಕ್ಷದ ನೇತಾರ ರಾಹುಲ್ ಗಾಂಧಿ ಅವರ ಭಾರತ್ ಐಕ್ಯತಾ ಯಾತ್ರೆ ತಳಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಖಂಡಿತವಾಗಿಯೂ ಟಾನಿಕ್ ನೀಡಿದೆ.
ಯಾತ್ರೆಗೆ ಉತ್ತಮ ಸ್ಪಂದನೆ: ಚಾಮರಾಜನಗರ ಜಿಲ್ಲೆ ಮೂಲಕ ರಾಜ್ಯ ಪ್ರವೇಶಿಸಿದ ರಾಹುಲ್ ಯಾತ್ರೆ ಮೈಸೂರು ಮೂಲಕ ಮಂಡ್ಯ ಜಿಲ್ಲೆ ಪ್ರವೇಶಿಸಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾವೇರಿ ಕೊಳ್ಳದ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಮೈಸೂರಿನಲ್ಲಿ ಜೋರು ಮಳೆ ಯಲ್ಲಿಯೂ ರಾಹುಲ್ ಗಾಂಧಿ ಅವರು ನೆನೆದುಕೊಂಡೇ ಎಂಟು ನಿಮಿಷಗಳ ಕಾಲ ಮಾಡಿದ ಭಾಷಣ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂಜನಗೂಡು ತಾಲೂಕು ಬದನವಾಳು ಗ್ರಾಮದಲ್ಲಿ ಎರಡು ಸಮುದಾಯಗಳ ನಡುವಿನ ಸುಮಾರು 30 ವರ್ಷಗಳ ವೈಮನಸ್ಸನ್ನು ದೂರ ಮಾಡಿ ಇಬ್ಬರನ್ನೂ ಒಗ್ಗೂಡಿಸಲು ರಾಹುಲ್ ಗಾಂಧಿ ಪ್ರಯತ್ನಿ ಸಿದ್ದೂ ಪ್ರಶಂಸೆಗೆ ಪಾತ್ರವಾಯಿತು.
ರಾಜ್ಯ ಕಾಂಗ್ರೆಸ್ಸಿಗರಲ್ಲಿ ಹೊಸ ಚೈತನ್ಯ: ಕಾಂಗ್ರೆಸ್ ನಾಯಕರು ಏನೇ ಹೇಳಲಿ, ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷವನ್ನು ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸುವ ಉದ್ದೇಶವನ್ನೂ ಹೊಂದಿದೆ. ಯಾತ್ರೆಯಲ್ಲಿ ರಾಹುಲ್ ಅವರ ವೇಗ, ಉತ್ಸಾಹ, ಚೈತನ್ಯಶೀಲತೆ ಕಂಡು ಬರುತ್ತದೆ. ಭಾರತ್ ಐಕ್ಯತಾ ಯಾತ್ರೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿಗೆ ಎಷ್ಟರಮಟ್ಟಿಗೆ ಲಾಭ ತಂದುಕೊಡುತ್ತದೆಯೋ ಗೊತ್ತಿಲ್ಲ, ಆದರೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಂತೂ ಇದರ ಫಸಲನ್ನು ಪಡೆಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸ್ವತಃ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದು ರಾಜ್ಯ ಕಾಂಗ್ರೆಸ್ಸಿಗರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಮತ್ತಷ್ಟು ಕ್ರಿಯಾಶೀಲರಾಗಲು ವೇದಿಕೆ: ರಾಹುಲ್ ಭಾರತ್ ಜೋಡೋ ಯಾತ್ರೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮತ್ತಷ್ಟು ಕ್ರಿಯಾಶೀಲರಾಗಲು ವೇದಿಕೆ ಒದಗಿಸಿದೆ. ಕಾಂಗ್ರೆಸ್ಸಿನ ದೆಹಲಿ ಮಟ್ಟದ ನಾಯಕರಿಗೂ ಕೂಡ ತಳಮಟ್ಟದಲ್ಲಿ ಪಕ್ಷದ ಇಮೇಜು ಹೇಗಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಬಿಜೆಪಿಗೆ ತಳಮಳ ಶುರು: ಕಾವೇರಿ ಕಣಿವೆ ಪ್ರದೇಶ ದಲ್ಲಿ ಭಾರತ್ ಜೋಡೋ ಯಾತ್ರೆಯು ಬಿಜೆಪಿಗೆ ತಳಮಳ ತಂದಿದೆ. ಯಾತ್ರೆ ಕುರಿತು ಬಿಜೆಪಿ ನಾಯಕರು ನಿರಂತರವಾಗಿ ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಯಾಗಿದೆ. ಮುಂದಿನ ಅಸೆಂಬ್ಲಿ ಚುನಾವಣೆಗೆ ಟಾರ್ಗೆಟ್-150 ಎಂದು ಗುರಿ ಹೊಂದಿ ಹಳೇ ಮೈಸೂರು ಭಾಗದಲ್ಲಿ ಉತ್ಸಾಹದಲ್ಲಿ ಮುನ್ನುಗ್ಗಿದ ಕಮಲ ಪಾಳ ಯಕ್ಕೆ ಕಾಂಗ್ರೆಸ್ ಯಾತ್ರೆ ಬ್ರೇಕ್ ಹಾಕಿದೆ.
