![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 14, 2019, 3:00 AM IST
ಮೈಸೂರು: ಭಾಷೆಗಳ ಉಳಿವಿನ ದೃಷ್ಟಿಯಿಂದ ಮಕ್ಕಳ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು ಕಡ್ಡಾಯವಾಗಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿರುವ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದ ಸ್ವರ್ಣ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣದ ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳೂ ಆಯಾಯ ರಾಜ್ಯಗಳ ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ನೀಡುವಂತಾದಾಗ ಭಾಷೆಯ ಉಳಿವು ಸಾಧ್ಯ. ಬ್ರಿಟಿಷರು ಶಿಕ್ಷಣ ಮತ್ತು ಉದ್ಯೋಗವನ್ನು ಜೋಡಿಸಿರುವುದರಿಂದ ಉದ್ಯೋಗದ ಕಾರಣಕ್ಕೆ ಇಂಗ್ಲಿಷ್ ವ್ಯಾಮೋಹ ಬೆಳೆದಿದೆ ಎಂದರು.
ಬ್ಯಾಂಕ್, ಅಂಚೆ ಕಚೇರಿ, ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯಲ್ಲೇ ದೈನಂದಿನ ವ್ಯವಹಾರ ನಡೆಯಬೇಕು. ಹಳ್ಳಿಯಲ್ಲಿ ಹೋಗಿ ಕುಳಿತು ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಅಲ್ಲಿನ ಜನರಿಗೆ ಏನು ಅರ್ಥವಾಗಬೇಕು ಎಂದು ಪ್ರಶ್ನಿಸಿದರು.
ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ಗಳ ಕಲಾಪ ಆಂಗ್ಲ ಭಾಷೆಯಲ್ಲೇಕೆ ನಡೆಯಬೇಕು? ಅಲ್ಲಿನ ಜನರ ಮಾತೃಭಾಷೆಯಲ್ಲೇ ನ್ಯಾಯಾಲಯದ ಕಲಾಪ ನಡೆದಾಗ ವಾದಿ-ಪ್ರತಿವಾದಿಗೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ. ನ್ಯಾಯಾಲಯಗಳು ಬೇಕಿದ್ದರೆ ಅನುವಾದಕರನ್ನು ಇರಿಸಿಕೊಳ್ಳಲಿ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹೆಸರನ್ನು ಉಲ್ಲೇಖೀಸಿದ ಉಪ ರಾಷ್ಟ್ರಪತಿ, ಪಿರಿಯಾಪಟ್ಟಣದ ತಂಬಾಕು ಬೆಳೆಗಾರನ ಹತ್ತಿರ ಹೋಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರೆ, ಅವರಿಗೇನು ತಿಳಿಯಬೇಕು? ಗ್ರಾಮೀಣ ಪ್ರದೇಶದಲ್ಲಿ ಅವರ ಭಾಷೆಯಲ್ಲೇ ಮಾತನಾಡಿದಾಗ ಮಾತ್ರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.
ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ ಭಾಷೆಯ ಸಂರಕ್ಷಣೆ, ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡಿದೆ. ಸಂಸ್ಥೆಯನ್ನು ಜನರ ಹತ್ತಿರ ಕೊಂಡುಹೋಗಿ ಇನ್ನಷ್ಟು ಜನಪ್ರಿಯಗೊಳಿಸಬೇಕಾದ ಅಗತ್ಯತೆ ಇದೆ. ರಾಜ್ಯಸಭೆಯಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲೇ ಮಾತನಾಡಲು ಅವಕಾಶ ಕೊಡಲಾಗಿದೆ ಎಂದು ಹೇಳಿದರು.
ಪ್ರೋತ್ಸಾಹ: ಭಾರತದ ಪುರಾತನ ಭಾಷೆಗಳ ಬಗ್ಗೆ ಸಂಶೋಧನೆಗಳಾಬೇಕು. ಹಿಂದೆ ರಾಜರ ಆಳ್ವಿಕೆ ಭಾಷೆಗಳ ಬೆಳವಣಿಗೆಗೆ ಸ್ವರ್ಣಯುಗವಾಗಿತ್ತು. ಮೈಸೂರು ಮಹಾರಾಜರು, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಸೇರಿದಂತೆ ರಾಜ ಮಹಾರಾಜರು ಭಾಷೆ, ಕಲೆ, ಸಾಹಿತ್ಯ, ಸಂಗೀತ, ನಾಟ್ಯ, ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು.
