
ಪುಂಡರು ಚುಡಾಯಿಸಿದರೆ ಕರೆ ಮಾಡಿ
Team Udayavani, Mar 12, 2020, 3:00 AM IST

ಹುಣಸೂರು: ಹೆಣ್ಣು ಮಕ್ಕಳು ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಗರಠಾಣೆ ಎಎಸ್‌ಐ ಲಕ್ಷ್ಮಮ್ಮ ಸಲಹೆ ನೀಡಿದರು. ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಲೈಂಗಿಕ ಕಿರುಕುಳ ನಿವಾರಣೆ ಹಾಗೂ ರ್ಯಾಗಿಂಗ್ ವಿರೋಧಿ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಲೈಂಗಿಕ ದೌರ್ಜನ್ಯ ತಡೆ ವಿಷಯ ಕುರಿತು ಅವರು ಮಾತನಾಡಿದರು.
ಬಹುತೇಕ ಸಂದರ್ಭಗಳಲ್ಲಿ ಬಸ್‌ಗಳಲ್ಲಿ, ರಸ್ತೆಯಲ್ಲಿ ಓಡಾಡುವಾಗ, ಕಾಲೇಜಿಗೆ ಬರುವ-ಹೋಗುವ ವೇಳೆ ಕಿಡಿಗೇಡಿಗಳು ಚುಡಾಯಿಸುತ್ತಾರೆ. ದೌರ್ಜನ್ಯ ನಡೆದರೂ ಮರ್ಯಾದೆಗೆ ಅಂಜಿ ಪ್ರಶ್ನಿಸಲ್ಲ, ಇದರಿಂದಾಗಿಯೇ ಯುವತಿಯರು ತೊಂದರೆಗೆ ಸಿಲುಕಿಕೊಳ್ಳಲಿದ್ದಿರಿ ಎಂದು ಎಚ್ಚರಿಕೆ ನೀಡಿದರು.
ಸಹಾಯವಾಣಿ: ನಿಮ್ಮನ್ನು ಚುಡಾಯಿಸುವ, ಹಿಂಬಾಲಿಸುವ, ತೊಂದರೆ ಕೊಡುವ ಸಂದರ್ಭಗಳಲ್ಲಿ ತುರ್ತು ಸ್ಪಂದನ ಸಹಾಯವಾಣಿ (112) ಕರೆ ಮಾಡಿದರೆ ನೀವು ಇರುವ ಸ್ಥಳಕ್ಕೆ ಸಿಬ್ಬಂದಿ ಬಂದು ನೆರವು ನೀಡುವರು. ನಿಮಗೆ ತೊಂದರೆಯಾದಾಗ ಹೆದರದೆ ದೂರು ನೀಡಬೇಕು. ಕಾಲೇಜು ವಿದ್ಯಾರ್ಥಿಗಳು ಓದು ಮುಗಿಸುವ ತನಕ ಪ್ರೀತಿಯ ಬಲೆಯಲ್ಲಿ ಸಿಲುಕಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ಹೆಣ್ಣುಮಕ್ಕಳು ಸಹ ಸಭ್ಯ ಬಟ್ಟೆಗಳನ್ನು ಧರಿಸಬೇಕು. ಮೊಬೈಲ್ ಚಾಟಿಂಗ್, ಫೇಸ್‌ಬುಕ್, ವ್ಯಾಟ್ಸಾಪ್‌ನಿಂದ ಆದಷ್ಟು ದೂರವಿರಬೇಕು. ಅಗತ್ಯವಿದ್ದಲ್ಲಿ ಮಾತ್ರ ಮೊಬೈಲ್ ಬಳಸಬೇಕು ಎಂದು ತಿಳಿಸಿದರು.
