ಚಾರ್ಜ್‌ಶೀಟ್ ಆರೋಪ-ಪ್ರತ್ಯಾರೋಪ
Team Udayavani, Jan 24, 2018, 11:38 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧದ ಎಲ್ಲಾ ಪ್ರಕರಣಗಳ ಚಾರ್ಚ್‌ಶೀಟ್ ಮುದ್ರಿಸಿ ಮನೆ ಮನೆಗೆ ಹಂಚುವ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರ ಮಾನ ಹರಾಜು ಹಾಕುತ್ತೇನೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪಅವರಿಗೆ ಕಾನೂನು ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ, ಹೀಗಾಗಿ ಸುಮ್ಮನೆ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ, ಚಾರ್ಜ್‌ಶೀಟ್ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ. ಅವರ ಹತ್ತಿರ ಏನೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ದಾಖಲೆ ನನ್ನ ಬಳಿ ಇದೆ: ಯಡಿಯೂರಪ್ಪ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಎಲ್ಲಾ ಪ್ರಕರಣಗಳ ಚಾರ್ಚ್‌ಶೀಟ್ ಮುದ್ರಿಸಿ ಮನೆ ಮನೆಗೆ ಹಂಚುವ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರ ಮಾನ ಹರಾಜು ಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸಿದ್ದರಾಮಯ್ಯ ಅವರು ತಮ್ಮ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಎಸಿಬಿ ಮತ್ತು ಸಿಐಡಿ ಮೂಲಕ ಖುಲಾಸೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ವಿರುದ್ಧದ ಅಕ್ರಮ ಗಣಿಕಾರಿಗೆ, ಅರ್ಕಾವತಿ ಡಿನೋಟಿಫಿಕೇಷನ್ ಸೇರಿ 67 ಪ್ರಕರಣಗಳನ್ನು ಬಹಿರಂಗಪಡಿಸಲು ಮುಂದಿನ 15-20 ದಿನಗಳಲ್ಲಿ ಚಾರ್ಜ್‌ಶೀಟ್ ಬಿಡುಗಡೆ ಮಾಡಲಾಗುವುದು. ಅಗತ್ಯವಿರುವ ಎಲ್ಲಾ ದಾಖಲೆಗಳು ತಮ್ಮ ಬಳಿಯಲ್ಲಿದ್ದು, ಇದನ್ನು ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದ ಜನರಿಗೆ ವಾಸ್ತವ ಸಂಗತಿ ತಿಳಿಸುವ ಕೆಲಸ ಮಾಡುತ್ತೇನೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಬೇರೆ ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದು, ಈ ಇಬ್ಬರೂ ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಜನಮನ್ನಣೆ ಗಳಿಸಿದ್ದಾರೆ ಎಂಬುದಕ್ಕೆ ಜೀವಂತ ಸಾಕ್ಷಿ ಎಂದು ಟೀಕಿಸಿದರು.
ಆರ್ಥಿಕ ದಿವಾಳಿ: ಸಿಎಂ ಸಿದ್ದರಾಮಯ್ಯ ತಾವು ಹೋದ ಕಡೆಯಲ್ಲಿ 100, 200 ಕೋಟಿ ರೂ.ಗಳ ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ ಈ ಬಾರಿಯ ಬಜೆಟ್ ಮಂಡನೆಗೆ ಚುನಾವಣಾ ನೀತಿಸಂಹಿತೆ ಅಡ್ಡಿಯಾಗಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹೊಂದಾಣಿಕೆ ಬೇಕಿಲ್ಲ: ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 150 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ವಿಶ್ವಾಸವಿದೆ. ಹೀಗಾಗಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಯಾರಿಗೆ ಗೆಲ್ಲುವ ವಿಶ್ವಾಸವಿಲ್ಲವೋ ಅವರು ಪದೇಪದೆ ಹೊಂದಾಣಿಕೆ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ ಜನರ ನಾಡಿಮಿಡಿತ ಗೊತ್ತಾಗಿದ್ದು, ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್‌ಸಿಂಹ, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸೇರಿ ಇತರರಿದ್ದರು.
