ಜ.31ರವೆರೆಗೆ ಸ್ವಚ್ಛ ಸರ್ವೇಕ್ಷಣೆ
Team Udayavani, Jan 7, 2019, 6:04 AM IST
ಮೈಸೂರು: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸತತವಾಗಿ ಪ್ರಶಸ್ತಿ ಪಡೆಯುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರವು ಮತ್ತೂಮ್ಮೆ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧವಾಗಿದೆ. ಪ್ರಸಕ್ತ ಸಾಲಿನ ಸರ್ವೇಕ್ಷಣೆ ಜ. 4 ರಿಂದ ಆರಂಭವಾಗಿದ್ದು, 31 ರವರೆಗೆ ನಡೆಯಲಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಸರ್ವೇಕ್ಷಣಾ ತಂಡ ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. 2015 ಮತ್ತು 2016ರಲ್ಲಿ ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದ್ದ ಮೈಸೂರು ನಗರ 2017ರಲ್ಲಿ ಐದನೇ ಸ್ಥಾನ ಮತ್ತು 2018ರಲ್ಲಿ 3 ರಿಂದ 10 ಲಕ್ಷದೊಳಗಿನ ಜನಸಂಖ್ಯೆ ಹೊಂದಿದ ನಗರಗಳ ಪೈಕಿ ಮೈಸೂರು ಪ್ರಥಮ ಸ್ಥಾನಗಳಿಸಿತ್ತು. ಅದರಂತೆ 2019ರ ಸರ್ವೇಕ್ಷಣೆ ಆರಂಭವಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ: ಆರೋಗ್ಯಾಧಿಕಾರಿ ಡಾ. ಎಚ್. ನಾಗರಾಜು ಮಾತನಾಡಿ, ಜ. 20 ರಂದು ಸರ್ವೇಕ್ಷಣೆ ತಂಡದ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. 1250 ಅಂಕಗಳಿಗೆ ಸಾರ್ವಜನಿಕರ ಅಭಿಪ್ರಾಯ ನೀಡುವ ಅಗತ್ಯವಿದೆ. ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1969ಕ್ಕೆ ಕರೆ ಮಾಡಿ ಏಳು ಪ್ರಶ್ನೆಗಳಿಗೆ ಉತ್ತರಿಸಬೇಕು.
ಕರೆ ಮಾಡಿದಾಗ ತಾವು ಸ್ವಚ್ಛತಾ ಸರ್ವೇಕ್ಷಣೆಯಲ್ಲಿ ಪಾಲ್ಗೊಂಡಿದ್ದೀರಾ? ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ ಕೂಡಲೇ ಫೋನ್ ಕಟ್ ಆಗುತ್ತದೆ. ಬಳಿಕ ಸರ್ವೇಕ್ಷಣೆಯಿಂದಲೇ ಕರೆ ಬರುತ್ತದೆ. ಆಗ ಸ್ಥಳೀಯ ಎಸ್‌ಟಿಡಿ ಕೋಡ್ ನಮೂದಿಸಿದರೆ ಅವರು ನಗರದ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಏಳು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಸೂಕ್ತ ಉತ್ತರ ನೀಡಿಬೇಕು ಎಂದು ಅವರು ಕೋರಿದರು.
ಖುದ್ದು ಪರಿಶೀಲನೆ: ಇದಲ್ಲದೆ 1250 ಅಂಕಗಳಿಗೆ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಈ ಖುದ್ದು ಪರಿಶೀಲನೆಯ ಸಂದರ್ಭದಲ್ಲಿ ಛಾಯಾಚಿತ್ರದೊಡನೆ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಾರೆ. ಉಳಿದ 1250 ಅಂಕಗಳಿಗೆ ಅಗತ್ಯ ದಾಖಲಾತಿ ಸಲ್ಲಿಸಬೇಕಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಗರ ಪಾಲಿಕೆಯು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕರಪತ್ರ ವಿತರಣೆ: ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರ ಹಂಚಲಾಗುತ್ತಿದೆ. ಧ್ವನಿವಧìಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ನಂತರ ಕಸವನ್ನು ಮೂಲೆಯಲ್ಲಿ ಬೇರ್ಪಡಿಸಲಾಗುತ್ತಿದೆ. ಪೌರ ಕಾರ್ಮಿಕರು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಈ ಸರ್ವೇಕ್ಷಣೆ ಕಾರ್ಯಕ್ಕಾಗಿ ಸಂಜೆ 5 ರವರೆಗೆ ಅವರ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
ಮೊಬೈಲ್ ಆ್ಯಪ್: ಪ್ರಸ್ತುತ ಸುಮಾರು 52 ಸಾವಿರ ಮಂದಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದು, ಆ ಮೂಲಕವೂ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಫೀಡ್‌ಬ್ಯಾಕ್ ನೀಡಬಹುದು ಎಂದರು. ಮೇಯರ್ ಅಧ್ಯಕ್ಷತೆಯಲ್ಲಿ ಈಗಾಗಲೇ ನಗರದ ಎಲ್ಲಾ ವಾರ್ಡ್‌ನ ನಗರ ಪಾಲಿಕೆ ಸದಸ್ಯರ ಸಭೆ ನಡೆಸಿದ್ದು, ಅವರಿಗೆ ಸ್ವಚ್ಛ ಸರ್ವೇಕ್ಷಣೆ ಕುರಿತು ಅರಿವು ಮೂಡಿಸಲಾಗಿದೆ.
ಜತೆಗೆ ಅವರೂ ಕೂಡ ಸಾರ್ವಜನಿಕರಿಂದ ಅಗತ್ಯ ಫೀಡ್‌ಬ್ಯಾಕ್ ಕೊಡಿಸುವುದಾಗಿ ಒಪ್ಪಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಶಫಿ ಅಹಮದ್, ನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.