ಗೆಳತಿ ಕ್ಲಿನಿಕ್: ವಕೀಲೆ ಪವಿತ್ರ ಮಾತನಾಡಿ, ಕಾಲೇಜುಗಳಲ್ಲಿ ನಡೆಯುವ ರ್‍ಯಾಂಗಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಸಲ್ಲದ ವಿಷಯ, ಫೋಟೋ ಅಪ್ ಲೋಡ್ ಮಾಡುವುದು, ಅನುಮತಿ ಇಲ್ಲದೆ ಯಾವುದೇ ಹೆಣ್ಣುಮಕ್ಕಳ ಫೋಟೋ ತೆಗೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಚುಡಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಹಿಳೆಯರ ಸಂರಕ್ಷಣೆಗಾಗಿ 2012ರಲ್ಲಿ ಜಾರಿಗೆ ಬಂದ ಫೋಕ್ಸೋ ಕಾಯ್ದೆ ರಕ್ಷಾಕವಚವಿದ್ದಂತೆ. ಯಾವುದೇ ದೌರ್ಜನ್ಯ ನಡೆದ ಸಂದರ್ಭದಲ್ಲಿ ಸಿಡಿಪಿಒ ಕಚೇರಿಯಲ್ಲಿ ಮಹಿಳಾ ಸಹಾಯವಾಣಿ ಇದೆ.
ಆಸ್ಪತ್ರೆಯಲ್ಲಿ ಗೆಳತಿ ಕ್ಲಿನಿಕ್ ತೆರೆಯಲಾಗಿದ್ದು, ನಿಮ್ಮ ರಕ್ಷಣೆಗಾಗಿ ಇರುವ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಜ್ಞಾನಪ್ರಕಾಶ್, ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ಸಂಚಾಲಕಿ ಡಿ.ದೀಪಾ ರ್ಯಾಗಿಂಗ್ ವಿರೋಧಿ ಸಮಿತಿ ಸಂಚಾಲಕಿ ಡಾ.ಕಲಾಶ್ರೀ, ವಿದ್ಯಾರ್ಥಿನಿಯರಾದ ಉಮ್ಮೇ ಅಸ್ಮಾ, ಹರ್ಷಿತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ದೀಪುಕುಮಾರ್, ಸಹಾಯಕ ಪ್ರಾಧ್ಯಾಪಕರಾದ ನಾಗಣ್ಣ, ಅಂಬುಜಾಕ್ಷಿ, ಭಾರತಿ, ಜನಿಫರ್ ಅಂದ್ರಾದೆ ಮತ್ತಿತರರು ಉಪಸ್ಥಿತರಿದ್ದರು.
ಕೇಸ್ ದಾಖಲಿಸಿದ 6 ತಿಂಗಳೊಳಗೆ ನ್ಯಾಯ: ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಪ್ರೀತಿ-ಪ್ರೇಮದ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಬಸ್‌ಗಳಲ್ಲಿ, ರಸ್ತೆಯಲ್ಲಿ ಓಡಾಡುವಾಗ, ಕಾಲೇಜಿಗೆ ಬರುವ-ಹೋಗುವ ವೇಳೆ ಪುಂಡರು, ಕಿಡಿಗೇಡಿಗಳು ರೇಗಿಸುವುದು ಸಾಮಾನ್ಯವಾಗಿದೆ. ತಮ್ಮ ಮೇಲೆ ದೌರ್ಜನ್ಯ ನಡೆದರೂ ಮರ್ಯಾದೆಗೆ ಅಂಜುವರು. ದೂರು ನೀಡಲ್ಲ, ಇದು ತಪ್ಪು. ಮಹಿಳೆಯರ ರಕ್ಷಣೆಗಾಗಿಯೇ ಪರಿಣಾಮಕಾರಿ ಫೋಕ್ಸೋ ಕಾಯ್ದೆ ಜಾರಿಯಲ್ಲಿದೆ. ಪ್ರಕರಣ ದಾಖಲಾದ ಆರು ತಿಂಗಳೊಳಗೆ ನ್ಯಾಯ ಸಿಗಲಿದೆ ಎಂದು ಎಎಸ್‌ಐ ಲಕ್ಷ್ಮಮ್ಮ ತಿಳಿಸಿದರು.
ಟಾಪ್ ನ್ಯೂಸ್

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.