ಕಮಲ ಪಾಳಯದಲ್ಲಿ ಅಸಮಾಧಾನ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ರಾಜ್ಯ ಬಿಜೆಪಿ ಗ್ರಹಿಸಿದ ರೀತಿ ಹಾಗೂ ನೀಡಿದ ಹೇಳಿಕೆಗಳ ಬಗ್ಗೆಯೇ ಬಿಜೆಪಿಯ ಕೆಲವು ಹಿರಿಯ ನಾಯಕರಲ್ಲಿ ಅಸಮಾಧಾನವಿದೆ. ಯಾತ್ರೆಯನ್ನು ಇದರ ಪಾಡಿಗೆ ಸಾಗಲು ಬಿಟ್ಟು ಆ ಬಗ್ಗೆ ಹೆಚ್ಚು ಮಾತಾಡದಿದ್ದರೆ ಸೂಕ್ತ ವಾಗಿತ್ತು. ಆದರೆ, ವಿನಾಕಾರಣ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕೆಗಳನ್ನು ಮಾಡಿ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರವಾಗುವಂತೆ ತಮ್ಮ ಪಕ್ಷವೇ ಅವಕಾಶ ಕಲ್ಪಿಸಿತು ಎಂಬ ಅಸಮಾಧಾನ ಕಮಲ ಪಾಳಯದಲ್ಲಿದೆ.
ಬಿಜೆಪಿ, ಜೆಡಿಎಸ್‌ನಿಂದಲೂ ಪಾದಯಾತ್ರೆ : ಭಾರತ್ ಜೋಡೋ ಯಾತ್ರೆಯ ಕಾವನ್ನು ಅಸೆಂಬ್ಲಿ ಚುನಾವಣೆವರೆಗೂ ಕಾಪಾಡಿಕೊಳ್ಳುವುದು ಕಾಂಗ್ರೆಸ್ಸಿಗೂ ಸವಾಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಥಯಾತ್ರೆ ಹಮ್ಮಿ ಕೊಂಡಿದ್ದಾರೆ. ಕಾಂಗ್ರೆಸ್ಸಿನ ತಂತ್ರಗಳಿಗೆ ಪ್ರತಿತಂತ್ರ ಹೂಡಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅ.11 ರಿಂದ ರಾಯಚೂರಿನಿಂದ ಪ್ರವಾಸ ಆರಂಭಿಸಲಿದ್ದಾರೆ. ಜೆಡಿಎಸ್ ನ.1ರಿಂದ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಿದೆ. ಭಾರತ್ ಜೋಡೋ ಯಾತ್ರೆ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕಾವೇರಿ ಕಣಿವೆ ಪ್ರದೇಶದಲ್ಲಿ ಹಾದು ಹೋಗುತ್ತಿರುವುದು ಆ ಪಕ್ಷಕ್ಕೆ ಸವಾಲು ಒಡ್ಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಮಂಡ್ಯ ಜಿಲ್ಲೆಗೆ ಬಂದ ಮಾತ್ರಕ್ಕೆ ಅಲ್ಲೇನೂ ಬದಲಾವಣೆ ಆಗುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಅವರ ಪಕ್ಷಕ್ಕೆ ಪ್ರಮುಖ ಎದುರಾಳಿ ಕಾಂಗ್ರೆಸ್ ಎಂಬುದನ್ನು ಅವರು ಮರೆಯುವಂತಿಲ್ಲ.
–ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.