ಹುಣಸೂರು ನಗರಸಭೆ ವರಿಷ್ಟರ ಜಗಳ ಹಾದಿರಂಪ: ಅಧ್ಯಕ್ಷರ ಬೆಂಬಲಕ್ಕೆ ಜೆಡಿಎಸ್ ಸದಸ್ಯರು
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಳಿಗೆ ಹರಾಜು: ಪೌರಾಯುಕ್ತೆ ಮಾನಸ
Team Udayavani, Dec 29, 2022, 4:54 PM IST
ಹುಣಸೂರು: ಇಲ್ಲಿನ ನಗರಸಭೆಯ ಪೌರಾಯುಕ್ತರು ಹಾಗೂ ಅಕಾರ ವರ್ಗ ಚುನಾಯಿತ ಪ್ರತಿನಿಗಳ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗಿಷ್ಟ ಬಂದಂತೆ ಮಳಿಗೆಗಳ ಹರಾಜು ನಡೆಸುತ್ತಿದ್ದಾರೆಂದು ಆರೋಪಿಸಿ ನಗರಸಭೆ ಅಧ್ಯಕ್ಷೆ ಗೀತಾನಿಂಗರಾಜು ಹಾಗೂ ಕೆಲ ಸದಸ್ಯರು ಕಚೇರಿ ಪ್ರವೇಶದ್ವಾರದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ನಿಗದಿಯಂತೆ ಆದರೆ ಪ್ರತಿಭಟನೆ ನಡುವೆಯೇ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಿತು.
ನಗರಸಭೆವತಿಯಿಂದ ಈ ಹಿಂದೆ ಫೆಬ್ರವರಿ-2022 ರಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ನಿಗತ ಬಾಡಿಗೆ ಹಣಕ್ಕಿಂತ ಕಡಿಮೆ ದರಕ್ಕೆ ಬಿಡ್ ಆದ ಕಾರಣಕ್ಕೆ ಜಿಲ್ಲಾಕಾರಿಗಳು ಮಳಿಗೆಯನ್ನು ಮರು ಹರಾಜು ಮಾಡಲು ಆದೇಶಿಸಿದ್ದಂತೆ ಡಿ.28ರ ಬುಧವಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲು ಆಯುಕ್ತರು ಮುಂದಾಗಿದ್ದರು.
ಇದರ ವಿರುದ್ದ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದ್ದ ಅಧ್ಯಕ್ಷೆ ಗೀತಾನಿಂಗರಾಜು ಮಾತನಾಡಿ ಪೌರಾಯುಕ್ತರು ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರದೆ, ನಿನ್ನೆಯಷ್ಟೆ ಪತ್ರ ನೀಡಿದ್ದಾರೆ. ಏಕಾ ಏಕಿ ಜಿಲ್ಲಾಧಿಕಾರಿಗಳ ಸೂಚನೆ ಅನ್ವಯ ಹರಾಜು ಪ್ರಕ್ರಿಯೆ ನಡೆಸಿರುವುದು ಬೇಸರ ತಂದಿದೆ. ಅಲ್ಲದೆ ಇತ್ತೀಚೆಗೆ ನಗರದಲ್ಲಿ ನಡೆಸಿದ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಸಮಾರಂಭದ ದಿನಾಂಕ ನಿಗದಿಗೊಳಿಸಲು ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಪ್ರಚಾರವಿಲ್ಲದೆ ಕಡಿಮೆ ದುಡ್ಡಿಗೆ ಬಿಡ್‌ನಿಂದಾಗಿ ನಗರಸಭೆಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಹಲವು ಸದಸ್ಯರು ಆರೋಪಿಸಿದ್ದು, ನಗರಸಭೆ ಕಾಯ್ದೆ ಪ್ರಕಾರ ನಡೆದುಕೊಳ್ಳದ ಪೌರಾಯುಕ್ತೆ ಹಾಗೂ ಅಕಾರಿಗಳ ವಿರುದ್ದ ಕ್ರಮವಹಿಸುವಂತೆ ತಹಶೀಲ್ದಾರ್ ಡಾ.ಅಶೋಕ್ ಮುಖಾಂತರ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಸದಸ್ಯರಾದ ಸತೀಶ್‌ಕುಮಾರ್, ಕೃಷ್ಣರಾಜಗುಪ್ತ, ಶರವಣ, ಅಂಡಿ, ದೇವರಾಜ್, ವಿವೇಕ್, ಸೈಯದ್‌ಯೂನಸ್, ಮಂಜು, ಶ್ರೀನಾಥ್, ಉಪಾಧ್ಯಕ್ಷೆ ಆಶಾರ ಆಶಾರ ಪತಿ ಕೃಷ್ಣನಾಯಕ ಮತ್ತಿತರಿದ್ದರು.
ಪೌರಾಯುಕ್ತೆ ಮಾನಸ ಸ್ಪಷ್ಟನೆ
ಹರಾಜು ಪ್ರಕ್ರಿಯೆ ಸಂಬಂಧಿಸಿದಂತೆ ಅಧ್ಯಕ್ಷೆ ಗೀತಾನಿಂಗರಾಜ್‌ರವರ ಗಮನಕ್ಕೆ ನವೆಂಬರ್‌ನಲ್ಲಿ, ನಿಯಮಾನುಸಾರ ಪತ್ರ ಬರೆದು ಸಮ್ಮತಿ ಸಹಿ ಪಡೆದಿದ್ದೇನೆ, ಡಿ.6 ರ ಬಹಿರಂಗ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಜಾಹಿರಾತು ನೀಡಲಾಗಿದೆ. ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾಕಾರಿಗಳ ಆದೇಶದೊಂದಿಗೆ ಕಾನೂನು ರೀತ್ಯಾ ಪಾರದರ್ಶಕವಾಗಿ ಕ್ರಮವಹಿಸಲಾಗಿದೆ. ಸಕಾರಣವಿಲ್ಲದೆ ಹರಾಜು ನಿಲ್ಲಿಸಲು ಸಾಧ್ಯವಿಲ್ಲಾ, ಆದರೆ ಹರಾಜು ಪ್ರಕ್ರಿಯೆಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಬೇಕಿದ್ದು, ಅಲ್ಲಿನ ನಿರ್ಣಯದಂತೆ ಕ್ರಮವಹಿಸುವುದಾಗಿ ಪೌರಾಯುಕ್ತೆ ಮಾನಸ ಸ್ಪಷ್ಟಪಡಿಸಿದ್ದಾರೆ.
ಮುಸುಕಿನ ಗುದ್ದಾಟ
ಪೌರಾಯುಕ್ತೆ ಎಂ.ಮಾನಸ ಹಾಗೂ ಅಧ್ಯಕ್ಷೆ ಗಿತಾ ನಿಂಗರಾಜ್ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಅಭಿವೃದ್ದಿ ಎಂಬುದು ನಗರದಲ್ಲಿ ಮರಿಚಿಕೆಯಾಗಿದೆ, ನೋಡುಗರಿಗೆ ಪುಕ್ಕಟೆ ಮನರಂಜನೆ ಎಂಬಂತಾಗಿದ್ದು, ಇನ್ನನ್ನಾದರೂ ಜಗಳ ಬಿಟ್ಟು ಅಭಿವೃದ್ದಿಗೆ ನೆರವಾಗಲೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.