ಕೆಮಿಕಲ್ ತ್ಯಾಜ್ಯಕ್ಕೆ ಬಾಲಕ ಬಲಿ
Team Udayavani, Apr 17, 2017, 9:31 AM IST
ಮೈಸೂರು: ಕಾರ್ಖಾನೆಗಳು ಸುರಿದಿದ್ದ ರಾಸಾಯನಿಕ ತ್ಯಾಜ್ಯದಲ್ಲಿ ಸಿಲುಕಿದ ಬಾಲಕ ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದು, ಮತ್ತೂಬ್ಬ ಬಾಲಕ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ತಾಲೂಕಿನ ಕ್ಯಾದನಹಳ್ಳಿಯಲ್ಲಿ ನಡೆದಿದೆ. ಈ ಬಾಲಕನ ಸ್ಥಿತಿಯೂ ಚಿಂತಾಜನಕವಾಗಿದೆ.
ಕ್ಯಾದನಹಳ್ಳಿಯ ಹರ್ಷಲ್ (14) ಮೃತ ವಿದ್ಯಾರ್ಥಿ. ಶನಿವಾರ ಬೆಳಗ್ಗೆ ಸ್ನೇಹಿತ ಮಂಜುನಾಥ್ ಜತೆಗೆ ಗ್ರಾಮದ ಖಾಸಗಿ ಜಮೀನಿನಲ್ಲಿ ಬಹಿರ್ದೆಸೆಗೆ ತೆರಳಿದ್ದ. ಈ ಸಂದರ್ಭ ಕಾರ್ಖಾನೆಗಳು ಸುರಿದಿದ್ದ ರಾಸಾಯನಿಕ ತ್ಯಾಜ್ಯದಲ್ಲಿ ಸಿಲುಕಿದ ಆತ ಶೇ.70ರಷ್ಟು ಸುಟ್ಟಗಾಯಗಳಿಗೆ ಒಳಗಾಗಿ ಮೃತಪಟ್ಟಿದ್ದಾನೆ.
ಇಬ್ಬರು ಬಾಲಕರೂ ಈ ಜಮೀನಿನಲ್ಲಿ ಬಹಿರ್ದೆಸೆಗೆ ಕುಳಿತಾಗ ಕಾಲು ಬಿಸಿಯಾದ ಅನುಭವವಾಗಿದೆ. ಕೂಡಲೇ ಓಡಿಬರಲು ಯತ್ನಿಸಿದ್ದಾರೆ, ಆದರೆ ಮರಳಿನೊಳಗೆ ಮಂಜುನಾಥ್‌ನನ್ನು ಸೆಳೆದುಕೊಳ್ಳುತ್ತಿದ್ದು
ದನ್ನು ಕಂಡ ಹರ್ಷಲ್ ಸ್ನೇಹಿತನನ್ನು ರಕ್ಷಿಸಿ ತಾನು ಮರಳಿನೊಳಗೆ ಸಿಲುಕಿಕೊಂಡಿದ್ದಾನೆ. ಸ್ಥಳೀಯ ದಾರಿಹೋಕರು ಇದನ್ನು ಕಂಡು ಹರ್ಷಲ್‌ನನ್ನು ಅಲ್ಲಿಂದ ಹೊರತೆಗೆದರಾದರೂ ಅಷ್ಟರಲ್ಲಿ ಆತನ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಕೂಡಲೇ ನಗರದ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಬಾಲಕ ಮೃತಪಟ್ಟಿದ್ದಾನೆ. ಸುಟ್ಟಗಾಯಗಳಿಗೆ
ಒಳಗಾಗಿರುವ ಮತ್ತೂಬ್ಬ ಬಾಲಕ ಮಂಜುನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾನೆ. ಇವನ ಸ್ಥಿತಿಯೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾತ್ರೋರಾತ್ರಿ ತ್ಯಾಜ್ಯ: ಕುಂಬಾರ ಕೊಪ್ಪಲಿನ ಸೋಮಣ್ಣ ಎಂಬುವರಿಗೆ ಸೇರಿದ ಈ ಜಮೀನು ಆರ್‌ಬಿಐ ನೋಟು ಮುದ್ರಣ ಘಟಕದ ಹಿಂಭಾಗದಲ್ಲಿದೆ. ಇಲ್ಲಿ ಕಾರ್ಖಾನೆಗಳು ರಾತ್ರೋರಾತ್ರಿ ರಾಸಾಯನಿಕ ತ್ಯಾಜ್ಯವನ್ನು ಸುರಿಯುತ್ತವೆ. ಹೀಗಾಗಿ ಇಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಳ್ಳುತ್ತದೆ. ಜತೆಗೆ ಘಟನೆ ನಡೆದ ಜಾಗದಲ್ಲಿ ಪೆಟ್ರೋಲ್ ಸುರಿದರೆ ಧಗ ಧಗನೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಲಾವಾರಸದಂತೆ ಗೋಚರವಾ ಗುತ್ತದೆ ಎಂದು ಬೆಲವತ್ತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಪ್ರತಿಭಟನೆ ಎಚ್ಚರಿಕೆ: ವಿಷಯ ತಿಳಿದ ಕೂಡಲೇ ಮೈಸೂರು ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಕೆ.ಆರ್.ಆಸ್ಪತ್ರೆಗೆ ತೆರಳಿ ಬಾಲಕನ ಪೋಷಕರಿಂದ ಮಾಹಿತಿ ಪಡೆದಿದ್ದಾರೆ. ಆದರೆ, ಬೆಲವತ್ತ ಗ್ರಾಮದ ಸುತ್ತಮುತ್ತ ಕೃಷಿ ಜಮೀನಿನಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈಗ ಬಾಲಕ ಮೃತಪಟ್ಟ ನಂತರ ಈ ಜಾಗಕ್ಕೆ ನಿಷೇಧಿತ ಪ್ರದೇಶ ಎಂದು ನಾಮಫಲಕ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಬಾಲಕನ ಸಾವಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಸೋಮವಾರ ಕೆ.ಆರ್. ಆಸ್ಪತ್ರೆ ವೃತ್ತದಲ್ಲಿ ಬಾಲಕನ ಮೃತ ದೇಹವನ್ನಿಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪ್ರಕರಣ ಮಾಲಿನ್ಯ ನಿಯಂತ್ರಣ ಮಂಡಳಿ ವ್ಯಾಪ್ತಿಗೆ ಬರುತ್ತೆ. ಆದರೂ ವಿಷಯ ತಿಳಿದ ಕೂಡಲೇ ಗ್ರಾಮಲೆಕ್ಕಿಗ ಮತ್ತು ರಾಜಸ್ವ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದವರು ಈ ಬಗ್ಗೆ ಗಮನಹರಿಸಬೇಕು.
ರಮೇಶ್ ಬಾಬು ತಹಶೀಲ್ದಾರ್,ಮೈಸೂರು ತಾಲೂಕು
ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗಮನಕ್ಕೆ ಬಂದಿದೆ. ಆದರೆ, ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತಜ್ಞರ ತಂಡವನ್ನು ಕಳುಹಿಸಿದ್ದು, ಮಾದರಿ ಸಂಗ್ರಹಿಸಲು ಸೂಚಿಸಲಾಗಿದೆ. ತಂಡದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಕೇಂದ್ರ ಕಚೇರಿಯ ಇಬ್ಬರು ತಜ್ಞರು, ಕಾರ್ಖಾನೆಗಳ ತಜ್ಞರು, ಮೈಸೂರಿನ ಸ್ಥಳೀಯ ತಜ್ಞರು ಇರುತ್ತಾರೆ. ಮಾದರಿಯನ್ನು ಪರೀಕ್ಷೆಗೊಳಪಡಿಸಿದ ನಂತರ ನಿಖರ ಕಾರಣ ತಿಳಿಯಲಿದೆ.
ಲಕ್ಷ್ಮಣ್, ಅಧ್ಯಕ್ಷರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.