ಕಾಂಗ್ರೆಸ್ ಪ್ರೇರಿತ ರೈತರು
ಕಳಸಾ ಬಂಡೂರಿ, ಮಹದಾಯಿ ವಿವಾದ ಕಾಂಗ್ರೆಸ್ಸಿಗರ ಪಾಪದ ಕೂಸು. ಕಾಂಗ್ರೆಸ್ ಅಧಿಕಾರದ ಸಂದರ್ಭ ಕರ್ನಾಟಕಕ್ಕೆ ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ನ್ಯಾಯಾಧಿಕರಣದ ಹೊರಗೆ ಸಮಸ್ಯೆ ಬಗೆಹರಿಸಲು ಗೋವಾ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ಸಿಗರ ಮನವೊಲಿಸುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದರೂ, ಈ ಬಗ್ಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಇದೇ ಬೇಡಿಕೆಗಾಗಿ ಸಿದ್ದರಾಮಯ್ಯ ಅವರ ರಾಜಕೀಯ ಬೆಂಬಲದಿಂದ ಕೆಲವರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಕಚೇರಿ ಎದುರು ಹೋರಾಟ ಮಾಡಿದ ಎಲ್ಲರೂ ಕಾಂಗ್ರೆಸ್ ಪ್ರೇರಿತ ರೈತರು ಎಂದು ಯಡಿಯೂರಪ್ಪ ಕಿಡಿಕಾರಿದರು. ಶ್ರೀನಿವಾಸಪ್ರಸಾದ್ ಮಾತನಾಡಿದರು.
ವರುಣ ಕ್ಷೇತ್ರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ
ಮೈಸೂರು: ತುಘಲಕ್ ದರ್ಬಾರ್ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನಗಳಿಸಿದ್ದು, ಕಾನೂನು-ಸುವ್ಯವಸ್ಥೆ ಹದಗೆಟ್ಟು ಬೆಂಗಳೂರಿನಲ್ಲಿ ರಾತ್ರಿ 9ಗಂಟೆ ನಂತರ ಹೆಣ್ಣು ಮಕ್ಕಳು ಓಡಾಡಲಾರದ ಸ್ಥಿತಿ ತಂದಿಟ್ಟಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ಮಂಗಳವಾರ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುತ್ತೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಅಧಿಕಾರದ ಮದ ಏರಿರುವ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು. ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಮಾತನಾಡಿದರು.
ಸಾಕ್ಷ್ಯವಿದ್ದರೆ ಕೊಡಲಿ: ಸಿದ್ದರಾಮಯ್ಯ
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಅವರಿಗೆ ಕಾನೂನು ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ, ಹೀಗಾಗಿ ಸುಮ್ಮನೆ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ, ಚಾರ್ಜ್‌ಶೀಟ್ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ. ಅವರ ಹತ್ತಿರ ಏನೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳವಾರ ಮೈಸೂರಿಗೆ ಆಗಮಿಸಿದ್ದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವುದೇ ಯೋಜನೆ ಜಾರಿಗೆ ತಂದರೂ ಹಗರಣ ಮಾಡಿದ್ದಾರೆಂದು ಯಡಿಯೂರಪ್ಪ ಆರೋಪ ಮಾಡುತ್ತಾರೆ. ಎಲ್ಲಿದೆ ದಾಖಲೆ? ತಮ್ಮ ವಿರುದ್ಧ
ಭ್ರಷ್ಟಾಚಾರ ಆರೋಪ ಮಾಡುತ್ತಿರುವವರು ಸಾಕ್ಷಾಧಾರ ವಿದ್ದರೆ ಕೊಡಲಿ ಎಂದು ಸವಾಲು ಹಾಕಿದರು.
ಚುನಾವಣೆ ಸಮೀಪದಲ್ಲಿರುವಾಗ ಲೇಖಾನುದಾನ ತೆಗೆದುಕೊಳ್ಳಬೇಕೆಂದು ಎಲ್ಲಾದರೂ ಸಂವಿಧಾನದಲ್ಲಿ ಹೇಳಿದ್ಯಾ? ಬಜೆಟ್ ಮಂಡಿಸಬೇಡಿ, ಲೇಖಾನುದಾನ ಪಡೆಯಿರಿ ಎನ್ನುತ್ತಿರುವ ಯಡಿಯೂರಪ್ಪ ಮೊದಲು ಸಂವಿಧಾನ ಓದಿಕೊಳ್ಳಲಿ, ಸಂವಿಧಾನದ ಯಾವ ಅಧ್ಯಾಯದಲ್ಲಿ ಆಯವ್ಯಯ ಮಂಡಿಸಬಾರದು ಎಂದು ಹೇಳಿದೆ ಎಂದು ಹೇಳಿದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರ ಆಯವ್ಯಯ ಮಂಡಿಸಬಹುದು ಎಂದು ಪ್ರತಿಪಾದಿಸಿದ ಅವರು, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡಿಸಿರಲಿಲ್ಲವೇ? ಆಗ ಯಡಿಯೂರಪ್ಪಏನು ಹೇಳಿದ್ದರು? ಕೆಜೆಪಿ ಕಟ್ಟಿಕೊಂಡು ಬಿಜೆಪಿ ನಾಶವೇ ನನ್ನ ಉದ್ದೇಶ, ಶೆಟ್ಟರ್ ಅತ್ಯಂತ ಭ್ರಷ್ಟ ಎನ್ನುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ನಮ್ಮನ್ನು ಕೇಳಿ ಮಾಡ್ತಾರಾ?: ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಮತ್ತು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದರ ಹಿಂದೆ ಸರ್ಕಾರದ ಕುಮ್ಮಕ್ಕಿದೆ ಎಂದು ಆರೋಪ ಮಾಡುತ್ತಿರುವ ಬಿಜೆಪಿಯವರ ಅಜ್ಞಾನಕ್ಕೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಬಂದ್ ನಿಂದ ಸರ್ಕಾರಕ್ಕೆ ತೊಂದರೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಸಂಘಟನೆಗಳವರು ಸರ್ಕಾರವನ್ನು ಕೇಳಿ ಬಂದ್ ಮಾಡುತ್ತಾರಾ ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾರಂಭಕ್ಕೆ ಜನ ಬರಲಿಲ್ಲ. ಇಲ್ಲಿಯೂ ಜನ ಸೇರಲಿಲ್ಲ ಎಂದರೆ ಬಂದ್ ಕಾರಣ ನೀಡಬಹುದು ಎಂದು ಮುಂಜಾಗ್ರತೆಯಾಗಿ ಈ ರೀತಿ ಮಾತನಾಡುತ್ತಿರಬಹುದು ಎಂದು ಲೇವಡಿ ಮಾಡಿದರು.
ವೀರ ಮಕ್ಕಳ ಕುಣಿತದ ಬಾಂಧವ್ಯ ನೆನೆದ ಸಿಎಂ
ಮೈಸೂರು: ತಾಲೂಕಿನ ಡಿ.ಸಾಲುಂಡಿಯಲ್ಲಿ ಮಂಗಳವಾರ ನಡೆದ ಗ್ರಾಮದ ಮೂಡಲ ಬಸವೇಶ್ವರ ದೇವಸ್ಥಾನದ ಓಕುಳಿ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ತಾವೊಬ್ಬ ಉತ್ತಮ ನೃತ್ಯಗಾರನಾಗಿದ್ದು, ತಮ್ಮ ಊರಿನ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಿಗೆ ತೆರಳಿ ನೃತ್ಯ
ಮಾಡುತ್ತಿದ್ದೆ. ಹೀಗೆ ಒಮ್ಮೆ ತಮ್ಮ ನೃತ್ಯವನ್ನು ನೋಡಿದ ಸುತ್ತೂರು ಮಠದ ಶ್ರೀ ರಾಜೇಂದ್ರ ಸ್ವಾಮೀಜಿ ಅವರು ಒಳ್ಳೆಯ ನೃತ್ಯಗಾರ ಎಂದು ಹೇಳಿ, 5 ರೂ. ನೀಡಿದ್ದರು ಎಂದು ಸ್ಮರಿಸಿದರು. ಬಾಲ್ಯದಲ್ಲಿ ವೀರ ಮಕ್ಕಳ ಕುಣಿತದ ಜೊತೆಗಿನ ತಮ್ಮ ಬಾಂಧವ್ಯವನ್ನೂ ಸಿದ್ದರಾಮಯ್ಯ ಈ ಸಂದರ್ಭ ಮೆಲುಕು ಹಾಕಿ ಮುಗುಳ್ನಕ್ಕರು.
ಪ್ರಸಾದ ಸಿಕ್ಕಿದೆಯೇ?: 11 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ಜಾತ್ರೆಗೆ ಬಂದವರಿಗೆಲ್ಲ ಪ್ರಸಾದ ಸಿಕ್ಕಿದೆಯೇ ಎಂದು ಕೇಳಿದ ಮುಖ್ಯಮಂತ್ರಿ, ನಾನು ಚಿಕ್ಕವನಿದ್ದಾಗ ಜಾತ್ರೆಗಳಲ್ಲಿ ಅವರೆ ಕಾಳು ಸಾರು, ರಾಗಿಮುದ್ದೆ ಪ್ರಸಾದವಾಗಿ ಸಿಗುತ್ತಿತ್ತು. ಅವರಿಗೆ ಜಾಸ್ತಿ, ಇವರಿಗೆ ಕಡಿಮೆ ಹಾಕಿದ್ದಾರೆ ಎಂದು ಅವರೆ ಕಾಳಿಗಾಗಿ ಗಲಾಟೆ ನಡೆಯುತ್ತಿದ್ದುದೂ ಉಂಟು ಎಂದು ಹೇಳಿದರು. ಮುಂಬರುವ
ವಿಧಾನಸಭಾ ಚುನಾವಣೆಯಲ್ಲಿ ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೆಲವರು ವದಂತಿ ಹರಡುತ್ತಿದ್ದಾರೆ. ಆದರೆ, ನೂರಕ್ಕೆ ನೂರರಷ್ಟು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.