ಮಾತೃಭಾಷೆಗೆ ಪ್ರೋತ್ಸಾಹ ನೀಡುವುದು ಇನ್ನೊಂದು ಭಾಷೆಯನ್ನು ವಿರೋಧಿಸಿದಂತಲ್ಲ. ಇಂಗ್ಲಿಷ್ ವ್ಯಾಮೋಹದಿಂದ ಅವರು ಜಂಟಲ್‌ವುನ್ ಹೌದೋ ಅಲ್ಲವೋ ಗೊತ್ತಿರುವುದಿಲ್ಲ, ಆದರೂ ಅನಗತ್ಯವಾಗಿ ಎಲ್ಲರನ್ನೂ ಜಂಟಲ್‌ವುನ್ ಅನ್ನುತ್ತಿದ್ದೇವೆ. ಸ್ವಾಮಿ ವಿವೇಕಾನಂದರು ಷಿಕಾಗೋ ಸಮ್ಮೇಳನದಲ್ಲಿ ಸಹೋದರ, ಸಹೋದರಿಯರೇ ಎನ್ನುವ ಮೂಲಕ ನಮ್ಮ ತನವನ್ನು ಮೆರೆದರು.
ನಾವು ಕೂಡ ನಮ್ಮ ಮಾತೃಭಾಷೆಯಲ್ಲಿ ವ್ಯವಹರಿಸುವ ಮೂಲಕ ನಮ್ಮತನವನ್ನು ಉಳಿಸಿಕೊಳ್ಳೋಣ. ಗುಡ್ ಮಾರ್ನಿಂಗ್, ಗುಡ್ ಆಫ್ಟರ್‌ನೂನ್, ಗುಡ್ ನೈಟ್, ಸ್ವೀಟ್ ಡ್ರೀಮ್ಸ್ ಎನ್ನುವ ಬದಲು ಎಲ್ಲ ಸಮಯದಲ್ಲೂ ನಮಸ್ಕಾರ ಹೇಳ್ಳೋಣ. ನಮಸ್ಕಾರವೇ ನಮ್ಮ ಸಂಸ್ಕಾರ ಎಂದು ಹೇಳಿದರು.
ಫಲಕ: ಪ್ರತಿಯೊಂದು ಅಂಗಡಿ ಮುಂಗಟ್ಟು, ಹೋಟೆಲ್ ಎಲ್ಲಾ ಕಡೆ ಮೊದಲು ಮಾತೃಭಾಷೆಯ ಫಲಕವಿರಲಿ. ನಂತರ ಬೇರೆ ಭಾಷೆಗಳಿಗೆ ಆದ್ಯತೆ ಕೊಡಿ. ಎಲ್ಲಾ ಭಾಷೆಯನ್ನೂ ಕಲಿಯಿರಿ. ಯಾವ ಭಾಷೆಯನ್ನೂ ವಿರೋಧಿಸಬೇಡಿ. ಆದರೆ, ನಿಮ್ಮ ಭಾಷೆ ಮಾತ್ರ ಮರೆಯಬೇಡಿ. ಭಾಷೆಯಲ್ಲಿ ನಮ್ಮ ಸಂಸ್ಕೃತಿ ಅಡಗಿರುತ್ತದೆ. ನಮ್ಮ ಭಾಷೆ ನಮ್ಮ ಐಡೆಂಟಿಟಿಯನ್ನು ತೋರಿಸುತ್ತೆ. ಭಾರತೀಯ ಭಾಷೆಗಳಿಗೆ ತನ್ನದೇ ಆದ ವೈಜ್ಞಾನಿಕ ನೆಲಗಟ್ಟು ಇದೆ. ನಮ್ಮ ಭಾಷೆಯನ್ನು ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಮಾತೃಭಾಷೆ ಉಳಿಯಲು ಸಾಧ್ಯ.
ಮನೆಯಲ್ಲಿ ಮಾತೃಭಾಷೆಯಲ್ಲಿ ಮಾತನಾಡದೆ ಇಂಗ್ಲಿಷ್‌ನಲ್ಲೇಕೆ ಮಾತನಾಡಬೇಕು ಎಂದು ಪ್ರಶ್ನಿಸಿದ ಅವರು, ಮಕ್ಕಳಿಂದ ಅಮ್ಮ-ಅಪ್ಪ ಎಂದು ಕರೆಸಿಕೊಳ್ಳುವ ಬದಲಿಗೆ, ಮಮ್ಮಿ-ಡ್ಯಾಡಿ ಎಂದೇಕೆ ಕರೆಸಿಕೊಳ್ತೀರಿ? ಮಗು ಅಮ್ಮ-ಅಪ್ಪ ಎಂದರೆ ಹೃದಯಾಂತರಾಳದಿಂದ ಬರುತ್ತೆ. ಮಾತೃಭಾಷೆಯ ಸೌಂದರ್ಯ ಅದು ಎಂದರು.
