ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮುಂದುವರಿಕೆ
Team Udayavani, Jan 16, 2020, 3:00 AM IST
ಮೈಸೂರು: ಮೈಸೂರು ಮಹಾ ನಗರಪಾಲಿಕೆಯ ಎರಡನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಸಲು ಎರಡೂ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ.
ನಗರದಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರು, ಎರಡೂ ಪಕ್ಷಗಳ ನಡುವಿನ ಒಪ್ಪಂದದಂತೆ ಮೊದಲ ಅವಧಿಯ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿತ್ತು. ಎರಡನೇ ಅವಧಿಯಲ್ಲಿ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಡಬೇಕಿದೆ. ಹೀಗಾಗಿ ಪಕ್ಷದ ನಾಯಕರು ಹಾಗೂ ನಗರಪಾಲಿಕೆ ಸದಸ್ಯರು ಒಮ್ಮತದಿಂದ ಸೂಚಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಹೇಳಿದರು.
ಸಾ.ರಾ. ಮಹೇಶ್ ಮಾತನಾಡಿ, ಮೇಯರ್ ಆಯ್ಕೆ ಕುರಿತು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ನಗರಪಾಲಿಕೆ ಸದಸ್ಯರು ಯಾರ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೋ ಕಾಂಗ್ರೆಸ್‌ನವರ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರನ್ನೂ ಭೇಟಿ ಮಾಡಿ ಮಾತನಾಡಿದ್ದೇನೆ. ನಗರದ ಅಭಿವೃದ್ಧಿಗೆ ಬದ್ಧರಾಗಿ, ನಗರಪಾಲಿಕೆಯಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರನ್ನು ಆಯ್ಕೆ ಮಾಡಿ, ನಾನು ಮತ ಹಾಕುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ,18ರಂದು ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ಇದೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಬಿಜೆಪಿ ಜೊತೆ ಹೊಂದಾಣಿಕೆ ಕುರಿತು ಆರಂಭದಲ್ಲಿ ಮಾತು ಕೇಳಿಬರುತ್ತಿತ್ತು. ಆದರೆ ಜಾತ್ಯತೀತ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿದ್ದು, ಹೊಂದಾಣಿಕೆ ಮುಂದುವರಿಯಲಿದೆ ಎಂದು ತಿಳಿಸಿದರು. ಜೆಡಿಎಸ್ ನಗರ ಅಧ್ಯಕ್ಷ ಕೆ.ಟಿ. ಚೆಲುವೇಗೌಡ, ಮುಖಂಡರಾದ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮೇಯರ್ ಪುಷ್ಪಲತಾ, ಉಪ ಮೇಯರ್ ಶಫೀ ಅಹಮದ್, ಮಾಜಿ ಮೇಯರ್‌ಗಳಾದ ಎಚ್.ಎನ್. ಶ್ರೀಕಂಠಯ್ಯ, ಅಯೂಬ್‌ಖಾನ್, ಆರೀಫ್ ಹುಸೇನ್, ಚಿಕ್ಕಣ್ಣ, ಎಂ.ಜೆ.ರವಿಕುಮಾರ್, ಪಿ.ವಿಶ್ವನಾಥ್, ಆರ್.ಲಿಂಗಪ್ಪ, ನಗರ ಪಾಲಿಕೆ ಸದಸ್ಯೆ ಶಾಂತಕುಮಾರಿ, ಪ್ರೇಮಾ ಶಂಕರೇಗೌಡ, ಎಸ್.ಬಿ.ಎಂ. ಮಂಜು, ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಸೋಮು, ಅಬ್ದುಲ್ಲಾ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಜಿಟಿಡಿ ಆದೇಶಕ್ಕೆ ಕಾಯುತ್ತಿದ್ದೇವೆ: ಮೇಯರ್ ಚುನಾವಣೆ ಸಂಬಂಧ ಜಿ.ಟಿ. ದೇವೇಗೌಡರು ತಟಸ್ಥನಾಗಿ ಇರುತ್ತೇನೆ ಎಂದು ಹೇಳಿದ್ದರಿಂದ ನಾವು ಒತ್ತಡ ಮಾಡುತ್ತಿಲ್ಲ. ಅವರ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಕುಮಾರಸ್ವಾಮಿ ಮತ್ತು ದೇವೇಗೌಡರೊಂದಿಗೆ ಎಲ್ಲಾ ಶಾಸಕರೂ ಚೆನ್ನಾಗಿದ್ದಾರೆ. ಜಿ.ಟಿ. ದೇವೇಗೌಡರು 2006ರಲ್ಲಿ ಬಿಜೆಪಿಗೆ ಹೋಗಿದ್ದರು. ನಾವು ಕರೆದುಕೊಂಡು ಬರಲಿಲ್ಲವೇ?
ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಸರಿ ಮಾಡಿಕೊಂಡು ಹೋಗುತ್ತೇವೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ರಾಜಕೀಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ನಮ್ಮಲ್ಲೇ ತಪ್ಪಿದ್ದರೆ ತಿದ್ದಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಭಿನ್ನಾಭಿಪ್ರಾಯಗಳು ಸಹೋದರರಲ್ಲೇ ಇರುತ್ತದೆ. ರಾಜಕೀಯದಲ್ಲಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.