ವೇದಿಕೆಯಲ್ಲಿ ಮೇಯರ್ ಪುಷ್ಪಲತಾ, ಸಂಸದ ಪ್ರತಾಪ್ ಸಿಂಹ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಂಟಿ ನಿರ್ದೇಶಕ ಸಂಜಯ್‌ಕುಮಾರ್ ಸಿನ್ಹಾ, ಸಿಐಐಎಲ್ ನಿರ್ದೇಶಕ ಪ್ರೊ.ಡಿ.ಜಿ.ರಾವ್, ಸಿಐಐಎಲ್ ಸಂಸ್ಥಾಪಕ ನಿರ್ದೇಶಕ ಪಟ್ನಾಯಕ್ ಇತರರಿದ್ದರು.
ಉಪರಾಷ್ಟ್ರಪತಿ ಪಂಚಮಂತ್ರ
1.ಅಮ್ಮನನ್ನು ಸದಾ ಸ್ಮರಿಸಿ
2. ಜನ್ಮಭೂಮಿ
3. ಮಾತೃಭಾಷೆ
4. ಮಾತೃಭೂಮಿ
5. ಗುರು
ಈ ಐವರನ್ನು ಸದಾ ಸ್ಮರಿಸಿ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಗೂಗಲ್ ಕೆಟ್ಟರೆ ಸರಿಪಡಿಸಲು ಗುರು ಬೇಕು ಎಂದರು.
ಯಾವ ಕಾನ್ವೆಂಟ್‌ನಲ್ಲಿ ಸಿಎಂ, ಪಿಎಂ ಓದಿದ್ದಾರೆ?: ಪೋಷಕರು ತಮ್ಮ ಮಕ್ಕಳು ಆಂಗ್ಲ ಮಾಧ್ಯಮದ ಕಾನ್ವೆಂಟ್‌ನಲ್ಲೇ ಓದಬೇಕು ಎಂಬ ಇಂಗ್ಲಿಷ್ ವ್ಯಾಮೋಹ ಬಿಡಿ. ನಾನೂ ಸೇರಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್, ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರೆಲ್ಲಾ ಯಾವ ಕಾನ್ವೆಂಟ್‌ನಲ್ಲಿ ನೋಡಿದ್ರು, ಆದರೂ ನಾವೆಲ್ಲಾ ಈ ಹುದ್ದೆಗೆ ಬಂದಿಲ್ಲವೇ ಎಂದು ವೆಂಕಯ್ಯ ನಾಯ್ಡು ಹೇಳಿದರು.
ಅಂಚೆ ಡಬ್ಬಕ್ಕೆ ಮಸಿ ಬಳಿದಿದ್ದೆ: ನಾನು ಕೂಡ ಕಾಲೇಜು ದಿನಗಳಲ್ಲಿ ಹಿಂದಿ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿ ನಮ್ಮೂರಿನಲ್ಲಿದ್ದ ಕೇಂದ್ರ ಸರ್ಕಾರಿ ಸ್ವಾಮ್ಯದ ರೈಲು ನಿಲ್ದಾಣದ ಫಲಕ ಹಾಗೂ ಅಂಚೆ ಡಬ್ಬಕ್ಕೆ ಮಸಿ ಬಳಿದಿದ್ದೆ. 1993ರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಗೆ ಹೋದ ನಂತರ ಹಿಂದಿಯ ಪ್ರಾಮುಖ್ಯತೆ ಅರಿವಾಯಿತು. ಅಂದು ರೈಲು ನಿಲ್ದಾಣದ ಫಲಕ, ಅಂಚೆ ಡಬ್ಬಕ್ಕಲ್ಲ ಮಸಿ ಬಳಿದದ್ದು, ನನ್ನ ಮುಖಕ್ಕೇ ಮಸಿ ಬಳಿದುಕೊಂಡಿದ್ದೆ ಅನಿಸಿತು ಎಂದು ವೆಂಕಯ್ಯ ನಾಯ್ಡು ಹೇಳಿದರು.
ಕನ್ನಡದಲ್ಲೇ ಆರಂಭ-ಮುಕ್ತಾಯ: ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರೇ, ಮೈಸೂರಿನ ಪ್ರಥಮ ಪ್ರಜೆ ಪುಷ್ಪಲತಾ ಜಗನ್ನಾಥ್ ಅವರೇ…ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಎಲ್ಲರಿಗೂ ನನ್ನ ಶುಭಾಶಯಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ, ಹಿಂದಿ, ಇಂಗ್ಲಿಷ್, ತೆಲುಗು ಭಾಷೆಯಲ್ಲಿ 45 ನಿಮಿಷಗಳ ಕಾಲ ನಿರರ್ಗಳವಾಗಿ ಭಾಷಣ ಮಾಡಿ, ಕೊನೆಯಲ್ಲಿ ನಮಸ್ಕಾರ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಭಾಷಣ ಮುಗಿಸಿದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.